ಬೆಂಗಳೂರು, ಜು.18 www.bengaluruwire.com : ದೇಶದ ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಸೋಮವಾರ ನಡೆದ ಚುನಟವಣೆಯಲ್ಲಿ ರಾಜ್ಯದಿಂದ 224 ಶಾಸಕರು, ತಲಾ ಒಬ್ಬರು ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ 226 ಮಂದಿ ಮತದಾನ ಮಾಡಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಂ.ವಿ.ಶ್ರೀನಿವಾಸ ಪ್ರಸಾದ್ ಹಾಗೂ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕರು ಬೆಂಗಳೂರಿನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಯಶವಂತ ಸಿನ್ಹ ರಾಷ್ಟ್ರಪತಿ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ನಡೆದ ಮತದಾನದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮೊದಲಿಗೆ ಮತದಾನ ಮಾಡಿದರು. ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಷ್ಟ್ರಪತಿ ಚುನಾವಣೆ ಸಹಾಯಕ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಸುಗಮವಾಗಿ ಚುನಾವಣೆ ನಡೆಯಿತು.
ರಾಷ್ಟ್ರಪತಿ ಚುನಾವಣೆ -2022 ರ ಇಂದಿನ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯವಾಯಿತು. ರಾತ್ರಿ 9.20 ರ ವಿಮಾನದಲ್ಲಿ ಮತಪಟ್ಟಿಗೆ ಬೆಂಗಳೂರಿನಿಂದ ನವದೆಹಲಿಗೆ ತಲುಪಲಿದೆ. ಜುಲೈ 21 ರಂದು ನವದೆಹಲಿಯಲ್ಲಿ ಮತ ಎಣಿಕೆ ನಡೆಯಲಿದೆ.
ದೇಶಾದ್ಯಂತ ರಾಷ್ಟ್ರಪತಿ ಚುನಾವಣೆಗೆ 776 ಸಂಸದರು (ಮತದಾನದ ಮೌಲ್ಯ 5,43,200 ಮತಗಳು) ಹಾಗೂ 4033 ಶಾಸಕರು (ಮತದಾನದ ಮೌಲ್ಯ 5,43,231 ಮತಗಳು) ಮತದಾನ ಹಕ್ಕನ್ನು ಹೊಂದಿದ್ದಾರೆ. ಒಟ್ಟಾರೆ 4,809 ಜನಪ್ರತಿನಿಧಿಗಳು ಚಲಾಯಿಸುವ ಹಕ್ಕುಗಳು 10,86,431 ಮತಗಳಿಗೆ ಸಮನಾಗಿರುತ್ತದೆ.