ಬೆಂಗಳೂರು, ಆ.20 www.bengaluruwire.com : ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸೇರಿದ ಐತಿಹಾಸಿಕ ಮಹತ್ವವುಳ್ಳ ಸಿಲ್ವರ್ ಜುಬಿಲಿ ಪಾರ್ಕ್ ಈಗ ಸೊಂಬೇರಿಗಳ ಹಾಗೂ ಪಾಲಿಕೆ ಕಸ, ತ್ಯಾಜ್ಯ ವಸ್ತುಗಳ ಡಂಪಿಂಗ್ ತಾಣವಾಗಿ ಬದಲಾಗಿದೆ. ಇದು ಬೆಂಗಳೂರಿಗರ ದೌರ್ಭಾಗ್ಯವೇ ಸರಿ.
ಹತ್ತಿರದಲ್ಲೇ ಪುರಾತನ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಸುತ್ತಮುತ್ತ ಜನನಿಬಿಡ ಸ್ಥಳದ ಮಧ್ಯೆ ಹಸಿರಿನಿಂದ ನಳ ನಳಿಸುತ್ತಿದ್ದ ಸಿಲ್ವರ್ ಜುಬಿಲಿ ಪಾರ್ಕ್ ಗೆ ಸುತ್ತಮುತ್ತಲ ನಾಗರೀಕರು ವಾಯುವಿಹಾರಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ವಾಯುವಿಹಾರಕ್ಕೆ ಇರಲಿ, ಬಾಯಿ, ಮೂಗು ಮುಚ್ಚಿಕೊಂಡು ಹೋದರು ಗೊಬ್ಬುನಾತ ಬೀರುತ್ತದೆ. ಒಂದು ರೀತಿ ತ್ಯಾಜ್ಯ ವಿಲೇವಾರಿ ಕೇಂದ್ರದಂತೆ ಭಾಸವಾಗುತ್ತಿದೆ.
ಬೆಂಗಳೂರಿನ ಪಾಲಿಕೆ ಬೃಹತ್ ನೀರುಗಾಲುವೆ ವಿಭಾಗದವರು ಟೌನ್ ಹಾಲ್ ಮತ್ತು ಕೆ.ಆರ್.ಮಾರ್ಕೆಟ್ ಮಧ್ಯೆ ದೊಡ್ಡ ಮಳೆನೀರಿನ ದೊಡ್ಡ ದೊಡ್ಡ ಪೈಪ್ ಗಳನ್ನು ಹಾಕಲು ಯದ್ವಾತದ್ವಾ ಪಾರ್ಕಿನ ಜಾಗವನ್ನು ಅಗೆದು ಹಾಕಿದ್ದಾರೆ. ನಿಧಾನಗತಿಯ ಕಾಮಗಾರಿಯಿಂದಾಗಿ ಪಾರ್ಕ್ ತುಂಬಾ ತ್ಯಾಜ್ಯವಸ್ತುಗಳು, ಕೊಳವೆ ಪೈಪ್ ಗಳು, ಹಾಗೆಯೇ ಬಿಬಿಎಂಪಿಯ ಕೇಂದ್ರ ಯೋಜನಾ ವಿಭಾಗದವರು ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡುವಾಗ ಕಿತ್ತು ಹಾಕಿದ ಕಾಂಕ್ರಿಟ್ ತ್ಯಾಜ್ಯವನ್ನು ಇಲ್ಲೇ ತಂದು ಸುರಿದಿದ್ದಾರೆ.
ಮೈಸೂರು ಸಂಸ್ಥಾನದಲ್ಲಿ ನಾಲ್ಕನೇ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಅವರ ಆಳ್ವಿಕೆಯ 25 ವರ್ಷ ಪೂರ್ಣಗೊಳಿಸಿದ ನೆನಪಿಗಾಗಿ 1927ರಲ್ಲಿ ಬೆಂಗಳೂರು ಕೇಂದ್ರ ಭಾಗದಲ್ಲಿ ಟೌನ್ ಹಾಲ್ ಮುಂಭಾಗದಲ್ಲಿ ಈ ಸಿಲ್ವರ್ ಜುಬಿಲಿ ಪಾರ್ಕ್ ಅನ್ನು ನಿರ್ಮಾಣ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಉದ್ಯಾನವನಗಳ ನಿರ್ಮಾಣ ಮಾಡುವ ಕಾಲಘಟ್ಟದಲ್ಲಿ ರಚಿಸಲಾದ ಈ ಸಿಲ್ವರ್ ಜ್ಯೂಬಲಿ ಪಾರ್ಕ್ ಈ ಹಿಂದೆ 3 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿತ್ತು.
