ಬೆಂಗಳೂರು, ನ.2 www.bengaluruwire.com :
ವಿಶ್ವದ ನಕ್ಷೆಯಲ್ಲಿ ಅಭಿವೃದ್ಧಿ ಕಕ್ಷೆಯಲ್ಲಿ ಬ್ರ್ಯಾಂಡ್ ಬೆಂಗಳೂರು ಗಮನಾರ್ಹವಾಗಿದೆ. ಎಲ್ಲರ ಹೃದಯಗಳನ್ನು ಗೆಲ್ಲುವ ಔದಾರ್ಯತೆ ಕನ್ನಡಿಗರಲ್ಲಿದೆ. ದೇಶ ವಿದೇಶಗಳಿಂದ ಆಗಮಿಸಿದ ಹೂಡಿಕೆದಾರರನ್ನು ಕೈಬೀಸಿ ಕರೆಯುತ್ತಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿ ವಿಫುಲ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡಲು ಸಹಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೂಡಿಕೆದಾರರಲ್ಲಿ ಮನವಿ ಮಾಡಿದರು.
ಇಂದಿನಿಂದ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಐದನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ-2022ವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂತಹ ಹೂಡಿಕೆಯು ಕೇವಲ ಕರ್ನಾಟಕ ಮಾತ್ರವಲ್ಲದೇ ಭಾರತ ಹಾಗೂ ಇಡೀ ವಿಶ್ವವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಪ್ರಧಾನ ಮಂತ್ರಿಗಳು ಅಭಿಪ್ರಾಯ ಪಟ್ಟರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದೇ ಪಕ್ಷ ಇರುವುದರಿಂದ ನಿರ್ದಿಷ್ಟ ಕ್ಷೇತ್ರಗಳಲ್ಲಿ ರಾಷ್ಟ್ರ ವಿಕಾಸದತ್ತ ಮುಂದಡಿ ಇಡಲು ಸಾಧ್ಯವಾಗಿದೆ. ಕರ್ನಾಟಕವು ಪ್ರಕೃತಿ ಹಾಗೂ ಸಂಸ್ಕೃತಿಯ ಅದ್ಭುತ ಸಂಗಮ. ನವಭಾರತದ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದಿಟ್ಟ ಸುಧಾರಣೆಗಳೇ ಕಾರಣ ಎಂದು ಬಣ್ಣಿಸಿದ ಅವರು ನವೀಕೃತ ಇಂಧನ ಕ್ಷೇತ್ರದಲ್ಲಿ ಹಾಗೂ ಸೌರಶಕ್ತಿ ಕ್ಷೇತ್ರದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಸಾಧನೆಯಾಗಿದೆ ಎಂದರು.
ಭಾರತದ ಅರ್ಥ ವ್ಯವಸ್ಥೆ ಸಶಕ್ತವಾಗಿದೆ :
ಕಳೆದ ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕಾರ್ಯಾಚರಿಸುತ್ತಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 70 ರಿಂದ 140 ಕ್ಕೆ ದುಪ್ಪಟ್ಟು ಆಗಿದೆ. ಅಂತೆಯೇ, ಕೇವಲ ಐದು ನಗರಗಳಲ್ಲಿ ಮೆಟ್ರೋ ರೈಲು ಸೇವೆ ಇದ್ದು, ಇದೀಗ ಭಾರತದ 20 ನಗರಗಳಲ್ಲಿ ಮೆಟ್ರೋ ರೈಲು ಸೇವೆ ಲಭ್ಯವಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿನ ವಿಫುಲ ಅವಕಾಶಗಳು ಹಾಗೂ ಪಾರದರ್ಶಕತೆ ಇದೆಲ್ಲವನ್ನೂ ಸಾಧ್ಯ ಮಾಡಿದೆ. ರಕ್ಷಣಾ ಕ್ಷೇತ್ರದಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಕಿತ ಕ್ಷೇತ್ರದಲ್ಲಿ (ಡಿಜಿಟಲ್ ಸೆಕ್ಟರ್) ಮಹಾಕ್ರಾಂತಿಯೇ ಆಗಿದೆ ಎಂದು ಪ್ರಧಾನಿ ಮೋದಿ ಅವರು ವಿವರಿಸಿದರು.
ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಪ್ರಧಾನ ಯೋಜನೆ (ಮಾಸ್ಟರ್ ಪ್ಲಾನ್) ಅಡಿ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಹೊಂದಾಣಿಕೆ ಒಳಗೊಂಡಂತೆ ಕೊನೆಯ ಮೈಲಿ ಸಂಪರ್ಕದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ರಫ್ತು ಆಗಿದೆ. ತಾಂತ್ರಿಕ ಮತ್ತು ನಿರ್ವಹಣಾ ವಿಷಯಾಧಾರಿತ ವಿಶ್ವವಿದ್ಯಾಲಯಗಳ ಪ್ರಮಾಣ ಶೇಕಡಾ ಐವತ್ತರಷ್ಟು ಹೆಚ್ಚಿದೆ. ಆರೋಗ್ಯ ವಿಮಾ ಕ್ಷೇತ್ರದಲ್ಲಿಯೂ ಇಡೀ ವಿಶ್ವದಲ್ಲಿಯೇ ದಾಖಲೆಯ ಸಾಧನೆ ಭಾರತದಲ್ಲಾಗಿದೆ. ಆರೋಗ್ಯ ಮತ್ತು ಸೌಖ್ಯ ಚಿಕಿತ್ಸಾಲಯಗಳ ಸಂಖ್ಯೆ ಒಂದೂವರೆ ಲಕ್ಷದಷ್ಟು ದಾಟಿದೆ. ಈ ಎಲ್ಲದರ ಹಿನ್ನಲೆಯಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಕೂಡಾ ಭಾರತದಲ್ಲಿ ಆರ್ಥಿಕ ಹಿಂಜರಿತ ಅಥವಾ ಆರ್ಥಿಕ ಕುಸಿತ ಉಂಟಾಗಲಿಲ್ಲ. ಅಂತೆಯೇ, ಭಾರತದ ಆರ್ಥಿಕತೆ ಸಶಕ್ತವಾಗಿ ಮತ್ತು ಸದೃಢವಾಗಿ ನಿಂತಿದೆ ಎಂದು ಅವರು ಹೇಳಿದರು.
ಮೊದಲ ದಿನವೇ 7.6 ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದ :
ಸಮಾವೇಶದ ಮೂಲಕ ಒಟ್ಟು 5 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ರಾಜ್ಯಕ್ಕೆ ಹರಿದುಬರಲಿದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟಿದ್ದರು. ಬುಧವಾರ ಸಂಜೆ ವೇಳೆಗೆ ಬಂಡವಾಳ ಹೂಡಿಕೆದಾರರ ಸಮಾವೇಶದ ಮೊದಲ ದಿನವೇ 7.6 ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದ ಏರ್ಪಟ್ಟಿತು. ಅದರಲ್ಲಿ ಪ್ರಮುಖವಾಗಿ ಗ್ರೀನ್ ಹೈಡ್ರೊಜನ್ (2,90,797 ಕೋಟಿ ರೂ.), ನವೀಕರಿಸಬಹುದಾದ ಇಂಧನ (1,29,175 ಕೋಟಿ ರೂ.), ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ, ತಯಾರಿಕೆ (47,475 ಕೋಟಿ ರೂ.), ಮೂಲ ಸೌಕರ್ಯ ಮತ್ತು ಕೈಗಾರಿಕಾ ಲಾಜಿಸ್ಟಿಕ್ ಪಾರ್ಕ್ (43,500 ಕೋಟಿ ರೂ.), ಇ-ಮೊಬಿಲಿಟಿ, ವೈಮಾಂತರಿಕ್ಷ ಮತ್ತು ರಕ್ಷಣೆ, ದತ್ತಾಂಶ ಕೇಂದ್ರ (22,906 ಕೋಟಿ ರೂ.) ಈ ಕ್ಷೇತ್ರದಲ್ಲಿ ಒಟ್ಟು 5,58,877 ಕೋಟಿ ರೂ. ಮೊತ್ತದ ಬಂಡವಾಳ ಕರ್ನಾಟಕಕ್ಕೆ ಹರಿದುಬರಲಿದೆ.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಇಂದು ಸಹಿ ಹಾಕಲಾಗಿರುವ ಎಲ್ಲ ಬಂಡವಾಳ ಹೂಡಿಕೆಯ ಒಪ್ಪಂದಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಯೋಜನೆಗಳು ವಾಸ್ತವದಲ್ಲಿ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅನುಮತಿಗಳನ್ನು ಹಾಗೂ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.
