ಬೆಂಗಳೂರು, ಅ.31 www.bengaluruwire.com : ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೆ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವ ಯೋಜನೆ ಜಲಜೀವನ್ ಮಿಷನ್ ಅನುಷ್ಟಾನದಲ್ಲಿ ಕರ್ನಾಟಕ ಕಳಪೆ ಸಾಧನೆ ಮಾಡಿದೆ.
ಇತ್ತೀಚಿನ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು 28,335 ಹಳ್ಳಿಗಳ ಪೈಕಿ ಕೇವಲ 4,106 ಹಳ್ಳಿಗಳಲ್ಲಿ ಮಾತ್ರ ಶೇ.100ಕ್ಕೆ 100ರಷ್ಟು ಪ್ರತಿ ಮನೆಗೆ ಕ್ರಿಯಾತ್ಮಕ ಮನೆಯ ಟ್ಯಾಪ್ ಸಂಪರ್ಕಗಳ (FHTC)ನ್ನು ಹಾಕಲಾಗಿದೆ. 2019ರಲ್ಲಿ ಜಾರಿಗೆ ಬಂದ ಕೇಂದ್ರದ ಜಲಜೀವನ್ ಮಿಷನ್ ಯೋಜನೆಯನ್ನು ರಾಜ್ಯದಲ್ಲಿ ‘ಮನೆ ಮನೆಗೆ ಗಂಗೆ’ ಯೋಜನೆ ಎಂದು ಹೆಸರಿಡಲಾಗಿದೆ. ಈ ಯೋಜನೆಗೆ 2019-20 ರಿಂದ 6,515.93 ಕೋಟಿ ಕರ್ಚು ಮಾಡಿದ್ದರೂ ಹಲವು ಹಳ್ಳಿಗಳಲ್ಲಿ ಟ್ಯಾಪ್ ಹಾಕಿದ್ದರೂ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳೇ ಹೆಚ್ಚು.
ಈ ಕುರಿತಂತೆ ಗ್ರಾಮಗಳಲ್ಲಿನ ವಾಸ್ತವ ಪರಿಸ್ಥಿತಿ ಬಗ್ಗೆ “ಬೆಂಗಳೂರು ವೈರ್” ಪರಿಶೀಲಿಸಿದಾಗ, ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು, ಕುಡುಮಲ್ಲಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಹುಗಲವಳ್ಳಿ ಹಳ್ಳಿಯಲ್ಲಿ ಕೇಂದ್ರದ ಜಲಜೀವನ್ ಮಿಷನ್ ಯೋಜನೆಯಡಿ ಹಲವು ಮನೆಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಟ್ಯಾಪ್ ಹಾಕಿ 9 ತಿಂಗಳಾದರೂ ನೀರಿನ ಸಂಪರ್ಕ ಬಂದಿಲ್ಲ.
ನಲ್ಲಿ ಹಾಕಿ ಫೊಟೊ ಹೊಡೆದು ಹೋದರು ನೀರು ಕೊಟ್ಟಿಲ್ಲ :
– ಎಚ್.ಬಿ.ಮಂಜುನಾಥ್ ಭಟ್, ಸ್ಥಳೀಯರು, ಹುಗಲವಳ್ಳಿ (ಶಿವಮೊಗ್ಗ ಜಿಲ್ಲೆ)
“ಹುಗಲವಳ್ಳಿ ಹಳ್ಳಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಿದೆ. ಹಾಗಾಗಿ ಕುಡುಮಲ್ಲಿಗೆ ಗ್ರಾಮಪಂಚಾಯ್ತಿಗೆ ಕುಡಿಯುವ ನೀರಿನ ಪೂರೈಸುವಂತೆ ಮನವಿ ಮಾಡಿದ್ದೆವು. ಅದರಂತೆ 7-8 ಮನೆಗಳಿಗೆ ನೀರಿನ ಪೈಪ್, ನಲ್ಲಿ ಹಾಕಿ ಫೊಟೊ ಹೊಡೆದುಕೊಂಡು ಹೋದರು. ಅಲ್ಲಿಂದ 10 ತಿಂಗಳಾದರು ಈತನಕ ಈ ನಲ್ಲಿಯಲ್ಲಿ ನೀರು ಬಂದಿಲ್ಲ. ಸುತ್ತ ಹಳ್ಳಿಗಳಲ್ಲಿ ಬೋರ್ ಕೊರೆದು ಮಿಷನ್ ಹಾಕಿ ನೀರು ಕೊಡುತ್ತಾರೆ. ಆ ಬೊರ್ ವಲ್ ಆಗಾಗ ಕೆಟ್ಟು ಹೋಗಿ ಸಮಸ್ಯೆಯಾಗುತ್ತದೆ. ಶಾಶ್ವತ ನೀರು ಪೂರೈಕೆಗೆ ಮನೆಯಿಂದ 1 ಕಿ.ಮೀ ದೂರದಲ್ಲಿ ತುಂಗ ನದಿಯಿದ್ದರೂ ಗ್ರಾ.ಪಂ ಯೋಜನೆ ಹೆಸರಲ್ಲಿ ದುಡ್ಡು ಮಾಡುತ್ತಿದೆ. 12 ವರ್ಷಗಳಿಂದ ನಮ್ಮ ರಸ್ತೆಗೆ ಟಾರ್ ಹಾಕಿಲ್ಲ. ಈ ಸಮಸ್ಯೆಯನ್ನು ಸರ್ಕಾರ ಶೀಘ್ರದಲ್ಲೆ ಪರಿಹರಿಸಬೇಕಿದೆ”.
