ಬೆಂಗಳೂರು, (www.bengaluruwire.com) : ಕನ್ನಡ ಚಿತ್ರರಂಗದ ಹಿರಿಯ ನಟ, ಹಿರಿಯ ಪೋಷಕ ಕಲಾವಿದ, ಶಿವರಾಂ ಮನೆಯಲ್ಲಿ ಅಯ್ಯಪ್ಪ ಸ್ವಾಮಿಪೂಜೆ ಮಾಡುವಾಗ ಆಯತಪ್ಪಿ ಬಿದ್ದು, ವಿದ್ಯಾಪೀಠದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಕೆಲವು ದಿನಗಳ ಹಿಂದೆ ಕಾರಿನಲ್ಲಿ ತೆರಳುತ್ತಿದ್ದಾಗ ತಲೆ ತಿರುಗಿ ಕಂಬವೊಂದಕ್ಕೆ ಕಾರು ಗುದ್ದಿ ಗಾಯಗೊಂಡು ನಟ ಶಿವರಾಮ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುರುವಾರ ದೇವರ ಮನೆಯಲ್ಲಿ ಬಿದ್ದ ಪರಿಣಾಮ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಶಿವರಾಂ ಅವರಿಗೆ ಚಿಕಿತ್ಸೆ ನೀಡುತ್ತಿರುವ ಪ್ರಶಾಂತ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ನಿರ್ಮಾಪಕ-ನಿರ್ದೇಶಕರಾಗಿದ್ದ ಶಿವರಾಮ್ ಬಹುಮುಖ ವ್ಯಕ್ತಿತ್ವದ ಕಲಾವಿದರು.
81 ವರ್ಷ ವಯಸ್ಸಾಗಿರುವುದರಿಂದ ಆಪರೇಷನ್ ಮಾಡುವುದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ವೈದ್ಯರಲ್ಲಿ ಮೂಡಿದೆ. ಇದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಶಿವರಾಮ್ ಅವರು ನಮ್ಮ ಕುಟುಂಬದ ಸ್ನೇಹಿತರು. ಅವರಿಗೆ ನಾನೇ ಸಾಕಷ್ಟು ವರ್ಷದಿಂದ ವೈದ್ಯರಾಗಿದ್ದೇನೆ. ಅವರನ್ನು ಈ ಸ್ಥಿತಿಯಲ್ಲಿ ಟ್ರೀಟ್ ಮಾಡೋದು ದುಖಃದ ಸಂಗತಿ. ಅಯ್ಯಪ್ಪ ಸ್ವಾಮಿ ಪೂಜೆ ಮಾಡುವಾಗ ಬಿದ್ದಿದ್ದಾರೆ. ಆಸ್ಪತ್ರೆಗೆ ಬರೋವಾಗ ಪ್ರಜ್ಞೆ ಇರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಎಸ್.ಎನ್ ಮೋಹನ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಸದ್ಯಕ್ಕೆ ಎನಾಗುತ್ತೋ ನೋಡಬೇಕು. ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೆವೆ. ಆಸ್ಪತ್ರೆಗೆ ಅವರನ್ನು ಅವರ ಸ್ನೇಹಿತರು ಕರೆತಂದರು. ಹಿಂದೆ ಅಪಘಾತವಾದಾಗ ಪಿಸಿಕಲಿ ಯಾವುದೇ ಡ್ಯಾಮೇಜ್ ಆಗಿರಲಿಲ್ಲ. ಅಂದು ನಡೆದೆ ಆಸ್ಪತ್ರೆಯ ಒಳಗೆ ಬಂದಿದ್ದರು. ಸದ್ಯ ಅವರ ಮೆದುಳಿನ ಊತ ಕಡಿಮೆ ಆಗಲು ಚಿಕಿತ್ಸೆ ನೀಡುತ್ತಿದ್ದೇವೆ. ಅವರ ಆರೋಗ್ಯದಲ್ಲಿ ಸುಧಾರಣೆ ಆಗಬೇಕು ಎಂದು ನಾವೆಲ್ಲ ಕಾಯುತ್ತಿದ್ದೇವೆ ಎಂದು ಡಾ.ಮೋಹನ್ ತಿಳಿಸಿದ್ದಾರೆ.
