ಬೆಂಗಳೂರು, ಅ.21 www.bengaluruwire.com : ಕರ್ನಾಟಕದಲ್ಲಿ ಅ.25ರಂದು ಪಾರ್ಶ್ವ ಸೂರ್ಯಗ್ರಹಣ ಕಂಡು ಬರಲಿದೆ. ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣ ಇದಾಗಿದ್ದು, ದೀಪಾವಳಿಯಂದೇ ಕೇತುಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ.
ಭಾರತದಲ್ಲಿ ಗ್ರಹಣವು ಮಧ್ಯಾಹ್ನದ ನಂತರ ಸೂರ್ಯಾಸ್ತದ ಮೊದಲು ಕಾಣಿಸಿಕೊಳ್ಳಲಿದ್ದು, ಇದು ಹೆಚ್ಚಿನ ಸ್ಥಳಗಳಲ್ಲಿ ಕಂಡುಬರುತ್ತದೆ. ಆದಾಗ್ಯೂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ (ಐಜ್ವಾಲ್, ದಿಬ್ರುಗಢ್, ಇಂಫಾಲ್, ಇಟಾನಗರ, ಕೊಹಿಮಾ, ಸಿಬ್ಸಾಗರ್, ಸಿಲ್ಚಾರ್, ತಮೆಲಾಂಗ್ ಇತ್ಯಾದಿ) ಇದನ್ನು ನೋಡಲು ಸಾಧ್ಯವಿಲ್ಲ. ಸೂರ್ಯಾಸ್ತದ ನಂತರ ಗ್ರಹಣದ ಅಂತ್ಯವು ಭಾರತದಲ್ಲಿ ಗೋಚರಿಸುವುದಿಲ್ಲ.
ದೇಶದ ವಾಯವ್ಯ ಭಾಗಗಳಲ್ಲಿ ಗರಿಷ್ಠ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿದ ಪ್ರಮಾಣವು ಸರಿಸುಮಾರು ಶೇಕಡ 40 ಮತ್ತು 50ರ ನಡುವೆ ಇರುತ್ತದೆ. ದೇಶದ ಇತರ ಭಾಗಗಳಲ್ಲಿ, ಶೇಕಡಾವಾರು ವ್ಯಾಪ್ತಿಯು ಮೇಲಿನ ಮೌಲ್ಯಗಳಿಗಿಂತ ಕಡಿಮೆ ಇರುತ್ತದೆ.
ದೆಹಲಿ ಮತ್ತು ಮುಂಬೈನಲ್ಲಿ, ಗ್ರಹಣದ ಪರ್ವ(ಉತ್ತುಂಗ) ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿಕೊಳ್ಳುವ ಶೇಕಡಾವಾರು ಪ್ರಮಾಣ ಕ್ರಮವಾಗಿ 44% ಮತ್ತು 24% ಇರುತ್ತದೆ. ಗ್ರಹಣ ಆರಂಭದಿಂದ ಸೂರ್ಯಾಸ್ತಮಾನದವರೆಗೆ ದೆಹಲಿ ಮತ್ತು ಮುಂಬೈನಲ್ಲಿ ಕ್ರಮವಾಗಿ 1 ಗಂಟೆ 13 ನಿಮಿಷ ಮತ್ತು 1 ಗಂಟೆ 19 ನಿಮಿಷ ಕಾಣಿಸಿಕೊಳ್ಳಲಿದೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಸೂರ್ಯಾಸ್ತದಿಂದ ಸೂರ್ಯಾಸ್ತಮಾನದವರೆಗೆ ಗ್ರಹಣದ ಅವಧಿ ಕ್ರಮವಾಗಿ 31 ನಿಮಿಷ ಮತ್ತು 12 ನಿಮಿಷ ಇರುತ್ತದೆ.
ಎಲ್ಲಿ ಸ್ಪಷ್ಟವಾಗಿ ಸೂರ್ಯ ಗ್ರಹಣ ಗೋಚರವಾಗುತ್ತೆ?
ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾದ ಈಶಾನ್ಯ ಭಾಗಗಳು, ಪಶ್ಚಿಮ ಏಷ್ಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತದೆ.
ಸೂರ್ಯಗ್ರಹಣ ವಿದ್ಯಮಾನ ಹೇಗೆ ಸಂಭವಿಸುತ್ತದೆ?
