ಬೆಂಗಳೂರು ( www.bengaluruwire.com ) : ರಾಜ್ಯ ಸರ್ಕಾರ ಕಳೆದ ಎರಡೂವರೆ ವರ್ಷದಿಂದ ಹೊಸದಾಗಿ ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ವಿತರಣೆಯನ್ನೇ ಸ್ಥಗಿತಗೊಳಿಸಿದೆ. ಅಲ್ಲದೆ ಈಗಾಗಲೇ ಆಹಾರ ಇಲಾಖೆಗೆ 3.37 ಲಕ್ಷ ಅರ್ಜಿ ಸಲ್ಲಿಸಿದ್ದರೂ ಇನ್ನೂ ವಿಲೇವಾರಿಯಾಗದೆ ಬಾಕಿ ಉಳಿದಿದೆ.
ಕರೋನಾ ಸಂಕಷ್ಠ ರಾಜ್ಯದಲ್ಲಿ ಒಂದೆಡೆ ಸಾಮಾನ್ಯ ಜನರನ್ನು ಹಿಂಡೆ ಹಿಪ್ಪೆ ಮಾಡ್ತಿದ್ರೆ ಇನ್ನೊಂದೆಡೆ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಮಧ್ಯೆ ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಪ್ರಕ್ರಿಯೆ ನಿಲ್ಲಿಸಿರುವುದು ಅರ್ಹತೆ ಹೊಂದಿದ ನಿಜವಾದ ಫಲಾನುಭವಿಗಳ ಜೀವನಕ್ಕೆ ಕಲ್ಲು ಹಾಕಿದಂತಾಗಿದೆ.
2018 ರ ಮಧ್ಯಭಾಗದಿಂದಲೇ ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್ ವಿತರಣೆ ಮಾಡುವುದನ್ನು ನಿಲ್ಲಿಸಲಾಗಿದೆ. ಅಲ್ಲಿಂದ 2019 ಹಾಗೂ 2020ರಲ್ಲಿ ಕೆಲವು ದಿನಗಳ ಕಾಲ ಮಾತ್ರ ಅರ್ಜಿ ಪರಿಶೀಲಿಸಿ, ಕಾರ್ಡ್ ವಿತರಿಸಿ ಪುನಃ ಕಾರ್ಡ್ ವಿತರಣೆಯನ್ನೇ ನಿಲ್ಲಿಸಲಾಗಿದೆ. ಇದರಿಂದ ನಿಜವಾದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ.
ಕರ್ನಾಟಕದಲ್ಲಿ 1.48 ಕೋಟಿ ರೇಷನ್ ಕಾರ್ಡ್ ಹಂಚಿಕೆ :
ರಾಜ್ಯಾದ್ಯಂತ ಒಟ್ಟು 1,48,89,430 ರೇಷನ್ ಕಾರ್ಡ್ (1.48 ಕೋಟಿ ರೇಷನ್ ಕಾರ್ಡ್) ಗಳನ್ನು ಹಂಚಿಕೆ ಮಾಡಲಾಗಿದೆ. ಆ ಪೈಕಿ 10,91,038 ಅಂತ್ಯೋದಯ, 1,15,48,861 ಬಿಪಿಎಲ್ ಕಾರ್ಡ್ ಹಾಗೂ 22,49,531 ಎಪಿಎಲ್ ಕಾರ್ಡ್ ದಾರರಿದ್ದಾರೆ.
4.08 ಲಕ್ಷ ಎಎವೈ, ಬಿಪಿಎಲ್ ಕಾರ್ಡ್ ಅನರ್ಹರ ಪಾಲು :
ರಾಜ್ಯದಲ್ಲಿ ನಕಲಿ ದಾಖಲೆ ಅಥವಾ ಮಾಹಿತಿ ಮುಚ್ಚಿಟ್ಟು 4,06,488 ಅನರ್ಹತೆ ಹೊಂದಿದ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ದಾರರು ಕಾರ್ಡ್ ಪಡೆದುಕೊಂಡಿರುವುದನ್ನು ಆಹಾರ ಇಲಾಖೆ ಗುರ್ತಿಸಿದೆ. ಆ ರೇಷನ್ ಕಾರ್ಡ್ ಗಳ ಪೈಕಿ 3.77 ಲಕ್ಷ ಬಿಪಿಎಲ್ ಕಾರ್ಡ್ ಗಳಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಬಗ್ಗೆ ಇಲಾಖೆ, ಈ ವರ್ಷದ ಏಪ್ರಿಲ್ ನಿಂದ ವಿವಿಧ ಆಯಾಮಾದಲ್ಲಿ ಪರಿಶೀಲನೆ ನಡೆಸಿ ಈತನಕ 7630 ಅಂತ್ಯೋದಯ, 1,39,851 ಬಿಪಿಎಲ್ ಕಾರ್ಡ್ ಸೇರಿ ಒಟ್ಟು 1.47 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿದೆ.