ನೀರು ಪೂರೈಕೆ – ನೈರ್ಮಲ್ಯತೆ ಬಗ್ಗೆ ಸಹಾಯವಾಣಿಗೆ ನಿತ್ಯ ದೂರು :
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD)ಯ ಸಹಾಯವಾಣಿ ಕೇಂದ್ರದಲ್ಲಿ ಪ್ರತಿದಿನ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಸಂಪರ್ಕದಲ್ಲಿ ದೋಷ, ನೈರ್ಮಲ್ಯತೆಯ ಸಮಸ್ಯೆ ಹೀಗೆ ನಾನಾ ಸಮಸ್ಯೆಗಳ ಬಗ್ಗೆ ದಿನನಿತ್ಯ 25-30 ದೂರುಗಳು ದಾಖಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇದನ್ನೇ ಸೂಕ್ಷ್ಮವಾಗಿ ಗಮನಿಸಿದರೆ, ಶೇ.100ರಷ್ಟು ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ ಎಂದು ಪ್ರಾಮಾಣಿಕೃತಗೊಂಡ ಹಳ್ಳಿಗಳಲ್ಲೂ ನೀರಿನ ಪೈಪ್ ಮತ್ತು ನಲ್ಲಿ ಅಳವಡಿಸಿ ನೀರು ಪೂರೈಕೆಯಾಗದ ಸಾಧ್ಯತೆಗಳಿರುವುದನ್ನು ತಳ್ಳಿ ಹಾಕುವಂತಿಲ್ಲ.
43.11 ಲಕ್ಷ ಗ್ರಾಮೀಣ ಮನೆಗಳಿಗೆ ಇನ್ನು ಸಿಕ್ಕಿಲ್ಲ ನೀರಿನ ಸಂಪರ್ಕ :
ರಾಜ್ಯದಲ್ಲಿ ಈವರೆಗೆ 1.01 ಕೋಟಿ ಮನೆಗಳ ಪೈಕಿ 58.06 ಲಕ್ಷ ಮನೆಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯಿಂದ ನೀರಿನ ಸಂಪರ್ಕ ಒದಗಿಸಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇನ್ನು 43,11,595 (43.11 ಲಕ್ಷ) ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಲಭಿಸಿಲ್ಲ.
4,473 ಹಳ್ಳಿಗಳಲ್ಲಿ ಒಂದು ಮನೆಗೂ ನೀರಿನ ಸಂಪರ್ಕವಿಲ್ಲ :
ಗ್ರಾಮೀಣ ಕರ್ನಾಟಕದ 4,473 ಹಳ್ಳಿಗಳಲ್ಲಿ ಒಂದು ಮನೆಗೂ ಜಲಜೀವನ್ ಮಿಷನ್ ಯೋಜನೆಯಡಿ ನೀರು ಸಂಪರ್ಕ ದೊರೆತಿಲ್ಲ. 12,771 ಹಳ್ಳಿಗಳಲ್ಲಿ ‘ಮನೆ ಮನೆಗೆ ಗಂಗೆ’ ಯೋಜನೆ ಕಾಮಗಾರಿ ಇನ್ನು ಆರಂಭವಾಗಿಲ್ಲ ಎಂದು ಸ್ವತಃ ಕೇಂದ್ರ ಸರ್ಕಾರವೇ ತಿಳಿಸಿದೆ.
2,341 ಮಾದರಿಗಳ ನೀರು ಕಲುಷಿತ :
2022ರಲ್ಲಿ ಈತನಕ ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ನೀಡಿದ ಕಡೆ, 80 ಅನುಮೋದಿತ ಪ್ರಯೋಗಾಲಯಗಳಲ್ಲಿ 19,265 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 2,341 ಮಾದರಿಗಳ ನೀರು ಕಲುಷಿತಗೊಂಡಿರುವುದನ್ನು ಖಚಿತಪಡಿಸಿದೆ. ಅಂದರೆ ನೀರು ಈ ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸರಿಯಾದ ಯೋಜನೆಯಿಲ್ಲದೆ ಜಾರಿ?:
ಕೆಲವು ಕಡೆಗಳಲ್ಲಿ ಸ್ಥಳೀಯವಾಗಿ ಜಲಜೀವನ್ ಮಿಷನ್ ಮೂಲ ಉದ್ದೇಶದಲ್ಲಿ ಸ್ಥಳೀಯವಾಗಿ ಭೂಮಿ ಮೇಲೆ ಸಿಗುವ ಕೆರೆ, ಕಟ್ಟೆ, ಕಲ್ಯಾಣಿ, ಹೊಳೆ, ಬಾವಿ ನೀರಿನ ಪೂರೈಕೆ ಮೂಲಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಮನೆ ಮನೆಗಳಿಗೆ ಗ್ರಾಮೀಣ ಪ್ರದೇಶದಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು.
