ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ ಸಣ್ಣ ಎಡವಟ್ಟಿನಿಂದ ಶುದ್ಧವಾಗಿದ್ದ 27 ಎಕರೆಯ ಉಲ್ಲಾಳ ಕೆರೆ ಈಗ ಕೊಳಚೆ ನೀರಿನ ಕೊಂಪೆಯಾಗಿದೆ.
ನವಿಲು, ಕೊಕ್ಕರೆ, ನೀರು ಕೋಳಿ ವಿದೇಶಿ ತಳಿಯ ವಲಸೆ ಹಕ್ಕಿಗಳು ಸೇರಿದಂತೆ 25ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಹಾವು, ಮುಂಗುಸಿ, ಆಮೆ, ಮೊಲ ಹೀಗೆ ಹಲವು ವನ್ಯಪ್ರಾಣಿಗಳಿಗೆ ಇಲ್ಲಿ ಆಶ್ರಯ ಪಡೆದಿವೆ. ಕೊಳಚೆ ನೀರಿನಿಂದ ಕೆಲವು ಜೀವಜಂತುಗಳು ಮೃತಪಟ್ಟಿವೆ.
ಕೊಳಚೆ ನೀರಿನ ಸೇರ್ಪಡೆಯಿಂದ ಕೆರೆಯಲ್ಲಿ ಜೊಂಡು, ಕಳೆ ಬೆಳೆದು ಕೆರೆಯ ನೀರನ್ನು ಹಿಡಿದಿಡುವ ಸಾಮರ್ಥ್ಯ ದಿನೇ ದಿನೇ ಕಡಿಮೆಯಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಬದುಕಿರುವ ಕೆರೆಯನ್ನು ಸಾಯಿಸುತ್ತಿರುವುದಕ್ಕೆ ನಿರ್ಲಕ್ಯವೇ ಕಾರಣ ಎಂದು ಸ್ಥಳೀಯ ನಾಗರೀಕರು ಹಿಡಿಶಾಪ ಹಾಕುತ್ತಿದ್ದಾರೆ.
“ಕೆರೆಯ ವೆಟ್ ಲ್ಯಾಂಡ್ ನಿಂದ ಈ ಕೆರೆಗೆ ಸಂಪರ್ಕ ಕಲ್ಪಿಸುವ 6 ಕಾಂಕ್ರಿಟ್ ಚಾನಲ್ ಪೈಕಿ ಎರಡು ಚಾನಲ್ ಲಿಂಕ್ ಮಾತ್ರ ತೆರೆದಿದೆ. ಅದರಲ್ಲೂ ಒಂದು ಸಿಮೆಂಟ್ ಚಾನಲ್ ಬಂಡ್ ಅನ್ನು ಜೆಸಿಬಿಯಿಂದ ಹಾಳು ಮಾಡಲಾಗಿದೆ. ಹೀಗಾಗಿ ಉಲ್ಲಾಳ ಕೆರೆಗೆ ವೆಟ್ ಲ್ಯಾಂಡ್ ಗೆ ಹರಿದು ಬರುವ ಕೊಳಚೆ ನೀರು ನೇರವಾಗಿ ಕೆರೆಯ ಒಡಲು ಸೇರುತ್ತಿದೆ. 0.350 ಎಂಎಲ್ ಡಿ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್ ಟಿಪಿ)ದ ಕಟ್ಟಡ ಸ್ಥಾಪಿಸಿ ಎಸ್ ಟಿಪಿ ಯಂತ್ರ ಅಳವಡಿಸದ ಕಾರಣ ಕೆರೆಗೆ ಕೊಳಚೆ ನೀರು ಸೇರುತ್ತಿದೆ” ಎಂದು ಕೆರೆಗೆ ನಿತ್ಯ ವಾಯುವಿಹಾರಕ್ಕೆ ಬರುವ ಉಷಾ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಉಲ್ಲಾಳ ಕೆರೆಗೆ ದಿನನಿತ್ಯ ಬರುವ ನಡಿಗೆದಾರರು, ವ್ಯಾಯಾಮ ಮಾಡಲೆಂದು ಬರುವ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಯ ನಾಗರೀಕರು ಕೆರೆಯಲ್ಲಿ ನಿಂತ ಕೊಳಚೆ ನೀರಿನ ವಾಸನೆ, ಅದರಿಂದ ಉತ್ಪತ್ತಿಯಾಗುವ ಸೊಳ್ಳೆಕಾಟದಿಂದ ಬೇಸತ್ತಿದ್ದಾರೆ.
“27 ಎಕರೆಯ ವಿಶಾಲ ಕೆರೆಯಲ್ಲಿ ಈ ಬಾರಿ ಭಾರೀ ಮಳೆಯಿಂದಾಗಿ ಕೊಳಚೆ ನೀರಿನಿಂದ ಕೆರೆ ಕಾಲು ಭಾಗ ತುಂಬಿದೆ. ಕೆರೆಯ ದಕ್ಷಿಣ ಭಾಗದಲ್ಲಿನ ಕೆರೆದಂಡೆ ಕಡೆಯಿಂದ ಪಕ್ಕದ ಆರೂವರೆ ಎಕರೆ ಉಲ್ಲಾಳ ಉದ್ಯಾನವನಕ್ಕೆ ಕೆರೆಯ ಕೊಳಚೆ ನೀರು ಸೋರಿಕೆಯಾಗಿ ನಡಿಗೆದಾರರು ವಾಕಿಂಗ್ ಮಾಡಲು ಪರದಾಡುವಂತಾಗಿದೆ. ಮುಂದೆ ಈ ಟ್ಯಾಂಕ್ ಬಂಡ್ ಸೈಜುಗಲ್ಲುಗಳನ್ನು ಹಾಕಿ ಭದ್ರ ಪಡಿಸದಿದ್ದರೆ ಕೆರೆದಂಡೆ ಒಡೆದು ಕೆರೆ ಕೆಳಭಾಗದ ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಭಾರೀ ಹಾನಿಯಾಗುವ ಅಪಾಯವಿದೆ” ಎಂದು ವಾಸ್ತವ ಪರಿಸ್ಥಿತಿ ಬಗ್ಗೆ ತಿಳಿಸಿದ್ದಾರೆ ಪರಿಸರ ಪ್ರೇಮಿ ನಾಗೇಶ್.
ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ, ದೀಪದ ಸೌಕರ್ಯ, ಧ್ಯಾನ ಮಾಡಲು ಅನುವಾಗುವಂತೆ ಪರಗೋಲ ನಿರ್ಮಾಣ, ಶೌಚಾಲಯ, ಮಹಿಳೆಯರು, ಹಿರಿಯ ನಾಗರೀಕರು, ಮಕ್ಕಳ ಭದ್ರತೆಗಾಗಿ ಅತ್ಯಗತ್ಯವಾದ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸ್ಥಳೀಯರು ಹಲವು ಬಾರಿ ಪಾಲಿಕೆಗೆ ಮನವಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲ.
ಈ ಬಗ್ಗೆ 200 ಕೆರೆಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಾಲಿಕೆ ಕೆರೆ ವಿಭಾಗದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಕೆಲವು ಲಕ್ಷ ರೂ. ಗಳಷ್ಟೆ ಇದಕ್ಕೆ ಕರ್ಚು ಮಾಡಬೇಕಿದೆ. ಆದ್ದರಿಂದ ಉಲ್ಲಾಳ ಕೆರೆಯ ಶುದ್ಧೀಕರಣ ಕಾರ್ಯ ತ್ವರಿತವಾಗಬೇಕಿದೆ.