ಬೆಂಗಳೂರು, (www.bengaluruwire.com) : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಚುನಾವಣೆ ನ.21ಕ್ಕೆ ಚುನಾವಣೆ ನಿಗಧಿಯಾಗಿದೆ. ಚುನಾವಣೆಗಾಗಿ ಅಭ್ಯರ್ಥಿಗಳು ಕಸಾಪ ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
107 ವರ್ಷಗಳ ಭವ್ಯ ಇತಿಹಾಸವಿರುವ ಕಸಾಪದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆ ಪೈಕಿ ಒಬ್ಬರು ಮಾತ್ರ ಮಹಿಳೆಯಾಗಿದ್ದಾರೆ. ಕನ್ನಡ ಸಾರಸ್ವತ ಲೋಕದ ಪ್ರತೀಕವಾದ ಈ ಸಂಸ್ಥೆಯಲ್ಲಿ ಒಟ್ಟು 3.10 ಲಕ್ಷ ಮತದಾನ ಮಾಡಲು ಅರ್ಹ ಸದಸ್ಯರಿದ್ದಾರೆ. ರಾಜ್ಯದ 30 ಜಿಲ್ಲೆಗಳ ಪೈಕಿ ಬೆಂಗಳೂರು ನಗರದಲ್ಲಿ 36,491 ಅತಿಹೆಚ್ಚು ಕಸಾಪ ಸದಸ್ಯರಿದ್ದರೆ, ಉಡುಪಿಯಲ್ಲಿ 1,987 ರಷ್ಟು ಅತಿಕಡಿಮೆ ಸದಸ್ಯರು ಇದ್ದಾರೆ ಎಂದು ಕಸಾಪ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
2016 ರಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಒಟ್ಟಾರೆ ಮತದಾನ ಮಾಡಲು ಅರ್ಹರಿರುವ 1,89,355 ಸದಸ್ಯರಿದ್ದರು. ಆದರೆ 2021 ರ ಚುನಾವಣೆಯಲ್ಲಿ ಅರ್ಹ ಮತದಾರರ ಸಂಖ್ಯೆ 1,20,754ಕ್ಕೆ ಏರಿಕೆಯಾಗಿದೆ.
ಚುನಾವಣೆ ಕುರಿತ ವೇಳಾಪಟ್ಟಿ ಹೀಗಿದೆ :
ನ.21 ರಂದು ಎಲ್ಲಾ 30 ಜಿಲ್ಲೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ. ಅದೇ ದಿನ ಎಲ್ಲಾ ಜಿಲ್ಲೆಗಳಲ್ಲೂ ಮತ ಎಣಿಕೆ ನಡೆಯಲಿದೆ. ಜಿಲ್ಲಾ ಘಟಕದ ಅಧ್ಯಕ್ಷರ ಫಲಿತಾಂಶ ಘೋಷಣೆಯಾಗಲಿದೆ. ಗಡಿನಾಡ ಹಾಗೂ ಹೊರನಾಡ ಮತದಾರರಿಗೆ ಕೇಂದ್ರ ಚುನಾವಣಾ ಅಧಿಕಾರಿಗಳು ಈಗಾಗಲೇ ರಿಜಿಸ್ಟರ್ ಅಂಚೆ ಮೂಲಕ ಮತಪತ್ರ ರವಾನಿಸಿದ್ದಾರೆ.
ನ.23 ರಂದು ರಿಜಿಸ್ಟರ್ ಅಂಚೆ ಮೂಲಕ ಬಂದ ಅಂಚೆ ಮತಪತ್ರಗಳನ್ನು ಕಸಾಪ ಕೇಂದ್ರ ಚುನಾವಣಾಧಿಕಾರಿಗಳ ಕಚೇರಿಗೆ ತಲುಪಲಿದೆ. ನ.24ರಂದು ಅದೇ ದಿನ ಒಟ್ಟಾರೆ ಮತ ಎಣಿಕೆ ಫಲಿತಾಂಶದ ವಿವರಗಳನ್ನು ಕ್ರೋಢೀಕರಿಸಿ ಅಂತಿಮವಾಗಿ ಚುನಾವಣಾ ಫಲಿತಾಂಶ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಆಯ್ಕೆಯ ಬಗ್ಗೆ ಘೋಷಣೆಯಾಗಲಿದೆ.
ಸಾಹಿತ್ಯ ಪರಿಷತ್ತಿನ ಚುನಾವಣೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸದಸ್ಯರನ್ನು ಸೆಳೆಯಲು ಕೆಲವು ಅಭ್ಯರ್ಥಿಗಳು ತಮ್ಮ ವರ್ಚಸ್ಸಿನ ಜೊತೆಗೆ ಹಣಬಲ, ತೋಳ್ಬಲದ ಕಾರಣಕ್ಕೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಯಾವುದೇ ಸ್ಥಳೀಯ ಸಂಸ್ಥೆಯ ಚುನಾವಣೆಗಿಂತ ಕಡಿಮೆ ಇಲ್ಲದಂತೆ ಕೆಲವು ಅಭ್ಯರ್ಥಿಗಳು ತೆರೆಮರೆಯಲ್ಲಿ ಹಣವನ್ನು ನೀರಿನಂತೆ ಕರ್ಚು ಮಾಡಿ ಹಲವು ಆಸೆ, ಆಮೀಷ ಒಡ್ಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
1915 ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಎಚರ.ವಿ.ನಂಜುಡಯ್ಯ ಮೊದಲ ಅಧ್ಯಕ್ಷರಾಗಿದ್ದರು. ಅಲ್ಲಿಂದ ಈತನಕ ಪ್ರೊ.ಜಿ.ವೆಂಕಟಸುಬ್ಬಯ್ಯ, ಹಂಪನಾಗರಾಜಯ್ಯ, ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಡಾ.ಸಾ.ಶಿ.ಮರುಳಯ್ಯ ಸೇರಿದಂತೆ 25 ಅಧ್ಯಕ್ಷರು ಕಸಾಪದಲ್ಲಿ ಅಧಿಕಾರ ನಡೆಸಿದ್ದಾರೆ.
