ಲಂಡನ್/ಬೆಂಗಳೂರು, ಅ.25 www.bengaluruwir.com : ಬ್ರಿಟನ್ ಪ್ರಧಾನಿ ಹುದ್ದೆಯ ಜವಾಬ್ದಾರಿ ಭಾರತೀಯ ಮೂಲದ ರಿಷಿ ಸುನಕ್ (42) ಹೆಗಲೇರಿದೆ. ಆ ಮೂಲಕ 200 ವರ್ಷಗಳ ಕಾಲ ಭಾರತವನ್ನು ಆಳಿದ್ದ ಬ್ರಿಟನ್‌ನ ಅಧಿಪತ್ಯ ಇದೀಗ ಭಾರತೀಯರೊಬ್ಬರ ತೆಕ್ಕೆಗೆ ಬಂದಿದೆ. ಆ ಮೂಲಕ ಕರ್ನಾಟಕದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅಳಿಯರಾದ ರಿಷಿ ಸುನಕ್ ಬ್ರಿಟನ್ ಚಕ್ರಾಧಿಪತ್ಯವನ್ನು ವಹಿಸಿಕೊಂಡಿದ್ದಾರೆ. ಈ ಮೂಲಕ ಕಳೆದ 200 ವರ್ಷಗಳಲ್ಲೇ ಪ್ರಧಾನಿ ಹುದ್ದೆಗೇರಿದ ಅತಿ ಕಿರಿಯ ಪ್ರಧಾನಿಯಾಗಿದ್ದಾರೆ.
ನೂತನ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಇದೀಗ ಬ್ರಿಟನ್ ನ ಮೊದಲ ಮಹಿಳೆ ಅದು ಬೆಂಗಳೂರಿನವರು ಎಂಬ ಖುಷಿ ಬೆಂಗಳೂರಿನ ಐಟಿ ಕ್ಷೇತ್ರದ ಎಂಜಿನಿಯರ್ ಗಳಿಗೆ ಸಾಕಷ್ಟು ಖುಷಿಗೆ ಕಾರಣವಾಗಿದೆ. ಇನ್ಫೋಸಿಸ್ ನಾರಾಯಣ ಮೂರ್ತಿ ತಮ್ಮ ಅಳಿಯ ರಿಷಿ ಸುನಕ್ ಬ್ರಿಟನ್ ಅತಿದೊಡ್ಡ ಹುದ್ದೆಯನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾರತ ಮೂಲದ ನೂತನ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಶುಭಾಶಯ ಕೋರಿದ್ದಾರೆ.
ಬೆಂಗಳೂರಿನ ವಿದ್ಯಾರ್ಥಿಭವನ್ ಟು ಬ್ರಿಟನ್ ನಂಟು :
ಈ ಹಿಂದೆ ರಿಷಿ ಸುನಕ್ ಬೆಂಗಳೂರಿಗೆ ಬಂದಿದ್ದಾಗ ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ಸಿಲಿಕಾನ್ ಸಿಟಿಯ ಬಸವನಗುಡಿ ಗಾಂಧಿಬಜಾರ್ ನಲ್ಲಿರುವ ವಿದ್ಯಾರ್ಥಿಭವನ್ ಹೋಟೆಲ್ ಗೆ ಬಂದು ಇಲ್ಲಿನ ಮಾಸಾಲೆ ದೋಸೆ ಸವಿದು, ಇದಕ್ಕೆ ಫಿದಾ ಆಗಿದ್ದರು. ಈ ವಿಷಯವನ್ನು ವಿದ್ಯಾರ್ಥಿಭವನ್ ಹೋಟೆಲ್ ನವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಭಾರತ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಹುದ್ದೆಗೆ ಏರುತ್ತಿರುವ ಅತಿ ಕಿರಿಯ ವಯಸ್ಸಿನ ವ್ಯಕ್ತಿ. ಅವರಿಗೆ ಶುಭವಾಗಲಿ ಎಂದು ಹಾರೈಸಿದೆ. ಅಲ್ಲದೆ ವಿದ್ಯಾರ್ಥಿ ಭವನ್ ಹೋಟೆಲ್ ಗೆ ರಿಷಿ ಬಂದು ಹೋಗಿದ್ದರ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
ಈ ಕುರಿತಂತೆ ವಿದ್ಯಾರ್ಥಿಭವನ್ ಹೋಟೆಲ್ ಮಾಲೀಕರಾದ ಅರುಣ್ ಅಡಿಗ ಬೆಂಗಳೂರು ವೈರ್ ಜೊತೆ ಮಾತನಾಡಿ ಹೇಳಿದ್ದು ಹೀಗೆ :
“ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ 2019ರಲ್ಲಿ ಪತ್ನಿ ಅಕ್ಷತಾಮೂರ್ತಿ, ಅವರ ಮಕ್ಕಳು ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿಗಳೊಂದಿಗೆ ವಿದ್ಯಾರ್ಥಿ ಭವನ್ ಹೋಟೆಲ್ ಗೆ ಬಂದು ಮಸಾಲೆ ದೋಸೆ ಸವಿದಿದ್ದರು. ಹಾಗೂ ಈ ವರ್ಷದ ಜುಲೈ ನಲ್ಲಿ ನಾರಾಯಣಮೂರ್ತಿ ದಂಪತಿಗಳು, ತಮ್ಮ ಬೀಗರಾದ ರಿಷಿ ಸುನಕ್ ತಂದೆ- ತಾಯಿಯರನ್ನು ನಮ್ಮ ಹೋಟೆಲ್ ಗೆ ಕರೆದುಕೊಂಡು ಬಂದಿದ್ದರು. ಸುಧಾಮೂರ್ತಿ ಮತ್ತು ನಾರಾಯಣಮೂರ್ತಿಯವರು ನಮ್ಮ ಹೋಟೆಲ್ ಗೆ ಯಾವಾಗಲೂ ಬಂದು ಹೋಗುತ್ತಾರೆ. ಅವರು ನಮ್ಮ ಖಾಯಂ ಗ್ರಾಹಕರು ಎಂಬುದೇ ನಮಗೊಂದು ಖುಷಿ.”
ರಿಷಿ ಸುನಕ್ ಪೂರ್ವಿಕರು ಮೂಲತಃ ಪಂಜಾಬ್ ಪ್ರಾಂತ್ಯದವರು :
ಸುನಕ್ ಪೋಷಕರು ಮೂಲತಃ ಪಂಜಾಬ್ ಮೂಲದವರು. ಅಂದರೆ ಸುನಕ್ ಅಜ್ಜ- ಅಜ್ಜಿ ಹಿಂದಿನ ಬ್ರಿಟಿಷ್ ಭಾರತವದರು. ಅಂದರೆ ಸುನಕ್ ಪೂರ್ವಿಕರ ಹೂಟ್ಟೂರು ಗುಜರನ್ ವಾಲ ಎಂಬದಾಗಿತ್ತು. ಆ ಸ್ಥಳವೀಗ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ. ಸುನಕ್ ಪೋಷಕರು ವೃತ್ತಿಯಲ್ಲಿ ಔಷಧ ವ್ಯಾಪಾರಿಗಳು. 1960ರಲ್ಲಿ ಪೂರ್ವ ಆಫ್ರಿಕಾಗೆ ವಲಸೆ ಹೋದ ಈ ಕುಟುಂಬ, ತದನಂತರ ಬ್ರಿಟನ್‌ಗೆ ವಲಸೆ ಹೋಗಿದ್ದರು. 1980ರಲ್ಲಿ ಇಂಗ್ಲೆಂಡ್‌ನ ಸೌತ್ ಹ್ಯಾಂಪ್ಟನ್‌ನಲ್ಲಿ ಜನಿಸಿದ ರುಷಿ, 2009ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಮಮೂರ್ತಿ ಮಗಳು ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಅನುಷ್ಕಾ ಮತ್ತು ಕೃಷ್ಣಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ.
ರಿಷಿ ಪ್ರಧಾನಿ ಹುದ್ದೆ ಗೆಲವಿನ ಹಿಂದಿನ ಹಾದಿ ಹೀಗಿದೆ :
ಬ್ರಿಟನ್ ನ ಉನ್ನಸ್ಥಾನಕ್ಕೇರಿ ಹೊಸ ಇತಿಹಾಸ ಸೃಷ್ಟಿಸಿದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ರಿಷಿ ಸುನಕ್ ಪಾತ್ರರಾಗಿದ್ದಾರೆ. ಅಲ್ಲದೆ ಬ್ರಿಟನ್ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವ ಹೊತ್ತಿನಲ್ಲೇ ಈ ನಾಯಕತ್ವ ರಿಷಿ ಸುನಕ್ ಪಾಲಾಗುತ್ತದೆ ಎಂದು ಬಹುತೇಕ ನಿರ್ಧಾರವಾಗಿತ್ತು. ಆ ಸಂದರ್ಭದಲ್ಲಿ ಪೆನಿ ಮರ್ಡಂಟ್ ಮಾತ್ರ ಕಣದಲ್ಲಿ ಸ್ಪರ್ಧೆಯಲ್ಲಿದ್ದರು. ಆದರೆ ಅವರು ನಾಮಪತ್ರಕ್ಕೆ ಅಗತ್ಯವಾಗಿದ್ದ ನೂರು ಸಂಸದರ ಬೆಂಬಲ ಪಡೆಯುವಲ್ಲಿ ವಿಫಲರಾದರು. ಆ ಬಳಿಕವಷ್ಟೆ ರಿಷಿ ಅವರ ಗೆಲವನ್ನು ಘೋಷಿಸಲಾಯಿತು.
