ಬೆಂಗಳೂರು ( www.bengaluruwire.com ) : ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿಯನ್ನು, ಅಟಲ್ ಜೀ ಜನಸ್ನೇಹಿ ಕೇಂದ್ರ (ಎಜೆಎಸ್ ಕೆ) ಅಥವಾ ಸರ್ಕಾರದ ಇನ್ನಾವುದೇ ಆನ್ ಲೈನ್ ಮೂಲಕ ದಾಖಲೆ ಸಲ್ಲಿಸಿದ ಮೇಲೆ ಪದೇ ಪದೇ ಅದೇ ದಾಖಲೆಗಳನ್ನು ಕೇಳದಂತೆ ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಆಡಳಿತ ಸುಧಾರಣಾ ಆಯೋಗ-2ರ ಮೊದಲ ವರದಿಯಲ್ಲಿ ಸ್ಪಷ್ಟವಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ನಿವೃತ್ತ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅಧ್ಯಕ್ಷತೆಯ ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಮೊದಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಆಡಳಿತ ವಿಚಾರವಾಗಿ ಹಲವು ಪ್ರಮುಖ ಶಿಫಾರಸ್ಸುಗಳನ್ನು ಮಾಡಲಾಗಿದೆ.
ಸಾಮಾನ್ಯವಾಗಿ ಗುರ್ತಿನ ಚೀಟಿ ಹಾಗೂ ವಿಳಾಸದ ಗುರ್ತಿನ ಚೀಟಿಯಾಗಿ ಪಡಿತರ ಚೀಟಿ, ಆಧಾರ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಮತದಾರರ ಗುರ್ತಿನ ಚೀಟಿಯನ್ನು ಬಳಕೆಮಾಡಲಾಗುತ್ತಿದೆ. ಎಜೆಎಸ್ ಕೆ ಅಥವಾ ಬೇರೆ ಸರ್ಕಾರಿ ಆನ್ ಲೈನ್ ಸೇವೆಯಲ್ಲಿ ದಾಖಲೆಗಳ್ನು ಸಲ್ಲಿಸುವಾಗ ಆ ದತ್ತಾಂಶಗಳನ್ನು ಎಜೆಎಸ್ ಕೆಯಲ್ಲಿ ಸಂಗ್ರಹಿಸುವ ವ್ಯವಸ್ಥೆ ರೂಪಿಸಬೇಕು. ಅರ್ಜಿದಾರ ಮತ್ಯಾವುದೇ ಸರ್ಕಾರಿ ಸೇವೆಗಾಗಿ ಹೊಸ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಈ ದಾಖಲೆ ಸ್ವಯಂಚಾಲಿತವಾಗಿ ನಮೂನೆಯಲ್ಲಿ ತುಂಬಿಕೊಳ್ಳುವಂತಿರಬೇಕು. ಅಂತಹ ದಾಖಲೆಗಳನ್ನು ಸಾರ್ವಜನಿಕರಿಂದ ಪದೇ ಪದೇ ಸಲ್ಲಿಸದಂತೆ ಕೇಳಕೂಡದು.
ಈ 6 ದಾಖಲೆಗಳ ಆಧಾರದ ಮೇಲೆ ಸುಮಾರು 15 ಪ್ರಮಾಣಪತ್ರಗಳನ್ನು ಎಜೆಎಸ್ ಕೆನಲ್ಲಿ ಸ್ವಯಂಚಾಲಿತವಾಗಿ ಪಡೆಯಬಹುದು ಅಥವಾ ಸಂಗ್ರಹಿಸಿಡಬಹುದು. ಅದೇ ರೀತಿ ಅರ್ಜಿದಾರನ ಡಿಜಿ ಲಾಕರ್ ನಲ್ಲಿ ಇಡಬಹುದು. ಒಂದೊಮ್ಮೆ ಡಿಜಿಲಾಕರ್ ನಿಂದ ಡೌನ್ ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ನಿರ್ಧಿಷ್ಟ ಶುಲ್ಕ ವಸೂಲಿ ಮಾಡಬಹುದು. ಅರ್ಜಿಗಳನ್ನು ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಸಲ್ಲಿಸಿದ್ರೆ, ಈ ಸರ್ಟಿಫಿಕೇಟ್ ಗಳನ್ನು ಕೌಂಟರ್ ಮೂಲಕವೂ ಸಿಗುವಂತೆ ವ್ಯವಸ್ಥೆ ಮಾಡಬಹುದು ಎಂದು ಆಡಳಿತ ಸುಧಾರಣಾ ವರದಿಯಲ್ಲಿ ತಿಳಿಸಲಾಗಿದೆ.
