ಬೆಂಗಳೂರು, ಅ.27 www.bengaluruwire.com : ನಗರದಲ್ಲಿ ರಸ್ತೆಯಲ್ಲಿ ಗುಂಡಿ ಇದ್ಯೋ? ಗುಂಡಿಯಲ್ಲಿ ರಸ್ತೆ ಇದ್ಯೋ? ಅಂತ ಕನ್ ಫ್ಯೂಸ್ ಆಗುವಷ್ಟು ರಸ್ತೆ ಹಾಳಾಗಿ ಹೋಗಿದೆ. ಹಾಳಾಗಿರುವ ರಸ್ತೆಯಿಂದಾಗಿ ನಗರದಲ್ಲಿ ನಿರಂತರವಾಗಿ ರಸ್ತೆಯಲ್ಲಿ ಪ್ರಾಣಹಾನಿ ಸಂಭವಿಸುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ರಸ್ತೆ ಗುಂಡಿ ಹಾಗೂ ಕೆಟ್ಟ ರಸ್ತೆಗಳಿಗೆ ವ್ಯಾಪಕ ಮಳೆ, ಕಳಪೆ ಟಾರ್ ಹಾಕೋ ಕಾಂಟ್ರಾಕ್ಟರ್ ಒಂದು ಕಾರಣವಾದ್ರೆ ಸ್ವತಃ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯೂ ಜನರ ಪಾಲಿಗೆ ವಿಲನ್ ಆಗಿದೆ.
ಬೆಂಗಳೂರು ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆ ನಗರಗಳಲ್ಲಿ ರಸ್ತೆಯಡಿ ವಿವಿಧ ಸೇವಾಪೂರೈಕೆದಾರರು (Service Proviceders) ಭೂಗತ ಕೇಬಲ್, ಪೈಪ್ ಹಾಕಲು ಸೂಕ್ತ ನಿರ್ದೇಶನ ನೀಡಲು, ಭೂಗತ ಉಪಯುಕ್ತತೆ ಪೈಪ್ ಗಳನ್ನು ಅಳವಡಿಸಿದ ಮ್ಯಾಪ್ ಖಡ್ಡಾಯವಾಗಿ ಜಿಪಿಎಸ್ ವ್ಯವಸ್ಥೆಯಡಿ ಏಕೀಕೃತಗೊಳಿಸುವುದನ್ನು ಖಡ್ಡಾಯಗೊಳಿಸುವಂತೆ ಹೇಳಲು ಅಲ್ಲದೆ ಅಂತಹ ನಕ್ಷೆಯನ್ನು ಕಾಲ ಕಾಲಕ್ಕೆ ಮಾರ್ಪಡಿಸುವುದು ಹಾಗೂ ಈ ಮಾಹಿತಿಯನ್ನು ಖಡ್ಡಾಯವಾಗಿ ಬಿಬಿಎಂಪಿಗೆ ನೀಡುವಂತೆ ಒಂದು ನೀತಿ ಅಥವಾ ನಿಯಮಗಳನ್ನೇ ಮಾಡಿಲ್ಲ.
2015 ರಿಂದ 2021ರ ಮಾರ್ಚ್ ಅವಧಿಯಲ್ಲಿ ನಗರದಲ್ಲಿ ಭೂಗತ ಉಪಯುಕ್ತ ಕೇಬಲ್ ಗಳನ್ನು ಹಾಕಲು ರಸ್ತೆ ಅಗೆತ ಕುರಿತಂತೆ ಭಾರತೀಯ ಲೆಕ್ಕ ಪರಿಶೋಧಕರು ಆಡಿಟ್ ಮಾಡಿದ ವೇಳೆಯಲ್ಲಿ ಹಲವು ನ್ಯೂನ್ಯತೆಗಳನ್ನು ಬಹಿರಂಗಪಡಿಸಿದ್ದಾರೆ.
ನಗರದಲ್ಲಿ ರಸ್ತೆ ಅಗೆತ ಕುರಿತಂತೆ ಅನುಮತಿ ನೀಡುವ ಹಾಗೂ ತಿರಸ್ಕರಿಸುವ ಅಧಿಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅಧಿಕಾರವಿದೆ. ಈ ಅಧಿಕಾರವನ್ನು ಬಳಸಿ ರಸ್ತೆ ಅಗೆತಕ್ಕೆ ಸೂಕ್ತ ಕಾಲಾವಧಿಯಲ್ಲಿ ಅನುಮತಿ ನೀಡದೆ ಹಾಗೂ ಅನಧಿಕೃತವಾಗಿ ಸರ್ಕಾರದ ಅಂಗ ಸಂಸ್ಥೆಗಳು ರಸ್ತೆ ಅಗೆದರೂ ಕಠಿಣವಾಗಿ ದಂಡ ವಿಧಿಸದ ಕಾರಣದಿಂದ ಪಾಲಿಕೆಗೆ 2015ರಿಂದ 2021ರ ಅವಧಿಯಲ್ಲಿ ಒಟ್ಟಾರೆ 143.7 ಕೋಟಿ ರೂ. ನಷ್ಟವಾಗಿರುವುದನ್ನು ಸಿಎಜಿ ರಿಪೋರ್ಟ್ ಪತ್ತೆ ಮಾಡಿದೆ.
