ಬೆಂಗಳೂರು ( www.bengaluruwire.com ) : ಆದಾಯ ತೆರಿಗೆ ಇಲಾಖೆಯು ಬರೋಬ್ಬರಿ 4,242 ಕೋಟಿ ರೂ. ಖರ್ಚು ಮಾಡಿ ಹೊರತಂದ ಇನ್ ಕಮ್‌ಟ್ಯಾಕ್ಸ್ ಪೋರ್ಟಲ್.2 ನೆಲಕಚ್ಚಿದೆ….!
2020-21ನೇ ಸಾಲಿನ ತೆರಿಗೆ ವಿವರ ಸಲ್ಲಿಕೆ ಮಾಡಲು ಇದೇ ಜೂನ್ 30ರಂದು ಇದ್ದ ಅವಧಿಯನ್ನು ಆದಾಯ ತೆರಿಗೆ ಇಲಾಖೆ ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಿದೆ. ಈ ಮಧ್ಯೆ ಈಗಾಗಲೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ 5 ಕೋಟಿ ಗೂ ಹೆಚ್ಚಿನ ತೆರಿಗೆದಾರರು ಇ- ಫೈಲಿಂಗ್ ಮಾಡಲು ಜೂ.7ರಂದು ಉದ್ಘಾಟನೆಯಾದ ಇನ್ ಕಮ್‌ಟ್ಯಾಕ್ಸ್ ಪೋರ್ಟಲ್.2 ನಲ್ಲಿ ಶತ ಪ್ರಯತ್ನ ಮಾಡಿದರೂ ಆಗುತ್ತಿಲ್ಲ.
ಸಾಫ್ಟ್ ವೇರ್ ದೈತ್ಯ ಸಂಸ್ಥೆಯೆಂಬ ಹಿರಿಮೆಗಳಿಸಿದ ಇನ್ ಫೋಸಿಸ್ ಈ ವೆಬ್ ಸೈಟ್ ವಿನ್ಯಾಸ ಮಾಡಿದ್ದು, ಸೂಕ್ತ ರೀತಿಯಲ್ಲಿ ಪೋರ್ಟಲ್ ಕಾರ್ಯನಿರ್ವಹಿಸದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ನೂರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿದೆ.
ಈಗಾಗಲೇ ಅಸ್ಥಿತ್ವದಲ್ಲಿದ್ದ www.incometaxindiaefiling.gov.in ಕಾಲ ಕಾಲಕ್ಕೆ ಈ ಪೋರ್ಟಲ್ ಅಪಡೇಟ್ ಆಗುತ್ತಿದ್ದರಿಂದ ಈ ವೆಬ್ ಫೊರ್ಟಲ್, ಆದಾಯ ತೆರಿಗೆ ಪಾವತಿದಾರರು, ತೆರಿಗೆ ವೃತ್ತಿಪರರು ಹಾಗೂ ಆದಾಯ ತೆರಿಗೆ ಇಲಾಖೆಗೂ ಸಾಕಷ್ಟು ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ www.incometax.gov.in ಎಂಬ ಹೊಸ ವೆಬ್ ಸೈಟ್ ಪ್ರಾರಂಭಿಸಲು ಐಟಿ ಇಲಾಖೆ ನಿರ್ಧರಿಸಿತ್ತು. ಅದರಂತೆ ಹಳೆಯ ವೆಬ್ ಸೈಟ್ ಕಾರ್ಯಾಚರಣೆ ನಿಲ್ಲಿಸಿ, ತೆರಿಗೆದಾರರ 4,242 ಕೋಟಿ ರೂ. ಅಥವಾ 6,000 ಕೋಟಿ ರೂ. ಹಣ ಕರ್ಚು ಮಾಡಿ ಹೊಸ ವೆಬ್ ಸೈಟ್ ಮಾಡುವ ಅವಶ್ಯಕತೆಯ ಬಗ್ಗೆ ಕರ್ನಾಟಕ ತೆರಿಗೆ ಪಾವತಿದಾರರು ಹಾಗೂ ವೃತ್ತಿಪರರ ಸಂಘ (ಕೆಟಿಪಿಎ), ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಗೆ ಬರೆದಿರುವ ಇ-ಮೇಲ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.