ಮೊದಲಿಗೆ 3 ಇಲಾಖೆಗಳ ಕುರಿತು ಅಧ್ಯಯನ ನಡೆಸಿ ಶಿಫಾರಸ್ಸು ಮಾಡಿದ ಆಯೋಗ :
ಈ ವರ್ಷದ ಜನವರಿ 11ರಿಂದ ಕಾರ್ಯಾರಂಭ ಮಾಡಿರುವ ಟಿ.ಎಂ.ವಿಜಯ್ ಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ, ತಂತ್ರಜ್ಞಾನ ಸಹಾಯದಿಂದ 21ನೇ ಶತಮಾನದಲ್ಲಿ ಅದರಲ್ಲೂ ಮುಂದಿನ ದಶಕಗಳಲ್ಲಿ ಉತ್ತಮ ಆಡಳಿತ ಹಾಗೂ ಆಡಳಿತ ವ್ಯವಸ್ಥೆ ರೂಪಿಸಲು, ಈಗಿರುವ ವ್ಯವಸ್ಥೆಯ ಸಮಗ್ರ ಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ ಎಂದಿದೆ. ಈ ಹಿನ್ನಲೆಯಲ್ಲಿ ಕಂದಾಯ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಹಾಗೂ ಸಾರಿಗೆ ಇಲಾಖೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿ, ಜು.3ರಂದು ತನ್ನ ಮೊದಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಮಧ್ಯಂತರ ವರದಿಯಲ್ಲಿ 856 ಶಿಫಾರಸ್ಸು ಮಾಡಿರುವ ಆಯೋಗ:
ಸಕಾಲ ಸೇವಾ ಕಾಯ್ದೆಯಡಿ ಎಲ್ಲ ನಾಗರೀಕ ಸೇವೆಗಳಿಗಾಗಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಜನವರಿ 2019ರಿಂದ ಫೆಬ್ರವರಿ 2021ರ ತನಕ ಪಡೆದ ಅರ್ಜಿಗಳ ಸಂಖ್ಯೆಯನ್ನು ಆಯೋಗ ಪರಿಶೀಲಿಸಿತು. ಈ ಅವಧಿಯಲ್ಲಿ ಒಟ್ಟು 5.45 ಕೋಟಿ ಅರ್ಜಿಗಳನ್ನು ಸ್ವೀಕರಿಸಿದ್ದು, 4.32 ಕೋಟಿ ಅರ್ಜಿ (ಒಟ್ಟು ಶೇ.79) ಗಳು ಕಂದಾಯ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಿಂದ ಸ್ವೀಕರಿಸಿರುವುದನ್ನು ಗಮನಿಸಿತು. ಹೀಗಾಗಿ ವಿವರವಾದ ಅಧ್ಯಯನಕ್ಕೆ ಈ ಮೂರು ಇಲಾಖೆಗಳಲ್ಲಿನ ನಾಗರೀಕ ಸೇವೆಗಳನ್ನು ಅಧ್ಯಯನಕ್ಕೆ ತೆಗೆದುಕೊಂಡು, ಕಂದಾಯ ಇಲಾಖೆಯ 79 ಆನ್ ಲೈನ್ ಸೇವೆ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ 7 ಸೇವೆಗಳು ಹಾಗೂ ಸಾರಿಗೆ ಇಲಾಖೆಯ 7 ಸೇವೆಗಳನ್ನು 360 ಡಿಗ್ರಿಯಲ್ಲಿ ಸಮಗ್ರವಾಗಿ ಮೌಲ್ಯಮಾಪನ ಮಾಡಿತು. ನಂತರ ಈ ಮೂರು ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 856 ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ತಿಳಿಸಿದೆ. ಈ ಅಧ್ಯಯನ ಹಾಗೂ ಮೌಲ್ಯಮಾಪನ ಕಾರ್ಯಕ್ಕಾಗಿ ಒಟ್ಟು 57 ಪ್ರೊಬೆಷನರಿ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳು, ಐಐಎಂಬಿ, ಐಐಎಸ್ ಸ್ಸಿ ಸೇರಿದಂತೆ ಹಲವು ಸಂಸ್ಥೆಗಳ ಸಲಹೆ, ನೆರವು, ಮಾರ್ಗದರ್ಶನ ಪಡೆದುಕೊಂಡಿದೆ. ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳು ಮತ್ತಿತರರನ್ನು ಸಂಪರ್ಕ ಮಾಡಿ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಆಡಳಿತ ಸುಧಾರಣಾ ಆಯೋಗದ ಪ್ರಮುಖ ಶಿಫಾರಸ್ಸುಗಳು ಈ ಕೆಳಕಂಡಂತಿದೆ :
ಎ) ಕಂದಾಯ ಇಲಾಖೆಗೆ ಸಂಬಂಧಿಸಿದ ಶಿಫಾರಸ್ಸುಗಳು :
* ಎಲ್ಲಾ ಇಲಾಖೆಗಳು, ನಾಗರೀಕರಿಗೆ ಒದಗಿಸುವ ಸುಮಾರು 800 ಆನ್ ಲೈನ್ ಸೇವೆಗಳಿಗೆ ಅಟಲ್ ಜಿ ಜನಸ್ನೇಹಿ ಕೇಂದ್ರಗಳನ್ನು (ಎಜೆಎಸ್ ಕೆ) ಏಕಗವಾಕ್ಷಿ ವೇದಿಕೆಯಾಗಿಸಬೇಕು.
* ಎಲ್ಲ ಸಕಾಲ ಅರ್ಜಿಗಳಲ್ಲಿ ಶೇ.81ರಷ್ಟು ಅರ್ಜಿಗಳು ಆನ್ ಲೈನ್ ಮೂಲಕ ಸಲ್ಲಿಕೆಯಾಗುತ್ತಿದೆ. ಹಾಗಾಗಿ ಎಲ್ಲ ಇಲಾಖೆಗಳ ಸಕಾಲ ಹಾಗೂ ಸಕಲೇತರ 800 ಇ-ಸೇವೆಗಳಿಗೆ ಸೇವೆ ಸಿಂಧು ಏಕಮಾತ್ರ ವೇದಿಕೆಯಾಗಬೇಕು.
* ರಾಜ್ಯ ಸರ್ಕಾರದ ಎಲ್ಲಾ ಇ-ಸೇವೆಗಳನ್ನು ಮೊಬೈಲ್ ಮೂಲಕ ಒದಗಿಸಲು “ಕರ್ನಾಟಕ ಮೊಬಲ್ ಒನ್ ಆಪ್” ಅನ್ನು ಇತ್ತೀಚೆಗಿನ ತಂತ್ರಜ್ಞಾನವನ್ನು ಬಳಸಿಕೊಂಡು ಪುನರ್ ಅಭಿವೃದ್ಧಿಗೊಳಿಸಬೇಕು.
* ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಯಂತಹ ಸ್ಥಳೀಯ ಸಂಸ್ಥೆಗಳು ಭೂಮಿ, ಜಾತಿ ಅಥವಾ ಆದಾಯಕ್ಕೆ ಸಂಬಂಧಪಡದ ವಂಶವೃಕ್ಷ, ವಾಸಸ್ಥಳದಂತಹ ಕಂದಾಯ ಪ್ರಮಾಣಪತ್ರಗಳನ್ನು ಒದಗಿಸಲು ಅಧಿಕಾರ ನೀಡಬಹುದು.
* ಎಸ್ ಜೆಎಸ್ ಕೆ, ಭೂಮಿ, ಸಾಮಾಜಿಕ ಭದ್ರತಾ ಪಿಂಚಣಿ (ಎಸ್ ಎಸ್ ಪಿ), ಭೂ ಮಾಪನ ಮತ್ತು ಭೂ ದಾಖಲೆಗಳು (ಎಸ್ಎಸ್ಎಲ್ ಆರ್) ಸೇವಾ ಪೋರ್ಟಲ್ ಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಆನ್ ಲೈನ್ ವ್ಯಾಲೆಟ್ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕಿದೆ. ಇದಕ್ಕಾಗಿ ಯುಪಿಐ, ಕ್ಯೂ ಆರ್ ಕೋಡ್ ಪಾವತಿ ವಿಧಾನವನ್ನು ಹೊಂದಿರಬೇಕು.