ಮುಂದಿನ ಸೂರ್ಯಗ್ರಹಣವು 2027 ಆಗಸ್ಟ್ 2ರಂದು ಭಾರತದಲ್ಲಿ ಗೋಚರಿಸಲಿದೆ. ಇದು ಪರಿಪೂರ್ಣ ಸೂರ್ಯಗ್ರಹಣವಾಗಿರಲಿದೆ. ಆದರೆ, ಇದು ಭಾರತದ ಎಲ್ಲಾ ಭಾಗಗಳಲ್ಲೂ ಭಾಗಶಃ ಸೂರ್ಯಗ್ರಹಣದಂತೆ ಗೋಚರಿಸುತ್ತದೆ. ಅಮಾವಾಸ್ಯೆಯ ದಿನದಂದು ಚಂದ್ರನು ಪೃಥ್ವಿ ಮತ್ತು ಸೂರ್ಯನ ನಡುವೆ ಬಂದಾಗ ಮತ್ತು ಈ ಎಲ್ಲಾ 3 ಗ್ರಹಗಳು ಜೋಡಣೆಯಾದಾಗ(ಸಾಲುಗೂಡಿದಾಗ) ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರ ಮುದ್ರಿಕೆಯು(ಡಿಸ್ಕ್) ಸೌರ ಮುದ್ರಿಕೆಯನ್ನು ಭಾಗಶಃ ಆವರಿಸಿದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.
ಬರಿಗಣ್ಣಿನಲ್ಲಿ ಸೂರ್ಯಗ್ರಹಣ ನೋಡದಿರಿ ಎಚ್ಚರ…!!
ಸೂರ್ಯಗ್ರಹಣವನ್ನು ಕ್ಷಣ ಮಾತ್ರಕ್ಕೂ ಬರಿಗಣ್ಣಿನಿಂದ ನೋಡಬಾರದು. ಚಂದ್ರನು ಸೂರ್ಯನ ಹೆಚ್ಚಿನ ಭಾಗವನ್ನು ಆವರಿಸಿದಾಗಲೂ ಇದು ಕಣ್ಣುಗಳಿಗೆ ಶಾಶ್ವತ ಹಾನಿ ಉಟುಮಾಡುತ್ತದೆ, ಕುರುಡುತನಕ್ಕೆ ಕಾರಣವಾಗುತ್ತದೆ. ಅಲ್ಯೂಮಿನೈಸ್ಡ್ ಮೈಲಾರ್, ಕಪ್ಪು ಪಾಲಿಮರ್, ಶೇಡ್ ಸಂಖ್ಯೆ 14ರ ವೆಲ್ಡಿಂಗ್ ಗ್ಲಾಸ್‌ನಂತಹ ಸಮರ್ಪಕ ಫಿಲ್ಟರ್ ಬಳಸಬೇಕು ಅಥವಾ ದೂರದರ್ಶಕದ ಮೂಲಕ ಬಿಳಿ ಹಲಗೆಯಲ್ಲಿ ಸೂರ್ಯನ ಚಿತ್ರ ಪ್ರಕ್ಷೇಪಿಸುವ ಮೂಲಕ ಸೂರ್ಯಗ್ರಹಣ ವೀಕ್ಷಿಸುವುದು ಸುರಕ್ಷಿತ ವಿಧಾನವಾಗಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರು, ಮೈಸೂರು, ಧಾರವಾಡ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಮಂಗಳೂರು ಹಾಗೂ ಕಾರವಾರ ಸ್ಥಳಗಳಲ್ಲಿ ಸೂರ್ಯಗ್ರಹಣ ಪ್ರಾರಂಭ, ಅದರ ಉತ್ತುಂಗದ ಕ್ಷಣ ಹಾಗೂ ಸೂರ್ಯಸ್ತದ ಸಮಯ ಈ ಕೆಳಕಂಡಂತಿದೆ.
ಸೂರ್ಯ ಗ್ರಹಣ ಕಾಲದಲ್ಲಿ ಆಚರಣೆ ಹೇಗೆ?
ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸೂರ್ಯಗ್ರಹಣದ ಕುರಿತಂತೆ ಪ್ರಕಟಣೆ ನೀಡಿದ್ದು, ಆ ಪ್ರಕಾರ ಶ್ರೀ ಶುಭಕೃತ್ ನಾಮ ಸಂವತ್ಸರ ಅಶ್ವೀಜ ಕೃಷ್ಣ ಅಮವಾಸ್ಯೆ ಅ.25ರ ಮಂಗಳವಾರ ಚಿತ್ತಾ ನಕ್ಷತ್ರ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತುಗ್ರಸ್ತ ಖಂಡಗ್ರಾಸ ಗ್ರಹಣವು ಸಂಭವಿಸಲಿದೆ. ಅ.25ರ ಸೂರ್ಯೋದಯದಿಂದಲೇ ವೇದಾರಂಭವಾಗುವುದು. ಆದುದರಿಂದ ಈ ದಿನ ಪೂರ್ತಿ ಭೋಜನಕ್ಕೆ ಅವಕಾಶವಿರುವುದಿಲ್ಲ. ಶ್ರೀ ಮಠದಲ್ಲಿ ಶ್ರೀಗಳ ಒಪ್ಪಿಗೆ ಮೇರೆಗೆ ಸೂರ್ಯಗ್ರಹಣ ಶಾಂತಿ ಹೋಮ ಏರ್ಪಡಿಸಿದೆ.
