ನವದೆಹಲಿ, (www.bengaluruwire.com) : ಬೌದ್ಧಿಕ ಆಸ್ತಿ ಹಕ್ಕು (ಐಪಿ- Intellectual Property) ವಿಚಾರದಲ್ಲಿ ಭಾರತವು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಕಳೆದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಜನವರಿ-ಮಾರ್ಚ್ 2022ರ ತ್ರೈಮಾಸಿಕದಲ್ಲಿ ಭಾರತೀಯ ಪೇಟೆಂಟ್ ಕಚೇರಿಯಲ್ಲಿ ದೇಶೀಯ ಪೇಟೆಂಟ್ ಸಲ್ಲಿಕೆಯ ಸಂಖ್ಯೆಯು ಅಂತರರಾಷ್ಟ್ರೀಯ ಪೇಟೆಂಟ್ ಸಲ್ಲಿಕೆಯ ಸಂಖ್ಯೆಯನ್ನು ಮೀರಿಸಿದೆ.
ಅಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವರ್ಷದ ಜನವರಿಯಿಂದ ಮಾರ್ಚ್ ತನಕ ಸಲ್ಲಿಕೆಯಾದ ಒಟ್ಟು 19,796 ಪೇಟೆಂಟ್ ಅರ್ಜಿಗಳಲ್ಲಿ, ಭಾರತೀಯ ಅರ್ಜಿದಾರರ ಸಂಖ್ಯೆಯೇ 10,706 ಆಗಿದೆ. 9,090 ಅರ್ಜಿಗಳನ್ನು ವಿದೇಶಿಗರು ಸಲ್ಲಿಸಿದ್ದಾರೆ.
ನಾವಿನ್ಯತೆ, ಆವಿಷ್ಕಾರಗಳನ್ನು ಉತ್ತೇಜಿಸಿ ಕಾರ್ಯಾನುಷ್ಠಾನದ ಹೊರೆಯನ್ನು ಕಡಿಮೆ ಮಾಡುವ ಮೂಲಕ ಭಾರತದಲ್ಲಿ ʻಐಪಿಆರ್ʼ (IPR) ಆಡಳಿತವನ್ನು ಬಲಪಡಿಸಲು ಕೈಗಾರಿಕೆ ಹಾಗು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ – DPIIT) ನಿರಂತರ ಪ್ರಯತ್ನಗಳನ್ನು ಮಾಡಿದೆ. ʻಡಿಪಿಐಐಟಿʼ ಮತ್ತು ʻಐಪಿʼ ಕಚೇರಿಯ ಸಂಘಟಿತ ಪ್ರಯತ್ನವು ಸಮಾಜದ ಎಲ್ಲಾ ಸ್ತರಗಳಲ್ಲಿ ʻಐಪಿʼ ಜಾಗೃತಿಯನ್ನು ಹೆಚ್ಚಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರ, ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಅವರು ಶ್ಲಾಘಿಸಿದ್ದಾರೆ.
ಈ ಪ್ರಯತ್ನಗಳು ಒಂದು ಕಡೆ ಪೇಟೆಂಟ್ ಅರ್ಜಿ ಸಲ್ಲಿಕೆಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ʻಐಪಿʼ ಕಚೇರಿಗಳಲ್ಲಿ ಪೇಟೆಂಟ್ ಅರ್ಜಿಗಳ ಬಾಕಿಯನ್ನು ಕಡಿಮೆ ಮಾಡಿದೆ. ಈ ಪ್ರಯತ್ನವು ʻಜಾಗತಿಕ ನಾವಿನ್ಯತೆ ಸೂಚ್ಯಂಕʼದ ಅಗ್ರ 25 ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ದೇಶದ ಮಹತ್ವಾಕಾಂಕ್ಷೆಯ ಗುರಿಯತ್ತ ಒಂದು ಹೆಜ್ಜೆ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಉಲ್ಲೇಖಿಸಿದರು.
ಭಾರತದ ಬೌದ್ಧಿಕ ಆಸ್ತಿ ಹಕ್ಕು ಆಡಳಿತವನ್ನು ಪುಷ್ಟೀಕರಿಸಲು ಕಳೆದ ಹಲವು ವರ್ಷಗಳಲ್ಲಿ ಸರಕಾರವು ಕೆಲವು ಪ್ರಮುಖ ಕಾರ್ಯಗಳನ್ನು ಕೈಗೊಂಡಿದೆ. ಇವುಗಳಲ್ಲಿ ಆನ್‌ಲೈನ್ ಫೈಲಿಂಗ್ ಮೇಲೆ ಶೇ.10ರಷ್ಟು ರಿಯಾಯಿತಿ, ನವೋದ್ಯಮಗಳು, ಸಣ್ಣ ಘಟಕಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.80ರಷ್ಟು ಶುಲ್ಕ ರಿಯಾಯಿತಿ, ನವೋದ್ಯಮಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (MSME) ಗಳ ಜೊತೆಗೆ ಇತರ ವಿಭಾಗಗಳಿಗೆ ತ್ವರಿತ ಪರೀಕ್ಷೆಯನ್ನು ನಡೆಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.