ಇದಾವುದೇ ನೀರಿನ ಮೂಲ ಲಭ್ಯವಾಗದಿದ್ದರೆ ಮಾತ್ರ ಬೋರ್ ವೆಲ್ ಆಶ್ರಯಿಸಬೇಕು ಅಂತಿದೆ. ಆದರೆ ಇಲಾಖೆಯಲ್ಲಿ ಈ ಬಗ್ಗೆ ಸೂಕ್ತ ಯೋಜನೆಗಳನ್ನು ರೂಪಿಸದ ಕಾರಣದಿಂದ ದೇಶದಲ್ಲೇ, ಹಳ್ಳಿಗಳಲ್ಲಿ ಶೇ.100ರಷ್ಟು ಮನೆಗಳಿಗೆ ಕುಡಿಯುವ ನೀರು ಪೂರೈಸುವ ಅತಿಹೆಚ್ಚು ಹಳ್ಳಿಗಳನ್ನು ಹೊಂದಿದ ಟಾಪ್-5 ರಾಜ್ಯಗಳ ಪಟ್ಟಿಯಲ್ಲೂ ಕರ್ನಾಟಕ ಸ್ಥಾನ ಪಡೆದಿಲ್ಲ.
ಟಾಪ್-5 ರಾಜ್ಯಗಳಲ್ಲೂ ಕರ್ನಾಟಕಕ್ಕೆ ಲಭಿಸದ ಸ್ಥಾನ
ಬಿಹಾರದ 34,608, ಗುಜರಾತಿನ 16,013, ಮಹಾರಾಷ್ಟ್ರದ 13,695, ಪಂಜಾಬ್ 11,933 ಹಾಗೂ ತೆಲಂಗಾಣದ 10,450 ಹಳ್ಳಿಗಳಲ್ಲಿ ಶೇ.100ಕ್ಕೆ ನೂರರಷ್ಟು ಕ್ರಿಯಾತ್ಮಕ ಮನೆಯ ಟ್ಯಾಪ್ ಸಂಪರ್ಕಗಳನ್ನು (FHTC) ನೀಡಿದೆ ಎಂದು ಕೇಂದ್ರ ಸರ್ಕಾರದ ಇತ್ತೀಚಿನ ಜಲಜೀವನ್ ಮಿಶನ್ ರಿಪೋರ್ಟ್ (31-10-2022) ನಲ್ಲಿ ತಿಳಿಸಿದೆ.
ಈ ಯೋಜನೆಯ ಮುಖ್ಯ ಉದ್ದೇಶಗಳು:
ಪ್ರತಿ ಮನೆಗೆ ಕ್ರಿಯಾತ್ಮಕ ಟ್ಯಾಪ್ ಸಂಪರ್ಕವನ್ನು ಒದಗಿಸುವುದು, ಪ್ರತಿ ವ್ಯಕ್ತಿಗೆ ನಿತ್ಯ 55 ಲೀಟರ್ ಕುಡಿಯುವ (LPCD) ನೀರನ್ನು ಒದಗಿಸಲು ನೀರಿನ ಸಮರ್ಥನೀಯ ಮೂಲಗಳನ್ನು ಖಚಿತಪಡಿಸಿಕೊಳ್ಳುವುದು. ಶುದ್ಧ ನೀರನ್ನು ಖಚಿತಪಡಿಸಿಕೊಳ್ಳಲು ಹೊಸ ಮತ್ತು ಸರಿಯಾದ ತಂತ್ರಜ್ಞಾನದ ಬಳಕೆ. ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆ ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ‘ಮನೆ ಮನೆಗೆ ಗಂಗೆ’ ಯೋಜನೆಯ ಮೂಲ ಉದ್ದೇಶವಾಗಿದೆ. ಆದರೆ ಈಗಾಗಲೇ ನೀರಿನ ಸಂಪರ್ಕ ನೀಡಿರುವ ಕಡೆ ಪ್ರತಿ ವ್ಯಕ್ತಿಗೆ ದಿನನಿತ್ಯ 55 ಲೀಟರ್ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಅನುಮಾನ ಮೂಡಿಸುತ್ತಿದೆ.
ಒಟ್ಟಾರೆ ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೂ ಗಂಗೆ ಬಂದಿಲ್ಲ. ಬಂದಿದ್ದರೂ ಸರಿಯಾಗಿ ಪೂರೈಕೆಯಾಗಿಲ್ಲ. 2024 ರ ವೇಳೆಗೆ ಯೋಜನೆ ರಾಜ್ಯದಲ್ಲಿ ಅಂದುಕೊಂಡಂತೆ ಪೂರ್ಣವಾಗಲು ಮ್ಯಾಜಿಕ್ ಆಗಬೇಕಷ್ಟೆ….!