2011 ಜನಗಣತಿಯಂತೆ ರಾಜ್ಯದಲ್ಲಿ ಶೇ.96ರಷ್ಟು ಬಿಪಿಎಲ್ ಕುಟುಂಬಗಳಿವೆ…!
ರಾಜ್ಯದ ಆಹಾರ ಇಲಾಖೆಯ ಅಧಿಕೃತ ಮಾಹಿತಿಯಂತೆ 2011 ರ ಜನಗಣತಿ ಪ್ರಕಾರ ಒಟ್ಟಾರೆ ಶೇ.96ರಷ್ಟು ಬಿಪಿಎಲ್ ಕುಟುಂಬಗಳಿವೆ ಎಂದು ಲೆಕ್ಕ ನೀಡಿದೆ. ಇನ್ನು ಈಗಾಗಲೇ ರಾಜ್ಯದಲ್ಲಿ ಹಂಚಿಕೆ ಮಾಡಿರುವ ರೇಷನ್ ಕಾರ್ಡ್ ಗಳ ಪೈಕಿ ಶೇ.85ರಷ್ಟು ಬಿಪಿಎಲ್ ಕಾರ್ಡ್ ಗಳಿವೆ ಎಂದು ತಿಳಿಸಿದೆ. ಪರಿಸ್ಥಿತಿ ಹೀಗಿರುವಾಗ ಹೊಸದಾಗಿ ಮತ್ತಷ್ಟು ಅಂತ್ಯೋದಯ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಹಂಚಿಕೆ ಮಾಡಲು ಆಗದು. ಹಾಗಾಗಿಯೇ ಸರ್ಕಾರ, ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಪಡೆದುಕೊಂಡ ಅನರ್ಹರನ್ನು ಗುರ್ತಿಸುವ ಕೆಲಸಕ್ಕೆ ಕೈ ಹಾಕಿದೆ.
ಅನರ್ಹರನ್ನು ಗುರ್ತಿಸಿ ಅವರ ಬಿಪಿಎಲ್ ಕಾರ್ಡ್ ರದ್ದು ಮಾಡಿ ಆ ಜಾಗದಲ್ಲಿ ಅರ್ಹರಿಗೆ ಕಾರ್ಡ್ ವಿತರಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಹೀಗಾಗಿ ಅನರ್ಹರನ್ನು ಗುರ್ತಿಸುವ ಕಾರ್ಯ ನಿರಂತರವಾಗಿ ಸಾಗಿದೆ ಅಂದು ಸರ್ಕಾದ ಉನ್ನತ ಮೂಲಗಳು ತಿಳಿಸಿವೆ.
“ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ 2011 ರ ಜನಗಣತಿ ಪ್ರಕಾರ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಬಿಪಿಎಲ್ ಕಾರ್ಡ್ ಪಡೆಯಲು ಯಾರು ಅರ್ಹರು, ಅನರ್ಹರೆಂದು ಮಾನದಂಡ ನಿಗಧಿಪಡಿಸಿದೆ. ಆ ಮಾನದಂಡ ಉಲ್ಲಂಘಿಸಿ ಕಾರ್ಡ್ ಪಡೆದುಕೊಂಡ ಫಲಾನುಭವಿಗಳ ವಿವರಗಳ ದತ್ತಾಂಶಗಳನ್ನು ವಿವಿಧ ಇಲಾಖೆ ವಿವರಗಳ ಜೊತೆ ತಾಳೆ ಹಾಕಿ ಅನರ್ಹರನ್ನು ಗುರ್ತಿಸುವ ಕೆಲಸ ಏಪ್ರಿಲ್ ನಿಂದ ಆರಂಭವಾಗಿದೆ. ಇದು ನಿರಂತವಾಗಿ ನಡೆಯಲಿದೆ.”
“ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಅಪ್ಲಿಕೇಶನ್ ಗಳನ್ನು ಪರಿಶೀಲಿಸುವ ಕಾರ್ಯ ಆಗಸ್ಟ್ ಒಳಗೆ ಪೂರ್ಣವಾಗಲಿದೆ. ಆನಂತರ ಸರ್ಕಾರ ತೀರ್ಮಾನ ಕೈಗೊಂಡು, ಹೊಸ ಕಾರ್ಡ್ ವಿತರಣೆ ಮಾಡಲಿದೆ.”