ಹೊಸ ವೆಬ್ ಸೈಟ್ ಬದಲಿಗೆ ಹಳೆಯದೇ ಮುಂದುವರೆಸಿ :
ಹೊಸ ವೆಬ್ ಸೈಟ್ ಮಾಡುವ ಬದಲು ಹಳೆಯ ವೆಬ್ ಸೈಟ್ ಗೆ ಹೊಸ ರೂಪ ನೀಡಬಹುದಿತ್ತು. ಅದೇ ಹಣವನ್ನು ತೆರಿಗೆ ಪಾವತಿದಾರರ ಹಾಗೂ ತೆರಿಗೆ ವೃತ್ತಿಪರರ ಸಾಮಾಜಿಕ ಭದ್ರತಾ ಕೆಲಸ ಕಾರ್ಯಗಳಿಗೆ ಬಳಸಬಹುದಿತ್ತು ಎಂದು ಇ-ಮೇಲ್ ನಲ್ಲಿ ತಿಳಿಸಲಾಗಿದೆ. ಈ ಪತ್ರದ ಪ್ರತಿ “ಬೆಂಗಳೂರು ವೈರ್” ಗೆ ಲಭ್ಯವಾಗಿದೆ.
ಕರ್ನಾಟಕ ಟ್ಯಾಕ್ಸ್ ಪೇಯರ್ಸ್ ಎಂಡ್ ಪ್ರಾಕ್ಟೀಷನರ್ ಅಸೋಸಿಯೇಷನ್ ಈ ಸಂಬಂಧ ಕೇಂದ್ರ ಸಚಿವರಿಗೆ ಆದಾಯ ತೆರಿಗೆ ಇಲಾಖೆಯ ಇನ್ ಕಮ್‌ಟ್ಯಾಕ್ಸ್ ಪೋರ್ಟಲ್.2 ಕಾರ್ಯನಿರ್ವಹಣೆಯಲ್ಲಿ ಎದುರಾಗುತ್ತಿರುವ ಪ್ರಮುಖ 31 ಸಮಸ್ಯೆಗಳನ್ನು ಪಟ್ಟಿ ಮಾಡಿದೆ.
ಜಫ್ರುಲ್ಲಾ ಸತ್ತಾರ್ ಖಾನ್, ಅಧ್ಯಕ್ಷರು, ಕೆಟಿಪಿಎ ಸಂಘ
“ಹೊಸ ವೆಬ್ ಸೈಟ್ ನಲ್ಲಿನ ಸಮಸ್ಯೆಗಳನ್ನೂ ಸಂಪೂರ್ಣವಾಗಿ ಪರಿಹರಿಸಿದ ನಂತರ 2022 ರ ಏ.1ರಿಂದ ಹೊಸ ವೆಬ್ ಸೈಟ್ ಕಾರ್ಯಾಚರಣೆ ಜಾರಿಗೆ ಬರಲಿ. ಅಲ್ಲಿಯ ತನಕ ಹಳೆಯ ವೆಬ್ ಸೈಟ್ ಬಳಕೆ ಮಾಡಲಿ. ಜಿಎಸ್ ಟಿ ಪೋರ್ಟಲ್ ನಿರ್ಮಾಣ ವಿಚಾರದಲ್ಲಿ ಇನ್ ಫೋಸಿಸ್ ಕಾರ್ಯವೈಖರಿ ಬಗ್ಗೆ ಹಲವಾರು ಗ್ರಾಹಕರು ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಹಳೆಯ ವೆಬ್ ಸೈಟ್ ನಿರ್ವಹಣೆ ಮಾಡುತ್ತಿದ್ದ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಗೆ ಹೊಸ ಪೋರ್ಟಲ್ ಜವಾಬ್ದಾರಿ ನೀಡಬೇಕಿದೆ.”
– ಜಫ್ರುಲ್ಲಾ ಸತ್ತಾರ್ ಖಾನ್, ಅಧ್ಯಕ್ಷರು, ಕೆಟಿಪಿಎ ಸಂಘ
ಹೊಸ ವೆಬ್ ಸೈಟ್ ಇನ್ ಕಮ್‌ಟ್ಯಾಕ್ಸ್ ಪೋರ್ಟಲ್.2 ನಲ್ಲಿ ಕಂಡುಬಂದಿರುವ ಪ್ರಮುಖ ಸಮಸ್ಯೆಗಳೆಂದರೆ :
1. ಮೊದಲ ಬಾರಿ ಲಾಗಿನ್ ಆಗುವಲ್ಲಿ ಸಮಸ್ಯೆ.
