ಬೆಂಗಳೂರು, ಜು.13 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಸ್ತಿ ಮಾಲೀಕರ ಸ್ವತ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯಿರುವ ಸರಳೀಕೃತ “ಇ-ಆಸ್ತಿ” (E-Aasthi)ದಾಖಲೆ ನೀಡುವ ಪದ್ಧತಿ ಪೂರ್ವ ವಲಯದಲ್ಲಿ ಜಾರಿಗೆ ಬಂದು ಎರಡು ತಿಂಗಳ ಮೇಲಾಯ್ತು. ಆದರೆ ಈ ತನಕ 8,080 ಆಸ್ತಿ ಮಾಲೀಕರಿಗೆ ಮಾತ್ರ “ಇ-ಆಸ್ತಿ” ದಾಖಲೆ ನೀಡಲು ಅನುಮೋದನೆ ನೀಡಲಾಗಿದೆ.
ಪೂರ್ವ ವಲಯದ ಎರಡು ವಾರ್ಡ್ ಗಳನ್ನು ಹೊರತುಪಡಿಸಿ 42 ವಾರ್ಡ್ ಗಳಲ್ಲಿ ಮೇ ತಿಂಗಳಿನಿಂದ ಈ ಯೋಜನೆ ಜಾರಿಗೆ ಬಂದಿದೆ. ಈ ವಲಯದಲ್ಲಿ ಒಟ್ಟು 2.5 ಲಕ್ಷದಿಂದ 3 ಲಕ್ಷ ಆಸ್ತಿಗಳಿವೆ.ಪಾಲಿಕೆಯ ಈ ಹೊಸ ಸೇವೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಹಾಗೂ ಪಾಲಿಕೆಯಲ್ಲಿ ದಾಖಲೆಗಳನ್ನು ಕಂಪ್ಯೂಟರ್ ಗೆ ದಾಖಲಿಸುವ ಕಾರ್ಯದಲ್ಲಿ ವಿಳಂಬವಾಗುತ್ತಿರುವ ಕಾರಣದಿಂದ ಇ-ಆಸ್ತಿ ನೀಡಿಕೆ ಪ್ರಮಾಣ ಕುಂಠಿತವಾಗಿದೆ. ಇನ್ನು ಎರಡು- ಮೂರು ವಾರಗಳ ಒಳಗಾಗಿ ಪಾಲಿಕೆ ಪೂರ್ವ ವಲಯದಲ್ಲಿ ಜಾರಿಗೆ ತಂದಂತೆಯೇ “ಇ-ಆಸ್ತಿ” ತಂತ್ರಾಂಶ ವ್ಯವಸ್ಥೆಯ ಮೂಲಕ ಸಂಬಂಧಿತ ಪ್ರಾಧಿಕಾರದ ಅಧಿಕಾರಿಗಳ ಡಿಜಿಟಲ್ ಸಹಿಯುಳ್ಳ ಆಸ್ತಿ ಹಕ್ಕುಗಳ ವರ್ಗಾವಣೆ, ನಮೂನೆ-ಎ ಅಥವಾ ನಮೂನೆ-ಬಿ ರಿಜಿಸ್ಟರ್ ಪ್ರತಿಗಳನ್ನು ನೀಡುವ ಪದ್ಧತಿಯನ್ನು ಬಿಬಿಎಂಪಿಯ ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ವಿಸ್ತರಿಸಲಾಗುತ್ತಿದೆ ಎಂದು ಬಿಬಿಎಂಪಿಯ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಈ ಹಿಂದೆ ಹಳೆ ಬೆಂಗಳೂರು ಪ್ರದೇಶದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳಲ್ಲಿರುವ ಪ್ರತಿಯೊಂದು ಆಸ್ತಿಗಳಿಗೆ ಪ್ರಾಪರ್ಟಿ ಐಡೆಂಟಿಫಿಕೇಶನ್ ನಂಬರನ್ನು (PID) ನೀಡಲಾಗುತ್ತಿತ್ತು. ಆದರೆ ಹೊಸ ವಲಯಗಳಲ್ಲಿನ ಆಸ್ತಿಗಳಿಗೆ ಪಿಐಡಿ ಸಂಖ್ಯೆಯನ್ನು ನೀಡದ ಕಾರಣ ಇ-ಆಸ್ತಿ ಯೋಜನೆಯನ್ನು ಬೆಂಗಳೂರಿನಾದ್ಯಂತ ಜಾರಿಗೆ ತರಲು ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಪಾಲಿಕೆ ಕಂದಾಯ ವಿಭಾಗ ಎದುರಿಸುತ್ತಿದೆ.