ಕಸಾಪ ರಾಜ್ಯ ಘಟಕ ಅಧ್ಯಕ್ಷ ಸ್ಥಾನಕ್ಕೆ ನಾಡೋಜ ಮಹೇಶ್ ಜೋಷಿ, ಮಾಯಣ್ಣ, ಸಿ.ಕೆ.ರಾಮೇಗೌಡ, ಪ್ರಮೋದ್ ಹಳಕಟ್ಟಿ, ಕೆ.ರವಿ ಅಂಬೇಕರೆ, ಪ್ರೊ.ಶಿವರಾಜ್ ಪಾಟೀಲ್ ಸೇರಿದಂತೆ 21 ಜನರು ಈ ಬಾರಿ ಸ್ಪರ್ಧಿಸುತ್ತಿದ್ದಾರೆ.
ನಾಡೋಜ ಡಾ.ಮಹೇಶ್ ಜೋಷಿ ಮನದಿಂಗಿತ ಮತ್ತು ಗುರಿ ಏನು?
“ಕನ್ನಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಕಾರಣಕ್ಕೆ ತಮಗೆ ನಾಡಿನ ಅತಿಶ್ರೇಷ್ಠ ಪ್ರಶಸ್ತಿಯಾದ ನಾಡೋಜ ಗೌರವ ಸಂದಿದೆ. ತಾವು ಕಸಾಪ ಅಧ್ಯಕ್ಷರಾದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತು ಮಾಡುವ ಅಭಿಲಾಷೆಯಿದೆ. ಅಲ್ಲದೆ ಈಗಿನ 1 ಸಾವಿರ ಸದಸ್ಯತ್ವದ ಶುಲ್ಕವನ್ನು ಕನಿಷ್ಟ 250 ರೂ. ಗಳಿಗೆ ಇಳಿಸಿ, ಕಸಾಪ ಸದಸ್ಯತ್ವದ ಸಂಖ್ಯೆಯನ್ನು 1 ಕೋಟಿಗೆ ಏರಿಸುವ ಗುರಿ ಹೊಂದಿದ್ದೇನೆ. ದೇಶಕ್ಕೆ ಸೇವೆ ಸಲ್ಲಿಸಿದ ನಿವೃತ್ತ ಕನ್ನಡಿಗ ಯೋಧರು ಹಾಗೂ ದಿವ್ಯಾಂಗರಿಗೆ ಶುಲ್ಕವಿಲ್ಲದೆ ಮನೆ ಬಾಗಿಲಿಗೆ ಕಸಾಪ ಸದಸ್ಯತ್ವವನ್ನು ತಲುಪಿಸುವ ಉದ್ದೇಶವಿದೆ.” ಎಂದು ಕಸಾಪ ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಡೋಜ ಡಾ.ಮಹೇಶ್ ಜೋಷಿ ತಿಳಿಸಿದ್ದಾರೆ.
“ಅತ್ಯಾಧುನಿಕ ತಂತ್ರಜ್ಞಾನದ ಆಪ್ ಬಳಸಿ ಕನ್ನಡಿಗರು ತಾವಿರುವ ಸ್ಥಳದಿಂದಲೇ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಲು ಅನುಕೂಲವಾಗಲು ಶ್ರಮಿಸುತ್ತೇನೆ. ಅಲ್ಲದೆ ಮುಂದಿನ ಚುನಾವಣೆ ಬ್ಯಾಲೆಟ್ ಇಲ್ಲದೆ ಆಧುನಿಕ ತಂತ್ರಜ್ಞಾನ ಸಹಾಯ ಬಳಸಿ ನಡೆಸಲಾಗುವುದು ಎಂದು ಅವರು ತಮ್ಮ ಚುನಾವಣಾ ಪ್ರಣಾಳಿಕೆ ಬಗ್ಗೆ “ಬೆಂಗಳೂರು ವೈರ್” ಗೆ ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ.ಕೆ.ರಾಮೇಗೌಡರ ಪ್ರಣಾಳಿಕೆಯಲ್ಲಿ ಏನಂತಾರೆ?
ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಒಂದು ಬಾರಿ ಹಾಗೂ ಕೇಂದ್ರ ಕಸಾಪ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಸಿ.ಕೆ.ರಾಮೇಗೌಡ ಕೂಡ ರಾಜ್ಯಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ.
“ತಾವು ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ, ಮಹಿಳೆಯರಿಗೆ ಅಗತ್ಯ ಆದ್ಯತೆ ನೀಡಿ ಬದ್ಧತೆಯಿಂದ ದುಡಿಯುತ್ತೇನೆ” ಎಂದು ಸಿ.ಕೆ.ರಾಮೇಗೌಡ ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.