ಬೆಂಗಳೂರು, ಆ.4 (www.bengaluruwire.com) : ಕಳೆದ ಸುಮಾರು 20 ವರ್ಷಗಳಿಂದ ನಿವೇಶನಕ್ಕಾಗಿ ಅಲೆದಾಡುತ್ತಿದ್ದ ಅರ್ಕಾವತಿ ನಿವೇಶನದಾರರಿಗೆ ನಿವೇಶನವನ್ನು ಹಂಚಿಕೆ ಮಾಡುವ ದಿಟ್ಟ ನಿರ್ಧಾರವನ್ನು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಕೈಗೊಂಡಿದ್ದಾರೆ.
ಇದರ ಮೊದಲ ಹೆಜ್ಜೆಯಾಗಿ ಬುಧವಾರ 300 ಕ್ಕೂ ಹೆಚ್ಚು ನಿವೇಶನಗಳನ್ನು ನಿವೇಶನದಾರರ ಸಮ್ಮುಖದಲ್ಲಿಯೇ ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು.
ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಮಂಜೂರಾಗಿ ರೀಡೂ, ಡಿನೋಟಿಫೈ ಸೇರಿದಂತೆ ನಾನಾ ಕಾರಣಗಳಿಂದ ಸಾವಿರಾರು ಮಂದಿ ನಿವೇಶನ ವಂಚಿತರಾಗಿದ್ದರು. ಕಳೆದ ಸುಮಾರು 20 ವರ್ಷಗಳಿಂದ ಬಿಡಿಎಗೆ ಅಲೆಯುತ್ತಿದ್ದರೂ ಅವರು ಬದಲಿ ನಿವೇಶನವನ್ನು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಆದರೆ, ಕಳೆದ ನವೆಂಬರ್ 26 ರಂದು ಬಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ವಿಶ್ವನಾಥ್ ಅವರು, ಅರ್ಕಾವತಿ ನಿವೇಶನದಾರರಿಗೆ ಬದಲಿ ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿದ್ದರು. ಈ ಬಗ್ಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಹಲವು ಬಾರಿ ಚರ್ಚೆ ನಡೆಸಿದ್ದರು.
ಇದೀಗ ತಮ್ಮ ಮಾತು ಉಳಿಸಿಕೊಂಡಿರುವ ವಿಶ್ವನಾಥ್, ಮೊದಲ ಹಂತದಲ್ಲಿ 307 ನಿವೇಶನಗಳನ್ನು ನಿವೇಶನದಾರರಿಗೆ ಹಂಚಿಕೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಸಂಪೂರ್ಣ ಪಾರದರ್ಶಕವಾಗಿ ನಿವೇಶನ ಹಂಚಿಕೆ :
ಈ ನಿವೇಶನ ಹಂಚಿಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ವಿಶ್ವನಾಥ್ ಅವರು, 20×30 ವಿಸ್ತೀರ್ಣದ 140 ನಿವೇಶನಗಳು, 30×40 ವಿಸ್ತೀರ್ಣದ 85 ನಿವೇಶನಗಳು, 40×60 ವಿಸ್ತೀರ್ಣದ 24 ಬದಲಿ ನಿವೇಶನಗಳನ್ನು ಅರ್ಕಾವತಿ ಬಡಾವಣೆಯಲ್ಲಿಯೇ ಹಂಚಿಕೆ ಮಾಡಲಾಯಿತು ಎಂದರು.
ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿತ್ತು. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೇ ಸಂಪೂರ್ಣ ಕಂಪ್ಯೂಟರೀಕೃತ ಲಾಟರಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು. ಈ ಪ್ರಕ್ರಿಯೆಯನ್ನು ನೂರಾರು ನಿವೇಶನ ಹಂಚಿಕೆದಾರರ ಸಮ್ಮುಖದಲ್ಲಿಯೇ ನಡೆಸಲಾಯಿತು ಎಂದು ತಿಳಿಸಿದರು.
ಜೇಷ್ಠತೆ ಆಧಾರದಲ್ಲಿ ಹಂಚಿಕೆ :
ಸಾಮಾನ್ಯವಾಗಿ ನಿವೇಶನ ಹಂಚಿಕೆ ವೇಳೆ ದಲ್ಲಾಳಿಗಳು, ಮಧ್ಯವರ್ತಿಗಳ ಹಸ್ತಕ್ಷೇಪ ಇರುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಆದರೆ, ಬಿಡಿಎ ಅಧಿಕಾರಿಗಳು ಈ ಬಾರಿ ಸಂಪೂರ್ಣ ಕಂಪ್ಯೂಟರೀಕೃತ ಲಾಟರಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ಮೂಲಕ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳಿಗೆ ಈ ಪ್ರಕ್ರಿಯೆ ವೇಳೆ ಅವಕಾಶ ಇರಲಿಲ್ಲ ಎಂದು ಹೇಳಿದರು.
ಮೂರ್ನಾಲ್ಕು ವಿಸ್ತೀರ್ಣದ ನಿವೇಶನಗಳನ್ನು ಹಂಚಿಕೆದಾರರ ವಯಸ್ಸನ್ನು ಪರಿಗಣಿಸಿ ಜೇಷ್ಠತೆ ಆಧಾರದಲ್ಲಿ ಹಂಚಿಕೆ ನಡೆಸಲಾಯಿತು ಎಂದು ವಿವರಿಸಿದರು.
ಲಭ್ಯತೆ ಆಧಾರದಲ್ಲಿ ಹಂಚಿಕೆ :
ಇನ್ನುಳಿದ ನಿವೇಶನದಾರರಿಗೆ ಅರ್ಕಾವತಿಯಲ್ಲಿ ಲಭ್ಯತೆ ಆಧಾರದಲ್ಲಿ ಹಂತ ಹಂತವಾಗಿ ನಿವೇಶನಗಳನ್ನು ಇದೇ ಮಾದರಿಯಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ :
ಅರ್ಕಾವತಿಯಲ್ಲಿ ನಿವೇಶನ ಹಂಚಿಕೆಯಾಗಿ ನೋಂದಣಿ ಮಾಡಿಕೊಂಡು ನಾನಾ ಕಾರಣಗಳಿಂದಾಗಿ ನಿವೇಶನ ವಂಚಿತರಾಗಿರುವವರು ಬಯಸಿದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲು ಬಿಡಿಎ ಸಿದ್ಧವಿರುವುದಾಗಿ ವಿಶ್ವನಾಥ್ ಭರವಸೆ ನೀಡಿದರು.
ಆಸಕ್ತಿ ತೋರಿ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸುವವರಿಗೆ 15 ರಿಂದ 20 ದಿನಗಳೊಳಗಾಗಿ ನಿವೇಶನವನ್ನು ಹಂಚಿಕೆ ಮಾಡಿಕೊಡಲಾಗುವುದು ಎಂದೂ ಅವರು ಭರವಸೆ ನೀಡಿದರು.
ಆಯುಕ್ತರು, ಅಧಿಕಾರಿಗಳಿಂದ ಸಹಕಾರ :
ಬಿಡಿಎ ಆಯುಕ್ತರಾದ ರಾಜೇಶ್ ಗೌಡ ಮತ್ತು ಬಿಡಿಎ ಅಧಿಕಾರಿಗಳು, ಎಂಜಿನಿಯರ್ ಗಳು ಸಹಕಾರ ನೀಡಿದ್ದರಿಂದ ಅರ್ಕಾವತಿ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಸಾಧ್ಯವಾಗಿದೆ ಎಂದು ವಿಶ್ವನಾಥ್ ಶ್ಲಾಘಿಸಿದರು.
58 ಜನವರಿಗೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ
ಇದೇ ವೇಳೆ, ಅರ್ಕಾವತಿಯಲ್ಲಿ ನಿವೇಶನ ವಂಚಿತರಾದ 58 ಮಂದಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನವನ್ನೂ ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಡಿಎ ಆಯುಕ್ತ ರಾಜೇಶ್ ಗೌಡ, ಕಾರ್ಯದರ್ಶಿ ಆನಂದ್ ಮತ್ತು ಇನ್ನಿತರೆ ಅಧಿಕಾರಿಗಳು ಹಾಗೂ 150 ಕ್ಕೂ ಹೆಚ್ಚು ಮಂದಿ ಅರ್ಕಾವತಿ ನಿವೇಶನದಾರರು ಇದ್ದರು. ಸರ್ಕಾರದ ಕೋವಿಡ್ ನಿಯಮಾವಳಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಬದಲಿ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಎಲ್ಲರೂ ಮರೆತಂತಿತ್ತು.