ನಗರದಲ್ಲಿ ಟ್ರಾಫಿಕ್ ಹೆಚ್ಚಾದಂತೆ ಮೈಸೂರು ರಸ್ತೆ ಮೇಲ್ಸೇತುವೆಯಿಂದ ಟೌನ್ ಹಾಲ್ ಕಡೆಗೆ ಬರುವ ಹಂತದಲ್ಲಿ ಈ ಪಾರ್ಕ್ ಮಧ್ಯೆ ಎಸ್.ಜೆ.ಪಿ ರಸ್ತೆಗೆ ಸಂಪರ್ಕಿಸುವ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಯಿತು. ಆ ಬಳಿಕ ಇಷ್ಟು ದೊಡ್ಡ ಪಾರ್ಕ್ ಇಬ್ಬಾಗವಾಯಿತು. ಅದಾದ ನಂತರ ಈ ಪಾರ್ಕ್ ನಲ್ಲಿ ಸೊಂಬೇರಿಗಳ ಅಡ್ಡೆಯಾಗಿ ಬದಲಾಯಿತು. ಸಂಜೆಯಾದರೆ ಅಕ್ರಮ- ಅನಾಚಾರಣಗಳ ತಾಣವಾಯಿತು. ಇದೀಗ ಬೆಂಗಳೂರು ಜಲಮಂಡಳಿ ಕೊಳಚೆ ಪೈಪ್ ಅಳವಡಿಸಲು ಹಾಗೂ ಬಿಬಿಎಂಪಿಯ ವೈಟ್ ಟಾಪಿಂಗ್ ಕಾಂಕ್ರಿಟ್ ರಸ್ತೆ ಒಡೆದು ಹಾಕಿದ ಭಾಗಗಳು, ಫುಟ್ ಪಾತ್ ಸಿಮೆಂಟ್ ಸ್ಲಾಬ್ ಹಾಗೂ ತ್ಯಾಜ್ಯ ವಸ್ತುಗಳ ಡಂಪಿಂಗ್ ಏರಿಯಾ ಆಗಿ ಬದಲಾಗಿದೆ.
‘ಕಳೆದ 2-3 ವರ್ಷದಿಂದ ಸಿಲ್ವರ್ ಜುಬಿಲಿ ಪಾರ್ಕ್ ಬಳಸಲು ಆಗದ ಪರಿಸ್ಥಿತಿಯಿದೆ. ಬಿಬಿಎಂಪಿಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪಾರ್ಕ್ ಒಳಗೆ ಕಾಲಿಡಲು ಆಗಲ್ಲ. ತುಂಬಾ ಮೋರಿ ವಾಸನೆ ಬರುತ್ತೆ. ಮೊದಲು ಸಿಲ್ವರ್ ಜುಬಿಲಿ ಪಾರ್ಕ್ ತುಂಬಾ ಚೆನ್ನಾಗಿತ್ತು. ಇಲ್ಲಿ ಬಂದು ಕೂತರೆ ನಿದ್ದೆ ಬರುವಷ್ಟು ಹಿತವಾದ ವಾತಾವರಣವಿತ್ತು. ಈಗ ಗೊಬ್ಬು ವಾಸನೆ ಬರುತ್ತಿದೆ. ಸಿಕ್ಕಾಪಟ್ಟೆ ಸೊಳ್ಳೆಗಳ ಕಾಟ. ಡೆಂಗ್ಯೂ, ಚಿಕನ್ ಗುನ್ಯಾ ಕಾಯಿಲೆ ಬರುವ ತಾಣವಾಗಿದೆ. ಮೊದಲು ಇಲ್ಲಿನ ಅವ್ಯವಸ್ಥೆಯನ್ನು ಬಿಬಿಎಂಪಿ ಸರಿಪಡಿಸಬೇಕು.’