ಬೋರಿಸ್ ಜಾನ್ಸನ್ ಜುಲೈ ತಿಂಗಳಿನಲ್ಲಿ ಪ್ರಧಾನಿ ಹುದ್ದೆಗೆ ರಾಜಿನಾಮೆ ಕೊಟ್ಟ ನಂತರ, ಪ್ರಧಾನಿ ಪಟ್ಟಕ್ಕೆ ನಡೆದ ಸ್ಪರ್ಧೆಯಲ್ಲಿ ಲಿಜ್ ಟ್ರಸ್ ಗೆಲುವು ಸಾಧಿಸಿ ಪ್ರಧಾನಿ ಹುದ್ದೆಗೇರಿದ್ದರು. ಈ ಸಂದರ್ಭದಲ್ಲಿ ರಿಷಿ ಸುನಕ್ ಕೂಡ ಈ ಹುದ್ದೆಗೆ ಸ್ಪರ್ಧಿಸಿದ್ದರು ರಿಜ್ ಟ್ರಸ್ ಎದುರು ಸೋತಿದ್ದರು. ಈ ಮಧ್ಯೆ ಕೇವಲ 44 ದಿನಗಳಲ್ಲಿಯೇ ಲಿಜ್ ಟ್ರಸ್ ರಾಜಿನಾಮೆ ಘೋಷಣೆ ಮಾಡಿದ್ದರಿಂದ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಪ್ರಧಾನಮಂತ್ರಿ ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡಬೇಕಿತ್ತು.
ಇದೇ ರಿಷಿ ಸುನಕ್ ಅವರು ಪ್ರಧಾನಿ ಪಟ್ಟ ಪಡೆಯಲು ಸುಸಂದರ್ಭ ಒದಗಿ ಬರುವ ಪ್ರಮುಖ ತಿರುವಾಗಿತ್ತು. ಬೋರಿಸ್ ಜಾನ್ಸನ್ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ, ಬೋರಿಸ್ ವಿರುದ್ಧ ಈ ಹಿಂದೆ ಬಂಡಾಯ ಸಾರಿದ್ದರಿಂದ ಅವರು ಪ್ರಧಾನಿ ಹುದ್ದೆ ಕಳೆದುಕೊಳ್ಳುವಂತೆ ಮಾಡಿತ್ತು. ಇದೀಗ ರಿಷಿ ಸುನಕ್ ಸುಮಾರು 200 ಸಂಸದರ ಬೆಂಬಲ ಪಡೆದು ಪ್ರಧಾನಿಯಾಗಿದ್ದಾರೆ.
ಸಂಕಷ್ಟದಲ್ಲಿರುವ ಬ್ರಿಟನ್ ಆರ್ಥಿಕತೆ ಮೇಲುತ್ತುವ ಅನಿವಾರ್ಯತೆ- ದೊಡ್ಡ ಸವಾಲು :
ಬ್ರಿಟನ್ ಪ್ರಸ್ತುತ ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ಇಲ್ಲಿನ ಹಣದುಬ್ಬರ ಏರುತ್ತಿದೆ. ಕೊರತೆ ಬಜೆಟ್ ಪರಿಸ್ಥಿತಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಿಟನ್ ಹಣಕಾಸು ವಿಶ್ವಾಸಾರ್ಹತೆಯೂ ಕಡಿಮೆಯಾಗಿದೆ. ಈ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸುವುದು ನೂತನ ಭಾರತೀಯ ಮೂಲದ ಪ್ರಧಾನಿಗೆ ದೊಡ್ಡ ಜವಾಬ್ದಾರಿ ಹಾಗೂ ಆದ್ಯತೆಯ ಮೇಲೆ ಇದನ್ನು ನಿಭಾಯಿಸಬೇಕಾದ ಅನಿವಾರ್ಯತೆಯಿದೆ. ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಅವರ ಕಳಪೆ ಆರ್ಥಿಕ ನೀತಿಯು ಬ್ರಿಟನ್ನಿನ ಬಾಂಡ್ ಮಾರ್ಕೇಟ್ ಕುಸಿಯುವಂತೆ ಮಾಡಿತ್ತು. ಇದಲ್ಲದೆ ತೆರಿಗೆ ಕಡಿತ ಮಾಡುವ ಅವರ ತೀರ್ಮಾನವು ಬ್ರಿಟನ್ ಅನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತ್ತು. ಸದ್ಯ ಹೊಸ ಪ್ರಧಾನಿ ರಿಷಿ ಸುನಿಕ್ ಅವರಿಗೂ ಈ ಸಂದರ್ಭದಲ್ಲಿ ತೆರಿಗೆ ಕಡಿತ ಮಾಡದೆ ಅನ್ಯ ಮಾರ್ಗವಿಲ್ಲ. ಇದರ ಜೊತೆ ಜೊತೆಗೆ ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡಬೇಕಿದೆ. ಇದೆಲ್ಲವೂ ಕಠಿಣ ನಿರ್ಧಾರವಾದ್ದರಿಂದ ಯಾವುದೇ ರಾಜಕೀಯ ತಿರುವು, ಬೆಳವಣಿಗೆಗಳು ಏರ್ಪಡುವ ಸಾಧ್ಯತೆಯಿದೆ ಎಂದು ಬ್ರಿಟನ್ ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಪ್ರಧಾನಿ ಹುದ್ದೆಗೇರಿರುವ ರಿಷಿ ಸುನಕ್ ಅವರು ಈ ಸವಾಲುಗಳನ್ನೆಲ್ಲಾ ಹೇಗೆ ಎದುರಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ.