ಬೆಂಗಳೂರು, ಜು.15 www.bengaluruwire.com : ರಾಜ್ಯ ಸರ್ಕಾರವು ಕೊನೆಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) 243 ವಾರ್ಡ್ ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಈ ಮೂಲಕ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಪಾಲಿಕೆ ಚುನಾವಣೆಗೆ ಒಂದು ಹೆಜ್ಜೆ ಮುಂದಡಿಯಿಟ್ಟಂತಾಗಿದೆ.
ಬಿಬಿಎಂಪಿಯ ಚುನಾವಣೆಯು ವಿವಿಧ ಕಾರಣಗಳಿಂದ ಚುನಾವಣೆ ಮುಂದೂಡಿಕೆ ಆಗಿರುವ ಹೊತ್ತಿನಲ್ಲೇ ಸುಪ್ರೀಂಕೋರ್ಟ್ ಮೇ ತಿಂಗಳಿನಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ 8 ವಾರದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ನಡೆಸುವಂತೆ ಸೂಚನೆ ನೀಡಿತ್ತು. ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ವಿಂಗಡಣೆ ಮತ್ತು ಮೀಸಲಾತಿಯನ್ನು ಕಾಲಮಿತಿಯಲ್ಲಿ ನಿಗಧಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿತ್ತು. ಆ ಪೈಕಿ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯ ಪೈಕಿ ಒಂದನ್ನು ಪೂರ್ಣಗೊಳಿಸಿ ಕೈತೊಳೆದು ಕೊಂಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 243 ವಾರ್ಡ್ ಪುನರ್ವಿಂಗಡಣೆ ಕುರಿತಂತೆ ಜೂ.23ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪ ವ್ಯಕ್ತಪಡಿಸಲು ಜು.9ರ ತನಕ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆಗ ಸಾರ್ವಜನಿಕರು ಮತ್ತು ಸಂಘ- ಸಂಸ್ಥೆಗಳಿಂದ ವಾರ್ಡ್ ಹೆಸರು ಮತ್ತು ಗಡಿ ಗುರುತುಗಳ ಬದಲಾವಣೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸುಮಾರು 3,833 ಆಕ್ಷೇಪಣೆ, ಸಲಹೆ ಮತ್ತು ದೂರುಗಳು ವ್ಯಕ್ತವಾಗಿದ್ದವು. ಅವುಗಳ ಪೈಕಿ ಸೂಕ್ತವಾದ ಆಕ್ಷೇಪಣೆಗಳನ್ನು ಪರಿಗಣಿಸಿ ಈ ಹಿಂದೆ ವಾರ್ಡ್ ಪುನರ್ವಿಂಗಡಣೆ ಕರಡಿನಲ್ಲಿ 23 ವಾರ್ಡ್ ಗಳ ಹೆಸರುಗಳನ್ನು ಬದಲಿಸಿ, 40 ವಾರ್ಡ್ ಗಳ ಗಡಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ಗುರುವಾರ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.
ಬಿಬಿಎಂಪಿಯು ವಾರ್ಡ್ ಪುನರ್ವಿಂಗಡಣೆ ಕರಡಿನಲ್ಲಿ ವಾರ್ಡ್ 55ರ ಕಾವೇರಿನಗರ ವಾರ್ಡ್ ಎಂಬ ಹೆಸರನ್ನು ಅಂತಿಮ ಅಧಿಸೂಚನೆಯಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರನ್ನು ಇಟ್ಟಿದೆ. ಆ ಮೂಲಕ ಅಗಲಿದ ನಟನಿಗೆ, ಆ ವಾರ್ಡಿನ ಬಹುತೇಕ ನಾಗರೀಕರ ಬೇಡಿಕೆಯಂತೆ ಪವರ್ ಸ್ಟಾರ್ ಹೆಸರನ್ನು ಇಡಲಾಗಿದೆ. 243 ವಾರ್ಡ್ ಗಳ ಮರು ವಿಂಗಡಣೆ ವರದಿಗೆ ಸಲ್ಲಿಕೆಯಾದ 3,833 ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಪತ್ರದ ಮೂಲಕ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.
ಇದೇ ರೀತಿ ಕರಡು ಅಧಿಸೂಚನೆಯಲ್ಲಿ ವಾರ್ಡ್ ನಂಬರ್ 77ರ ಹೆಸರನ್ನು ಮೋದಿ ಗಾರ್ಡನ್ ಎಂದು ಹೆಸರು ಬದಲಾವಣೆ ಮಾಡಿದಕ್ಕೆ ಸಾಕಷ್ಟು ಆಕ್ಷೇಪಣೆಗಳು ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಅದನ್ನು 198 ವಾರ್ಡ್ ಇದ್ದಾಗ ಇಟ್ಟ ದೇವರಜೀವನಹಳ್ಳಿ ಹೆಸರನ್ನೇ ಉಳಿಸಿಕೊಂಡಿದೆ.
ರಾಜ್ಯ ಸರ್ಕಾರವು ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಿಬಿಎಂಪಿಯ ವಾರ್ಡ್ ಗಳಿಗೆ ಮೀಸಲಾತಿಯನ್ನು ವೈಜ್ಞಾನಿಕವಾಗಿ ನಿಗಧಿಪಡಿಸಲು ಭಕ್ತವತ್ಸಲ ಸಮಿತಿಯನ್ನು ಈಗಾಗಲೇ ನೇಮಕ ಮಾಡಿದ್ದು, ಆ ಸಮಿತಿಯು ಇಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರವು ಮೀಸಲಾತಿಯನ್ನು ಪ್ರಕಟ ಮಾಡಲಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯ ಪ್ರಮಾಣವನ್ನು ಶೇ.50ಕ್ಕೆ ಮಿತಿಗೊಳಿಸಿ ಕಳೆದ ತಿಂಗಳಷ್ಟೇ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಒಟ್ಟಿನಲ್ಲಿ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆಗೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿ ಪಾಲಿಕೆ ಚುನಾವಣೆ ನಡೆಯುತ್ತಾ? ಅಥವಾ ಇಲ್ಲವಾ ಎಂಬ ಅನುಮಾನಗಳಿಗೆ ಸರ್ಕಾರದ 243 ವಾರ್ಡ್ ಪುನರ್ವಿಂಗಡಣಾ ಅಂತಿಮ ಅಧಿಸೂಚನೆಯು ಪಾಲಿಕೆ ಕಾರ್ಪೊರೇಟರ್ ಆಕಾಂಕ್ಷಿಗಳಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ.