ಬೆಂಗಳೂರು, (www.bengaluruwire.com) : ಬೆಂಗಳೂರಿನಲ್ಲಿ ಮುಗಿಲಿಗೇ ತೂತು ಬಿದ್ದಂತೆ ವರ್ಷಧಾರೆಯಾಗಿ ಜನಜೀವನ ಅಸ್ತವ್ಯಸ್ಥ ಆಗಿದೆ. ಇನ್ನೊಂದೆಡೆ ಕಳಪೆ ಕೆಲಸಕ್ಕೆ ಹೆಸರಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ಟಿನ್ ಟೌನ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಮಾಳಿಗೆ ಸೋರಿ ಶಾಲಾ- ಕಾಲೇಜು ಶಿಕ್ಷಕರು ನೆಮ್ಮದಿಯಾಗಿ ಕೂರಲಾಗುತ್ತಿಲ್ಲ.
ಮಳೆಗಾಲದಲ್ಲಿ ಶಿಥಿಲ ಕಟ್ಟಡದ ಕಾಂಕ್ರಿಟ್ ನಿಂದ ನೀರಿಳಿದು ಪ್ರಿನ್ಸಿಪಾಲ್ ಕೊಠಡಿ ಶಾಲಾ- ಕಾಲೇಜು ಶಿಕ್ಷಕರ ಕೊಠಡಿ, ಕ್ರೀಡಾ ಸಾಮಗ್ರಿ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಏಳು ಕಟ್ಟಡದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಕುರ್ಚಿಯಲ್ಲಿ ಕೂರಲು ಆಗದಂತಹ ದುಸ್ಥಿತಿಯಿದೆ.
1973-74 ರಲ್ಲಿ ನಿರ್ಮಿಸಿದ ಈ ಶಾಲಾ ಕಟ್ಟಡದ ಪುನರ್ ಅಭಿವೃದ್ಧಿಗೆ ಮೂರು ವರ್ಷದ ಹಿಂದೆ ಬಿಬಿಎಂಪಿಯಿಂದ ಕಾರ್ಯಾದೇಶವಾಗಿದ್ದರೂ ಸ್ಥಳೀಯ ಶಾಸಕ ಎನ್.ಎ.ಹ್ಯಾರೀಸ್ ಹಾಗೂ ಆಗಿನ ಅಗರಮ್ ವಾರ್ಡಿನ ಪಾಲಿಕೆ ಸದಸ್ಯೆ ಭವ್ಯ ಅವರ ನಡುವಿನ ಮುಸುಕಿನ ಗುದ್ದಾಟದಲ್ಲಿ ಪಾಲಿಕೆಯ ಈ ಶಾಲಾ ಕಟ್ಟಡ ಅಭಿವೃದ್ಧಿ ಕೆಲಸ ಆರಂಭವಾಗಲಿಲ್ಲ. ಆಗಿನಿಂದಲೂ ಮಳೆಬಂದಾಗಲೆಲ್ಲ ಶಾಲೆಯ ಕಟ್ಟಡದ ಒಳಗಿದ್ದರೂ ಶಾಲಾ- ಕಾಲೇಜು ಸಿಬ್ಬಂದಿಗೆ ಮಳೆಯಲ್ಲಿ ನೆನೆದ ಅನುಭವವಾಗುತ್ತೆ.
ಕಟ್ಟಡದ ಗೋಡೆಗಳೆಲ್ಲ ಮಳೆಯ ನೀರಿಗೆ ಪಾಚಿ ಕಟ್ಟಿ, ಹಾಕಿದ ಸುಣ್ಣ- ಬಣ್ಣವೆಲ್ಲ ಎಂದೋ ಕಿತ್ತು ಬಂದಿದೆ. ಇಂತಹ ಅನಾರೋಗ್ಯಕರ ವಾತಾವರಣದಲ್ಲಿ ಶಿಕ್ಷಕರು, ಸಿಬ್ಬಂದಿ ಪಾಠ ಮಾಡಬೇಕಾದ ಪರಿಸ್ಥಿತಿಯಿದೆ. ಈ ಶಾಲೆಯಲ್ಲಿ 125, ಕಾಲೇಜು ವಿಭಾಗದಲ್ಲಿ ಸುಮಾರು 175 ವಿದ್ಯಾರ್ಥಿಗಳು ಸದ್ಯ ಓದುತ್ತಿದ್ದಾರೆ.