2. ಆದಾಯ ತೆರಿಗೆ ಕಲಮ್ 288 ರ ಅಡಿ ನೋಂದಣಿಯಾದ ಅಧಿಕೃತ ಆದಾಯ ತೆರಿಗೆ ವೃತ್ತಿಪರರು ಹೊಸ ಪೋರ್ಟಲ್ ನಲ್ಲಿ ಅಧಿಕೃತ ಪ್ರತಿನಿಧಿಯಾಗಿ ನೋಂದಾಯಿಸಲು ಅವಕಾಶ ಕಲ್ಪಿಸಿಲ್ಲ.
3. ಪಾಸ್ ವರ್ಡ್ ಒಂದೊಮ್ಮೆ ಮರೆತು ಹೋದರೆ ಪುನಃ ಪಾಸ್ ವರ್ಡ್ ಸೆಟ್ ಮಾಡಲು ಫರ್ಗಾಟ್ ಪಾಸ್ ವರ್ಡ್ ಆಪ್ಶನ್ ಕಾರ್ಯನಿರ್ವಹಿಸುತ್ತಿಲ್ಲ.
4. ಹೊಸ ವೆಬ್ ಸೈಟ್ ನಲ್ಲಿ ಪ್ರೊಫೈಲ್ ಪಾನ್ ಕಾರ್ಡ್ ವಿಳಾಸಕ್ಕೂ, ಐಟಿಆರ್ ಸಂಪರ್ಕ ವಿಳಾಸಕ್ಕೂ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ.
5. ಆದಾಯ ತೆರಿಗೆ ಪಾವತಿಸಿದ ಪಿಡಿಎಫ್ ಫೈಲ್ ಡೌನ್ ಲೋಡ್ ಮಾಡಲಾಗುತ್ತಿಲ್ಲ.
6. ಫಾರ್ಮ್ 15-ಸಿಎ / 15- ಸಿಬಿ ಸಲ್ಲಿಕೆ ಮಾಡಲು ಆಗುತ್ತಿಲ್ಲ.
7. ತೆರಿಗೆ ಕಟ್ಟಿದರೂ ವೆಬ್ ಸೈಟ್ ನಲ್ಲಿ ಹಳೆಯ ತೆರಿಗೆ ಬೇಡಿಕೆ ಬಾಕಿಯಿದೆ ಎಂಬುದಾಗಿ ಹಳೆಯ ವೆಬ್ ಸೈಟ್ ನಲ್ಲಿರುವಂತೆ ಪ್ರದರ್ಶನವಾಗುತ್ತಿದೆ. ಇದನ್ನು ಸರಿಪಡಿಸುವ ಅಗತ್ಯವಿದೆ.
8. ಅಧಿಕೃತತೆಯನ್ನು ಖಚಿತಪಡಿಸಲು ಆಧಾರ್ ಒಟಿಪಿ ಜನರೇಟ್ ಮಾಡುವ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿಲ್ಲ.
9. ಉದ್ಯೋಗದ ಸ್ವರೂಪ ತಿಳಿಸುವುದನ್ನು ಖಡ್ಡಾಯಗೊಳಿಸಲಾಗಿದೆ. ಇದರಿಂದ ವಿವಿಧ ಮೂಲಗಳಿಂದ ಆದಾಯ ಪಡೆಯುವವರಿಗೆ “ಅನ್ವಯವಾಗುವುದಿಲ್ಲ” ಎಂಬ ಆಪ್ಶನ್ ಹೊಸ ವೆಬ್ ಸೈಟ್ ನಲ್ಲಿಲ್ಲ.
10. ಆಮೆಗತಿಯಲ್ಲಿ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿದೆ.
11. ತೆರಿಗೆ ಪಾವತಿದಾರರ ಪ್ರೊಫೈಲ್ ಅಪಡೇಟ್ ಮಾಡುವಾಗ ಆಧಾರ್ ಹಾಗೂ ಪ್ಯಾನ್ ಕಾರ್ಡ್ ದತ್ತಾಂಶವನ್ನು ಹೊಂದಾಣಿಕೆ ಮಾಡುವುದು ಕಷ್ಟವಾಗಿದೆ.
ಮೂರು ವಾರ ಕಳೆದರೂ ಸಮಸ್ಯೆ ಬಗೆಹರಿದಿಲ್ಲ :
ಹೊಸ ಐ-ಟಿ ಇ-ಫೈಲಿಂಗ್ ಪೋರ್ಟಲ್ ಜೂ.7ರಂದು ಅಧಿಕೃತವಾಗಿ ಉದ್ಘಾಟನೆಗೊಂಡರೂ ಎರಡು ವಾರ ಕಳೆದರೂ ವೆಬ್ ಸೈಟ್ ಸೂಕ್ತ ರೀತಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದ್ದರಿಂದ ಈ ಬಗ್ಗೆ ತೆರಿಗೆದಾರರು, ಲೆಕ್ಕ ಪರಿಶೋಧಕರು ಸೇರಿದಂತೆ ಹಲವರು ಆದಾಯ ತೆರಿಗೆ ಇಲಾಖೆಗೆ 700ಕ್ಕೂ ಹೆಚ್ಚು ಇ-ಮೇಲ್ ಮಾಡಿ ಆ ಕುರಿತಂತೆ ವೆನ್ ಸೈಟ್ ನಲ್ಲಿ 2,000ಕ್ಕೂ ಮಿಗಿಲಾದ ಸಮಸ್ಯೆಗಳನ್ನು ಗುರ್ತಿಸಿದ್ದರು. ಈ ಬಗ್ಗೆ ಇದೇ ಜೂ.22ರಂದು ಆನ್ ಲೈನ್ ಮೀಟಿಂಗ್ ಕರೆದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಇನ್ ಫೋಸಿಸ್ ಸಂಸ್ಥೆಗೆ ಶೀಘ್ರದಲ್ಲೇ ನೂತನ ಟ್ಯಾಕ್ಸ್ ಪೋರ್ಟಲ್ ನಲ್ಲಿನ ಸಮಸ್ಯೆ ಬಗೆಹರಿಸಲು ಸೂಚಿಸಿದ್ದರು. ಇನ್ನೊಂದೆಡೆ ಕಾಲಮಿತಿಯಲ್ಲಿ ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಯುವ ಬಗ್ಗೆ ಭರವಸೆ ನೀಡಿದ್ದಾರೆ.
ಇನ್ಸ್ ಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಸಂಸ್ಥೆಗೆ ಏಳು ಜನರ ಟಾಸ್ಕ್ ಫೋರ್ಸ್ ತಂಡ ರಚಿಸಿ, ನೂತನ ವಬ್ ಸೈಟ್ ನಲ್ಲಿ ಕಂಡುಬಂದಿರುವ ಸಮಸ್ಯೆಗಳನ್ನು ಗುರ್ತಿಸಿ ವರದಿ ನೀಡುವ ಜವಾಬ್ದಾರಿಯನ್ನು ನೀಡಿದೆ ಎಂದು ಕೆಟಿಪಿಎ ಸಂಘ ತಿಳಿಸಿದೆ.
ಈ ಹಿಂದಿನ ಟ್ಯಾಕ್ಸ್ ಪೋರ್ಟಲ್ ನಲ್ಲಿ ತೆರಿಗೆ ಪಾವತಿದಾರರಿಗೆ ತೆರಿಗೆ ಹಣದ ಮರುಪಾವತಿ (ರಿ-ಫಂಡ್) ಮೂರು ತಿಂಗಳ ಒಳಗೆ ಬರುತ್ತಿತ್ತು. ಆದರೆ ಹೊಸ ಟ್ಯಾಕ್ಸ್ ಪೋರ್ಟಲ್ ನಿರ್ಮಿಸಿ, ಕೇವಲ ಒಂದು ದಿನದಲ್ಲಿ ರಿ-ಫಂಡ್ ನೀಡುವುದಾಗಿ ಕೇಂದ್ರ ಸಚಿವರು ಈ ಹಿಂದೆ ಹೇಳಿದ್ದರು. ಒಟ್ಟಾರೆ ಟ್ಯಾಕ್ಸ್ ಫೈಲಿಂಗ್ ನಲ್ಲಿ ಕೇವಲ ಶೇ.2 ರಿಂದ 3ರಷ್ಟು ರಿ-ಫಂಡ್ ಹಣ ಕೊಡಿಸಲು ತೆರಿಗೆದಾರ 4,242 ಕೋಟಿ ರೂ. ಹಣ ಕರ್ಚು ಮಾಡಬೇಕಾದ ಅವಶ್ಯಕತೆ ಏನಿತ್ತು? ಅಂತ ಕೆಟಿಪಿಎ ಸಂಘದ ಅಧ್ಯಕ್ಷ ಜಫ್ರುಲ್ಲಾ ಸತ್ತರ್ ಖಾನ್ ಪ್ರಶ್ನಿಸಿದ್ದಾರೆ.