ರಾಷ್ಟ್ರೀಯ ʻಐಪಿಆರ್ʼ ನೀತಿ ಮತ್ತು ಕೇಂದ್ರ ಸರ್ಕಾರ ಮಾಡಿದ ಪ್ರಯತ್ನಗಳಿಂದಾಗಿ ಈ ಕೆಳಗಿನ ಸಾಧನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ :
• ಪೇಟೆಂಟ್ ಸಲ್ಲಿಕೆಯು 2014-15 ರಲ್ಲಿ 42,763 ರಿಂದ 2021-22 ರಲ್ಲಿ 66,440 ಕ್ಕೆ ಏರಿದೆ. ಇದು 7 ವರ್ಷಗಳ ಅವಧಿಯಲ್ಲಿ 50% ರಷ್ಟು ಹೆಚ್ಚಾಗಿದೆ.
• 2014-15 (5,978)ಕ್ಕೆ ಹೋಲಿಸಿದರೆ 2021-22ರಲ್ಲಿ (30,074) ಪೇಟೆಂಟ್‌ಗಳ ಮಂಜೂರಾತಿಯಲ್ಲಿ ಸುಮಾರು ಐದು ಪಟ್ಟು ಹೆಚ್ಚಳವಾಗಿದೆ.
• ವಿವಿಧ ತಾಂತ್ರಿಕ ಕ್ಷೇತ್ರಗಳಿಗೆ ಪೇಟೆಂಟ್ ಪರೀಕ್ಷೆಯ ಸಮಯವನ್ನು ಡಿಸೆಂಬರ್ 2016ರಲ್ಲಿ 72 ತಿಂಗಳುಗಳಿಂದ ಪ್ರಸ್ತುತ 5 ರಿಂದ 23 ತಿಂಗಳಿಗೆ ತಗ್ಗಿಸಲಾಗಿದೆ.
• ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2015-16ರಲ್ಲಿ 81ನೇ ಸ್ಥಾನದಿಂದ 2021ರಲ್ಲಿ 46ನೇ ಸ್ಥಾನಕ್ಕೆ (+35 ಶ್ರೇಯಾಂಕಗಳು) ಏರಿದೆ.
ಬೌದ್ಧಿಕ ಆಸ್ತಿ ಹಕ್ಕು ಎಂದರೇನು?
ಬೌದ್ಧಿಕ ಆಸ್ತಿ (ಐಪಿ) ಎಂಬುದು ಮಾನವನ ಬುದ್ಧಿಶಕ್ತಿಯ ಅಮೂರ್ತ ಸೃಷ್ಟಿಯನ್ನು ಒಳಗೊಂಡಿರುವ ಆಸ್ತಿಯಾಗಿದೆ. ಇದು ವಿನ್ಯಾಸಗಳು ಮತ್ತು ಚಿಹ್ನೆಗಳು, ಆವಿಷ್ಕಾರ, ಸಾಹಿತ್ಯ ಮತ್ತು ಕಲಾತ್ಮಕ ಕೆಲಸ, ಹೆಸರುಗಳು ಮತ್ತು ಚಿತ್ರಗಳಂತಹ ಮನಸ್ಸಿನ ಸೃಷ್ಟಿಯನ್ನು ಸೂಚಿಸುತ್ತದೆ.
ಬೌದ್ಧಿಕ ಆಸ್ತಿ ಕಾನೂನಿನ ಉದ್ದೇಶವೇನು?
ವಿವಿಧ ರೀತಿಯ ಬೌದ್ಧಿಕ ಸರಕುಗಳ ರಚನೆಯನ್ನು ಉತ್ತೇಜಿಸುವುದು ಐಪಿ ಕಾನೂನಿನ ಉದ್ದೇಶವಾಗಿದೆ. ಜನರು ಆವಿಷ್ಕರಿಸಿದ ಅಥವಾ ರಚಿಸುವದರಿಂದ ಮಾನ್ಯತೆ ಮತ್ತು ಆರ್ಥಿಕ ಲಾಭಗಳನ್ನು ಗಳಿಸಲು ಇದು ಶಕ್ತಗೊಳಿಸುತ್ತದೆ. ಸೃಜನಶೀಲತೆ ಮತ್ತು ನಾವೀನ್ಯತೆ ಅಭಿವೃದ್ಧಿ ಹೊಂದುವಂತಹ ವಾತಾವರಣವನ್ನು ಬೆಳೆಸಲು ಇದು ಸಹಕರಿಸುತ್ತದೆ.
ಐಪಿಯಲ್ಲಿ ಎಷ್ಟು ರೀತಿಯ ವಿಧಗಳಿವೆ?
ಕೈಗಾರಿಕಾ ವಿನ್ಯಾಸಗಳು, ವ್ಯಾಪಾರ ರಹಸ್ಯಗಳು, ಕೃತಿಸ್ವಾಮ್ಯ, ಪೇಟೆಂಟ್, ಟ್ರೇಡ್‌ಮಾರ್ಕ್‌ಗಳು, ಭೌಗೋಳಿಕ ಸೂಚನೆಗಳು, ವಿವಿಧ ರೀತಿಯ ಬೌದ್ಧಿಕ ಆಸ್ತಿಗಳಾಗಿವೆ.