ಬೆಂಗಳೂರು, ನ.3 www.bengaluruwire.com : ರಾಜಧಾನಿ ಬೆಂಗಳೂರು ಸೇರಿದಂತೆ ಮೆಟ್ರೋ ನಗರಗಳಲ್ಲಿ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ನದ್ದೇ ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರವಾಗಿ ಕಾರಿಗೆ ಕಾರೂ ಅಲ್ಲದ, ಅತ್ತ ಬೈಕ್ ಕೂಡ ಅಲ್ಲದ ವಿನ್ಯಾಸದಲ್ಲಿ ಅವುಗಳ ಹೈಬ್ರಿಡ್ ನಂತಹ ರಿವರ್ಸ್ ಟ್ರೈಕ್ ಎಂಬ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮುಂದಿನ ವರ್ಷ ದೇಶದ ಮಾರುಕಟ್ಟೆ ಪ್ರವೇಶಿಸಲಿದೆ.
ಸ್ಪಾಟರ್ ಮೊಬಿಲಿಟಿ ಸಲ್ಯೂಷನ್ಸ್ ಎಂಬ ಹುಬ್ಬಳ್ಳಿ ಮೂಲದ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಇದರ ಸಂಶೋಧನೆ, ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ತೊಡಗಿದೆ. ಕಾರು- ಬೈಕ್ ಎರಡೂ ಅನುಕೂಲಗಳಿರುವ ಸ್ಪಾಟರ್ ರಿವರ್ಸ್ ಟ್ರೈಕ್ ತ್ರಿಚಕ್ರ ಎಲೆಕ್ಟ್ರಿಕ್ ವಾಹನ ಭಾರತದಲ್ಲೇ ಮೊದಲ ಬಾರಿಗೆ ಬರುವ ಜೂನ್ ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಸದ್ಯ ಈ ವಾಹನದ ಮಾದರಿಯನ್ನಷ್ಟೆ ತಯಾರಿಸಲಾಗಿದೆ.
ಎರಡು ಆಸನಗಳ ಈ ಎಲೆಕ್ಟ್ರಿಕ್ ವಾಹನವನ್ನು ನಾಲ್ಕು ಗಂಟೆ ಚಾರ್ಜಿಂಗ್ ಮಾಡಿದರೆ ಒಂದು ಬಾರಿಗೆ 120 ರಿಂದ 150 ಕಿ.ಮೀ ಮೇಲೇಜ್ ನೀಡಲಿದೆ. ಇದನ್ನು ಬೈಕ್ ರೀತಿ ದ್ವಿಚಕ್ರ ವಾಹನದಂತೆ ಚಲಾಯಿಸಬಹುದು. ಆದರೆ ಕಾರಿನ ಅನುಕೂಲ ನೀಡುತ್ತೆ. ಈ ಎಲೆಕ್ಟ್ರಿಕ್ ವಾಹನ ಚಳಿ ಮತ್ತು ಮಳೆಯ ಸಂದರ್ಭದಲ್ಲಿ ನೆನೆಯುವುದರಿಂದ ರಕ್ಷಣೆ ಒದಗಿಸಲಿದೆ.
ಒಂದು ಮಿನಿ ಕಾರು ನಿಲ್ಲುವ ಜಾಗದಲ್ಲಿ ತ್ರಿಚಕ್ರ ಎಲೆಕ್ಟ್ರಿಕ್ ವಾಹನವನ್ನು ನಿಲ್ಲಿಸಬಹುದು. ಬೆಂಗಳೂರಿನಂತಃ ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಇರುವ ದೇಶದ ಮೆಟ್ರೊ ನಗರಗಳಿಗೆ ಈ ಸ್ಪಾಟರ್ ಎಲೆಕ್ಟ್ರಿಕ್ ವಾಹನ ಅನುಕೂಲವಾಗಲಿದೆ.
