ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ 10 ವರ್ಷಗಳ ಹಿಂದಿನ ನಗರದ ಘನತ್ಯಾಜ್ಯ ವಿಲೇವಾರಿ ಟೆಂಡರ್ ನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಆಗ ದಾಖಲಾಗಿದ್ದ ಪ್ರಕರಣ, ಪಾಲಿಕೆ ಹಾಗೂ ರಾಜ್ಯ ಸರ್ಕಾರದಲ್ಲಿ ಅಂದು ಕಾರ್ಯನಿರ್ವಹಿಸುತ್ತಿದ್ದ ಎಂಜಿನಿಯರ್ ಹಾಗೂ ಅಧಿಕಾರಿಗಳಿಗೆ ಈಗ ಬಿಸಿತುಪ್ಪವಾಗಿ ಪರಿಣಮಿಸಲಿದೆ.
ಲೋಕಾಯುಕ್ತದಲ್ಲಿ ದಾಖಲಾದ ಈ ಪ್ರಕರಣದ ತನಿಖೆಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಲೋಕಾಯುಕ್ತ ನ್ಯಾಯಾಲಯ ಮೌಖಿಕ ಆದೇಶದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು, ತನಿಖೆ ಸಂಬಂಧ ಸೂಕ್ತ ದಾಖಲೆ ನೀಡುವಂತೆ ಪಾಲಿಕೆಗೆ ನೋಟಿಸ್ ನೀಡಿದ್ದಾರೆ.
ಡಿವೈಎಸ್ ಪಿ ಕೆ.ಎಂ.ರಮೇಶ್ ಅ.11ರಂದು ಈ ಬಗ್ಗೆ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರೋಜ್ ಖಾನ್ ಅವರಿಗೆ ಈ ನೋಟಿಸ್ ರವಾನಿಸಿದ್ದಾರೆ. ಸಿಆರ್ ಪಿಸಿ ಕಲಂ 91ರ ಅನ್ವಯ ಈ ನೋಟಿಸ್ ನೀಡಿದ್ದು, ತನಿಖೆಗೆ ಅಗತ್ಯವಾದ ದಾಖಲೆಗಳನ್ನು ಆದ್ಯತೆ ಮೇರೆಗೆ ಒದಗಿಸುವಂತೆ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಈ ನೋಟಿಸ್ ನ ಪ್ರತಿ ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ಲೋಕಾಯುಕ್ತ ಪೊಲೀಸ್ ಯಾವ್ಯಾವ ದಾಖಲೆ ಕೋರಿದೆ?
ಘನತ್ಯಾಜ್ಯ ವಿಲೇವಾರಿ ಮತ್ತು ಸಂಗ್ರಹಣೆಗಾಗಿ ಕರೆಯಲಾಗಿದ್ದ 76 ಪ್ಯಾಕೇಜ್ ಗಳಿಗೆ ಸಂಬಂಧಿಸಿದಂತೆ 5.02.2011ರಂದು ನಡೆದ ಬಿಬಿಎಂಪಿ ಸಭೆಯ ನಿರ್ಣಯದ ಧೃಢೀಕೃತ ಪ್ರತಿ, ಕಸದ ಟೆಂಡರ್ ಅವ್ಯವಹಾರ ನಡೆದಿದೆ ಎನ್ನಲಾದ ದೂರಿನ ಪ್ರಮುಖ ದಾಖಲೆಯಾದ 2011-12ನೇ ಸಾಲಿನ ಟೆಂಡರ್ ಅಧಿಸೂಚನೆಯ ಮಾಸ್ಟರ್ ಫೈಲ್ ಅಸಲು ಕಡತ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಅಲ್ಲದೆ 2011-12 ಹಾಗೂ 2012-13ರಲ್ಲಿ ಬಿಬಿಎಂಪಿ ಆಯುಕ್ತರು “ಹಣಕಾಸು ವ್ಯವಹಾರ ನಡೆಸಲು ಅಧಿಕಾರ ಪ್ರತ್ಯಾಯೋಜನೆ” ಸಂಬಂಧ ಹೊರಡಿಸಿದ ಆದೇಶದ ಧೃಢೀಕೃತ ಪ್ರತಿ, ಈ ಅವಧಿಯಲ್ಲಿ ಬಿಬಿಎಂಪಿ ಕಮಿಷನರ್ ಗೆ ತಾಂತ್ರಿಕ ಸಹಾಯಕರಾಗಿದ್ದವರ ಹೆಸರು, ಹುದ್ದೆ, ವಿಳಾಸ, ಅವರು ಕಾರ್ಯನಿರ್ವಹಿಸಿದ ಅವಧಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳ, ಒಂದೊಮ್ಮೆ ನಿವೃತ್ತರಾಗಿದ್ದರೆ ಅದರ ಸಂಪೂರ್ಣ ವಿವರ ನೀಡುವಂತೆ ತಿಳಿಸಲಾಗಿದೆ.