* ಕೆಲವು ಪ್ರಮಾಣಪತ್ರಗಳು ಅನುಪಯುಕ್ತವಾಗಿದ್ದು (ಜನಸಂಖ್ಯೆ, ವಾಸಸ್ಥಳ, ಬೆಲೆ ಹಾಗೂ ಕೃಷಿಕ) ಅವುಗಳ ಬದಲು ಪರ್ಯಾಯಗಳನ್ನು ಸೂಚಿಸಿ ಸರ್ಕಾರಿ ಆದೇಶ ಹೊರಡಿಸುವ ಅಗತ್ಯವಿದೆ.
* ಭೂಸ್ವಾಧೀನ ನಿರ್ವಹಣಾ ಸಾಫ್ಟ್ ವೇರ್ ತ್ವರಿತವಾಗಿ ಅಭಿವೃದ್ಧಿಪಡಿಸಬೇಕು. ಅದನ್ನು ಕೆಐಎಡಿಬಿ, ಬಿಡಿಎ, ಎನ್ಎಚ್ ಎಐ ಸೇರಿದಂತೆ ವಿವಿಧ ಭೂ ಸ್ವಾಧೀನಪಡಿಸಿಕೊಳ್ಳುವ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚಿಸಬೇಕು.
* ಭೂಮಿ, ಸ್ಥಿರಾಸ್ಥಿ ಅಥವಾ ಇನ್ನಾವುದೇ ಆಸ್ತಿಗಳ ಅಡಮಾನ ನೋಂದಣಿ ಹಾಗೂ ಅಡಮಾನ ಬಿಡುಗಡೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ ಲೈನ್ ಮಾಡಬೇಕು. ಅದೇ ರೀತಿ ಋಣರಾಹಿತ್ಯ ಪ್ರಮಾಣಪತ್ರ (ಎನ್ ಕಂಬ್ರೆನ್ಸ್ ಸರ್ಟಿಫಿಕೇಟ್) ಪಡೆಯುವ ವಿಧಾನವನ್ನು ಸರಳೀಕರಿಸಬೇಕು. ಇದರಿಂದ ಲಕ್ಷಾಂತರ ಕೃಷಿಕರಿಗೆ ಹಾಗೂ ಅಡಮಾನ ನೋಂದಣಿ ಮತ್ತು ಬಿಡುಗಡೆ ವಿಚಾರದಲ್ಲಿ ನಾಗರೀಕರಿಗೆ ನೋಂದಣಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ.
* ಅಟಲ್ ಜಿ ಜನಸ್ನೇಹಿ ಕೇಂದ್ರ, ತಹಸೀಲ್ದಾರ್, ಎಡಿಎಲ್ ಆರ್, ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲಿನ ಹಂತದ ಎಲ್ಲಾ ಕಚೇರಿಗಳಿಗೆ ಇ- ಆಫೀಸ್ ಕಡ್ಡಾಯಗೊಳಿಸಬೇಕು.
* ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಿ, ರಾಜ್ಯಮಟ್ಟದಲ್ಲಿ ಕಂದಾಯ ಆಯುಕ್ತಾಲಯ ಸ್ಥಾಪಿಸಬಹುದು.
ಬಿ) ಆಹಾರ ಇಲಾಖೆಗೆ ಆಯೋಗ ನೀಡಿದ ಶಿಫಾರಸ್ಸುಗಳ ಪ್ರಮುಖಾಂಶಗಳು :
* ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿಯವರು ಒಪ್ಪಿದ ಶುಲ್ಕಪಾವತಿಸಿ, ಮನೆಬಾಗಿಲಿಗೆ ಪಡಿತರ ತಲುಪಿಸಲು ವ್ಯವಸ್ಥೆ ರೂಪಿಸಬಹುದು.