“ಈ ವಾಹನಕ್ಕೆ ಎರಡು ಲಕ್ಷ ರೂ. ದರ ನಿಗದಿಪಡಿಸುತ್ತೇವೆ. ಮುಂದಿನ ವರ್ಷ ಜೂನ್ ನಲ್ಲಿ ಮಾರುಕಟ್ಟೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ.ಇಂತಹ ರಿವರ್ಸ್ ಟ್ರೈಕ್ ಎಂಬ ಎಲೆಕ್ಟ್ರಿಕ್ ವಾಹನ ಯೂರೋಪ್ ಖಂಡದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅಲ್ಲೆಲ್ಲಾ ಇದನ್ನು ಫ್ಯಾನ್ಸಿ ರೀತಿ ಬಳಸುತ್ತಾರೆ. ಆದರೆ ಭಾರತದಲ್ಲಿ ವೈಯುಕ್ತಿಕ ಸಾರಿಗೆ ಸೌಕರ್ಯಕ್ಕೆ ಬಳಸುವಂತೆ ವಿನ್ಯಾಸ ಮಾಡಲಾಗಿದೆ.” ಎಂದು ಹೇಳುತ್ತಾರೆ ಸ್ಪಾಟರ್ ಮೊಬಿಲಿಟಿ ಸಲ್ಯೂಷನ್ಸ್ ಪಾಲುದಾರ ಕಿರಣ್ ಅಗಡಿ.
ಈ ವಾಹನ ಐದು ಅಡಿ ಎತ್ತರ, ಸಾಮಾನ್ಯ ಸಣ್ಣ ಕಾರು ಮತ್ತು ದ್ವಿಚಕ್ರ ವಾಹನ ಮಧ್ಯದಷ್ಟು ಉದ್ದವಿದೆ. ಈ ಕಾರಿನಲ್ಲಿ ರಿವರ್ಸ್ ತೆಗೆದುಕೊಳ್ಳಲು ಚಾಲಕರಿಗೆ ಅನುಕೂಲವಾಗುವಂತೆ ವಹಾನದ ಹಿಂಭಾಗ ಕ್ಯಾಮರಾ, ರಿವರ್ಸ್ ಗೇರ್, ಹವಾನಿಯಂತ್ರಿತ ವ್ಯವಸ್ಥೆ ಸೇರಿದಂತೆ ಕಾರಿನಲ್ಲಿನ ಎಲ್ಲಾ ಅನುಕೂಲಗಳು ಇದರಲ್ಲಿರಲಿದೆ.
ಸ್ಪಾಟರ್ ಸ್ಟಾರ್ಟಪ್ ಕಂಪನಿಯು ಕಳೆದ ಎರಡು ವರ್ಷದಿಂದ ಹೈಬ್ರೀಡ್ ವಾಹನದ ಸಂಶೋಧನೆ, ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ತೊಡಗಿದೆ. ಪ್ರವೀಣ್ ಅಗಡಿ, ಕಿರಣ್ ಅಗಡಿ, ಅರುಣ್ ಅಗಡಿ ಸಹೋದರರು ಮತ್ತು ಪ್ರಸಾದ್ ಪಾಟೀಲ್ ಎಂಬುವರ ಜೊತೆ ಸೇರಿ ಇಂತಹ ರಿವರ್ಸ್ ಟ್ರೈಕ್ ವಾಹನ ತಯಾರಿಕೆ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ.
ರಾಜ್ಯ ಸರ್ಕಾರದ ಜೊತೆ ಸ್ಟಾರ್ಟಪ್ ಗೆ ಬೆಂಬಲ ನೀಡುವಂತೆ ಕೋರಲು ನಿರ್ಧರಿಸಿದ್ದು, ಮುಂದಿನ ಜೂನ್- ಜುಲೈ ವೇಳೆಗೆ ಈ ರಿವರ್ಸ್ ಟ್ರೈಕ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈಗ ಸಾಮಾನ್ಯ ದ್ವಿಚಕ್ರ ವಾಹನದ ದರ 75 ಸಾವಿರದ ಮೇಲಿದೆ. ಕಾರು ಖರೀದಿಸಬೇಕೆಂದರೂ 4-5 ಲಕ್ಷ ರೂ.ಗಳಿಗಿಂತ ಯಾವ ವಾಹನವೂ ಲಭ್ಯವಾಗಲ್ಲ. ಇಂತಹ ಸಂದರ್ಭದಲ್ಲಿ ನಗರ ಅಥವಾ ಸಣ್ಣ ಊರಿನಲ್ಲಿ ಕುಟುಂಬದ ಇಬ್ಬರು ತಮ್ಮೊಂದಿಗೆ ಈ ತ್ರಿಚಕ್ರ ವಾಹನದ ಡಿಕ್ಕಿಯಲ್ಲಿ ಸಣ್ಣಮಟ್ಟದ ಸಾಮಾನು- ಸರಂಜಾಮುಗಳನ್ನು ಕೊಂಡೊಯ್ಯಬಹುದು.