ಬೆಂಗಳೂರು, ಜು.15 www.bengaluruwire.com : ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ಫೈರ್ ಮನ್ ಹುದ್ದೆಗಳಿಗೆ ಒಟ್ಟು 1,222 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈತನಕ 608 ಅಭ್ಯರ್ಥಿಗಳು ನೇಮಕಾತಿ ಆದೇಶಪಡಿದಿದ್ದಾರೆ. ನೇಮಕಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಕಾಲಮಿತಿಯೊಳಗೆ ನೇಮಕಾತಿ ಪತ್ರ ವಿತರಿಸಲು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಉಳಿದ ಅಭ್ಯರ್ಥಿಗಳ ಆಯ್ಕೆ ಸಿಂಧುತ್ವ ವನ್ನೂ ಪಡೆದಿದ್ದು, ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
ರಾಜ್ಯ ಸರಕಾರವು, ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆ ಗಳನ್ನು ಆದ್ಯತೆ ಮೇರೆಗೆ ಸ್ಥಾಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಹುದ್ದೆಗಳ ಭರ್ತಿಗೆ ಸಹ ಕ್ರಮ ಕೈಗೊಂಡಿದೆ. ಇಲಾಖೆಯಲ್ಲಿ ಒಟ್ಟು 7,057 ವಿವಿಧ ಶ್ರೇಣಿಯ ಹುದ್ದೆಗಳಿವೆ. 2021ನೇ ಇಸವಿಯ ಅಂತ್ಯಕ್ಕೆ, ಸುಮಾರು 2627 ಹುದ್ದೆ ಗಳು ಖಾಲಿಯಿದ್ದು, ಪ್ರಸ್ತುತ ವರ್ಷ 1,567 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆ ಗಳ ಸ್ಥಾಪನೆಗೆ ಸರಕಾರ ವಿಶೇಷ ಕ್ರಮ ಕೈಗೊಂಡು, ನೂತನ ಕಟ್ಟಡಗಳೂ ಹಾಗೂ ಇನ್ನಿತರ ಸೌಲಭ್ಯ ಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.