* ಜನನ, ಮರಣ ನೋಂದಣಿ ಪ್ರಕ್ರಿಯೆ ಪಡಿತರ ಚೀಟಿ ಡೇಟಾಬೇಸ್ ನೊಂದಿಗೆ ಸಂಯೋಜಿಸಿ, ಮರಣ ನೋಂದಣಿಯ ನಂತರ ಪಡಿತರ ಚೀಟಿ ಕುಂಬದ ಸದಸ್ಯರ ಪಟ್ಟಿ ಸ್ವಯಂಚಾಲಿತವಾಗಿ ನವೀಕರಣವಾಗುವಂತಾಗಬೇಕು.
ಸಾರಿಗೆ ಇಲಾಖೆಗೆ ಆಯೋಗದ ಶಿಫಾರಸ್ಸಿನ ಮುಖ್ಯಾಂಶಗಳು :
*ಪ್ರಾದೇಶಿಕ ಸಾರಿಗೆ ಇಲಾಖೆಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಕಾಗದ ರಹಿತ ಮಾಡುವುದು.
* ಬೆಂಗಳೂರು ನಗರದ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿಗೆ ಅವಕಾಶವಿರುವಂತೆ ಆರ್ ಟಿಒ ಕಚೇರಿಯನ್ನು ಆಯ್ಕೆ ಮಾಡಿಕೊಳ್ಳುವಂತಿರಬೇಕು.
* ವಶಪಡಿಸಿಕೊಂಡ ವಾಹನಗಳ ದಂಡ ಪಾವತಿಸದಿದ್ದರೆ, ಇ- ಹರಾಜಿಗೆ ಪೂರಕವಾಗಿ ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಬಹುದು.
* ಆರ್ ಟಿಒ ಕಚೇರಿಗಳಲ್ಲಿ ಕ್ಯೂ ಆರ್ ಕೋಡ್ ಆಧಾರಿತ ಕ್ರೆಡಿಟ್, ಡೆಬಿಟ್ ಕಾರ್ಡ್ ಪಾವತಿಯಂತ್ರ ಸ್ಥಾಪನೆಗೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ಒಟ್ಟಾರೆ ಈ ಹಿಂದೆ 2000ನೆಯ ಇಸವಿಯಲ್ಲಿ ಹಾರನಹಳ್ಳಿ ರಾಮಸ್ವಾಮಿ ನೇತೃತ್ವದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರ ಆಡಳಿತ ಸುಧಾರಣಾ ಆಯೋಗವನ್ನು ಸ್ಥಾಪಿಸಿತ್ತು. ಆ ಆಯೋಗ 2001ರ ಡಿಸೆಂಬರ್ ನಲ್ಲಿ ತನ್ನ ಶಿಫಾರಸ್ಸು ನೀಡಿತ್ತು. ಮೊದಲ ಆಯೋಗ ನೀಡಿದ 256 ಶಿಫಾರಸ್ಸುಗಳ ಪೈಕಿ ಸರ್ಕಾರವು 234 ಶಿಫಾರಸ್ಸುಗಳನ್ನು ಜಾರಿಗೆ ತಂದಿತ್ತು. ಇದೀಗ 21 ವರ್ಷದ ನಂತರ ರಾಜ್ಯ ಸರ್ಕಾರವು, ಟಿ.ಎಂ.ವಿಜಯ್ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗವನ್ನು ರಚಿಸಿದ್ದು, ಈ ಆಯೋಗವು ಸದ್ಯ ಮಧ್ಯಂತರ ವರದಿ ನೀಡಿದ್ದು, ಹಂತ ಹಂತವಾಗಿ ಸರ್ಕಾರಕ್ಕೆ ವಿವಿಧ ಇಲಾಖೆಗಳಲ್ಲಿನ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಭವಿಷ್ಯದ ಕರ್ನಾಟಕದ ಆಡಳಿತ ದೃಷ್ಟಿಯಲ್ಲಿಟ್ಟುಕೊಂಡು ಹಲವು ಸುಧಾರಣಾ ಕ್ರಮಗಳನ್ನು ಶಿಫಾರಸ್ಸು ಮಾಡಲಿದೆ. ಆದರೆ ಸರ್ಕಾರ ಎಷ್ಟು ವರದಿಗಳನ್ನು ಜಾರಿಗೆ ತರುತ್ತದೆ ಎಂದು ಕಾದುನೋಡಬೇಕಿದೆ.