ಕಳೆದ ವರ್ಷವಷ್ಟೆ ಇದೇ ಸಂಯುಕ್ತ ಪದವಿಪೂರ್ವ ಕಾಲೇಜಿನ ಎರಡು ಅಂತಸ್ತಿನ 12 ಕೊಠಡಿಗಳ ನೂತನ ಕಟ್ಟಡಕ್ಕೆ ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಶಾಲಾ- ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು, ಕಂಪ್ಯೂಟರ್ ಲ್ಯಾಬ್, ಕ್ರೀಡಾ ಸಾಮಗ್ರಿ ಪರಿಕರ ಇಡುವ ಕೊಠಡಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಿದರೆ ವಿದ್ಯಾರ್ಥಿಗಳಿಗೆ ಕೊಠಡಿ ಕೊರತೆ ಎದುರಾಗುತ್ತೆ. ಹಾಗಾಗಿ ಇಲ್ಲಿನ ಸಿಬ್ಬಂದಿ ಮಾಳಿಗೆ ಸೋರುವ ಕಟ್ಟದಲ್ಲೇ ಕಾಲ ದೂಡುತ್ತಿದ್ದಾರೆ.
ಬಹುತೇಕ ಬಿಬಿಎಂಪಿ ಯ ಶಾಲೆಗಳ ಸ್ಥಿತಿ ಆಸ್ಟೀನ್ ಟೌನ್ ಬಾಲಕಿಯರ ಶಾಲೆಗೆ ಹೊರತಾಗಿಲ್ಲ. ಶಾಂತಿನಗರ ಪ್ರೌಢಶಾಲೆ, ಬನಪ್ಪ ಪಾರ್ಕ್ ಪ್ರೌಢಶಾಲೆ, ಬ್ರಾಡ್ವೇ ಪ್ರೌಢಶಾಲೆಗಳಲ್ಲೂ ಇದೇ ಕರ್ಮ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರೊಬ್ಬರು.
162 ಶಾಲಾ- ಕಾಲೇಜಿದ್ದರೂ ನಿರ್ವಹಣೆಗೆ 10 ಕೋಟಿ ರೂ…..!
ವರ್ಷಂಪ್ರತಿ ಸಾವಿರಾರು ಕೋಟಿ ರೂ. ಬಜೆಟ್ ಮಂಡಿಸುವ ಬಿಬಿಎಂಪಿಗೆ 91 ನರ್ಸರಿ ಶಾಲೆ, 16 ಪ್ರಾಥಮಿಕ ಶಾಲೆ, 33 ಪ್ರೌಢಶಾಲೆ, 16 ಪದವಿಪೂರ್ವ ಕಾಲೇಜು, 4 ಪದವಿ ಕಾಲೇಜು, 2 ಸ್ನಾತಕೋತ್ತರ ಕಾಲೇಜು ಹೊಂದಿರುವ ಪಾಲಿಕೆ ಶಿಕ್ಷಣ ವಿಭಾಗಕ್ಕೆ 89 ಕೋಟಿ ರೂ. ಪ್ರಸಕ್ತ ವರ್ಷ ಮೀಸಲಿಟ್ಟಿದೆ.
ಆ ಪೈಕಿ ಶಾಲಾ- ಕಾಲೇಜು ಕಟ್ಟಡಗಳ ನಿರ್ವಹಣೆಗೆ ಕೇವಲ 10 ಕೋಟಿ ರೂ. ಮೀಸಲಿಟ್ಟಿದೆ. ಸೂಕ್ತ ಬಜೆಟ್ ಒದಗಿಸದ ಕಾರಣ ಪಾಲಿಕೆ ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲಗುತ್ತಿದೆ. 18 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಶಿಕ್ಷಣ ವ್ಯವಸ್ಥೆಗೆ ಕೇವಲ 89 ಕೋಟಿ ರೂ. ಬಜೆಟ್ ತೆಗೆದಿರಿಸಿದರೆ ಯಾವ ಪೂರಕ ಸೌಕರ್ಯ ಕಲ್ಪಿಸಬಹುದು?