ಅಬ್ರಾರ್ ಖಾನ್, ಹಿರಿಯ ನಾಗರೀಕ
ರಾಜಧಾನಿ ಬೆಂಗಳೂರು ಸಿಲಿಕಾನ್ ಸಿಟಿ ಅಂತ ಗುರ್ತಿಸೋಕೆ ಮುನ್ನ ಉದ್ಯಾನವನಗಳ ನಗರಿ ಎಂದೇ ಖ್ಯಾತಿ ಪಡೆದಿತ್ತು. ನಗರದಲ್ಲಿದ್ದ ಹಲವು ಐತಿಹಾಸಿಕ ಪಾರ್ಕ್ ಗಳಿಂದಾಗಿಯೇ ಬೆಂಗಳೂರಿನ ಸೌಂದರ್ಯ ನಳನಳಿಸಿತ್ತು. ಈಗ ನೂರಾರು ಉದ್ಯಾನವನಗಳನ್ನು ಬೆಂಗಳೂರು ಹೊಂದಿದ್ದರೂ, ಹಲವು ಪಾರ್ಕ್ ಗಳು ನಿರ್ವಹಣೆಯಿಲ್ಲದೆಯೇ ಸೊರಗಿದೆ. ಪಾಲಿಕೆಯು ರಸ್ತೆ, ರಾಜಕಾಲುವೆ, ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೊಡುವ ಪ್ರಾಮುಖ್ಯತೆಯನ್ನು ಅಧಿಕಾರಿಗಳಿಗೆ ಪರ್ಸಂಟೇಜ್ ಕಮಾಯಿ ಅಷ್ಟಾಗಿ ವರ್ಕ್ ಔಟ್ ಆಗದ ಪಾರ್ಕ್, ಕೆರೆ ಅಭಿವೃದ್ಧಿಗೆ ಆಸಕ್ತಿ ಕೊಟ್ಟಿಲ್ಲ. ಅಗತ್ಯವಾದಷ್ಟು ಹಣವನ್ನು ಇಟ್ಟಿಲ್ಲ ಎನ್ನುವ ಆರೋಪಗಳಿವೆ.
ಆರು ತಿಂಗಳಲ್ಲಿ ಸಂಪೂರ್ಣವಾಗಿ ಪಾರ್ಕ್ ಅಭಿವೃದ್ಧಿಯಾಗುತ್ತಂತೆ :
‘ಸಿಲ್ವರ್ ಜುಬಿಲಿ ಪಾರ್ಕ್ ನಲ್ಲಿ ಹಿಂದೆ ಇದ್ದವರು ಬೇಕಾಬಿಟ್ಟಿಯಾಗಿ ಮಳೆನೀರು ಮೋರಿ ಪೈಪ್ ಹಾಕಿ ಕೊಳಚೆ ನೀರು ಪಾರ್ಕ್ ಒಳಗೆ ನುಗ್ಗುತ್ತಿತ್ತು. ಹಿಂದೆ ಇದ್ದ ಜನಪ್ರತಿನಿಧಿಗಳು ಈ ಉದ್ಯಾನವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಹಣ ತಂದು ಅಭಿವೃದ್ಧಿ ಮಾಡಿದ್ದರೆ ಪಾರ್ಕ್ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಪಾರ್ಕ್ ನ ಒಳಗೆ ತ್ಯಾಜ್ಯವಸ್ತುಗಳನ್ನು ತಂದು ಸುರಿಯದಂತೆ ತಿಳಿಸಿದ್ದರೂ ಕೆಳ ಹಂತದ ಅಧಿಕಾರಿಗಳು ಈ ಬಗ್ಗೆ ಮಾತು ಕೇಳುತ್ತಿಲ್ಲ. ಒಂದೂವರೆ ವರ್ಷದ ಹಿಂದೆ ಈ ಪಾರ್ಕ್ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಇನ್ನೊಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು, ಆರು ತಿಂಗಳ ಒಳಗಾಗಿ ಸಂಪೂರ್ಣವಾಗಿ ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ.’
