ಬೆಂಗಳೂರು, ಜು.14 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನ ನಡಿಗೆದಾರರಿಗೆ (Walkers) ಖುಷಿಯ ಸುದ್ದಿ. ಇನ್ನು ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳು ಬೆಳಗ್ಗೆ 5 ರಿಂದ ರಾತ್ರಿ 8 ರ ವರೆಗೆ ತೆರೆದಿರುತ್ತದೆ.
ಈ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಸುತ್ತೋಲೆ ಹೊರಡಿಸಿದ್ದಾರೆ. ಈ ಆದೇಶದಿಂದಾಗಿ ಬೆಳಗಿನ ಹೊತ್ತು ವಾಯು ವಿಹಾರಕ್ಕೆಂದು ಬರಲು ಸಾಧ್ಯವಾಗದವರು, ಬೇರೆ ಶಿಫ್ಟ್ ಗಳಲ್ಲಿ ಕೆಲಸ ಮಾಡುವವರಿಗೆ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಅನುಕೂಲ ಆಗಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳನ್ನು ವಾಯು ವಿಹಾರಕ್ಕೆಂದು ಪ್ರತಿ ದಿನ ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು.
ಆದರೆ ಇನ್ನು ಮುಂದೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಸಮಯವನ್ನು ಮಾರ್ಪಡಿಸಿ ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಉದ್ಯಾನವನಗಳ ನಿರ್ವಹಣೆಗಾಗಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಸಮಯವನ್ನು ನಿಗಧಿಪಡಿಸಿ ಆದೇಶಿಸಲಾಗಿದೆ.
ಉದ್ಯಾನವನಗಳ ನಿರ್ವಹಣೆಯ ಸಮಯದಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಮುಖ್ಯ ಆಯುಕ್ತರ ಸೊತ್ತೋಲೆಯಲ್ಲಿ ತಿಳಿಸಿದ್ದಾರೆ.