– ಬಿ.ಎಚ್.ಅನಿಲ್ ಕುಮಾರ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
1.51 ಲಕ್ಷ ಅರ್ಜಿಗಳಿನ್ನೂ ವಿಲೇವಾರಿಯಾಗಿಲ್ಲ :
ಜೂ.30 ರ ಆಹಾರ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಗಾಗಿ 3,34,457 ಮಂದಿ ಅರ್ಜಿ ಸಲ್ಲಿಸಿದ್ದರೆ, 3,463 ಮಂದಿ ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಒಟ್ಟಾರೆ 1,51,828 ಅರ್ಜಿಗಳನ್ನು ಇನ್ನೂ ಪರಿಶೀಲಿಸಬೇಕಿದೆ. ಈತನಕ ಒಟ್ಟಾರೆ ವಿವಿಧ ಕಾರಣಗಳಿಗಾಗಿ 62,411 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆದರೆ ಸ್ವೀಕರಿಸಿರುವ ಅರ್ಜಿಗಳ ಪೈಕಿ ದಾಖಲೆ ಪರಿಶೀಲನೆ ನಡೆಸಿದರೂ ಇನ್ನೂ ಅರ್ಜಿದಾರರು ನೆಲೆಸಿರುವ ವಾಸಸ್ಥಳ, ಅವರ ಸ್ಥಿತಿಗತಿಗಳ ಪರಿಶೀಲನೆ ನಡೆಸಿಲ್ಲ. ಕಳೆದ ವರ್ಷದಿಂದ ಕರೋನಾ ಸೋಂಕು ಏರಿಕೆಯಾದ ಮೇಲಂತೂ ಆಹಾರ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆಯನ್ನೇ ನಿಲ್ಲಿಸಿದ್ದಾರೆ.
ಹೀಗಾಗಿ ಅರ್ಜಿ ಸಲ್ಲಿಸಿದರೂ ಅರ್ಹರು ಬಿಪಿಎಲ್ ಕಾರ್ಡ್ ಪಡೆಯಲು ವರ್ಷಗಟ್ಟಲೆ ಕಾಯುವಂತಾಗಿದೆ. ಆಗಸ್ಟ್ ವೇಳೆಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಹೊಸ ಕಾರ್ಡ್ ವಿತರಣೆಗೆ ಅಗತ್ಯವಾದ ಪರಿಶೀಲನೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಆನಂತರ ಸರ್ಕಾರ ಈ ಕಾರ್ಡ್ ಗಳನ್ನು ವಿತರಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಅನರ್ಹ ರೇಷನ್ ಕಾರ್ಡ್ ದಾರರ ಹೆಡೆಮುರಿ ಕಟ್ಟುತ್ತಿರುವ ಇಲಾಖೆ :
ರಾಜ್ಯಾದ್ಯಂತ ಇರುವ ಎಲ್ಲಾ ರೇಷನ್ ಕಾರ್ಡ್ ಫಲಾನುಭವಿಗಳ ಆಧಾರ್ ಕಾರ್ಡ್ ದತ್ತಾಂಶವನ್ನು ಆಹಾರ ಇಲಾಖೆ ಹೊಂದಿದೆ. ಇಲಾಖೆ ಬಳಿಯಿರುವ ಆಹಾರ ಕಾರ್ಡ್ ಫಲಾನುಭವಿಗಳ ದತ್ತಾಂಶವನ್ನು ಆದಾಯ ತೆರಿಗೆ ಇಲಾಖೆ, ಕಂದಾಯ ಇಲಾಖೆ, ಮರಣಗಳ ದತ್ತಾಂಶ, ಸರ್ಕಾರಿ ನೌಕರರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್ ಆರ್ ಎಂಎಸ್) ಮತ್ತಿತರ ಮೂಲಗಳಿಂದ ಮಾಹಿತಿ ಕಲೆ ಹಾಕಿ ಒಟ್ಟಾರೆ 4.06 ಲಕ್ಷ ಅನರ್ಹ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆ ಗುರ್ತಿಸಿದೆ.
ಯಾವ ಮೂಲಗಳಿಂದ ಎಷ್ಟೆಷ್ಟು ಅನರ್ಹರಾಗಿರುವ ಅಂತ್ಯೋದಯ/ ಬಿಪಿಎಲ್ ರೇಷನ್ ಕಾರ್ಡ್ ಗುರ್ತಿಸಲಾಗಿದೆ?