ಏನಿದು ಇ-ಆಸ್ತಿ? ಆಸ್ತಿ ಮಾಲೀಕರಿಗೆ ಹೇಗೆ ಅನುಕೂಲ? :
ಇ-ಆಸ್ತಿ ತಂತ್ರಾಂಶವು ಆಸ್ತಿ ದಾಖಲೆಗಳ ನಿರ್ವಹಣಾ ವ್ಯವಸ್ಥೆಯಾಗಿದೆ. ಆಸ್ತಿ ಮಾಲೀಕರು ಹೊಸದಾಗಿ ತಮ್ಮ ಯಾವುದೇ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವಾಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಮನ್ವಯಗೊಂಡ ಸಂದರ್ಭದಲ್ಲಿ, ಸ್ವತ್ತಿನ ವಿಲೇವಾರಿಗೆ ಅನುಕೂಲಕರವಾಗಲಿದೆ. ಇ-ಆಸ್ತಿ ವ್ಯವಸ್ಥೆಯಲ್ಲಿ ಖಾತಾ ನೋಂದಾವಣೆ, ಖಾತಾ ವರ್ಗಾವಣೆ, ವಿಭಜನೆ, ಒಂದುಗೂಡಿಸುವಿಕೆ, ಎ-ಖಾತೆ ಮತ್ತು ಬಿ-ಖಾತೆ, ಖಾತಾ ಪ್ರಮಾಣಪತ್ರ, ಖಾತಾ ಎಕ್ಸ್ ಟ್ರಾಕ್ಟ್ (ಖಾತಾ ಉದೃತ ಭಾಗ) ಮೊದಲಾದ ಸೇವೆಗಳನ್ನು ಆನ್ ಲೈನ್ ಮೂಲಕ ಸುಲಭವಾಗಿ ಕೈಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಬಿಬಿಎಂಪಿ ಆ ಆಸ್ತಿಯ ಈ ಲಿಂಕ್ ಕ್ಲಿಕ್ ಮಾಡಿ https://bbmpeaasthi.karnataka.gov.in/
ಇ- ಆಸ್ತಿ ದಾಖಲೆಯಲ್ಲಿ ಏನೇನು ವಿವರ ಇರುತ್ತದೆ ?
ಈ ಹಿಂದೆ ಬಿಬಿಎಂಪಿಯು ನೀಡುತ್ತಿದ್ದ ಖಾತಾ ಎಕ್ಸ್ ಟ್ರಾಕ್ಟ್ ನಲ್ಲಿ ಆಸ್ತಿ ಮಾಲೀಕರ ಹೆಸರು, ಆಸ್ತಿಯಿರುವ ವಿಳಾಸ, ಕಟ್ಟಡ ಅಥವಾ ನಿವೇಶನದ ವಿಸ್ತೀರ್ಣ ಹೀಗೆ ಕೇವಲ ಕೆಲವೇ ಮಾಹಿತಿಗಳನ್ನು ಮಾತ್ರ ಹೊಂದಿರುತ್ತಿತ್ತು. ಆದರೆ ಇ-ಆಸ್ತಿ ವ್ಯವಸ್ಥೆಯಲ್ಲಿ ಆ ಸ್ವತ್ತು ಖಾಸಗಿ, ವಾಣಿಜ್ಯ ಇತ್ಯಾದಿ ಯಾವ ರೀತಿಯದ್ದು, ಎ –ಖಾತಾ ಅಥವಾ ಬಿ-ಖಾತಾನಾ?, ಸ್ವತ್ತಿನ ಪಿಐಡಿ ಸಂಖ್ಯೆ, ವಾರ್ಡ್ ಸಂಖ್ಯೆ, ಹೆಸರು, ಸ್ವತ್ತಿನ ವಿಳಾಸ, ವಿಸ್ತೀರ್ಣ, ಒಂದೊಮ್ಮೆ ಸ್ವತ್ತಿನಲ್ಲಿ ಕಟ್ಟಡ ನಿರ್ಮಾಣವಾಗಿದ್ದರೆ ಆ ಕಟ್ಟಡದ ಪ್ಲಿಂತ್ ವಿಸ್ತೀರ್ಣ, ಆ ಸ್ವತ್ತು ಎಷ್ಟು ಮಹಡಿ ಹೊಂದಿದೆ, ಯಾವ ರೀತಿ ಛಾವಣಿ ಹೊಂದಿದೆ, ಮನೆ ಅಥವಾ ಬಿಲ್ಡಿಂಗ್ ಗೆ ಯಾವ ಮರ ಬಳಸಲಾಗಿದೆ? ಯಾವಾಗ ಕಟ್ಟಡ ನಿರ್ಮಾಣವಾಗಿದೆ, ಕಟ್ಟಡದ ಫೊಟೊ, ಸ್ವತ್ತಿನ ಮಾಲೀಕರ ಹೆಸರು, ಗುರ್ತಿನ ದಾಖಲೆ, ಆತನ ಫೋಟೊ, ಅಪಾರ್ಟ್ ಮೆಂಟ್ ನಲ್ಲಿನ ಫ್ಲಾಟ್ ಮಾಲೀಕರಾದರೆ ಹೆಚ್ಚುವರಿ ವಿವರ ಇರಲಿದೆ. ಒಟ್ಟಾರೆ ಆಸ್ತಿ ತೆರಿಗೆ ವಿವರಗಳು ಸೇರಿದಂತೆ 40ಕ್ಕೂ ಹೆಚ್ಚು ಕಾಲಮ್ ಗಳಲ್ಲಿ ಮಾಹಿತಿಯಿರಲಿದೆ.
ಯಾರೆಲ್ಲ ಇ-ಆಸ್ತಿ ದಾಖಲೆ ಪಡೆಯಬಹುದು?
ಹಳೇ ಬೆಂಗಳೂರಿನ ಮೂರು ವಲಯಗಳಾದ ಪೂರ್ವ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಪಾಲಿಕೆಯು ಈಗಾಗಲೇ ಪ್ರತಿ ಆಸ್ತಿಗಳಿಗೆ ಪಿಐಡಿ ನೀಡಿದೆ. ಈ ಯೋಜನೆಯು ಮೊದಲಿಗೆ ಪೂರ್ವ ವಲಯದಲ್ಲಿ ಜಾರಿಗೆ ಬಂದಿರುವುದರಿಂದ ಈ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರು ಹತ್ತಿರದಲ್ಲಿರುವ ಪಾಲಿಕೆಯ ಎಆರ್ ಒ (ARO) ಕಚೇರಿಗೆ ತೆರಳಿ ಸ್ವತ್ತಿನ ಪಿಐಡಿ ಸಂಖ್ಯೆ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಇ-ಆಸ್ತಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಬಿಡಿಎನಿಂದ ಬಿಬಿಎಂಪಿಗೆ ಇನ್ನೂ ಹಸ್ತಾಂತರವಾಗದ ಬಡಾವಣೆಯಲ್ಲಿರುವ ಸ್ವತ್ತಿನ ಮಾಲೀಕರು ಪಾಲಿಕೆಯಿಂದ ಇ-ಆಸ್ತಿ ದಾಖಲೆ ಪಡೆಯುವ ಅವಶ್ಯಕತೆಯಿಲ್ಲ.
ಪಾಲಿಕೆ ಪೂರ್ವ ವಲಯದಲ್ಲಿ ಸ್ವತ್ತಿನ ನೋಂದಣಿಗೆ ಇ-ಆಸ್ತಿ ದಾಖಲೆ ಈಗ ಕಡ್ಡಾಯ :
ಇ- ಆಸ್ತಿ ವ್ಯವಸ್ಥೆ ಮೊದಲಿಗೆ ಬಿಬಿಎಂಪಿಯ ಪೂರ್ವ ವಲಯದಲ್ಲಿ ಜಾರಿಗೆ ಬಂದಿರುವ ಕಾರಣ, ಈ ವಲಯ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶದ ಮೂಲಕ ವಿತರಿಸಲಾದ ಎ-ಖಾತೆ ಮತ್ತು ಬಿ-ಖಾತೆಯನ್ನು ಮಾತ್ರ ಸ್ವತ್ತಿನ ನೋಂದಣಿ ಸಂದರ್ಭದಲ್ಲಿ ಪರಿಗಣಿಸಲು ಸಂಬಂಧಪಟ್ಟ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳಿಗೆ ರಾಜ್ಯ ಕಂದಾಯ ಇಲಾಖೆಯು ಸೂಚನೆ ನೀಡಿದೆ.
ಒಂದೊಮ್ಮೆ ಬೇರೆ ಯಾವುದೇ ವಿಧಾನದಲ್ಲಿ ಅಂದರೆ ಬಿಬಿಎಂಪಿಯ ಇ- ತಂತ್ರಾಂಶದ ಮೂಲಕ ಸಿದ್ಧಪಡಿಸಿರುವ ಖಾತಾ ಪ್ರಮಾಣಪತ್ರ, ಖಾತಾ ಎಕ್ಸ್ ಟ್ರಾಕ್ಟ್, ಖಾತಾ ಎಂಡಾರ್ಸ್ ಮೆಂಟ್ (ಖಾತಾ ಉತ್ತರಪತ್ರ) ಮೊದಲಾದ ದಾಖಲೆಗಳನ್ನು ಈ ಪ್ರದೇಶದ ವ್ಯಾಪ್ತಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಗಣಿಸುವುದಿಲ್ಲ. ಒಂದೊಮ್ಮೆ ಇ-ಆಸ್ತಿ ದಾಖಲೆ ಹೊರತುಪಡಿಸಿ ಬೇರೆ ವಿಧಾನದಲ್ಲಿ ನೋಂದಣಿ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇ-ಆಸ್ತಿ ತಂತ್ರಾಂಶ ಹೇಗೆ ಕಾರ್ಯನಿರ್ವಹಿಸುತ್ತೆ? :
ಇಡೀ ಬಿಬಿಎಂಪಿಯಾದ್ಯಂತ ಇ-ಆಸ್ತಿ ಜಾರಿಗೆ ಬಂದರೆ, ಮುಂದೆ ಪಾಲಿಕೆ ವ್ಯಾಪ್ತಿಯಲ್ಲಿನ ಯಾವ ಆಸ್ತಿಯ ಮಾಲೀಕ ತನ್ನ ಆಸ್ತಿ ಮಾರಬೇಕಾದರೆ ಕೇವಲ ಇ-ಆಸ್ತಿ ಹಾಗೂ ಆಸ್ತಿಯ ಕ್ರಯಪತ್ರ ಮತ್ತಿತರ ದಾಖಲೆಯೊಂದಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಬಹುದು. ನೋಂದಣಿ ಕಚೇರಿಯಲ್ಲಿ ಇ-ಆಸ್ತಿ ನಂಬರ್ ಹಾಕುತ್ತಿದ್ದಂತೆ ಇಲಾಖೆಯ ಕಾವೇರಿ ತಂತ್ರಾಂಶದೊಂದಿಗೆ ಸಂಯೋಜನೆಗೊಂಡ ಇ-ಆಸ್ತಿ ತಂತ್ರಾಂಶದಲ್ಲಿ ಅರ್ಜಿದಾರನ ಸ್ವತ್ತಿನ ಸಂಪೂರ್ಣ ವಿವರ ಕಂಪ್ಯೂಟರ್ ಪರದೆಯಲ್ಲಿ ತೆರೆದುಕೊಳ್ಳುತ್ತೆ. ಇದನ್ನು ಆಧರಿಸಿ ನೋಂದಣಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತದೆ.
ಅದೇ ರೀತಿ ಆಸ್ತಿ ಮಾಲೀಕರಿಂದ ಹೊಸದಾಗಿ ಸ್ವತ್ತು ಖರೀದಿಸುವಾತ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಕಟ್ಟಿ ನೋಂದಣಿ ಮಾಡುತ್ತಿದ್ದಂತೆ ಕಾವೇರಿ ತಂತ್ರಾಂಶದಲ್ಲಿನ ಆ ಮಾಹಿತಿ ಬಿಬಿಎಂಪಿ ಇ-ಸ್ವತ್ತಿನ ಸಾಫ್ಟ್ ವೇರ್ ಗೆ ವಿನಮಯವಾಗಿ ಸ್ವತ್ತಿನ ಮಾಲೀಕರಿಗೆ ಇ-ಖಾತಾಗೆ ಸಂಬಂಧಿಸಿದಂತೆ ಇ-ಆಸ್ತಿ ಸಾಫ್ಟ್ ವೇರ್ ನಲ್ಲಿ ಅರ್ಜಿಯು ಸೃಜನೆಯಾಗಿ ಅಲ್ಲಿಂದ ಆತನ ಹೆಸರಿಗೆ ಖಾತಾ ಬದಲಾವಣೆಯಾಗುವ ತನಕ ಪ್ರತಿಯೊಂದು ಪ್ರಕ್ರಿಯೆಯ ಮಾಹಿತಿ, ಸ್ವತ್ತು ಖರೀದಿಸಿದ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಮಾಹಿತಿ ಲಭ್ಯವಾಗುತ್ತಿರುತ್ತದೆ.
ಇ-ಆಸ್ತಿ ತಂತ್ರಾಂಶ ಸರ್ಕಾರ ಮತ್ತು ಬಿಬಿಎಂಪಿಗೂ ಲಾಭದಾಯಕ :
ಇ-ಆಸ್ತಿಯಲ್ಲಿ ಕಟ್ಟಡ, ನಿವೇಶನ ಸ್ವರೂಪ, ವಿಸ್ತೀರ್ಣ, ಫೊಟೊ, ಚಕ್ಕುಬಂದಿ, ಆಸ್ತಿ ತೆರಿಗೆ ಮೊದಲಾದ ಸಮಗ್ರ ಮಾಹಿತಿ ಇರುವುದರಿಂದ ಇತ್ತ ಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಸುಳ್ಳು ಮಾಹಿತಿ ನೀಡಿ ಆಸ್ತಿ ತೆರಿಗೆ ತಪ್ಪಿಸಲು ಸಾಧ್ಯವಿಲ್ಲ. ಮತ್ತೊಂದೆಡೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮುದ್ರಾಂಕ ಶುಲ್ಕ ತಪ್ಪಿಸಲು ಆಸ್ತಿಯ ಮೌಲ್ಯ ಕಡಿಮೆ ತೋರಿಸಲು ಅವಕಾಶವಿರುವುದಿಲ್ಲ. ಇದರಿಂದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಆದಾಯಕ್ಕೂ ಕತ್ತರಿ ಬೀಳದು. ರಿಜಿಸ್ಟ್ರೇಷನ್ ಪ್ರಕ್ರಿಯೆ ಮತ್ತಷ್ಟು ಸುಲಭ ಹಾಗೂ ವೇಗವಾಗಿ ನಡೆಯಲಿದೆ.