ಮುಂದಿನ ಮೂರು ತಿಂಗಳಲ್ಲಿ ಅನುಮೋದನೆಗೆ ಕ್ರಮ :
ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣವನ್ನು ಸರ್ಕಾರ ನಿರ್ಮಿಸಲಿದೆ. ಮುಂದಿನ ಮೂರು ತಿಂಗಳೊಳಗೆ ಬಂಡವಾಳ ಹೂಡಿಕೆಯ ಯೋಜನೆಗಳ ಬಗ್ಗೆ ಸರ್ಕಾರ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಿದೆ. ರಾಜ್ಯಸರ್ಕಾರ ಬಂಡವಾಳ ಹೂಡಿಕೆಯ ಬಗ್ಗೆ ಬಹಳ ಗಂಭೀರವಾಗಿದ್ದು, ಹೂಡಿಕೆದಾರರೂ ಸಹ ಇದೇ ಗಂಭೀರತೆಯನ್ನು ಹೊಂದಬೇಕಾಗುತ್ತದೆ. 2.80 ಲಕ್ಷ ಕೋಟಿ ರೂ.ಗು ಹೆಚ್ಚಿನ ಬಂಡವಾಳ ಯೋಜನೆಗಳಿಗೆ ಈಗಾಗಲೇ ಅನುಮೋದನೆಯನ್ನು ಸರ್ಕಾರ ನೀಡಿದೆ.
ಕರ್ನಾಟಕದಲ್ಲಿನ ಕೈಗಾರಿಕೆಗಳು ವಿಶ್ವಮಟ್ಟಕ್ಕೆ ಬೆಳೆಯಬೇಕೆಂಬ ಸಂಕಲ್ಪ :
ಕರ್ನಾಟಕ ಏರೋಸ್ಪೇಸ್, ಬಯೋಟೆಕ್,ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ರಂಗಗಳಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸ್ಟಾರ್ಟ್ ಅಪ್ ಹಾಗೂ ಯೂನಿಕಾರ್ನ್ ಗಳಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಭಾರತದ ಸುಮಾರು 105 ಯೂನಿಕಾರ್ನ್ ಗಳಲ್ಲಿ ಸುಮಾರು 35 ಯೂನಿಕಾರ್ನ್ಗಳು ಕರ್ನಾಟಕದಲ್ಲಿವೆ. ದೇಶದ 4 ಡೆಕಾ ಕಾರ್ನ್ ಗಳಲ್ಲಿ 3 ಇಲ್ಲಿವೆ.
ಉತ್ಪಾದನಾ ವಲಯ, ಸೇವಾ ವಲಯ, ಐಟಿಬಿಟಿ ವಲಯ, ಸ್ಟಾರ್ಟ್ ಅಪ್ ವಲಯದಲ್ಲಿ ಕರ್ನಾಟಕ ಬಲಿಷ್ಟವಾಗಿದೆ. ಈಗಾಗಲೇ ಇಲ್ಲಿ ಸ್ಥಾಪಿತವಾಗಿರುವ ಪ್ರತಿಷ್ಠಿತ ಕೈಗಾರಿಕೆಗಳು ರಾಜ್ಯದಲ್ಲಿ ಇನ್ನಷ್ಟು ವಿಸ್ತರಣೆಯಾಗುತ್ತಿವೆ. ವಿಶ್ವಮಟ್ಟಕ್ಕೆ ಕರ್ನಾಟಕದಲ್ಲಿ ಕೈಗಾರಿಕೆಗಳು ಬೆಳೆಯಬೇಕು ಹಾಗೂ ಅದಕ್ಕಾಗಿ ವಿಶ್ವದ ಅಭಿವೃದ್ಧಿಯ ಸಂಕಲ್ಪವನ್ನು ಒಟ್ಟಾಗಿ ಕೈಗೊಳ್ಳೊಣ ಎಂದರು.
ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು:
ಸಂಶೋಧನೆಗಳಿಗಾಗಿ ಆರ್ ಎಂಡ್ ಡಿ ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ. ಸಣ್ಣಗ್ಯಾರೇಜ್ ನಿಂದ ಹಿಡಿದು ದೊಡ್ಡ ಸಂಸ್ಥೆಯವರೆಗೆ ಸಂಶೋಧನೆಗೆ ಒತ್ತು ನೀಡಲಾಗುವುದು. ಐಐಟಿ, ಐಐಎಂ. ಐಐಎಸ್ ಸಿ, ಡಿಆರ್ ಡಿಓ ಸೇರಿದಂತೆ ಪ್ರಮುಖ ಸಂಸ್ಥೆಗಳು ರಾಜ್ಯದಲ್ಲಿವೆ. 400 ಅಂತರರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. ಪ್ರಪಂಚದಾದ್ಯಂತ ಸುಮಾರು 10 ಸಾವಿರ ಇಂಜಿನಿಯರ್‌ಗಳು ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಕಂಪನಿಗಳಲ್ಲಿ ಸಂಶೋಧನಾ ಕಾರ್ಯ ಕೈಗೊಂಡಿದ್ದಾರೆ.
ಜಿನೋಮ್ಯಾಟಿಕ್ಸ್ ನಿಂದ ಏರೋಸ್ಪೇಸ್ ವಲಯದಲ್ಲಿ ಸಂಶೋಧನೆಗಳು ನಡೆಯುತ್ತವೆ. ಕೇವಲ ಕರ್ನಾಟಕ, ಭಾರತ, ವಿಶ್ವವಲ್ಲದೇ, ಇಡೀ ಮಾನವ ಕುಲದ ಅಭಿವೃದ್ಧಿಯೇ ಕರ್ನಾಟಕದಲ್ಲಾಗುತ್ತಿದೆ. ಕೇಂದ್ರ ನೀತಿ ಆಯೋಗದ ಸೂಚ್ಯಂಕದಂತೆ ಆವಿಷ್ಕಾರದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣದಿಂದ 7 ಲಕ್ಷ ಕೋಟಿ ಬಂಡವಾಳ ಹೂಡಿಕೆ:
ಕೋವಿಡ್ ನಂತರ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿರುವ ಮೊದಲ ರಾಜ್ಯ ಕರ್ನಾಟಕ. 7 ಲಕ್ಷ ಕೋಟಿಗಿಂತ ಹೆಚ್ಚು ಬಂಡವಾಳ ಹರಿದುಬರಲು ಕರ್ನಾಟಕ ಶಕ್ತಿ, ಪರಂಪರೆ ಮತ್ತು ಕೈಗಾರಿಕಾ ಸ್ನೇಹಿ ವಾತಾವರಣದಿಂದ ಸಾಧ್ಯವಾಗಿದೆ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಬೇಕು. ನಮ್ಮ ಶಕ್ತಿ, ಸಾಮರ್ಥ್ಯದ ಮೇಲೆ ನಮಗೆ ವಿಶ್ವಾಸವಿರಬೇಕು. ಕರ್ನಾಟಕದಲ್ಲಿ ಕೋವಿಡ್ ತಂದೊಡ್ಡಿದ ಸವಾಲುಗಳನ್ನು ಅವಕಾಶಗಳನ್ನಾಗಿ ಮಾಡಿಕೊಳ್ಳಲಾಯಿತು.
ರಾಜ್ಯದಲ್ಲಿ ಪ್ರಗತಿಪರ ಚಿಂತನೆಯುಳ್ಳ ನೀತಿಗಳಿವೆ:
ಕೋವಿಡ್ ನಂತರದ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ಮೊದಲಿಗಿಂತ ಹೆಚ್ಚಾಗಿತ್ತು. ಕಳೆದ ವರ್ಷದ ಕೇವಲ ಆರು ತಿಂಗಳ ಒಳಗಾಗಿ ಆದಾಯದ ಗುರಿಗಿಂತ 13000 ಕೋಟಿ ರೂ. ಹೆಚ್ಚಿಗೆ ಆದಾಯ ಸಂಗ್ರಹಿಸಲಾಯಿತು. ಇದು ನಮ್ಮ ರಾಜ್ಯದ ಶಕ್ತಿಯಾಗಿದೆ. ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪ್ರಗತಿಪರ ಚಿಂತನೆಯ ನೀತಿಗಳು ರಾಜ್ಯದಲ್ಲಿವೆ.ಈಸ್ ಆಫ್ ಡುಯಿಂಗ್ ಬಿಸೆನೆಸ್,ಕೈಗಾರಿಕಾ ಪ್ರೋತ್ಸಾಹಕ ನೀತಿ, ಸೆಮಿಕಂಡಕ್ಟರ್ ನೀತಿ, ಇವಿ ನೀತಿ, ಆರ್ ಎಂಡ್ ಡಿ ನೀತಿ ರಾಜ್ಯದಲ್ಲಿವೆ ಎಂದರು.
ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ:
ಕರ್ನಾಟಕದಲ್ಲಿ ಉದ್ಯೋಗ ನೀತಿಯೂ ಇದೆ. ಇಲ್ಲಿನ ಜನ ಶ್ರೀಮಂತರಾಗುವ ಮೂಲಕ ರಾಜ್ಯ ಶ್ರೀಮಂತವಾಗಬೇಕು. ಇದು ಪರಿಶ್ರಮ ಹಾಗೂ ಉದ್ಯೋಗಾವಕಾಶಗಳಿಂದ ಮಾತ್ರ ಸಾಧ್ಯ. ಈ ಸದುದ್ದೇಶದಿಂದ ಕರ್ನಾಟದಲ್ಲಿ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗಿದೆ. ಸರ್ಕಾರ ಸಮಸ್ಯೆ ಭಾಗವಾಗದೇ ಪರಿಹಾರ ಭಾಗವಾಗಲಿದೆ. ನೀತಿಗಳು, ಮೂಲಭೂತಸೌಕರ್ಯಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಲಾಗುತ್ತಿದೆ ಎಂದರು.
ಕರ್ನಾಟಕದ ಮೇಲೆ ಹೂಡಿಕೆದಾರರ ವಿಶ್ವಾಸವಿದೆ:
ಕೇಂದ್ರ ಸರ್ಕಾರ ರಾಜ್ಯಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಕರ್ನಾಟಕ ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಕಾಣುತ್ತಿದೆ. ಮುಂದಿನ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2025 ರಲ್ಲಿ ನಮ್ಮ ಸರ್ಕಾರ ಪುನ: ಆಯೋಜಿಸುವ ಸಂಪೂರ್ಣ ವಿಶ್ವಾಸವನ್ನು ನಾವು ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ ಗೆಲ್ಹೊತ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಪಿಯೂಷ್ ಗೋಯಲ್, ಸಚಿವರಾದ ಮುರುಗೇಶ್ ನಿರಾಣಿ, ಡಾ.ಅಶ್ವತ್ಥ್ ನಾರಾಯಣ, ಎಂಟಿಬಿ ನಾಗರಾಜ್, ಮೈಸೂರು ರಾಜ ವಂಶಸ್ಥರಾದ ರಾಣಿ ಪ್ರಮೋದಾದೇವಿ, ಉದ್ಯಮಿಗಳಾದ ಸಜ್ಜನ್ ಜಿಂದಾಲ್ , ವಿಕ್ರಮ ಕಿರ್ಲೊಸ್ಕರ್, ರಿಷಬ್ ಪ್ರೇಮ್ ಜಿ , ಪ್ರತಿಕ್ ಅಗರವಾಲ್, ರಾಜನ್ ಮಿತ್ತಲ್, ಕರಣ್ ಅದಾನಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಮತ್ತಿತರರು ಹಾಜರಿದ್ದರು.