ಐಆರ್ ಸಿ ರೂಲ್ಸ್ ಬ್ರೇಕ್ ಮಾಡಿ ಕೇಬಲ್ ಅಳವಡಿಕೆ :
ಸೂಕ್ತ ನಿಯಮಾವಳಿಯೇ ಇಲ್ಲದಿರುವಾಗ ನಗರದಲ್ಲಿ ಸರ್ಕಾರದ ಸೇವಾ ಪೂರೈಕೆದಾರರಾದ ಬೆಸ್ಕಾಂ (Bescom), ಬೆಂಗಳೂರು ನೀರು ಸರಬರಾಜು ಮತ್ತು ಒಳಚಂರಡಿ ಮಂಡಳಿ (Bwssb), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL), ಭಾರತೀಯ ಗ್ಯಾಸ್ ಪ್ರಾಧಿಕಾರ ಲಿ. (GAIL), ಜಿಎಐಎಲ್ ಗ್ಯಾಸ್ ಲಿಮಿಟೆಡ್ (GGL) ಹಾಗೂ ಬಿಬಿಎಂಪಿ ನಡುವೆ ಹೊಂದಾಣಿಕೆಯಿಲ್ಲ. ಅದೇ ರೀತಿ ದೇಶದ ರಸ್ತೆಯ ಗುಣಮಟ್ಟ, ವಿನ್ಯಾಸ, ಸುರಕ್ಷತೆ ಕುರಿತಂತೆ ಮಾರ್ಗಸೂಚಿ ರೂಪಿಸುವ ಭಾರತೀಯ ರೋಡ್ ಕಾಂಗ್ರೆಸ್ (IRC) ನಿಯಮಾವಳಿಯಂತೆ ರಸ್ತೆಯಡಿ ಪೈಪ್ ಅಥವಾ ಕೇಬಲ್ ಗಳನ್ನು ಇಂತಿಷ್ಟೇ ಆಳ ಹಾಗೂ ರಸ್ತೆ ಅಂಚಿನಿಂದ ಇಂತಿಷ್ಟು ದೂರದಲ್ಲಿ ಅಳವಡಿಸಬೇಕು. ಎಂಬ ನಿಯಮಗಳನ್ನು ಕೇಬಲ್, ಪೈಪ್ ಹಾಕುವಾಗ ಉಲ್ಲಂಘಿಸಿರುವುದನ್ನು ಸಿಎಜಿ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದಿದೆ.
ಕೇಬಲ್- ಪೈಪ್ ಎಲ್ಲಿ ಹಾಕಿದ್ದಾರೆ? ಅಳವಡಿಸಿದವರಿಗೆ ಸರಿ ಗೊತ್ತಿಲ್ಲ :
ಬೆಂಗಳೂರಿನಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ ಬಿ, ಕೆಪಿಟಿಸಿಎಲ್, ಗೇಲ್, ಜಿಜಿಎಲ್ ಸಂಸ್ಥೆಗಳು ಇವುಗಳನ್ನು ಸೂಕ್ತ ರೀತಿ ಪಾಲಿಸದ ಕಾರಣ ರಸ್ತೆ ನೆಲಮಟ್ಟದಿಂದ ಯಾವ ಆಳ ಹಾಗೂ ಸ್ಥಳದಲ್ಲಿ ಪೈಪ್ ಅಥವಾ ಕೇಬಲ್ ಹಾಕಲಾಗಿದೆ ಎಂದು ತಿಳಿಯದೇ ನಗರದಲ್ಲಿ ರಸ್ತೆಯನ್ನು ಅಡ್ಡಾದಿಡ್ಡಿಯಾಗಿ ಅಗೆಯಲಾಗುತ್ತಿದೆ. ಅಲ್ಲದೆ ಇದರಿಂದಾಗಿ ಒಂದು ಸರ್ವಿಸ್ ಪ್ರೊವೈಡರ್ ಅಳವಡಿಸಿದ ಪೈಪ್ ಗಳಿರುವುದನ್ನು ತಿಳಿಯದೆ ಮತ್ತೊಬ್ಬರು ಆ ರಸ್ತೆ ಅಗೆದ ಕಾರಣ ಹಿಂದೆ ರಸ್ತೆಯಡಿ ಹಾಕಿದ ಪೈಪ್ ಗಳಿಗೆ ಹಾನಿಯಾದ ಪ್ರಕರಣಗಳು ನಡೆಯುತ್ತಲೇ ಇದೆ.