ಉದಯ್ ಗರುಡಾಚಾರ್, ಶಾಸಕರು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ
ಬೆಂಗಳೂರಿನಲ್ಲಿದೆ 1,348 ಪಾರ್ಕ್ ಗಳು – 230 ಪಾರ್ಕ್ ಬಳಕೆಯಲ್ಲಿಲ್ಲ :
ನಗರದಲ್ಲಿ ಒಟ್ಟಾರೆ 1,348 ಉದ್ಯಾನವನಗಳಿವೆ. ಆ ಪೈಕಿ 1,118 ಪಾರ್ಕ್ ಗಳನ್ನು ಸಾರ್ವಜನಿಕರು ಬಳಕೆ ಮಾಡುತ್ತಿದ್ದಾರೆ. ಆದರೆ 230 ಪಾರ್ಕ್ ಗಳು ಅಭಿವೃದ್ಧಿಯಾಗದೆ, ಬಳಸಲು ಯೋಗ್ಯವಿಲ್ಲದ ಸ್ಥಿತಿಯಲ್ಲಿದೆ. ನಗರದಲ್ಲಿ ಬಿಬಿಎಂಪಿ ಸುಪರ್ದಿಯಲ್ಲಿ ಐದು ಎಕರೆ ಮೇಲಿನ ಪಾರ್ಕ್ ಗಳೆಂದರೆ ಜೆಪಿ ಪಾರ್ಕ್, ಕೋಲ್ಸ್ ಪಾರ್ಕ್, ಕೃಷ್ಣರಾವ್ ಪಾರ್ಕ್ ಹಾಗೂ ಲಕ್ಷಣರಾವ್ ಪಾರ್ಕ್ ಗಳಾಗಿದೆ. ಸಿಲಿಕಾನ್ ಸಿಟಿಯಲ್ಲಿ 1 ರಿಂದ 2 ಎಕರೆವಗಿನ 400 ರಿಂದ 500 ಪಾರ್ಕ್ ಗಳಿವೆ. ಅಲ್ಲದೆ ಅರ್ಧ ಎಕರೆಯಿಂದ ಒಂದು ಎಕರೆವರೆಗಿನ 400 ರಿಂದ 500 ಪಾರ್ಕ್ ಗಳಿವೆ. ನಗರದಲ್ಲಿ ಇಷ್ಟೆಲ್ಲಾ ಪಾರ್ಕ್ ಗಳಿರುವುದರಿಂದಲೇ ದಿನೇ ದಿನೇ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಆದಷ್ಟು ಮಟ್ಟಿಗೆ ಈ ಉದ್ಯಾನವನಗಳ ಪರಿಸರ ಸಮತೋಲನ ಮಾಡುತ್ತಿದೆ ಎನ್ನುತ್ತಾರೆ ಪರಿಸರ ತಜ್ಞರು.
‘ಸಿಲ್ವರ್ ಜುಬಿಲಿ ಪಾರ್ಕ್ ಮಧ್ಯೆ 2- 3 ತಿಂಗಳಿಂದ ಕೆ.ಆರ್.ಮಾರುಕಟ್ಟೆ ಕಡೆಗೆ ಮಳೆನೀರು ಮೋರಿ ಪೈಪ್ ಅಳವಡಿಸುವ ಕಾರ್ಯವನ್ನು ಬಿಬಿಎಂಪಿ ಬೃಹತ್ ನೀರುಗಾಲುವೆ ವಿಭಾಗ ಕೈಗೆತ್ತಿಕೊಂಡಿದೆ. ಇದರ ಜೊತೆಗೆ ಬಿಬಿಎಂಪಿ ಕೇಂದ್ರ ಯೋಜನೆ ವಿಭಾಗದವರು ವೈಟ್ ಟಾಪಿಂಗ್ ಕಾಮಗಾರಿ ನಡೆಸಿದ ತ್ಯಾಜ್ಯವಸ್ತುಗಳನ್ನು ಈ ಪಾರ್ಕ್ ಜಾಗದಲ್ಲಿ ಹಾಕಿದ್ದಾರೆ. ಜಲಮಂಡಳಿ ಪೈಪ್ ಅಳವಡಿಕೆ ಕಾರ್ಯ ಮುಗಿದ ಬಳಿಕ ಪಾಲಿಕೆ ಯೋಜನಾ ವಿಭಾಗದವರು ಪಾರ್ಕ್ ನಡಿಗೆ ಮಾರ್ಗ, ಕುಳಿತುಕೊಳ್ಳಲು ಬೆಂಚು ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ನಡೆಸಿ ನಿರ್ವಹಣೆಗಾಗಿ ತೋಟಗಾರಿಕೆ ವಿಭಾಗಕ್ಕೆ ಹಸ್ತಾಂತರಿಸಲಿದ್ದಾರೆ.’
ಚಂದ್ರಶೇಖರ್, ಉಪನಿರ್ದೇಶಕರು, ಬಿಬಿಎಂಪಿ ತೋಟಗಾರಿಕಾ ಇಲಾಖೆ
ಐತಿಹಾಸಿಕ ಮಹತ್ವವುಳ್ಳ ಈ ಉದ್ಯಾನವವು, ಬ್ರಾಂಡ್ ಬೆಂಗಳೂರಿನ ಹೆಸರಿಗೆ ಇಲ್ಲಿನ ಅವ್ಯವಸ್ಥೆಯು ಮಸಿಬಳಿಯುವ ರೀತಿಯಲ್ಲಿದೆ. ನಾಡನ್ನು ಕಟ್ಟಿದವರ ಹೆಸರಿನಲ್ಲಿರುವ ಈ ಉದ್ಯಾನವನವು ತನ್ನ ಗತ ವೈಭವವನ್ನು ಆದಷ್ಟು ಶೀಘ್ರವಾಗಿ ಮರಳಿ ಪಡೆದುಕೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ.