ಬೆಂಗಳೂರು, (www.bengaluruwire.com) : ರಾಜ್ಯದ ಗ್ರಾಮಿಣ ಭಾಗ ಹಾಗೂ ಹಳ್ಳಿಗಳಲ್ಲಿರುವ ನಿರುದ್ಯೋಗಿ ಯುವಕ- ಯುವತಿಯರಿಗೆ ಸಂತಸದ ವಿಷಯ. ನಿಮ್ಮ ಊರಿನಲ್ಲಿದ್ದುಕೊಂಡೇ ನಿಮ್ಮಮನೆ ಬಾಗಿಲಿಗೇ ಕೌಶಲ್ಯ ತರಬೇತಿ ಪಡೆಯುವ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸುತ್ತಿದೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಅತ್ಯಾಧುನಿಕ ಹೈಟೆಕ್ ವಾಹನದ ಮೂಲಕ “ಸ್ಕಿಲ್ ಆನ್ ವ್ಹೀಲ್ (ಮೊಬೈಲ್ ತರಬೇತಿ ವಾಹನ)” ಯೋಜನೆಯ ಮೂಲಕ ಹಳ್ಳಿಯ ನಿರುದ್ಯೋಗ ಯುವ ಜನತೆಗೆ ಎರಡು ರೀತಿಯ ಉಚಿತ ಕೌಶಲ್ಯ ತರಬೇತಿ ನೀಡಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಏ.22ರ ಶುಕ್ರವಾರ ಕಲ್ಬುರ್ಗಿಯಲ್ಲಿ ಅಧಿಕೃತವಾಗಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಎಂಟನೇ ತರಗತಿ ಓದಿದ 18-35 ವಯೋಮಾನದವರು ಅರ್ಹರು :
ಕೋವಿಡ್-19 ಸಾಂಕ್ರಾಮಿಕ ರೋಗದ ದುಷ್ಪರಿಣಾಮದಿಂದಾಗಿ ಲಾಕ್ ಡೌನ್, ಆರ್ಥಿಕ ನಷ್ಟದಿಂದಾಗಿ ಗ್ರಾಮೀಣ ಭಾಗದ ಅನೇಕ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಉದ್ಯಮ ಸಂಬಂಧಿತ ಕೌಶಲ್ಯ ತರಬೇತಿಯನ್ನು ನೀಡಲು ಹಾಗೂ ಉತ್ತಮ ಜೀವನೋಪಾಯವನ್ನು ಒದಗಿಸಲು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಮೊಬೈಲ್ ತರಬೇತಿ ವಾಹನದ ಮೂಲಕ ಖುದ್ದಾಗಿ ತೆರಳಿ ಅಲ್ಲಿರುವ 18ರಿಂದ 35ರ ವಯೋಮಾನದ ಹಾಗೂ 8ನೇ ತರಗತಿ ಓದಿದ ನಿರುದ್ಯೋಗಿಗಳನ್ನು ಪ್ರೋತ್ಸಾಹಿಸಿ ತರಬೇತಿ ನೀಡಲಾಗುತ್ತದೆ.
ಪ್ರತಿ ಕೋರ್ಸ್ ಅವಧಿ 208 ಗಂಟೆ :
ಪುರುಷರಿಗೆ ‘ಎಲೆಕ್ಟ್ರಿಕಲ್ ಟೆಕ್ನೀಷಿಯನ್ ’ (Eletrical Technician) ಹಾಗೂ ಮಹಿಳೆಯರಿಗೆ ‘ಸಹಾಯಕ ಸೌಂದರ್ಯ ಚಿಕಿತ್ಸಕಿ’ (Assistant Beauty Therapist) ತರಬೇತಿ ನೀಡಲಾಗುತ್ತದೆ. ಎರಡೂ ತರಬೇತಿಗಳ ಅವಧಿ ಪ್ರತ್ಯೇಕವಾಗಿ ಗರಿಷ್ಠ 208 ಗಂಟೆಗಳಾಗಿದೆ. ಪ್ರತಿದಿನ ಗರಿಷ್ಠ 8 ಗಂಟೆಗಳ ಕಾಲ ಟ್ರೈನಿಂಗ್ ಇರಲಿದೆ. ಒಂದು ಕೌಶಲ್ಯ ರಥದಲ್ಲಿ ಒಂದು ಬ್ಯಾಚ್ ಗೆ 15 ಅಭ್ಯರ್ಥಿಗಳಿರುತ್ತಾರೆ. ವರ್ಷಕ್ಕೆ ಒಂದು ಕೋರ್ಸ್ ನಿಂದ ಒಂದು ಸ್ಕಿಲ್ ಆನ್ ವೀಲ್‌ನಿಂದ 180 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಕೌಶಲ್ಯಾಭಿವೃದ್ಧಿ ನಿಗಮ (KSDC) ಉದ್ದೇಶ ಹೊಂದಿದೆ. ಇದಕ್ಕಾಗಿ ಒಟ್ಟು 4 ಕೌಶಲ್ಯ ರಥಗಳನ್ನು ಕೆಎಸ್ ಡಿಸಿ ಸಿದ್ದಪಡಿಸಿದೆ.
ಗ್ರಾಮೀಣ ಯುವಕ- ಯುವತಿಯರಿಗಾಗಿ ಈ ಯೋಜನೆ :
ಮುಖ್ಯಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ (ಸಿಎಂಕೆಕೆವೈ) ಯಡಿ ಹಮ್ಮಿಕೊಳ್ಳುವ ವೃತ್ತಿಪರ ತರಬೇತಿಯು ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತದೆಯೇ ಹೊರತು ಗ್ರಾಮ ಮಟ್ಟದಲ್ಲಾಗಲಿ ನಡೆಯುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ತಮ್ಮ ಹೊಲ-ಗದ್ದೆಗಳನ್ನು ಬಿಟ್ಟು ಬಾರದೆ ಅದೆಷ್ಟೋ ಯುವಕರು ಅಥವಾ ಮನೆಯಿಂದ ಹೊರಗೆ ಬರಲಾಗದ ಅದೆಷ್ಟೋ ಯುವತಿಯರನ್ನು ಕೇಂದ್ರಿಕರಿಸಿಕೊಂಡು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಿ “ಸ್ಕಿಲ್ ಆನ್ ವ್ಹೀಲ್ (ಮೊಬೈಲ್ ತರಬೇತಿ ವಾಹನ)” ಕಾರ್ಯಕ್ರಮದ ಮೂಲಕ ತರಬೇತಿ ನೀಡಲಿದೆ.
ಪ್ರಾಯೋಗಿಕವಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಮೊದಲ ಹಂತವಾಗಿ ಮೈಸೂರು ವಿಭಾಗದ ಮೈಸೂರು ಮತ್ತು ಚಾಮರಾಜನಗರ, ಬೆಳಗಾವಿ ವಿಭಾಗದ ಕಾರವಾರ (ಉತ್ತರ ಕನ್ನಡ) ಮತ್ತು ಬಾಗಲಕೋಟೆ ಹಾಗೂ ಎರಡನೇ ಹಂತದಲ್ಲಿ ಬೆಂಗಳೂರು ವಿಭಾಗದ ರಾಮನಗರ ಮತ್ತು ಶಿವಮೊಗ್ಗ, ಕಲಬುರ್ಗಿ ವಿಭಾಗದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ.
ತರಬೇತಿಗೆ ಅಗತ್ಯ ಸಲಕರಣೆಯೊಂದಿಗೆ ಅತ್ಯಾಧುನಿಕವಾಗಿ ಸಿದ್ದವಾದ ಕೌಶಲ್ಯ ರಥ :
ಸ್ಕಿಲ್ ಆನ್ ವ್ಹೀಲ್ಸ್ ಒಂದು ಸುಸಜ್ಜಿತ ಮೊಬೈಲ್ ತರಬೇತಿ ವಾಹನ ಕೇಂದ್ರವಾಗಿದ್ದು, ಪ್ರಾಯೋಗಿಕವಾಗಿ ಹಾಗೂ ಸೈದ್ಧಾಂತಿಕವಾಗಿ ತರಬೇತಿ ನಡೆಸಲು ಬೇಕಾದ ಎಲ್ಲಾ ಅಗತ್ಯ ಪರಿಕರಗಳನ್ನು ಆ ಸುಸಜ್ಜಿತ ಮೊಬೈಲ್ ಬಸ್ ಹೊಂದಿರುತ್ತದೆ. ಉನ್ನತ ಬೋಧಕರು, ವಾಹನಗಳ ಮೂಲಕ ಗ್ರಾಮಗಳಿಗೆ ತೆರಳಿ ಅರ್ಹ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿಯನ್ನು ನೀಡುತ್ತಾರೆ.
ಈ ಎರಡು ಕೋರ್ಸ್ ನಡೆಸಲು ವ್ಯಾಪಕ ಬೇಡಿಕೆ :
‘ಸ್ಕಿಲ್ ಆನ್ ವೀಲ್ ಯೋಜನೆಯಡಿ ತರಬೇತಿ ನೀಡುವುದಕ್ಕೂ ಮೊದಲು ಸರ್ಕಾರದ ವತಿಯಿಂದ ರಾಜ್ಯದ ಯುವಕ- ಯುವತಿಯರಿಗೆ ಯಾವ ತರಬೇತಿಯನ್ನು ನೀಡಬೇಕು ಎಂಬ ಸಮೀಕ್ಷೆ ನಡೆಸಿದಾಗ ಪುರುಷರು ಸಾಮಾನ್ಯ ಎಲೆಕ್ಟ್ರಿಷಿಯನ್ ಹಾಗೂ ಮಹಿಳೆಯರಲ್ಲಿ ಸೌಂದರ್ಯಕ್ಕೆ ಸಂಬಂಧಪಟ್ಟ ತರಬೇತಿಗೆ ಬೇಡಿಕೆಯಿರುವುದು ತಿಳಿದುಬಂತು. ಹೀಗಾಗಿ ಈ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಅವರು ಉದ್ಯೋಗ ಕೈಗೊಳ್ಳುವಂತೆ ಸಶಕ್ತರಾಗಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ’ ಎಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಯುವಕ/ಯುವತಿಯರು ಯಾವುದೇ ಪೂರ್ವ ತಾಂತ್ರಿಕ ಜ್ಞಾನವಿಲ್ಲದೆಯೂ ಈ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಉದ್ಯಮಿಗಳಾಗಬಹುದು ಎಂಬ ತಾತ್ವಿಕ ನಿಲುವಿನಡಿ ತರಬೇತಿ ನೀಡಲು ತೀರ್ಮಾನಿಸಲಾಗಿದೆ.
ತರಬೇತಿ ಪೂರ್ಣವಾದ ಬಳಿಕ ಪ್ರಮಾಣಪತ್ರ ವಿತರಣೆ
‘ಕೇಂದ್ರ ಸರ್ಕಾರದ ಸಂಕಲ್ಪ ಕಾರ್ಯಕ್ರಮದ ಅಡಿಯಲ್ಲಿ ಸ್ಕಿಲ್ ಆನ್ ವೀಲ್ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಒಟ್ಟಾರೆ 208 ಗಂಟೆಗಳ ತರಬೇತಿ ಅವಧಿಯಲ್ಲಿ ಪ್ರತಿ ಗಂಟೆ ತರಬೇತಿಗೆ 42 ರೂ. ಪ್ರತಿ ಅಭ್ಯರ್ಥಿಗೆ ವೆಚ್ಚವಾಗಲಿದೆ. ಸಾಮಾನ್ಯ ಎಲೆಕ್ಟ್ರಿಷಿಯನ್ ಹಾಗೂ ಸಹಾಯಕ ಸೌಂದರ್ಯ ಚಿಕಿತ್ಸಕರು ಕೋರ್ಸ್ ತರಬೇತಿಗೆಂದು ಎರಡು ಸಂಸ್ಥೆಗಳ ಜೊತೆ ಕೌಶಲ್ಯಾಭಿವೃದ್ಧಿ ನಿಗಮ ಒಪ್ಪಂದ ಮಾಡಿಕೊಂಡಿದೆ. ತರಬೇತಿ ಮುಕ್ತಾಯದ ಬಳಿಕ ಯುವಕ ಯುವತಿಯರು ಆ ಕೋರ್ಸಿನಲ್ಲಿ ಏನು ಕಲಿತ್ತಾರೆಂದು ಪರಿಶೀಲಿಸಿ ಅವರಿಗೆ ಪ್ರಮಾಣಪತ್ರ ನೀಡಲಾಗುವುದು’ ಎಂದು ಹೇಳುತ್ತಾರೆ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶ್ವಿನ್ ಗೌಡ ತಿಳಿಸಿದ್ದಾರೆ.
1) ‘ಎಲೆಕ್ಟ್ರಿಕಲ್ ಟೆಕ್ನೀಷಿಯನ್ ’ (Eletrical Technician) ಈ ಕೆಳಕಂಡ ಅಂಶಗಳಡಿ ತರಬೇತಿ ನೀಡಲಾಗುತ್ತದೆ :
• ಮನೆಗಳಲ್ಲಿ ವಿದ್ಯುತ್ ಪೀಠೋಪಕರಣಗಳನ್ನು ರಿಪೇರಿ ಮಾಡುವುದು
• ಕೃಷಿ ಪಂಪ್‌ಸೆಟ್‌ಗಳನ್ನು ರಿಪೇರಿ ಮಾಡುವುದು
• ಸಣ್ಣ ವಿದ್ಯುತ್ ಕೆಲಸಗಳನ್ನು ನಿರ್ವಹಿಸಬಹುದು
• ದೈನಂದಿನ ಬಳಕೆಯ ಸಾಧನಗಳನ್ನು ಸರಿಪಡಿಸಬಹುದು
• ದೋಷಯುಕ್ತ ಬಲ್ಬ್ ಗಳು, ಟ್ಯೂಬ್ ಲೈಟ್, ಎಲ್‌ಇಡಿ ಬಲ್ಬ್ ಗಳು , ಸ್ವಿಚ್‌ಗಳು ಮತ್ತು ಸರ್ಕ್ಯೂಟ್ ಬ್ರೇಕರ್‌ಗಳನ್ನು ಸೂಕ್ತ ರೇಟಿಂಗ್‌ಗಳೊಂದಿಗೆ ಬದಲಾಯಿಸಬಹುದು.
• ಐರನ್ ಬಾಕ್ಸ್, ಮಿಕ್ಸರ್, ಫ್ಯಾನ್, ಗ್ಯಾಸ್ ಸ್ಟೌವ್‌ಗಳಂತಹ ಸಲಕರಣೆಗಳನ್ನು ರಿಪೇರಿ ಮಾಡಬಹುದು.
• ತಜ್ಞರ ಮೇಲ್ವಿಚಾರಣೆಯಲ್ಲಿ ಅಥವಾ ಅವರ ಮಾರ್ಗದರ್ಶನದಲ್ಲಿ ಹೊಸ ವಿದ್ಯುತ್ ಸ್ಥಾಪನೆಯನ್ನು ನಿರ್ವಹಿಸುವುದು.
2) ಬ್ಯೂಟಿ ಅಂಡ್ ವೆಲ್‌ನೆಸ್ ಥೆರಪಿಸ್ಟ್ (Beauty And Wellness Therapist) ಈ ಕೆಳಕಂಡ ಅಂಶಗಳಡಿ ತರಬೇತಿ ನೀಡಲಾಗುತ್ತದೆ :
• ಚರ್ಮದ ಆರೈಕೆ, ಮೆನಿಕ್ಯೂರ್, ಪೆಡಿಕ್ಯೂರ್, ಕೇಶಲಂಕಾರಗಳಂತಹ ಸೇವೆಗಳನ್ನು ಒದಗಿಸುವುದು.
• ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಐಬ್ರೋ, ಫೇಶಿಯಲ್, ಬ್ಲೀಚ್, ವ್ಯಾಕ್ಸಿಂಗ್ ಸೇವೆಗಳನ್ನು ಕಲಿಸಿಕೊಡಲಾಗುವುದು.
• ತಲೆ ಕೂದಲಿಗೆ ಮೆಹಂದಿ ಹಚ್ಚುವುದು ಇತ್ಯಾದಿ.
ಈ ಎಲ್ಲಾ ಸೇವೆಗಳನ್ನು ನುರಿತ ತಂತ್ರಜ್ಞರಿಂದ ತರಬೇತಿಯನ್ನು ಪ್ರಾರಂಭಿಸಿ ಯುವಜನರನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡುವ ಗುರಿ ಹೊಂದಿದ್ದು, ಇದರೊಂದಿಗೆ ಯುವಕ/ಯುವತಿಯರು ತಮ್ಮ ಜೀವನೋಪಾಯವನ್ನು ಗಳಿಸುವಂತೆ ಮಾಡುವಲ್ಲಿ “ಸ್ಕಿಲ್ ಆನ್ ವ್ಹೀಲ್ (ಮೊಬೈಲ್ ತರಬೇತಿ ವಾಹನ)” ತರಬೇತಿಯು ಸಹಕಾರಿಯಾಗುತ್ತಿದೆ. ಹೆಚ್ಚಿನ ಮಾಹಿತಿಗೆ : https://skillconnect.kaushalkar.com/ ಸಂಪರ್ಕಿಸಬಹುದಾಗಿದೆ.
ತರಬೇತಿಗಾಗಿ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಹೀಗೆ ನಡೆಯುತ್ತೆ :
- ಗ್ರಾಮ ಮಟ್ಟ, ಪಂಚಾಯತ್ ಮಟ್ಟ ಹಾಗೂ ತಾಲ್ಲೂಕು ಮಟ್ಟದಿಂದ ಅಭ್ಯರ್ಥಿಗಳನ್ನು ನೋಂದಾಯಿಸಿಕೊಳ್ಳುವುದು.
- ಅವನು/ಅವಳು ಸರಿಯಾದ ಅಭ್ಯರ್ಥಿಯೇ ಎಂದು ಪರಿಶೀಲಿಸುವುದು.
- ತರಬೇತಿ ಕಾರ್ಯಕ್ರಮದ ಸಂಕ್ಷಿಪ್ತ ಪರಿಚಯ ನೀಡುವುದು.
- ತರಬೇತಿ ನಂತರದ ಪ್ರಯೋಜನಗಳ ಕುರಿತು ವಿವರಿಸುವುದು.
- ತರಬೇತಿಯನ್ನು ಇಚ್ಛಿಸುವ ಅಭ್ಯರ್ಥಿಗಳಿಗೆ ಪ್ರವೇಶಾತಿ ಪರೀಕ್ಷೆ ಏರ್ಪಡಿಸುವುದು.
- ಮುಕ್ತ ಪ್ರಶ್ನೆಗಳನ್ನು ಕೇಳುವುದರ ಮೂಲಕ ಸಂದರ್ಶನ ನಡೆಸುವುದು.
- ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ಅಭ್ಯರ್ಥಿಯನ್ನು ನೋಂದಾಯಿಸಿಕೊಳ್ಳುವುದು.