ಈ ಅವ್ಯವಸ್ಥೆಯಿಂದಾಗಿ ರಾಜಧಾನಿಯಲ್ಲಿ ಬಹುತೇಕ ರಸ್ತೆಗಳಲ್ಲಿ ಕಾಮಗಾರಿ ಕೈಗೊಂಡು ವಾಹನ ಸಂಚಾರ ದಟ್ಟಣೆ ಹೆಚ್ಚಾಗೋದು ಒಂದು ಕಡೆಯಾದ್ರೆ, ಇನ್ನೊಂದೆಡೆ ವ್ಯರ್ಥವಾಗಿ ವಾಹನಗಳಲ್ಲಿ ಇಂಧನ ಬಳಕೆ ಹೆಚ್ಚಾಗುವಂತಾಗಿದೆ.
ಯಾವ್ಯಾವ ಸಂಸ್ಥೆ ಎಷ್ಟೆಷ್ಟು ಭೂಗತ ಕೇಬಲ್/ಪೈಪ್ ಅಳವಡಿಸಿವೆ? :
ಕ್ರಮ ಸಂಖ್ಯೆ | ಸೇವಾ ಪೂರೈಕೆದಾರರ ಹೆಸರು | ಉಪಯುಕ್ತತೆ ಜಾಲದ ಒಟ್ಟು ಉದ್ದ (ಕಿ.ಮೀ) | ಮ್ಯಾಪ್ ಮಾಡಲಾದ ಉಪಯುಕ್ತತೆ ಜಾಲ (ಕಿ.ಮೀ) | ಮ್ಯಾಪ್ ಮಾಡಲಾದ ಜಾಲದ ಶೇಕಡವಾರು |
1) | ಬಿಡಬ್ಲ್ಯುಎಸ್ಎಸ್ ಬಿ | 21, 636 | 21,636 | ಶೇ.100 |
2) | ಬೆಸ್ಕಾಂ | 7,201 | 5,997 | 83 |
3) | ಕೆಪಿಟಿಸಿಎಲ್ | 440 | 385 | 88 |
4) | ಜಿಎಐಎಲ್ (ಗೇಲ್) | 73 | 73 | 100 |
5) | ಜಿಜಿಎಲ್ | 1,561 | 778 | 71 |
31ನೇ ಮಾರ್ಚ್ 2021ರಲ್ಲಿದ್ದಂತೆ ಮಾಹಿತಿ
ಬಿಡಬ್ಲ್ಯುಎಸ್ ಎಸ್ ಬಿ ಹಾಗೂ ಗೇಲ್ ಸೇವಾ ಪೂರೈಕೆದಾರರು ಮಾತ್ರ ಸಂಪೂರ್ಣವಾಗಿ ಭೂಗತ ಜಾಲದ ಲೇನ್ ಗಳ ಮಾಹಿತಿಯನ್ನು ಭೋಗೋಳಿಕ ಮಾಹಿತಿ ವ್ಯವಸ್ಥೆಯಡಿ (GIS) ಸೇರಿಸಿದ್ದರೂ ಸಹ ಇತರ ಮೂರು ಸೇವಾ ಪೂರೈಕೆದಾರರು ಜಿಐಎಸ್ ನಲ್ಲಿ ಈ ಮಾಹಿತಿಗಳನ್ನು ಸೇರಿಸಿರುವ ಶೇಕಡ ಪ್ರಮಾಣ 71ರಿಂದ 88ರಷ್ಟಿತ್ತು. ಉಳಿದ ಮೂವರನ್ನು ಹೊರತುಪಡಿಸಿ ಶೇ.100ರಷ್ಟು ಮ್ಯಾಪಿಂಗ್ ಮಾಡಿದ ಬಿಡಬ್ಲ್ಯುಎಸ್ ಎಸ್ ಬಿ ಜಿಐಎಸ್ ನಕ್ಷೆಯಲ್ಲಿ ಕಟ್ಟಡಗಳ ಮೇಲೆ ನೀರಿನ ಪೈಪ್ ಲೈನ್ ಜೋಡಣೆಯನ್ನು ತೋರಿಸಿದೆ. ಇದರಿಂದ ನಕ್ಷೆಯಲ್ಲಿ ತೋರಿಸಿದ ಪೈಪ್ ಲೈನ್ ಜಾಲಕ್ಕೂ ನೈಜವಾಗಿ ರಸ್ತೆಯಡಿ ಹಾಕಲಾದ ಸ್ಥಳಗಳಿಗೆ ಹೊಂದಾಣಿಕೆಯಿರಲಿಲ್ಲ. ಇದರಿಂದ ಯುಟಿಲಿಟಿ ಲೈನ್ ಗಳ ಮ್ಯಾಪಿಂಗ್ ಮಾಡುವ ಉದ್ದೇಶವೇ ಸಫಲವಾಗಲಿಲ್ಲ. ಇದು ಕೇವಲ ಒಂದು ಸೇವಾ ಪೂರೈಕೆದಾರರ ಉದಾಹರಣೆಯಷ್ಟೆ. ಉಳಿದವರದ್ದು ಇದೇ ಕಥೆ.
