ಬೆಂಗಳೂರು, ಜು.18 www.bengaluruwire.com : ಕೇಂದ್ರ ಸರ್ಕಾರ ಹಣಕಾಸು ಸಚಿವಾಲಯದ ಅಧಿಸೂಚನೆಯಂತೆ ಜು.18ರಿಂದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ (KMF) ಮೊಸರು, ಮಜ್ಜಿಗೆ ಹಾಗೂ ಲಸ್ಸಿ ಉತ್ಪನ್ನದ ಮೇಲೆ ಶೇ.5ರಷ್ಟು ಸರಕು ಮತ್ತು ಸೇವಾ ತೆರಿಗೆ (GST) ವಿಧಿಸುತ್ತಿದೆ.
ಈ ಹಿನ್ನಲೆಯಲ್ಲಿ ಗ್ರಾಹಕರು ಖರೀದಿಸುವ ಕೆಎಂಎಫ್ ಮೊಸರು, ಮಜ್ಜಿಗೆ ಹಾಗೂ ಲಸ್ಸಿಗಳ ಮೇಲಿನ ದರ ಹೆಚ್ಚಳವಾಗಿದೆ.
ಮೊಸರಿನ 200 ಗ್ರಾಮ್, ಅರ್ಧ ಹಾಗೂ ಒಂದು ಲೀಟರ್ ಸ್ಯಾಚೆಟ್ ಬೆಲೆಯು ಕ್ರಮವಾಗಿ ಜಿಎಸ್ ಟಿ ಹೇರಿಕೆಯಿಂದಾಗಿ ಕ್ರಮವಾಗಿ 12 (2ರೂ. ಏರಿಕೆ), 24 (2ರೂ. ಏರಿಕೆ) ಹಾಗೂ 46 ರೂ.(3 ರೂ. ಏರಿಕೆ) ರೂ. ದರ ನಿಧಿಪಡಿಸಲಾಗಿದೆ. ಹಿಂದಿನ ಬೆಲೆಗೆ ಹೋಲಿಸಿದರೆ 2ರೂ.ನಿಂದ 3 ರೂ. ದರ ಏರಿಕೆಯಾಗಿದೆ.
200 ಮಿ.ಲೀ. ಮಜ್ಜಿಗೆ ಸ್ಯಾಚೆಟ್, ಟೆಟ್ರಾ ಪ್ಯಾಕೇಟ್ ಹಾಗೂ ಪೆಟ್ ಬಾಟಲ್ ದರವು ಕ್ರಮವಾಗಿ 8, 11 ಹಾಗೂ 13 ರೂ. ಗಳಾಗಿದೆ (1 ರೂ. ನಷ್ಟು ಹೆಚ್ಚಳ).
ಇನ್ನು 200 ಮಿ.ಲೀ ಲಸ್ಸಿ ಸ್ಯಾಚೆಟ್ (11ರೂ.), ಟೆಟ್ರಾಪ್ಯಾಕೇಟ್ ಸಾದಾ (21 ರೂ.), ಟೆಟ್ರಾ ಪ್ಯಾಕ್ ಮ್ಯಾಂಗೋ (27 ರೂ.), ಪೆಟ್ ಬಾಟಲ್ ಸಾದಾ (16 ರೂ.), ಪೆಟ್ ಬಾಟಲ್ ಮ್ಯಾಂಗೋ (21 ರೂ.) ಬೆಲೆ ನಿಗಧಿಪಡಿಸಲಾಗಿದೆ. ಒಟ್ಟಾರೆ ವಿವಿಧ ರೀತಿಯ ಲಸ್ಸಿ ಬೆಲೆ ಜಿಎಸ್ ಟಿ ಹೇರಿಕೆಯಿಂದ 1ರೂನಿಂದ 2ರೂ. ಏರಿಕೆಯಾಗಿದೆ.
ಜಿಎಸ್ ಟಿ ತೆರಿಗೆ ಹಿನ್ನಲೆಯಲ್ಲಿ ಈಗಾಗಲೇ ಇರುವ ಪೊಟ್ಟಣಗಳ ದಾಸ್ತಾನು ಮುಗಿಯುವ ತನಕ ಇಂಕ್ ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಮುದ್ರಿಸಲಾಗುತ್ತದೆ ಎಂದು ಕೆಎಂಎಫ್ ಮಾರುಕಟ್ಟೆ ವಿಭಾಗದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.