3 ವಾರ್ಡ್ ನಿಂದ 42 ವಾರ್ಡ್ ಗಳಲ್ಲಿ ಇ-ಆಸ್ತಿ ಜಾರಿ :
ಬೆಂಗಳೂರು ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ 3 ವಾರ್ಡ್‌ಗಳಲ್ಲಿ ಜಾರಿಗೊಳಿಸಿದ್ದ ಇ-ಆಸ್ತಿ ತಂತ್ರಾಂಶ ಯಶಸ್ವಿಯಾಗಿತ್ತು. ಆನಂತರ ಶಾಂತಿನಗರ, ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ 11 ವಾರ್ಡ್ ಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಅನುಷ್ಠಾನಗೊಳಿಸಿ ಬಳಿಕ ಪೂರ್ವ ವಲಯದ 44 ವಾರ್ಡ್ ಗಳ ಪೈಕಿ 42 ವಾರ್ಡ್ ಗಳಲ್ಲಿ “ಇ-ಆಸ್ತಿ” ಯೋಜನೆ ಜಾರಿಗೆ ತರಲಾಗಿದೆ. ಪೂರ್ವ ವಲಯದಲ್ಲಿನ ನಾಗವಾರ ಮತ್ತು ಎಚ್.ಬಿ.ಆರ್.ಬಡಾವಣೆಯಲ್ಲಿ ಗ್ರಾಮ ಪಂಚಾಯಿತಿ, ಪುರಸಭೆಗಳಿಂದ ಸೇರ್ಪಡೆಯಾದ ಭಾಗಗಳು ಹೆಚ್ಚಿರುವುದರಿಂದ ಪಿಐಡಿ ಸಂಖ್ಯೆಗಳನ್ನು ಇಲ್ಲಿನ ಹೆಚ್ಚಿನ ಆಸ್ತಿಗಳಿಗೆ ವಿತರಿಸದ ಕಾರಣ ಒಂದೊಂದು ಆಸ್ತಿಗಳ ಖಾತೆಗಳ ದಾಖಲೀಕರಣ ಒಂದೊಂದು ರೀತಿಯಲ್ಲಿದೆ.
ಹೊಸ ವಲಯಗಳಲ್ಲಿ ಇ-ಆಸ್ತಿ ನೋಂದಣಿ ವ್ಯವಸ್ಥೆ ಜಾರಿ ಸದ್ಯಕ್ಕಿಲ್ಲ :
ಹೀಗಾಗಿ ಈ ಎರಡು ವಾರ್ಡ್ ಗಳಲ್ಲಿ ಇ-ಆಸ್ತಿ ತಂತ್ರಾಂಶ ಜಾರಿಗೊಳಿಸಲು ಸೂಕ್ತ ಮಾರ್ಗಸೂಚಿಗಳನ್ನು ನಿಗಧಿಪಡಿಸಲು ಭೂದಾಖಲೆಗಳ ಕಂದಾಯ ವ್ಯವಸ್ಥೆ ಮತ್ತು ಭೂ ಮಾಪನ ಇಲಾಖೆ ಆಯುಕ್ತರು ಹಾಗೂ ನಗರ ಆಸ್ತಿಹಕ್ಕು ನೋಂದಣಿ ಯೋಜನೆ ನಿರ್ದೇಶಕ ಮನೀಷ್ ಮೌದ್ಗಿಲ್ ನೇತೃತ್ವದಲ್ಲಿ ರಾಜ್ಯದ ಕಂದಾಯ ಇಲಾಖೆ ಅಧಿಕಾರಿಗಳ ತಂಡವನ್ನು ರಚಿಸಿದೆ. ಈ ಕುರಿತಂತೆ ಏಪ್ರಿಲ್ 30ರಂದು ಕಂದಾಯ ಇಲಾಖೆಯು, ಅಧಿಕಾರಿಗಳ ತಂಡ ರಚನೆ ಸಂಬಂಧ ಅಧಿಸೂಚನೆ ಹೊರಡಿಸಿತ್ತು.
ಈ ತಂಡವು ಈಗಾಗಲೇ ನಾಗಾವರ ಮತ್ತು ಎಚ್ ಬಿಆರ್ ಲೇಔಟ್ ವಾರ್ಡ್ ನಲ್ಲಿ ಈ ಹಿಂದೆ ಪಂಚಾಯಿತಿ, ಗ್ರಾಮಠಾಣಾ, ಪುರಸಭೆಗಳಲ್ಲಿ ಆಸ್ತಿ ಖಾತೆ ನಮೂದು ಮಾಡುತ್ತಿದ್ದ ದಾಖಲೆಗಳನ್ನು ಹಾಗೂ ಆನಂತರ ಬಿಬಿಎಂಪಿಗೆ ಸೇರ್ಪಡೆಯಾದ ಮೇಲೆ ಖಾತೆ ಸಂಬಂಧಿಸಿದ ದಾಖಲೆಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಧ್ಯಯನ ಕೈಗೊಳ್ಳುತ್ತಿದೆ. ಈ ಆಧಾರದ ಮೇಲೆ ನಿಗಧಿಪಡಿಸುವ ಮಾರ್ಗಸೂಚಿಗಳನ್ನು ನಾಗಾವರ ಮತ್ತು ಎಚ್ ಬಿಆರ್ ವಾರ್ಡ್ ನಲ್ಲಿ ಪ್ರಾಯೋಗಿಕವಾಗಿ ಮೊದಲಿಗೆ ಜಾರಿಗೆಗೊಳಿಸಿ, ಆನಂತರ ಬೆಂಗಳೂರಿನ ಹೊಸ ವಲಯಗಳಲ್ಲಿನ 98 ವಾರ್ಡ್ ಗಳಲ್ಲಿ ಇ- ಆಸ್ತಿ ತಂತ್ರಾಂಶ ಅನುಷ್ಠಾನ ಮಾಡುವ ಮೂಲಕ ಕಂದಾಯ ಖಾತಾ ನೋಂದಾವಣಿ, ಖಾತಾ ವರ್ಗಾವಣೆ, ವಿಭಜನೆ, ಒಂದುಗೂಡಿಸುವಿಕೆ ಮತ್ತಿತರ ಸೇವೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಇ-ಆಸ್ತಿ ತಂತ್ರಾಂಶ ಬೆಂಗಳೂರಿನ ಎಲ್ಲಾ ವಾರ್ಡ್ ಗಳಿಗೆ ಅನುಷ್ಠಾನ ಮಾಡಲು ಡಿಸೆಂಬರ್ ಆಗಬಹುದು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಇ-ಆಸ್ತಿ ಸೇವೆ ನಗರದಾದ್ಯಂತ ಅನುಷ್ಠಾನಗೊಳ್ಳಲು ಸಾಕಷ್ಟು ಅಡೆತಡೆಗಳಿದ್ದು, ಇವುಗಳನ್ನು ಮೆಟ್ಟಿನಿಲ್ಲುವ ಸವಾಲು ಬಿಬಿಎಂಪಿ ಅಧಿಕಾರಿಗಳ ಮೇಲಿದೆ.
ಬೆಂಗಳೂರು ಒನ್ ಕೇಂದ್ರದಲ್ಲಿ ಇ-ಆಸ್ತಿ ನೋಂದಣಿ ಸೇವೆ :
“ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಆಸ್ತಿ ಕಂದಾಯ ಸೇವೆ ಪಡೆಯಲು ಇ-ಆಸ್ತಿ ನೋಂದಣಿಗೆ ಅಗತ್ಯ ದಾಖಲೆಗಳನ್ನು ನಾಗರೀಕರೇ ಸ್ವತಃ ಇ-ಆಸ್ತಿ ತಂತ್ರಾಂಶದಲ್ಲಿ ಅಪಲೋಡ್ ಮಾಡುವ ಅವಕಾಶವನ್ನು ಕೆಲವೇ ದಿನಗಳಲ್ಲಿ ಪ್ರಾರಂಭಿಸಲಿದ್ದೇವೆ. ಆನ್ ಲೈನ್ ನಲ್ಲಿ ಇ-ಆಸ್ತಿ ಅರ್ಜಿ ವಿವರಗಳನ್ನು ತುಂಬಿ ಹಾಗೂ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪಲೋಡ್ ಮಾಡಲು ಬೆಂಗಳೂರು ಒನ್ ಕೇಂದ್ರದಲ್ಲೂ ಅವಕಾಶ ಕಲ್ಪಿಸಲಾಗುತ್ತಿದೆ. ಆ ಸಂಸ್ಥೆಯೊಂದಿಗೆ ಪ್ರತಿ ಅರ್ಜಿಗೂ ಇಂತಿಷ್ಟು ಶುಲ್ಕ ನಿಗಧಿ ಮಾಡುವ ಬಗ್ಗೆ ಪಾಲಿಕೆಯು ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಬಿಬಿಎಂಪಿ- ಬೆಂಗಳೂರು ಒನ್ ನಲ್ಲಿ ಸೇವೆ ನೀಡುವ ಸಂಬಂಧ ಪರಸ್ಪರ ಒಪ್ಪಂದ ಮಾಡಿಕೊಳ್ಳಲಿವೆ. ಇ-ಆಸ್ತಿ ಯೋಜನೆ ಯಶಸ್ವಿ ಜಾರಿಗಾಗಿ ವಿವಿಧ ಹಂತದ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಇ-ಆಸ್ತಿ ಸಾಫ್ಟ್ ವೇರ್ ಉತ್ತಮ ಕಾರ್ಯನಿರ್ವಹಣೆಗೆ ಹಾರ್ಡ್ ವೇರ್ ಕಾರ್ಯವೈಖರಿಯನ್ನು ಸುಧಾರಿಸಲಾಗಿದೆ.”
– ದೀಪಕ್, ವಿಶೇಷ ಆಯುಕ್ತರು (ಕಂದಾಯ), ಬಿಬಿಎಂಪಿ
ನಾಗರೀಕರಿಗೆ ಇ-ಆಸ್ತಿ ಆನ್ ಲೈನ್ ನೋಂದಣಿಗೆ ಮೊದಲು ಅವಕಾಶ ಕಲ್ಪಿಸಿ :
“ಯೋಜನೆಯ ಹೆಸರಿನಲ್ಲಿ ನಲ್ಲೇ ಇ- ಅಂದರೆ ಎಲೆಕ್ಟ್ರಾನಿಕ್ ಎಂಬುದಿದೆ. ಹಾಗಿದ್ದಾಗ ಬಿಬಿಎಂಪಿಯು ಇ-ಆಸ್ತಿ ಯೋಜನೆ ಜಾರಿಗೆ ತಂದು ಪೂರ್ವ ವಲಯದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗೆ ಸಾರ್ವಜನಿಕರು ತೆರಳಿ ಇ-ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದಿರಿಂದ ಮತ್ತೆ ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸದಂತಾಗಿದೆ. ಅದರ ಬದಲು ಮೊದಲಿಗೆ ಆನ್ ಲೈನ್ ಮೂಲಕ ನಾಗರೀಕರು ಸ್ವಯಂಪ್ರೇರಿತವಾಗಿ ಇ-ಆಸ್ತಿಗೆ ತಮ್ಮ ದಾಖಲೆಗಳನ್ನು ಅವಪಲೋಡ್ ಮಾಡುವ ವ್ಯವಸ್ಥೆ ಜಾರಿಗೆ ತರಬೇಕಿತ್ತು. ಇದೇ ಸಂದರ್ಭದಲ್ಲಿ ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಆ ಕೆಲಸ ಆಗದ ಕಾರಣ ಕೇವಲ 8 ಸಾವಿರ ಆಸ್ತಿಗಳಿಗೆ ಈತನಕ ಇ-ಆಸ್ತಿ ನೋಂದಣಿ ಮಾಡಲು ಸಾಧ್ಯವಾಗಿದೆ. ಪಾಲಿಕೆ, ರಾಜ್ಯ ಸರ್ಕಾರದ ಪೋರ್ಟಲ್ ಗಳೆಲ್ಲ ಸರಿಯಾಗಿ ಕೆಲಸ ಮಾಡದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆ ಪಟ್ಟಿಗೆ ಈ ತಂತ್ರಾಂಶವು ಸೇರಿದಿದ್ದರೆ ಸಾಕು.”
– ಕೆ.ಮಥಾಯ್, ವಿಭಾಗೀಯ ಮುಖ್ಯಸ್ಥರು, ಆಮ್ ಆದ್ಮಿ ಪಕ್ಷ