ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿಯಲ್ಲಿ (ನ.26) ಇಂದು ಬೆಳಗ್ಗೆ 11:50 ರ ಸಂದರ್ಭದಲ್ಲಿ ರಾಜರಾಜೇಶ್ವರಿನಗರ, ಕೆಂಗೇರಿ ಮೊದಲಾದೆಡೆ ಸಾರ್ವಜನಿಕರು ಕೆಲವು ಸೆಕೆಂಡು ಲಘು ಭೂಕಂಪನದ ಅನುಭವ ಆಗಿರುವುದರ ಬಗ್ಗೆ ತಿಳಿಸಿದ್ದಾರೆ.
ಭೂಕಂಪನದ ಅನುಭವದಿಂದ ಹಲವು ಕಡೆ ಜನರು ಮನೆಯಿಂದ ಹೊರಬಂದು ನಿಂತಿದ್ದರು. ಕೆಲವರು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಹಾಗೂ ಕರ್ನಾಟಕ ನೃಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC)ಕ್ಕೂ ಕರೆ ಮಾಡಿದ್ದಾರೆ.
ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ, ಕೆಂಗೇರಿ, ಉಲ್ಲಾಳ ವಾರ್ಡ್ ನ ಮಲ್ಲತ್ತಹಳ್ಳಿ ನಿಸರ್ಗ ಲೇಔಟ್, ಕುಂಬಲಗೋಡು, ಕಗ್ಗಲಿಪುರ, ಹೆಮ್ಮಿಗೇಪುರ, ಬೆಂಗಳೂರು ವಿಶ್ವವಿದ್ಯಾಲಯ ಮೊದಲಾದ ಕಡೆ ಮನೆ, ಕಚೇರಿಯಲ್ಲಿದ್ದವರಿಗೆ ಭೂಮಿ ಕೆಲವು ಸೆಕೆಂಡು ನಡುಗಿದ ಅನುಭವಿಸಿದ್ದಾರೆ. ಇನ್ನು ಮಂಡ್ಯದಲ್ಲೂ ಶುಕ್ರವಾರ ಬೆಳಿಗ್ಗೆ 10:15ಕ್ಕೆ ಹಾಗೂ 11:50ಕ್ಕೆ ಹೀಗೆ ಎರಡು ಬಾರಿ ಭೂಮಿನಡುಗಿದ ಅನುಭವ ಆಗಿದೆ ಎಂದು ನಾಗರೀಕರು ತಿಳಿಸಿದ್ದಾರೆ.
“ತಾವು ಮನೆಯಲ್ಲಿ ಟಿವಿ ನೋಡುತ್ತಿದ್ದೆ. ಮನೆಯವರು ಮನೆ ಕೆಲಸ ಮಾಡುತ್ತಿದ್ದರು. 11:50 ರ ಸಂದರ್ಭದಲ್ಲಿ ಕೆಲವು ಸಲ ಭೂಮಿ ನಡುಗಿದ ಅನುಭವವಾಯ್ತು. ಹಿಂದೆಂದೂ ಈ ರೀತಿಯ ಅನುಭವ ಆಗಿರಲಿಲ್ಲ. ಆನೆ ಪಟಾಕಿ ಸಿಡಿದಂತೆ ಅನುಭವವಾಯ್ತು. ಇದು ನಿಜಕ್ಕೂ ಭೂಕಂಪನವಾ ಅಂತ ಗೊತ್ತಾಗದೆ ಭಯಭೀತರಾಗಿದ್ದೆವು. ಆನಂತರ ಮನೆಯಿಂದ ಹೊರಬಂದು ನಿಂತು ನೋಡುತ್ತಿದ್ದವು. ಕೇವಲ ಒಂದೆರಡು ಸೆಕೆಂಡುಗಳ ಕಾಲ ಭೂಮಿಕಂಪಿಸಿದಂತಾಗಿತ್ತು.” ಎಂದು ಬೆಂಗಳೂರು ವೈರ್ ಗೆ ಪ್ರತ್ಯಕ್ಷದರ್ಶಿ ಶಿವಣ್ಣ ಎಂಬುವರು ತಿಳಿಸಿದ್ದಾರೆ.