ಇದಲ್ಲದೆ 2010ರಿಂದ 2015ನೇ ಸಾಲಿನ ತನಕ ಬಿಬಿಎಂಪಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ವಿವರ, ಅಧಿಕಾರ ಸ್ವೀಕರಿಸಿದ ಹಾಗೂ ನಿರ್ಗಮಿಸಿದ ವಿವರ. 18-09-2012ರಂದು 76 ಕಸದ ಪ್ಯಾಕೇಜ್ ಟೆಂಡರ್ ಗೆ ಸಂಬಂಧಪಟ್ಟಂತೆ ಆ ಟೆಂಡರ್ ಕರೆದಿದ್ದ ಕಾರ್ಯನಿರ್ವಾಕ ಎಂಜಿನಿಯರ್, ಸೂಪರಿಟೆಂಡೆಂಟ್ ಎಂಜಿನಿಯರ್ ಗಳು ಪ್ಯಾಕೇಜ್ ವಾರು ಹಾಗೂ ಪಾಲಿಕೆ ವಲಯವಾರು ಮಾಹಿತಿ ನೀಡುವಂತೆ ಡಿವೈಎಸ್ ಪಿ ಕೆ.ಎಂ.ರಮೇಶ್ ಆ ನೋಟಿಸ್ ನಲ್ಲಿ ಹೇಳಿದ್ದಾರೆ.
ಲೋಕಾಯುಕ್ತ ಪೊಲೀಸರ ಕೆಂಗಣ್ಣಿಗೆ ಗುರಿಯಾದ ಪಾಲಿಕೆ :
2013ರಲ್ಲಿ ಲೋಕಾಯುಕ್ತದಲ್ಲಿ ಕಸದ ಟೆಂಡರ್ ಅವ್ಯವಹಾರ ಸಂಬಂಧ ದೂರು ದಾಖಲಾಗಿ 10 ವರ್ಷ ಕಳೆದರೂ ಲೋಕಾಯುಕ್ತ ಪೊಲೀಸರು ಕೋರಿದ ಸೂಕ್ತ ದಾಖಲೆಗಳನ್ನು ಬಿಬಿಎಂಪಿಯ ಅಧಿಕಾರಿಗಳು ಈತನಕ ಒದಗಿಸಿರಲಿಲ್ಲ. ಹಾಗಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪಾಲಿಕೆಯ ಘನತ್ಯಾಜ್ಯ ಅಧಿಕಾರಿಗಳಿಗೆ, ತಾವೇ ಕಾನೂನು ರೀತ್ಯ ಕಚೇರಿಗಳಿಗೆ ದಾಳಿ ನಡೆಸಿ ದಾಖಲೆ ವಶಪಡಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಈ ಹಿನ್ನಲೆಯಲ್ಲಿ ಪಾಲಿಕೆ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರೋಜ್ ಖಾನ್ ನ.23ರಂದು ಪಾಲಿಕೆ ವಿವಿಧ ವಿಭಾಗಗಳು, ಶಾಖೆಗಳಿಂದ ಲೋಕಾಯುಕ್ತ ಪೊಲೀಸರು ಕೋರಿರುವ ದಾಖಲೆಗಳನ್ನು ನೀಡಲು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ. ಈ ಅಧಿಕಾರಿಗಳು ಅದ್ಯಾವ ಕಾಲಕ್ಕೆ ಲೋಕಾಯುಕ್ತಕ್ಕೆ ದಾಖಲೆ ನೀಡುತ್ತಾರೊ ಗೊತ್ತಿಲ್ಲ.
ಕಸದ ಟೆಂಡರ್ ಗೋಲ್ ಮಾಲ್? ಇತಿಹಾಸ :
2011-12 ಹಾಗೂ 2012-13ನೇ ಸಾಲಿನಲ್ಲಿ ಬಿಬಿಎಂಪಿಯ ವಿವಿಧ ವಲಯಗಳಲ್ಲಿ ನಗರದ ಘನತ್ಯಾಜ್ಯ ವಿಲೇವಾರಿ ಮಾಡಲು 76 ಪ್ಯಾಕೇಜ್ ಗಳಲ್ಲಿ ಟೆಂಡರ್ ಕರೆದು ಗುತ್ತಿಗೆದಾರರಿಗೆ ಟೆಂಡರ್ ಹಂಚಿಕೆ ಮಾಡಲಾಗಿತ್ತು. ನೂರಾರು ಕೋಟಿ ರೂಪಾಯಿ ಮೌಲ್ಯದ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಗ್ರಹಣೆಯಲ್ಲಿ ಕರೆದಿರುವ ಟೆಂಡರ್ ನಲ್ಲಿ ಅವ್ಯವಹಾರ ನಡೆದಿತ್ತು ಎಂದು ಮಾಜಿ ಮೇಯರ್ ಪಿ.ಆರ್.ರಮೇಶ್ 2013ರ ಜನವರಿಯಲ್ಲಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು.
ಕಸದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಟೆಂಡರ್ ದಾಖಲೆಯನ್ನೇ ತಿದ್ದಿ ಅವ್ಯವಹಾರ ಮಾಡಲಾಗಿತ್ತು ಎಂದು ಬಿಬಿಎಂಪಿಯಲ್ಲಿ ಆಗ ಆಯುಕ್ತರಾಗಿದ್ದ ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತ ಪ್ರಸಾದ್ ಮತ್ತು ಇತರ 8 ಮಂದಿಯು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ಪಿ.ಆರ್.ರಮೇಶ್ ದೂರು ನೀಡಿದ್ದರು.
ಟೆಂಡರ್ ದಾಖಲೆಯಲ್ಲಿ ಶೇ.100ರಷ್ಟು ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕೆನ್ನುವ ಷರತ್ತು ವಿಧಿಸಲಾಗಿತ್ತು. ಬಳಿಕ ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿ, ನಗರದಲ್ಲಿ ಆಯಾ ಭಾಗಗಳಲ್ಲಿ ಕಸ ವಿಂಗಡಿಸುವ ಸ್ಥಳದಿಂದ ಶೇ.30ರಷ್ಟು ಒಣಕಸವನ್ನು ಸಂಗ್ರಹಿಸಿ ಕಾಂಟ್ರಾಕ್ಟರ್ ಗಳು ತಮಗಿಷ್ಟ ಬಂದಂತೆ ಮಾರಾಟ ಮಾಡುವ ಅವಕಾಶ ನೀಡುವ ಅಂಶವನ್ನು ಟೆಂಡರ್ ದಾಖಲೆಯಲ್ಲಿ ಸೇರ್ಪಡೆ ಮಾಡಲಾಗಿತ್ತು.
“ಗುತ್ತಿಗೆದಾರರು ಪಾಲಿಕೆ ವ್ಯಾಪ್ತಿಯಲ್ಲಿ ಆ ಘನತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ್ದಕ್ಕೆ ಬಿಬಿಎಂಪಿಯು ಕಾಂಟ್ರಾಕ್ಟರ್ ಗಳಿಗೆ ಹಣ ಪಾವತಿಸುವ ವಿಧಾನವನ್ನು ಟೆಂಡರ್ ದಾಖಲೆಯಲ್ಲಿ ಮಾರ್ಪಡಿಸಿ, ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಗುತ್ತಿಗೆದಾರ ಕಸ ವಿಂಗಡಣೆ ಸ್ಥಳದಿಂದ ಒಣಕಸ ಸಂಗ್ರಹಿಸಿ, ಮಾರಾಟಕ್ಕೆ ಅವಕಾಶ ಕಲ್ಪಿಸಲು ಟೆಂಡರ್ ದಾಖಲೆಯನ್ನು ತಿದ್ದಲಾಗಿತ್ತು. ಒಣಕಸ ಮಾರಾಟ ಮಾಡಿದರೆ ಪ್ರತಿ ಕೆಜಿಗೆ 10 ರೂ. ಲಭಿಸುತ್ತಿತ್ತು. ಒಬ್ಬ ಗುತ್ತಿಗೆದಾರ ಪ್ರತಿದಿನ ಈ ರೀತಿ ಒಣಕಸ ಮಾರಾಟದಿಂದ ಬರೋಬ್ಬರಿ 1 ಕೋಟಿ ರೂ. ಸಂಪಾದಿಸುವಂತಾಗುತ್ತಿತ್ತು. ಇದು ಬಿಬಿಎಂಪಿಯ ನಿಶ್ಚಿತ ಆದಾಯಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿತ್ತು. ಹಾಗಾಗಿ ಇದರಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆಗೆ ನಾನು ಹಿಂದೆ ದೂರು ನೀಡಿದ್ದೆ” ಎಂದು ಹೇಳಿದ್ದಾರೆ ಮಾಜಿ ಮೇಯರ್ ಪಿ.ಆರ್.ರಮೇಶ್.
ಲೋಕಾಯುಕ್ತ ಪ್ರಕರಣ ಇತ್ಯರ್ಥ ವಿಳಂಬಕ್ಕೆ ಬೇಸರ :
ಲೋಕಾಯುಕ್ತ ಸಂಸ್ಥೆಯಲ್ಲಿ 10 ವರ್ಷಗಳ ಹಿಂದೆ ದಾಖಲಾದ ಪ್ರಕರಣಕ್ಕೆ ಇನ್ನು ಮುಕ್ತಿ ಸಿಕ್ಕಿಲ್ಲ. ಇದು ಕೇವಲ ಇದೊಂದೇ ಪ್ರಕರಣವಲ್ಲ, ಲೋಕಾಯುಕ್ತ ಸಂಸ್ಥೆಯಲ್ಲಿ ಹೀಗೆ ಸಾವಿರಾರು ಪ್ರಕರಣಗಳು ಹಲವು ವರ್ಷಗಳು ಕಳೆದರೂ ಇತ್ಯರ್ಥವಾಗದೇ ನ್ಯಾಯಕ್ಕಾಗಿ ನಾಗರೀಕರು ಮೂಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಇನ್ನಾದರೂ ಲೋಕಾಯುಕ್ತ ಸಂಸ್ಥೆಯು ಕಾನೂನು ರೀತ್ಯ ಕ್ಷಿಪ್ರವಾಗಿ ನ್ಯಾಯದಾನ ಮಾಡುವ ಕಾರ್ಯವನ್ನು ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.