ಕೆಜಿಐಎಸ್ ವ್ಯವಸ್ಥೆಯಡಿ ಯುಟಿಲಿಟಿ ಕೇಬಲ್ ಮ್ಯಾಪ್ ಇಂಟಿಗ್ರೇಟ್ ಆಗಿಲ್ಲ :
ರಾಜ್ಯದಾದ್ಯಂತ ಕರ್ನಾಟಕ ಭೋಗೋಳಿಕ ಮಾಹಿತಿ ವ್ಯವಸ್ಥೆ (KGIS)ಯಡಿ ಜಿಐಎಸ್ ಡಾಟಾ ಸಿದ್ಧಪಡಿಸುವ ಹೊಣೆಗಾರಿಯನ್ನು ರಾಜ್ಯ ಸರ್ಕಾರ ಕರ್ನಾಟಕ ದೂರ ಸಂವೇದಿ ಅನ್ವಯ ಕೇಂದ್ರ (KSRAC)ವನ್ನು ನೋಡೆಲ್ ಏಜನ್ಸಿಯಾಗಿ ನೇಮಿಸಿದೆ. ಜಿಯೋ ಟ್ಯಾಗಿಂಗ್ ಉದ್ದೇಶಕ್ಕಾಗಿ ಸರ್ಕಾರದ ಆಸ್ತಿಗಳ ಸಂಪೂರ್ಣ ಪಟ್ಟಿಯನ್ನು ಕೆಎಸ್ ಆರ್ ಸಿಎಸಿಗೆ ಒದಗಿಸುವಂತೆ ಸರ್ಕಾರ 2017ರ ನವೆಂಬರ್ ನಲ್ಲೇ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿತ್ತು. ಆ ಪ್ರಕಾರ ಬಿಡಬ್ಲ್ಯುಎಸ್ ಎಸ್ ಬಿ, ಬೆಸ್ಕಾಂನ ಜಿಐಎಸ್ ಡಾಟಾವನ್ನು ಕೆಜಿಐಎಸ್ ಫ್ರೇಮ್ ವರ್ಕ್ ಗೆ ಇಂಟಿಗ್ರೇಟ್ ಮಾಡುವ ಕಾರ್ಯ ಪೂರ್ಣಗೊಂಡಿದೆ. ಬಿಬಿಎಂಪಿಯು ರಸ್ತೆ ಅಥವಾ ಹೆಗ್ಗುರುತುಗಳ ದತ್ತಾಂಶವನ್ನು ವೆಬ್ ಮ್ಯಾಪ್ ಸೇವೆಯಾಗಿ ಹಂಚಿಕೊಂಡಿದೆ.
ಆದರೆ ಕೆಎಸ್ ಆರ್ ಎಸಿ ಸಂಸ್ಥೆಯು ಈ ಯುಟಿಲಿಟಿ ನೆಟ್ ವರ್ಕ್ ವಿವರಗಳನ್ನು ಒಳಗೊಂಡ ಸಂಪೂರ್ಣ ರಸ್ತೆ ಜಿಐಎಸ್ ಡಾಟಾವನ್ನು ಕೆಜಿಐಎಸ್ ನಲ್ಲಿ ಸಂಯೋಜನೆ ಮಾಡಿಲ್ಲ. ಇನ್ನು ಗೇಲ್ ಗ್ಯಾಸ್ ಮತ್ತು ಗೇಲ್ ಇಂಡಿಯಾ ಲಿಮಿಟೆಡ್ ಹಾಗೂ ಆಪ್ಟಿಕಲ್ ಫೈಬರ್ ಕೇಬಲ್ ನೆಟ್ ವರ್ಕ್ (OFC) ಸೇರಿದಂತೆ ಮುಂತಾದ ಏಜನ್ಸಿಗಳು ತಮ್ಮ ಡಾಟಾಗಳನ್ನು ಕೆಎಸ್ ಆರ್ ಎಸಿ ಸಂಸ್ಥೆಗೆ ಹಂಚಿಕೊಳ್ಳಲು ಪ್ರಾರಂಭಿಸಬೇಕಿದೆಯಷ್ಟೆ.