ಕರ್ನಾಟಕ ನೃಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಶಾಶ್ವತ ಭೂಕಂಪನ ಅಧ್ಯಯನ ತಂಡ “ಬೆಂಗಳೂರಿನ ರಾಜರಾಜೇಶ್ವರಿನಗರ, ಕೆಂಗೇರಿ ಮೊದಲಾದೆಡೆ ಸಾರ್ವಜನಿಕರು ಕೆಲವು ಸೆಕೆಂಡು ಲಘು ಭೂಕಂಪನದ ಅನುಭವ ಆಗಿರುವುದರ ಬಗ್ಗೆ ನಮ್ಮ ಕೇಂದ್ರಕ್ಕೆ ತಿಳಿಸಿದ್ದಾರೆ. ಆದರೆ ನಮ್ಮ ಕೇಂದ್ರದಲ್ಲಿ ಭೂಕಂಪನ ಆಗಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ” ಎಂದು ಸ್ಪಷ್ಟಪಡಿಸಿದೆ.
ಇಂದು ಮುಂಜಾನೆ ಮಿಜೋರಾಮ್ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿರುವುದು ದಾಖಲಾಗಿದೆ.
ಮಂಡ್ಯದ ಜಿಲ್ಲೆ ಸುತ್ತಮುತ್ತ ಆಗಾಗ ಭೂಕಂಪಿಸಿದ ಅನುಭವ ಈ ಹಿಂದೆ ಆಗುತ್ತಿತ್ತು. ಅಲ್ಲಿ ಭೂಮಿಯ ಒಳಗೆ ಸಣ್ಣ ಪ್ರಮಾಣದಲ್ಲಿ ಶಿಲಾಸ್ತರಗಳ ಚಲನೆ ಮತ್ತು ಘರ್ಷಣೆಯಿಂದ ಭೂಕಂಪನ ಆಗುತ್ತಿತ್ತು. ಮಂಡ್ಯದಲ್ಲಿ ಬೆಳಗ್ಗೆ 10:15 ಹಾಗೂ 11:50ಕ್ಕೆ ಎರಡು ಬಾರಿ ಅನುಭವ ಆಗದ ಬಗ್ಗೆ ಮಾಹಿತಿ ಲಭ್ಯ ಆಗಿದೆ. 11:50ಕ್ಕೆ ಇದೇ ಹೊತ್ತಿಗೆ ಬೆಂಗಳೂರಿನ ಪಶ್ಚಿಮ ಕೆಲವೆಡೆ ಭೂಕಂಪನದ ಅನುಭವ ಆಗಿದೆ.
“ಚಿಂತಾಮಣೆ ತಾಲೂಕಿನ ಒಂದು ಗ್ರಾಮದಲ್ಲಿ ಎಂಟತ್ತು ದಿನದ ಕೆಳಗೆ ಸ್ಪೋಟಕ ರೀತಿಯ ಶಬ್ದ ಕೇಳಿ ಬಂದಿತ್ತು. ಇಲ್ಲಿ ಈ ರೀತಿಯ ಪ್ರಕರಣದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಅತಿಹೆಚ್ಚು ಮಳೆಯಾಗಿದೆ. ಸಾರ್ವಜನಿಕರು ಬೋರ್ ವೆಲ್ ನಲ್ಲಿ ನೀರು ತೆಗೆಯುತ್ತಿರಲಿಲ್ಲ. ಬೋರ್ ವೆಲ್ ಜಾಸ್ತಿ ಬಳಸದ ಕಾರಣ ಅಂತರ್ಜಲ ನೀರಿನ ಮಟ್ಟ ಮೇಲೆ ಬಂದಾಗ ಮೇಲ್ಭಾಗದ ಒಣಗಿದ ಶಿಲಾಸ್ತರಗಳ ಬಿರುಕಿನಲ್ಲಿ ಅಂತರ್ಜಲದ ನೀರು ತುಂಬಿದಾಗ ಭೂಮಿ ಒಳಗಿಂದ ತೀವ್ರತೆಯ ಸ್ಫೋಟದ ಶಬ್ದ ಬಂದು ಭೂಕಂಪನ ಅನುಭವ ಆಗುವ ಸಾಧ್ಯತೆಯಿದೆ” ಎಂದು ಕೆಎಸ್ ಡಿಎಮ್ ಸಿ ಸಂಸ್ಥಾಪಕ ವಿಶೇಷ ನಿರ್ದೇಶಕ (ನಿ) ಡಾ.ವಿ.ಎಸ್.ಪ್ರಕಾಶ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.