ಯಾವೆಲ್ಲಾ ರಾಶಿಗಳಿಗೆ ಶುಭ, ಮಿಶ್ರ ಹಾಗೂ ಅಶುಭ ಫಲಗಳಿವೆ?
ಗ್ರಹಣ ಸ್ಪರ್ಶ ಕಾಲ ಸಂಜೆ 5.02ಕ್ಕೆ, ಗ್ರಹಣ ಮಧ್ಯಕಾಲ ಸಂಜೆ 5.47ಕ್ಕೆ, ಗ್ರಹಣ ಮೋಕ್ಷ ಕಾಲ ಸಂಜೆ 6.20ಕ್ಕೆ ಆಗಲಿದೆ. ಧನು, ಮಕರ, ವೃಷಭ ಹಾಗೂ ಸಿಂಹ ರಾಶಿಗೆ ಶುಭಫಲವಿದೆ. ಕನ್ಯಾ, ಕುಂಭ, ಮೇಷ ಹಾಗೂ ಮಿಥುನ ರಾಶಿಗೆ ಮಿಶ್ರ ಫಲವಿದೆ. ಅದೇ ರೀತಿ ತುಲಾ, ವೃಶ್ಚಿಕ, ಮೀನಾ ಮತ್ತು ಕರ್ಕಾಟಕ ರಾಶಿಯವರಿಗೆ ಅಶುಭ ಫಲವಿದೆ ಎಂದು ತಿಳಿಸಲಾಗಿದೆ.
ಊಟ- ತಿಂಡಿ ಸೇವನೆ ಯಾರಿಗೆ ವಿನಾಯಿತಿ?
ಬಾಲಕರು, ವೃದ್ಧರು, ಗರ್ಭಿಣಿ ಸ್ತ್ರೀಯರು, ಅಶಕ್ತರು, ಅನಾರೋಗ್ಯ ಪೀಡಿತರು ಸೇರಿದಂತೆ ಮೊದಲಾದವರು ಅ.25ರ ಮಧ್ಯಾಹ್ನ 2 ಗಂಟೆಯವರೆಗೆ ಅಲ್ಪಾಹಾರವನ್ನು ಮಾಡಬಹುದು. ಮತ್ತು ಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ ಅಲ್ಪಾಹಾರವನ್ನು ತೆಗೆದುಕೊಳ್ಳಬಹುದು.
ಗ್ರಹಣ ಸಂದರ್ಭದಲ್ಲಿ ಸ್ನಾನ- ಹೋಮ :
ಗ್ರಹಣ ದೋಷ ಇರುವವರು ಸೂರ್ಯ ಬಿಂಬ ಮತ್ತು ಗೋಧಿಯನ್ನು ದಾನ ಮಾಡಬೇಕು. ಗ್ರಹಣ ಆರಂಭವಾಗುತ್ತಿದ್ದಂತೆ ಹಾಗೂ ಗ್ರಹಣ ಬಿಟ್ಟ ಮೇಲೆ ಉಟ್ಟ ಬಟ್ಟೆಯಲ್ಲೇ ಸ್ನಾನ ಮಾಡಬೇಕು. ಗ್ರಹಣ ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನವು ಲಕ್ಷ ಸ್ನಾನಗಳ ಫವನ್ನು, ಮೇಕ್ಷಾ ನಂತರ ಮಾಡುವ ಸ್ನಾನವು ಅನಂತ ಸ್ನಾನಗಳ ಫಲವನ್ನು ಕೊಡುತ್ತದೆ. ಗ್ರಹಣ ಮಧ್ಯದಲ್ಲಿ ಮಾಡುವ ಹೋಮವು ಕೋಟಿ ಹೋಮಗಳ ಫಲವನ್ನು ಕೊಡುತ್ತದೆ ಎಂದು ಶ್ರೀಮಠ ತಿಳಿಸಿದೆ.