ಕಾಟಾಚಾರಕ್ಕೆ ಬಿಬಿಎಂಪಿ ಸಮನ್ವಯ ಸಮಿತಿ ಸಭೆ :
ಪರಿಸ್ಥಿತಿ ಹೀಗಿರುವಾಗ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಕಾಲಕಾಲಕ್ಕೆ ಬೆಸ್ಕಾಂ, ಬೆಂಗಳೂರು ಜಲಮಂಡಳಿ, ಕೆಪಿಟಿಸಿಎಲ್ ಸೇರಿದಂತೆ ಮೊದಲಾದ ಸಂಸ್ಥೆಗಳ ಜೊತೆ ನಡೆಸುವ ಸಮನ್ವಯ ಸಮಿತಿ ಸಭೆಗಳು ಕೇವಲ ಕಾಟಾಚಾರ ಹಾಗೂ ನಾಮಕಾವಸ್ಥೆಗೆ ಎಂಬುದು ಇದರಿಂದ ವೇದ್ಯವಾಗುತ್ತದೆ.
ಬಿಬಿಎಂಪಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಿದ್ದರೂ ಉಪಯೋಗವಿಲ್ಲ :
ಬಿಬಿಎಂಪಿಯಲ್ಲಿ ರಸ್ತೆ ಅಗೆತಕ್ಕೆ ‘ಮಲ್ಟಿ ಏಜನ್ಸಿ ರೋಡ್ ಕಟಿಂಗ್ ಅಂಡ್ ಕೋ-ಆರ್ಡಿನೇಷನ್ ಸಿಸ್ಟಮ್’ (ಎಂಆರ್ ಸಿಸಿಎಸ್) ಆನ್ ಲೈನ್ ನಲ್ಲಿ ಏಕ ಗವಾಕ್ಷಿ ಯೋಜನೆಯಡಿ ಅನುಮತಿ ನೀಡುವ ವ್ಯವಸ್ಥೆಯನ್ನು ಪಾಲಿಕೆ ಅಳವಡಿಸಿಕೊಂಡಿದೆ. ಆದರೆ ಸೂಕ್ತ ಅವಧಿಯಲ್ಲಿ ಸರ್ಕಾರಿ ಸೇವಾ ಪೂರೈಕೆದಾರರಿಗೆ ಅನುಮತಿ ನೀಡಲು ನಿಗಧಿತ ಅವಧಿಯನ್ನು ಅಳವಡಿಸಿಕೊಳ್ಳದ ಕಾರಣ ಸೇವಾ ಪೂರೈಕೆದಾರರು ಅಗತ್ಯ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಹಾಗೂ ಸೇವಾ ಪೂರೈಕೆದಾರರು ಸೂಕ್ತ ಅವಧಿಯಲ್ಲಿ ಶುಲ್ಕ ಕಟ್ಟದೆ ಪಾಲಿಕೆಗೂ ಹಣ ಬಂದಿಲ್ಲ.
ರಸ್ತೆ ಅಗೆತಕ್ಕೆ ಅನುಮತಿಗಾಗಿ ಅರ್ಜಿ ಬಂದರೂ ಹಲವು ವಿಲೇವಾರಿಯಾಗಿಲ್ಲ :
2015ನೇ ಇಸವಿಯಿಂದ 2021ರ ಅವಧಿಯಲ್ಲಿ ಪಾಲಿಕೆಯ ಎಂಆರ್ ಸಿಸಿಎಸ್ ವ್ಯವಸ್ಥೆಯಡಿ 12,139 ರಸ್ತೆ ಅಗೆತಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಕೆಯಾಗಿತ್ತು. ಆ ಪೈಕಿ 31 ಮಾರ್ಚ್ 2021ರ ಮಾಹಿತಿಯಂತೆ 1014 ಅರ್ಜಿಗಳು ಇನ್ನು ವಿಲೇವಾರಿಯಾಗಿರಲಿಲ್ಲ.
