ಬೆಂಗಳೂರು, (www.bengaluruwire.com) : ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅಂಬಾವಿಲಾಸ ಅರಮನೆ ವಿಶ್ವದ ಟಾಪ್ 20 ಗೂಗಲ್ ನಕ್ಷೆಯ ಜನವರಿ 2022ರ ರಿವ್ಯೂನಲ್ಲಿ (Google Map Review) ಆಗ್ರಾದ ತಾಜ್ ಮಹಲ್ ಗಿಂತ ಹೆಚ್ಚಿನ ಪರಾಮರ್ಶನೆಗೆ ಒಳಪಟ್ಟ ತಾಣವಾಗಿ ಹೊರಹೊಮ್ಮಿದೆ.
ವಿಶ್ವ ವಿಖ್ಯಾತ ಮೈಸೂರಿನ ದಸರಾ, ಜಂಬೂ ಸವಾರಿ ಹಾಗೂ ಅಂಬಾ ವಿಲಾಸ ಅರಮನೆ ಸೇರಿದಂತೆ ಸಾಂಸ್ಕೃತಿಕ ರಾಜಧಾನಿಗೆ ಪ್ರತಿವರ್ಷ 6 ಲಕ್ಷ ಪ್ರವಾಸಿಗರು ಭೇಟಿಕೊಡುತ್ತಾರೆ.
ಇಂತಹ ನಗರಿಯ ಬಗ್ಗೆ ಗೂಗಲ್ ನಲ್ಲಿ ಅತಿಹೆಚ್ಚು ರಿವ್ಯೂ ಅಥವಾ ಪರಾಮರ್ಶನೆಗೆ ಒಳಪಟ್ಟ ತಾಣಗಳಲ್ಲಿ ಅಂಬಾ ವಿಲಾಸ ಅರಮನೆಗೆ 15ನೇ ಸ್ಥಾನ ಲಭಿಸಿದೆ. ಒಟ್ಟು 1.93 ಲಕ್ಷ ಮಂದಿ ಗೂಗಲ್ ರಿವ್ಯೂ ಮಾಡಿದ್ದರೆ, ಆಗ್ರಾದ ತಾಜ್ ಮಹಲ್ ಗೆ 1.87 ಲಕ್ಷ ಪರಾಮರ್ಶನೆಗೆ ಒಳಪಟ್ಟು 17ನೇ ಸ್ಥಾನ ಲಭಿಸಿದೆ. 3.31 ಲಕ್ಷ ಅತಿಹೆಚ್ಚು ಪರಾಮರ್ಶನೆ ಮೆಕ್ಕಾದ ಮಸೀದ್ ಅಲ್ ಹರಮ್ ಗೂಗಲ್ ರಿವ್ಯೂ ನಲ್ಲಿ ದೊರೆತಿದ್ದು ಮೊದಲ ಸ್ಥಾನ ಪಡೆದುಕೊಂಡಿದೆ.
“ಮೈಸೂರು, ಪ್ರವಾಸಿ ತಾಣವಾಗಿ ದೇಶ-ವಿದೇಶದಲ್ಲಿ ಹೆಸರುವಾಸಿಯಾಗಿದೆ. ಗೂಗಲ್ ನಲ್ಲಿ ಮೈಸೂರಿನ ಅಂಬಾವಿಲಾಸ ಅರಮನೆ ಅತಿಹೆಚ್ಚು ರಿವ್ಯೂಗೆ ಒಳಗಾದ ಅಗ್ರ 20ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಒಂದು ಉತ್ತಮ ಬೆಳವಣಿಗೆ. ವಿಶ್ವದ ಭೂಪಟದಲ್ಲಿ ಮೈಸೂರಿನ ಹೆಸರು ಮತ್ತಷ್ಟು ಪ್ರಖ್ಯಾತಗೊಳ್ಳಲು ಇಂತಹ ಬೆಳವಣಿಗೆಗಳು ಪ್ರಮುಖವಾಗಿವೆ.”
– ಡಾ.ಬಗಾದಿ ಗೌತಮ್, ಮೈಸೂರು ಜಿಲ್ಲಾಧಿಕಾರಿ
ಅಂಬಾವಿಲಾಸ ಅರಮನೆಯ ಇತಿಹಾಸ :
ಮೈಸೂರು ಅರಮನೆಯನ್ನು 14 ನೇ ಶತಮಾನದ ಆರಂಭದಲ್ಲಿ ಒಡೆಯರ್ ರಾಜಮನೆತನ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು. ಮೂಲ ಅರಮನೆಯನ್ನು ಮರದಿಂದ ನಿರ್ಮಿಸಲಾಗಿತ್ತು. ಒಮ್ಮೆ ಸಿಡಿಲು ಬಡಿದಾಗ(ಕ್ರಿ.ಶ. 1638 ರಲ್ಲಿ), ಮತ್ತೊಮ್ಮೆ ಟಿಪ್ಪು ಸುಲ್ತಾನ್ ದಾಳಿಯಿಂದ (ಕ್ರಿ.ಶ. 1739 ರಲ್ಲಿ) ಮತ್ತು ಕ್ರಿ.ಶ. 1897 ರಲ್ಲಿ ಬೆಂಕಿಯಿಂದ ಹೀಗೆ ಮೂರು ಬಾರಿ ನಾಶವಾಯಿತು.