ಕಾಟಾಚಾರಕ್ಕೊಂದು ಎಂಜಿನಿಯರಿಂಗ್ ಸೆಲ್ :
ಬಿಬಿಎಂಪಿಯಲ್ಲಿ ಶಿಕ್ಷಣ ವಿಭಾಗಕ್ಕೋಗಿಯೇ ಪ್ರತ್ಯೇಕವಾದ ಎಂಜಿನಿಯರಿಂಗ್ ಕೋಶವಿದ್ದು ಅದರಲ್ಲಿ ಒಬ್ಬರು ಕಾರ್ಯ ನಿರ್ವಾಹಕ ಎಂಜಿನಿಯರ್, ಇಬ್ಬರು ಸಹಾಯಕ ಎಂಜಿನಿಯರ್ ಇದ್ದರೂ ಪಾಲಿಕೆಯ ಶಾಲಾ- ಕಾಲೇಜು ಕಟ್ಟಡಗಳ ದುರವಸ್ಥೆ ಮಾತ್ರ ಸರಿ ಹೋಗಿಲ್ಲ. ಹೀಗಿದ್ದಾಗ ಈ ಎಂಜಿನಿಯರಿಂಗ್ ಕೋಶ (Engineering cell) ಮುಚ್ಚುವುದೇ ಒಳ್ಳೆಯದು.
ಪಾಲಿಕೆಯ ಬಹುತೇಕ ಶಾಲೆಗಳಲ್ಲಿ ದೀಪ ಮತ್ತು ಫ್ಯಾನ್ ವ್ಯವಸ್ಥೆಯಿಲ್ಲ. ವರ್ಷದ ಹಿಂದೆಯೇ ಶುದ್ಧ ಕುಡಿಯುವ ನೀರಿನ ಆರ್.ಒ.ಘಟಕ ಮಂಜೂರಾದರೂ ಇನ್ನೂ ಶಾಲೆಗಳಲ್ಲಿ ಅದನ್ನು ಅಳವಡಿಸಿಲ್ಲ.
ಶಾಲಾ- ಕಾಲೇಜು ಆರಂಭವಾದರೂ ಪಠ್ಯಪುಸ್ತಕ, ಸಮವಸ್ತ್ರ ನೀಡಿಲ್ಲ :
ಆಗಸ್ಟ್ 23 ರಂದೇ ಪಾಲಿಕೆಯ ಶಾಲಾ- ಕಾಲೇಜು ಆರಂಭವಾದರೂ ಅಲ್ಲಿನ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್, ಸಮವಸ್ತ್ರ, ಶೂ- ಸಾಕ್ಸ್ ಇನ್ನೂ ಹಂಚಿಕೆ ಮಾಡಿಲ್ಲ. 2021-22ನೇ ವರ್ಷದ ಅರ್ಧ ಭಾಗ ಕ್ರಮಿಸಿದರೂ ವಿದ್ಯಾರ್ಥಿಗಳಿಗೆ ಈ ಪಠ್ಯ ಮತ್ತಿತರ ವಸ್ತುಗಳು ಹಂಚಲು ಇನ್ನೂ ಟೆಂಡರ್ ಕೂಡ ಕರೆದಿಲ್ಲ. ಇದಕ್ಕಾಗಿ ಪಾಲಿಕೆ 16 ಕೋಟಿ ರೂ. ಮೀಸಲಿಟ್ಟಿದೆ. ಶಿಕ್ಷಕರ ವೇತನಕ್ಕೆ 18 ಕೋಟಿ ರೂ., ಶಾಲಾ- ಕಾಲೇಜು ಭದ್ರತಾ ಸಿಬ್ಬಂದಿ ವೇತನಕ್ಕೆ 6 ಕೋಟಿ ರೂ. ತೆಗೆದಿರಿಸಿದೆ ಎಂದು ಮೂಲಗಳು ತಿಳಿಸಿದೆ.
ಬಿಬಿಎಂಪಿ ಆಡಳಿತಗಾರರೇ, ಮುಖ್ಯ ಆಯುಕ್ತರೇ ಇದಾ ನಿಮ್ಮ ಆಡಳಿತ? ಎಂದ ಪ್ರಜ್ಞಾವಂತ ನಾಗರೀಕರು, ಶಿಕ್ಷಣ ತಜ್ಞರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಬಿಬಿಎಂಪಿ ಆಡಳಿತ ಕೈಗೊಳ್ಳುತ್ತಾ?