ವೈದ್ಯರ ನುರಿತ ತಂಡಗಳು ಶಿವರಾಂ ಅವರಿಗೆ ಚಿಕಿತ್ಸೆ ನೀಡುವಲ್ಲಿ ನಿರತವಾಗಿದೆ ಎಂದು ಶಿವರಾಂ ಪುತ್ರ ರವಿಶಂಕರ್ ನುಡಿದಿದ್ದಾರೆ.
ಸ್ಯಾಂಡಲ್ ವುಡ್ ಹಿರಿಯ ಕೊಂಡಿ :
ಚಿತ್ರರಂಗದ ಹಿರಿಯ ಕೊಂಡಿ ಎಂದೆ ಕರೆಯಿಸಿಕೊಂಡಿರುವ ಶಿವರಾಂ ಅವರ ಆರೋಗ್ಯ ಕ್ಷಣ ಕ್ಷಣಕ್ಕೂ ಹದಗೆಡುತ್ತಿದೆ. ಹಾಗಾಗಿ ಆ ದೇವರೇ ಕಾಪಾಡಬೇಕು. ದೇವರಲ್ಲಿ ಅವರ ಆರೋಗ್ಯ ಹಾಗೂ ಪುನರ್ ಚೇತರಿಕೆಗೆ ಪ್ರಾರ್ಥಿಸಿ ಎಂದು ಅವರ ಕುಟುಂಬ ಅಪಾರ ಅಭಿಮಾನಿಗಳನ್ನು ಮನವಿ ಮಾಡಿಕೊಂಡಿದೆ.
ಶಿವರಾಮ್ ಸ್ಥಿತಿ ಕಂಡು ಚಿತ್ರರಂಗ ಕಲಾವಿದರ ಬೇಸರ
ಶಿವರಾಂ ಅವರು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹರಡುತ್ತಿದ್ದಂತೆ ಅಪಾರ ಪ್ರಮಾಣದ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕ ಗಣ್ಯರು ಆಸ್ಪತ್ರೆಯತ್ತ ದೌಡಾಯಿಸಿ ವೈದ್ಯರ ಬಳಿ ಸಮಾಲೋಚನೆ ನಡೆಸುತ್ತಿದ್ದಾರೆ.
ಆದಷ್ಟು ಬೇಗ ಅವರು ಚೇತರಿಸಿಕೊಳ್ಳಬೇಕು. ಅವರ ಆರೋಗ್ಯ ಸುಧಾರಿಸಿಕೊಳ್ಳಲಿ ಅಂತ ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನೀವೆಲ್ಲಾ ದೇವರಲ್ಲಿ ಪ್ರಾರ್ಥಿಸಿಕೊಳ್ಳಿ.
ಬೇರೆ ಏನು ಹೇಳೋ ಸ್ಥಿತಿಯಲ್ಲಿ ನಾನಿಲ್ಲ ಎಂದು ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್ ಬೇಸರ ವ್ಯಕ್ತಪಡಿಸಿದ್ದಾರೆ.
ಯಾವಾಗಲೂ ಚಿತ್ರ ರಂಗದ ಬಗ್ಗೆ ಹೇಳುತ್ತಾ ಇದ್ದರು. ಕಳೆದ ವಾರ ಅವರ ಜೊತೆ ಸತ್ಯ ಅನ್ನೋ ಧಾರವಾಹಿಯಲ್ಲಿ ನಟಿಸಿದ್ದೆ.
ಅವರು ಈ ವಯಸ್ಸಿನಲ್ಲೂ ಪಾತ್ರ ಮಾಡುತ್ತಿದ್ದದ್ದು ನೋಡಿದರೆ ಖುಷಿ ಆಗುತ್ತಿತ್ತು. ವೈದ್ಯರು ಏನು ಹೇಳೋ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ. ಇದನ್ನ ಕೇಳಿ ತುಂಬಾ ಬೇಜಾರಾಗಿದೆ. ಯಾರಿಗೆ ಏನೇ ಆದ್ರು ಮೊದಲು ಶಿವರಾಮಣ್ಣ ಅಲ್ಲಿ ಇರುತ್ತಿದ್ದರು. ಈಗ ಇಂತಹ ಸ್ಥಿತಿಗೆ ಬಂದಿದ್ದಾರೆ. ಅವರು ಬೇಗ ಗುಣ ಆಗಬೇಕು ಅಂತ ಕೇಳಿಕೊಳ್ಳುತ್ತೇನೆ ಎಂದು ಕಿರುತೆರೆ ನಟಿ ಗಿರಿಜಾ ಲೋಕೇಶ್ ನೊಂದು ನುಡಿದಿದ್ದಾರೆ.