ಇದಲ್ಲದೆ ಬೆಸ್ಕಾಂ, ಬಿಡಬ್ಲ್ಯುಎಸ್ ಎಸ್ ಬಿ, ಗೇಲ್, ಜಿಜಿಎಲ್ ಸಂಸ್ಥೆಗಳು ಪಾಲಿಕೆಯಿಂದ ರಸ್ತೆ ಅಗೆತಕ್ಕೆ ಪರ್ಮಿಷನ್ ತೆಗೆದುಕೊಳ್ಳದೆ ಅನಧಿಕೃತವಾಗಿ ರಸ್ತೆ ಅಗೆದು ನಗರದಲ್ಲಿ ಸರಾಗ ವಾಹನ ಸಂಚಾರಕ್ಕೆ ತೊಡಕಾಗಿ, ಪಾಲಿಕೆಯು ಪದೇ ಪದೇ ಮಾಡಿದ್ದೇ ರಸ್ತೆಗಳಲ್ಲಿ ರಿಪೇರಿ ಮಾಡುತ್ತಿದೆ. ಇದರಿಂದ ಬಿಬಿಎಂಪಿ ಅನಗತ್ಯವಾಗಿ ರಸ್ತೆ ಅಭಿವೃದ್ಧಿಗೆ ಹಣ ಕರ್ಚು ಮಾಡುವಂತಾಗಿದೆ. ಈ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗೆ ವಿಲೇವಾರಿಯಾಗದೆ ಬಾಕಿ ಉಳಿದ ಅರ್ಜಿಗಳ ಪೈಕಿ 482 ಅಪ್ಲಿಕೇಶನ್ ಗಳು ಒಂದು ವರ್ಷಕ್ಕೂ ಅಧಿಕ ಸಮಯದಿಂದ ಬಾಕಿ ಉಳಿದಿತ್ತು ಎಂದು ಸಿಎಜಿ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ.
ರೋಡ್ ಕಟಿಂಗ್ ವಿಷ್ಯದಲ್ಲಿ ಪಾಲಿಕೆಗೆ 119.45 ಕೋಟಿ ರೂ. ನಷ್ಟ :
ಇನ್ನು ರಸ್ತೆ ಅಗೆತಕ್ಕೆ ಅನುಮತಿ ನೀಡಲು ಒಟ್ಟು 582.37 ಕೋಟಿ ರೂ. ಬೇಡಿಕೆ ಟಿಪ್ಪಣಿ ನೀಡಿದರೂ ಹಲವು ಇಲಾಖೆಗಳು ಬಿಬಿಎಂಪಿಗೆ ನಿಗಧಿತ ಶುಲ್ಕ ಕಟ್ಟಿರಲಿಲ್ಲ. ಇನ್ನೊಂದೆಡೆ ಈ ಸರ್ವೀಸ್ ಪ್ರೊವೈಡರ್ ಗಳು ಹೊಸದಾಗಿ ಡಾಂಬರ್ ಹಾಕಲಾದ ರಸ್ತೆ, ಮೂರು ವರ್ಷಗಳ ರಸ್ತೆ ದೋಷ ಸರಿಪಡಿಸುವ ಹೊಣೆಗಾರಿಕೆಯಿರುವ ರಸ್ತೆಗಳಲ್ಲಿ ರೋಡ್ ಕಟಿಂಗ್ ಗೆ ಪಾಲಿಕೆ ಅನುಮತಿ ನೀಡದಿದ್ದರೂ 7.56 ಲಕ್ಷ ಮೀಟರ್ ಭೂಗತ ಕೇಬಲ್ ಗಳನ್ನು ಹಾಕುವ 983 ಕಾಮಗಾರಿಗಳನ್ನು ಕೈಗೊಂಡಿದ್ದರು. ಇದರಿಂದ ಶುಲ್ಕದ ರೂಪದಲ್ಲಿ ಪಾಲಿಕೆಗೆ ರಸ್ತೆ ಅಗೆತ ಅನುಮತಿಯಿಂದ ಸಂಗ್ರಹಿಸಬೇಕಿದ್ದ 119.45 ಕೋಟಿ ರೂ. ಹಣ ಕೈತಪ್ಪಿತು.
ಅನಧಿಕೃತ ರಸ್ತೆ ಅಗೆತಕ್ಕೆ 24.25 ಕೋಟಿ ರೂ. ದಂಡ ವಿಧಿಸದ ಪಾಲಿಕೆ :
ರಾಜ್ಯ ಸರ್ಕಾರವು ಡಿಸೆಂಬರ್ 2018ರ ಆದೇಶದ ಪ್ರಕಾರ ಅನಧಿಕೃತವಾಗಿ ರಸ್ತೆ ಅಗೆತಗಳಿಗೆ 25 ಲಕ್ಷ ರೂ. ದರದಲ್ಲಿ ದಂಡ ವಿಧಿಸುವಂತೆ ಹಾಗೂ ಹೀಗೆ ಅಗೆದ ರಸ್ತೆಗಳನ್ನು ಆಯಾ ಇಲಾಖೆಗಳೇ ಮೊದಲಿದ್ದಂತೆ ಸರಿಪಡಿಸಬೇಕು ಎಂದು ಆದೇಶ ಹೊರಡಿಸಿತ್ತು. ಹೀಗಿದ್ದಾಗ್ಯೂ ರಸ್ತೆ ಅಗೆತಕ್ಕೆ ಪಾಲಿಕೆಯು ಅನುಮತಿ ತಿರಸ್ಕಾರಿಸಿದ್ದರೂ ಅಥವಾ ಎಮ್ಎಆರ್ ಸಿಸಿಎಸ್ ಏಕಗವಾಕ್ಷಿ ವ್ಯವಸ್ಥೆಯಡಿ ಅರ್ಜಿ ಹಾಕದಿದ್ದರೂ ಬೆಸ್ಕಾಂ 95 ಕಾಮಗಾರಿಗಳನ್ನು, ಬೆಂಗಳೂರು ಜಲಮಂಡಳಿ 97 ಕಾಮಗಾರಿಗಳನ್ನು ಕೈಗೊಂಡಿದ್ದವು. ಇದಕ್ಕಾಗಿ ಬೆಸ್ಕಾಂ ಮತ್ತು ಬಿಡಬ್ಲ್ಯುಎಸ್ಎಸ್ ಬಿ ಸಂಸ್ಥೆಗಳಿಗೆ ಪಾಲಿಕೆಯು 24.25 ಕೋಟಿ ರೂ. ದಂಡವನ್ನು ವಿಧಿಸಿ ಸಂಗ್ರಹಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯಲ್ಲಿ ತಿಳಿದು ಬಂದಿದೆ.