ಮೂಲಗಳು
• ಜಿಲ್ಲಾ / ತಾಲೂಕು ಅಧಿಕಾರಿಗಳಿಂದ – 50,833
• ಆದಾಯ ತೆರಿಗೆ ಇಲಾಖೆ ದತ್ತಾಂಶ – 85,204
• 1.2 ಲಕ್ಷ ರೂ.ವಾರ್ಷಿಕ ಕುಟುಂಬದ ಆದಾಯ ಮೀರಿದ ಕಾರ್ಡ್ ಗಳು – 50,060
• ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಗಿಂತ ಹೆಚ್ಚು ಜಮೀನು ಹೊಂದಿದವರು – 2,18,125
• ಖಾಯಂ ಸರ್ಕಾರಿ ನೌಕರರು – 2,127
4.01 ಲಕ್ಷ ಮರಣ ಹೊಂದಿದ ಫಲಾನುಭವಿಗಳ ಹೆಸರು ಕೈಬಿಟ್ಟ ಇಲಾಖೆ…!
ಜನನ – ಮರಣಗಳ ಸಾಂಖ್ಯಿಕ ಇಲಾಖೆ ದತ್ತಾಂಶದೊಂದಿಗೆ ಆಹಾರ ಇಲಾಖೆ ವಿತರಿಸಿರುವ ದತ್ತಾಂಶದೊಂದಿಗೆ ತಾಳೆಹಾಕಿ ಈಗಾಗಲೇ ಮರಣ ಹೊಂದಿದ 4,01,30 ಫಲಾನುಭವಿಗಳ ಹೆಸರನ್ನು ರೇಷನ್ ಕಾರ್ಡ್ ಸದಸ್ಯರ ಪಟ್ಟಿಯಿಂದ ತಗೆದು ಹಾಕಿದೆ.
ಆಹಾರ ಧಾನ್ಯ ಖರೀದಿಗೆ ವರ್ಷಂಪ್ರತಿ 1 ಸಾವಿರ ಕೋಟಿ ರೂ. ಖರ್ಚು :
ಕೇಂದ್ರ ಸರ್ಕಾರ ಪ್ರತಿವರ್ಷ ರಾಜ್ಯಕ್ಕೆ 10 ಲಕ್ಷ ಅಂತ್ಯೋದಯ ಕಾರ್ಡ್ ಗಳಿಗೆ ಕೇಂದ್ರದ ಪಾಲಿನಲ್ಲಿ ಉಚಿತ ಆಹಾರ ಹಂಚಿಕೆ ಮಾಡುತ್ತೆ. ಅದೇ ರೀತಿ ಪ್ರತಿ ತಿಂಗಳು 1.10 ಕೋಟಿ ಬಿಪಿಎಲ್ ಕಾರ್ಡ್ ಗಳಿಗೆ 2.17 ಲಕ್ಷ ಮೆಟ್ರಿಕ್ ಟನ್ (21.10 ಕೋಟಿ) ಅಕ್ಕಿಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೆಜಿಗೆ 2 ರೂ. ನಂತೆ ಸಬ್ಸೀಡಿ ದರದಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಲಿದೆ. ಆನಂತರ ಇದನ್ನು ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ ಆಹಾರ ಇಲಾಖೆ ವಿತರಣೆ ಮಾಡುತ್ತಿದೆ. ಉಳಿದ 5 ಲಕ್ಷ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಅಕ್ಕಿ ವಿತರಣೆ ಮಾಡಲು ರಾಜ್ಯ ಸರ್ಕಾರವೇ ರೈತರಿಂದ ನೇರವಾಗಿ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡುತ್ತದೆ.
ಹೀಗೆ ವರ್ಷಕ್ಕೆ ಆಹಾರಧಾನ್ಯ ಸಬ್ಸೀಡಿಗಾಗಿಯೇ ರಾಜ್ಯ ಸರ್ಕಾರ ಸಾರಿಗೆ ಮತ್ತಿತರ ಕರ್ಚು ಹೊರತುಪಡಿಸಿ ಕನಿಷ್ಠ ಒಂದು ಸಾವಿರ ಕೋಟಿ ರೂ. ಕರ್ಚು ಮಾಡುತ್ತಿದೆ. ಇದರಲ್ಲಿ ಅನರ್ಹ ಪಡಿತರದಾರರೂ ಸೇರಿಕೊಂಡರೆ ಅರ್ಹರಿಗೆ ದೊರಕಬೇಕಾದ ಸವಲತ್ತು ಸಿಗದೆ ವಂಚಿತರಾಗುತ್ತಾರೆ. ಇದಕ್ಕಾಗಿ ಸರ್ಕಾರ ಅನರ್ಹರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ನೂತನವಾಗಿ ಕಾರ್ಡ್ ಗಾಗಿ ಅರ್ಜಿ ಹಾಕಿದವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಸರ್ಕಾರ ಇದನ್ನು ತ್ವರಿತವಾಗಿ ಸರಿಪಡಿಸುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.