ಕೆಟ್ಟ ರಸ್ತೆಗಳಿಂದ ಮುಕ್ತಿ ದೊರೆಯುವುದು ಕನಸಿನ ಮಾತು :
ಸಿಲಿಕಾನ್ ಸಿಟಿ ಇಡೀ ರಾಜ್ಯದಲ್ಲಿ ಅತಿಹೆಚ್ಚು ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೆ. ಆದರೂ ಮೂಲಭೂತ ಸೌಕರ್ಯ ಕೊರತೆಯಿಂದ ಬಸವಳಿದಿದೆ. ಬೆಂಗಳೂರು ಜಲಮಂಡಳಿ, ಗೇಲ್ ಸಂಸ್ಥೆಯು ರಸ್ತೆಯಡಿ ಭೂಗತವಾಗಿ ಅಳವಡಿಸಿದ ಪೈಪ್ ಗಳನ್ನು ಅಳವಡಿಸಿದ ಮಾರ್ಗದ ಮ್ಯಾಪ್ ಮಾಹಿತಿಯನ್ನು ಶೇ.100ರಷ್ಟು ಪೂರ್ಣಗೊಳಿಸಿದೆ. ಆದರೆ ಸೂಕ್ತ ರೀತಿ ಮ್ಯಾಪಿಂಗ್ ಮಾಡಿದ ವಿಧಾನಕ್ಕೂ ವಾಸ್ತವವಾಗಿ ರಸ್ತೆಯಲ್ಲಿ ಪೈಪ್ ಅಳವಡಿಸಿದ ಸ್ಥಳದ ನಡುವೆ ವ್ಯತ್ಯಾಸವಿರುವ ಕಾರಣ ನಿರ್ದಿಷ್ಟವಾಗಿ ಯಾವ ಜಾಗದಲ್ಲಿ ರಸ್ತೆಯಡಿ ಪೈಪ್ ಹೋಗಿದೆ ಎಂಬ ಮಾಹಿತಿ ಲಭ್ಯವಿಲ್ಲ. ಇದೆಲ್ಲ ನ್ಯೂನ್ಯತೆಯನ್ನು ಸಮಗ್ರವಾಗಿ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ನಗರದ ಕೆಟ್ಟ ರಸ್ತೆಗಳು ಹಾಗೂ ಗುಂಡಿ ಬಿದ್ದ ರೋಡ್ ಗಳಿಗೆ ಸರ್ವೀಸ್ ಪ್ರೊವೈಡರ್ ಗಳು, ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಕೂಡ ಕಾರಣ ಅಂತ ಪರೋಕ್ಷವಾಗಿ ಬೊಟ್ಟು ಮಾಡಿ ಸೂಚಿಸಿದೆ ಸಿಎಜಿ. ಆದ್ದರಿಂದಲೇ ನಗರದಲ್ಲಿ ಪದೇ ಪದೇ ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿಯು ತೆರಿಗೆದಾರರ ಹಣದಿಂದ ನೂರಾರು ಕೋಟಿ ರೂ. ಹಣ ಸುರಿದರೂ ಗುಂಡಿ ಬಿದ್ದ ರಸ್ತೆಗಳಿಗೆ ಮಾತ್ರ ಮುಕ್ತಿ ದೊರೆತಿಲ್ಲ.
ಸಿಎಜಿ ಪ್ರಮುಖ ಶಿಫಾರಸ್ಸುಗಳೇನು?
- ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಸೇವಾ ಪೂರೈಕೆದಾರರಿಂದ ಭೂಗತ ಉಪಯುಕ್ತತೆಗಳ ಪರಿಣಾಮಕಾರಿ ಮತ್ತು ಸಂಪೂರ್ಣ ಮ್ಯಾಪಿಂಗ್ ಹಾಗೂ ಅವುಗಳ ಸಕಾಲಿಕ ನವೀಕರಣವನ್ನು ಕಡ್ಡಾಯಗೊಳಿಸುವ ಸಾಕಷ್ಟು ಕಾನೂನು ಮತ್ತು ನಿಯಂತ್ರಕ ಚೌಕಟ್ಟನ್ನು ರೂಪಿಸಬೇಕು.
- ಸೇವಾ ಪೂರೈಕೆದಾರರು ಜೋಡಣೆ, ಆಳ, ಗಾತ್ರ ಮತ್ತು ಸೂಕ್ಷ್ಮ ವಿವರಗಳೊಂದಿಗೆ ಭೂಗತ ಉಪಯುಕ್ತತೆಗಳ ಸಂಪೂರ್ಣ ಮತ್ತು ನಿಖರವಾದ ದತ್ತಾಂಶದ ನಿರ್ವಹಣೆಗೆ ಸೂಕ್ತವಾದ ಕಾರ್ಯವಿಧಾನವನ್ನು ಸ್ಥಾಪಿಸಬೇಕು ಹಾಗೂ ಅವುಗಳ ನಿಯತಕಾಲಿಕವಾಗಿ ನವೀಕರಣ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು.
- ಸೇವಾ ಪೂರೈಕೆದಾರರು ಭೂಗತ ಉಪಯುಕ್ತತೆಗಳನ್ನು ಹಾಕಲು ನಿಗದಿಪಡಿಸಿರುವ ಸಂಪಂಧಿತ ಮಾನದಂಡ ಅಥವಾ ನಿಯಮಗಳನ್ನು ಅನುಸರಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು.
- ಬಿಬಿಎಂಪಿಯು ರಸ್ತೆ ದುರಸ್ತಿ ಮತ್ತು ನಿರ್ವಹಣೆಗೆ ವಿವಿಧ ಉಪಯುಕ್ತ ಮಾರ್ಗಗಳಿಗೆ ವಿವಿಧ ಬಣ್ಣಗಳನ್ನು ಅಳವಡಿಸಲು ಯೋಚಿಸಬೇಕು. ರಸ್ತೆ ಅಗತೆಕ್ಕೆ ಅನುಮತಿ ನೀಡುವ ತನ್ನ ಏಕಗವಾಕ್ಷಿ ವ್ಯವಸ್ಥೆಯಿರುವ ಎಮ್ ಆರ್ ಆರ್ ಸಿಸಿಎಸ್ ನಲ್ಲಿ ಉಪಯುಕ್ತತೆ ಮ್ಯಾಪ್ ಗಳ ನವೀಕರಣವನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಅದರಲ್ಲಿನ ಉಲ್ಲಂಘನೆಗಳಿಗೆ ದಂಡ ವಿಧಿಸುವ ನಿಬಂಧನೆಗಳನ್ನು ಜಾರಿಗೊಳಿಸಬೇಕು. ಅಲ್ಲದೆ ರಸ್ತೆ ಕತ್ತರಿಸುವ ಎಲ್ಲಾ ಅನುಮತಿಗಳನ್ನು ಆ ವ್ಯವಸ್ಥೆಯ ಮೂಲಕವಷ್ಟೇ ಜಾರಿಗೊಳಿಸಬೇಕು ಎಂದು ತಿಳಿಸಿದೆ.
- ಬಹಳ ಪ್ರಮುಖವಾಗಿ ನಗರದ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳು, ಆಸ್ತಿಗಳಿಗೆ ಹಾನಿ ಮತ್ತು ಯೋಜಿತವಲ್ಲದ ರಸ್ತೆ ಅಗೆಯುವಿಕೆಯಿಂದ ಉಂಟಾಗುವ ನಷ್ಟವನ್ನು ತಪ್ಪಿಸಲು, ತಮ್ಮ ಮೂಲಸೌಕರ್ಯ ಹಾಗೂ ಸೇವೆಗಳ ವಿಸ್ತರಣೆಗಾಗಿ ರಸ್ತೆ ಅಗೆಯುವಿಕೆ ಕೈಗೊಳ್ಳುವ ವಿವಿಧ ನಗರ ಸೇವಾ ಪೂರೈಕೆದಾರರ ನಡುವೆ ಬಿಬಿಎಂಪಿ ಸಾಕಷ್ಟು ಸಮನ್ವಯ ಕಾರ್ಯವಿಧಾನವನ್ನು ಸ್ಥಾಪಿಸಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಒತ್ತಿ ಹೇಳಿದೆ.