ಬೆಂಗಳೂರು ( www.bengaluruwire.com ) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದಲ್ಲಿನ ಮರಗಳ ವ್ಯವಸ್ಥಿತ ನಿರ್ವಹಣೆಗೆಂದು ಇರುವ 21 ತಂಡಗಳು ದಾಖಲೆ ಹಾಗೂ ಬಿಲ್ ನಲ್ಲಿ ಮಾತ್ರವಿದ್ದು, ಅಷ್ಟು ಪ್ರಮಾಣದ ವಾಹನಗಳು ಹಾಗೂ ನೌಕರರ ಪರಿಪೂರ್ಣ ತಂಡಗಳು ಕಾರ್ಯನಿರ್ವಹಿಸುತ್ತಿರುವುದೇ ಅನುಮಾನಕ್ಕೆ ಕಾರಣವಾಗಿದೆ.
ಪ್ರತಿ ವರ್ಷವೂ ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರಗಳ ವ್ಯವಸ್ಥಿತ ನಿರ್ವಹಣೆಗಾಗಿ, ನಗರದಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ ಅಥವಾ ಮರದ ರೆಂಬೆ- ಕೊಂಬೆಗಳನ್ನು ತೆರವು ಮಾಡಲು, ಬಿದ್ದ ಮರ ಅಥವಾ ರೆಂಬೆ-ಕೊಂಬೆಗಳನ್ನು ತೆಗೆಯಲು ಟೆಂಡರ್ ಕರೆಯಬೇಕು. 2017-18ನೇ ಸಾಲಿನಿಂದಲೂ ಒಂದಲ್ಲಾ ಒಂದು ಕುಂಟು ನೆಪದ ಕಾರಣ ನೀಡಿ 4 ವರ್ಷಗಳಿಂದಲೂ 21 ಗುತ್ತಿಗೆದಾರರ ತಂಡಗಳು ಮುಂದುವರೆಯುತ್ತಲೇ ಬಂದಿದೆ. 2021-22ನೇ ಸಾಲಿನಲ್ಲಿ 26 ತಂಡಗಳನ್ನು ರಚಿಸಿ ಅದರ ಗುತ್ತಿಗೆಯನ್ನು ಇ- ಟೆಂಡರ್ ಮೂಲಕ ನೀಡಲು ಬಿಬಿಎಂಪಿ ತಯಾರಿ ನಡೆಸಿದರೂ ಗುತ್ತಿಗೆದಾರರ ಲಾಭಿ ಆ ಪ್ರಕ್ರಿಯೆಗೆ ಕಡಿವಾಣ ಹಾಕಲು ಸಾಕಷ್ಟು ತೆರೆಮರೆಯ ಕಸರತ್ತು ನಡೆಸುತ್ತಿದೆ.
ಗುತ್ತಿಗೆದಾರರ ಪ್ರಬಲ ಲಾಭಿ :
2021-22ನೇ ಸಾಲಿನಲ್ಲಿ 1 ಮೇ ನಿಂದ 31 ಮಾರ್ಚ್ 2022ರ ತನಕ ನಗರದ 26 ವಿಧಾನಸಭಾ ಕ್ಷೇತ್ರಗಳಲ್ಲಿ (ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ) ಇ- ಟೆಂಡರ್ ಆಹ್ವಾನಿಸಿ, ಯಶಸ್ವಿ ಬಿಡ್ ದಾರರಿಗೆ ಗುತ್ತಿಗೆ ನೀಡಲು ಪಾಲಿಕೆ ಅರಣ್ಯ ಘಟಕದಿಂದ ಏಪ್ರಿಲ್ 8ನೇ ತಾರೀಖಿನಂದು ಟೆಂಡರ್ ಕರೆದಿದ್ದರೂ ಆ ಟೆಂಡರ್ ಅನ್ನು ವ್ಯವಸ್ಥಿತವಾಗಿ ನಿಲ್ಲಿಸಿ ಇದೇ 21 ತಂಡಗಳು ಮುಂದುವರೆಯಲು ಪ್ರಬಲ ಹುನ್ನಾರ ನಡೆದಿರುವುದು ಅರಣ್ಯ ಇಲಾಖೆಯ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
26 ತಂಡಗಳಿಗೆ ತಲಾ 36 ಲಕ್ಷ ರೂಪಾಯಿ ವೆಚ್ಚದಂತೆ ಮುಂದಿನ ಮಾರ್ಚ್ 2022ರ ತನಕ ಕಾರ್ಯನಿರ್ವಹಣೆಗೆ 9 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪಾಲಿಕೆ ಅರಣ್ಯ ಇಲಾಖೆ ಟೆಂಡರ್ ಕರೆದಿತ್ತು. ಆ ಟೆಂಡರ್ ಷರತ್ತಿನಲ್ಲಿ, ಒಬ್ಬ ಯಶಸ್ವಿ ಬಿಡ್ ದಾರರಿಗೆ ಒಂದು ವಿಧಾನಸಭಾ ಕ್ಷೇತ್ರ ಮಾತ್ರ ಗುತ್ತಿಗೆ ನೀಡಲಾಗುವುದು ಎಂದು ಹಾಕಲಾಗಿತ್ತು. ಆದರೆ ಟೆಂಡರ್ ಪೂರ್ವಭಾವಿ ಸಭೆಯಲ್ಲಿ ಅದನ್ನು ತೆಗೆದು ಹಾಕಲು ಯಶಸ್ವಿಯಾದ ಕಾಂಟ್ರಾಕ್ಟರ್ ಲಾಭಿ, ಇದೀಗ ತಾಂತ್ರಿಕ ಮತ್ತು ಆರ್ಥಿಕ ಬಿಡ್ ನಂತರ, ಅರಣ್ಯ ಇಲಾಖೆಯ ಸ್ಟ್ಯಾಂಡರ್ಡ್ ರೇಟ್ ನಮೂದಿಸದೆ ಟೆಂಡರ್ ಕರೆಯಲಾಗಿದೆ ಹಾಗೂ ಮತ್ತಿತರ ಕುಂಟು ನೆಪ ಹೇಳಿ ಮರು ಟೆಂಡರ್ ನಡೆಸುವಂತೆ ಮುಖ್ಯ ಆಯುಕ್ತರು, ಅರಣ್ಯ ವಿಭಾಗದ ವಿಶೇಷ ಆಯುಕ್ತರಿಗೆ ಮನವಿ ಮಾಡಿದೆ. ಆ ಮೂಲಕ ಈ ವರ್ಷವೂ ಟೆಂಡರ್ ಕರೆಯುವುದನ್ನು ಹಳ್ಳ ಹಿಡಿಸಲು ವ್ಯವಸ್ಥಿತ ಪ್ಲಾನ್ ಮಾಡಿದೆ.
ಟೆಂಡರ್ ದರಕ್ಕಿಂತ ಶೇ.-67 ಕನಿಷ್ಠ ಮೊತ್ತದ ಬಿಡ್….!
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಟೀಮ್ ಗೆ ಪ್ರತ್ಯೇಕವಾಗಿ ಬಿಡ್ ಸಲ್ಲಿಸಬೇಕಾಗುತ್ತೆ. ಹೀಗಾಗಿ ಒಬ್ಬ ಕಾಂಟ್ರಾಕ್ಟರ್ ವೈಯುಕ್ತಿಕವಾಗಿ ಏಳೆಂಟು ವಿಧಾನಸಭಾ ಕ್ಷೇತ್ರದಲ್ಲೂ ಟೆಂಡರ್ ನಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ. ಕೆಲವರು ಟೆಂಡರ್ ನಲ್ಲಿ ನಮೂದಿಸಿದ ದರಕ್ಕಿಂತ ಶೇ.-50, ಶೇ.-60, ಹಾಗೂ ಶೇ.-67ರಷ್ಟು ಕಡಿಮೆ ದರದಲ್ಲಿ ಟೆಂಡರ್ ಬಿಡ್ ಕೋಟ್ ಮಾಡಿ, ಇದೀಗ ಆರ್ಥಿಕ ಟೆಂಡರ್ ಬಿಡ್ ತೆರೆದ ನಂತರ, ಎಸ್ ಆರ್ ದರದ ಅನ್ವಯ ಟೆಂಡರ್ ಅಂದಾಜು ಮೊತ್ತ ನಿಗಧಿ ಮಾಡಿಲ್ಲ ಎಂದು ಆಕ್ಷೇಪಿಸಿದ್ದಾರೆ. ಸಾಮಾನ್ಯವಾಗಿ ಟೆಂಡರ್ ನಮೂದಿಸಿದ ದರಕ್ಕಿಂತ ಶೇ.-15ರ ವರೆಗೆ, ಕಡಿಮೆ ದರದಲ್ಲಿ ಕಾರ್ಯನಿರ್ವಹಿಸುವುದಾಗಿ ಕಾಂಟ್ರಾಕ್ಟರ್ ಗಳು ಬಿಡ್ ಮಾಡುತ್ತಾರೆ. ಆದರೆ ಇಲ್ಲಿ ಉದ್ದೇಶಪೂರ್ವಕವಾಗಿ ಟೆಂಡರ್ ತಡೆ ಹಿಡಿಯಲು ಶೇ.-67ರಷ್ಟ ತನಕ ಕನಿಷ್ಠ ಮೊತ್ತಕ್ಕೆ ಕೋಟ್ ಮಾಡಿ ಆನಂತರ ಎಸ್ ದರದ ಮತ್ತಿತರ ಕಾರಣಗಳನ್ನು ನೀಡಿ ಪಾಲಿಕೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ.
ಪಾಲಿಕೆ ನಿಗಧಿಪಡಿಸಿದ ಅಂದಾಜು ಮೊತ್ತಕ್ಕಿಂತ ಕಡಿಮೆ ಕೋಟ್ ಮಾಡಿದ ಬಿಡ್ ದಾರರು ಅವೆರಡು ದರಗಳ ನಡುವಿನ ವ್ಯತ್ಯಾಸದ ಮೊತ್ತವನ್ನು ಪಾಲಿಕೆಯ ಮುಖ್ಯ ಆಯುಕ್ತರ ಹೆಸರಿನಲ್ಲಿ ಡಿಡಿ ಪಡೆದು ಬಿಬಿಎಂಪಿಗೆ ನೀಡಬೇಕಾಗುತ್ತದೆ. ಉದಾಹರಣೆಗೆ : 100 ರೂಪಾಯಿ ಮೊತ್ತದ ಒಂದು ವಸ್ತುವನ್ನು ಕೊಳ್ಳಲು ಟೆಂಡರ್ ಕರೆದಿದ್ದರೆ, ಬಿಡ್ ದಾರರು 67 ರೂಪಾಯಿಗೆಲ್ಲ ಆ ವಸ್ತುವನ್ನು ಮಾರುವುದಾಗಿ ಬಿಡ್ ಮಾಡಿದರೆ, ವ್ಯತ್ಯಾಸದ ಮೊತ್ತವಾದ 33 ರೂಪಾಯಿ ಹಣವನ್ನು ಭದ್ರತಾ ಮೊತ್ತವಾಗಿ ಪಾಲಿಕೆಗೆ ನೀಡಬೇಕಾಗುತ್ತದೆ. ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ ಪಾಲಿಕೆಯು ಆ ಹಣವನ್ನು ಗುತ್ತಿಗೆದಾರರಿಗೆ ಪಾವತಿಸುತ್ತೆ.
ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಂದಕ್ಕೆ ಒಂದು ಟೀಮ್ ನಂತೆ 8 ವಲಯಗಳಲ್ಲೂ 28 ತಂಡಗಳಿರಬೇಕಾಗುತ್ತದೆ. ಆದರೆ ಒಂದಷ್ಟು ಪ್ರಬಲ ಗುತ್ತಿಗೆದಾರರ ಲಾಭಿಯಲ್ಲಿ ಸಿಲುಕಿರುವ ಪಾಲಿಕೆ ಅರಣ್ಯ ಘಟಕದಲ್ಲಿ 21 ತಂಡಗಳು ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಟೆಂಡರ್ ಪಡೆದ ಕೆಲವರು ಇತರ ಇತರ ವಿಧಾನಸಭಾ ಕ್ಷೇತ್ರದಲ್ಲೂ ಟೆಂಡರ್ ಪಡೆದುಕೊಂಡಿದ್ದಾರೆ.
ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲ :
ವರ್ಷಂಪ್ರತಿ ನಗರದಲ್ಲಿ ಸರಾಸರಿ 986 ಮಿಲಿ ಮೀಟರ್ ಮಳೆಯಾಗುತ್ತೆ. ಅದರಲ್ಲೂ ಜೂನ್ ನಿಂದ ಡಿಸೆಂಬರ್ ತಿಂಗಳನವರೆಗೂ ಮಳೆ ಬಿದ್ದರೂ ಜೂನ್ ನಿಂದ ಸೆಪ್ಟೆಂಬರ್ ತಿಂಗಳು ಅತ್ಯಂತ ಪ್ರಮುಖವಾಗಿದೆ. ಮಳೆಗಾಲಕ್ಕೆ ಮುನ್ನವೇ ತ್ವರಿತವಾಗಿ ನಗರದಲ್ಲಿರುವ ಅಪಾಯದ ಸ್ಥಿತಿಯಲ್ಲಿರುವ ಮರ ಅಥವಾ ಮರದ ಕೊಂಬೆಗಳನ್ನು ತೆರವುಗೊಳಿಸಬೇಕಾದ ಜವಾಬ್ದಾರಿ ಈ 21 ಕಾಂಟ್ರಾಕ್ಟರ್ ಗಳದ್ದಾದ್ರೂ ಆ ಕಾರ್ಯನಿರ್ವಹಿಸುವಲ್ಲಿ ಪದೇ ಪದೇ ಎಡುವುತ್ತಿದ್ದಾರೆ. ಒಂದೊಮ್ಮೆ ಈ ತಂಡಗಳು ನಿಯಮಿತವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೆ, ಪ್ರತಿವರ್ಷದ ಮಳೆಗಾಲದಲ್ಲಿ ಮರಗಳು ಬಿದ್ದು, ಸಾರ್ವಜನಿಕರ ಪ್ರಾಣಹಾನಿ, ಆಸ್ತಿ-ಪಾಸ್ತಿ ನಷ್ಟವಾಗುತ್ತಿರಲಿಲ್ಲ. ಈ ವರ್ಷ ಏಪ್ರಿಲ್ ಅಂತ್ಯದಿಂದ ಜೂನ್ 14ರವರೆಗೂ ಲಾಕ್ ಡೌನ್ ಇದ್ದಾಗಲೂ ಈ 21 ತಂಡಗಳು ಯಶಸ್ವಿಯಾಗಿ ತಮ್ಮ ಕಾರ್ಯಗಳನ್ನು ನೆರವೇರಿಸಬಹುದಿತ್ತು. ಆದರೆ ಆ ಕಾರ್ಯನಿರ್ವಹಣೆಯಲ್ಲೂ ಎಡವಿದೆ.
“ನಾನು ಇತ್ತೀಚೆಗೆ ವಿದ್ಯುತ್ ವೈರ್ ಮೇಲೆ ಮರದ ಕೊಂಬೆ ಬಿದ್ದಾಗ ಬೆಸ್ಕಾಂ ಹಾಗೂ ಬಿಬಿಎಂಪಿಗೆ ಮರ ತೆರವುಗೊಳಿಸುವಂತೆ ದೂರು ನೀಡಿದ್ದೆ. ಬೆಸ್ಕಾಂ ನವರು ಬಂದು ಆ ದೊಡ್ಡ ಒಣಗಿದ ರೆಂಬೆಯನ್ನು ತೆರವು ಮಾಡಿದರೂ. ಬಿಬಿಎಂಪಿಯ ಟ್ರೀಮ್ ಟ್ರಿಮ್ಮಿಂಗ್ ಟೀಮ್ ಬರಲಿಲ್ಲ. ಮಳೆಗಾಲಕ್ಕೆ ಮೊದಲು ತೀವ್ರಗತಿಯಲ್ಲಿ ಕೆಲಸ ಮಾಡಿದರೆ, ಮಳೆಗಾಲದಲ್ಲಿ ನಾಗರೀಕರು ಅಪಾಯಕ್ಕೆ ಸಿಲುಕುವುದಿಲ್ಲ. ಆದರೆ ಪ್ರತಿವರ್ಷವೂ ಅನಾಹುತ ಆಗುತ್ತಲೇ ಇದೆ. ಈ ಬಾರಿಯ ಲಾಕ್ ಡೌನ್ ನಲ್ಲಾದ್ರೂ ಎಲ್ಲಾ ಕಡೆ ಕೆಲಸ ಮಾಡಬಹುದಿತ್ತು. ಅಸಲಿಗೆ 21 ತಂಡಗಳು ಕೇವಲ ಬಿಬಿಎಂಪಿ ದಾಖಲೆಯಲ್ಲಿದ್ಯಾ? ಅಂತ ಅನುಮಾನ ಮೂಡುತ್ತಿದೆ.”
– ಲಿಯೋ ಸಾಲ್ಡಾನಾ, ಸಂಚಾಲಕರು, ಎನ್ವಾರ್ನಮೆಂಟ್ ಸಪೋರ್ಟ್ ಗ್ರೂಪ್
ಕೆಲಸ ಮಾಡಲಿ ಬಿಡಲಿ ಪ್ರತಿದಿನ ಪ್ರತಿ ತಂಡಕ್ಕೆ 10,350 ರೂ. ಪಾವತಿಸುವ ಬಿಬಿಎಂಪಿ…!
ಅಸಲಿಗೆ ಪ್ರತಿ ಅರಣ್ಯ ಮರಗಳ ವ್ಯವಸ್ಥಿತ ನಿರ್ವಹಣೆಯ ಟೀಮ್ ಗೆ ಒಂದು ಸ್ವರಾಜ್ ಮಜ್ದಾ ಅಥವಾ ಆ ರೀತಿಯ ವಾಹನ, ಏಳು ಜನ ಕೆಲಸಗಾರರು, ಒಬ್ಬ ಸೂಪರ್ ವೈಸರ್, ಒಬ್ಬ ಡ್ರೈವರ್, ಮರ ಕತ್ತರಿಸುವ ಉಪಕರಣಗಳು, ಹಾರೆ, ಪಿಕಾಸಿ, ಗುದ್ದಲಿ, ಸನಿಕೆ, ಹಗ್ಗ, ಬಾಂಡ್ಲಿಗಳು, ಉಳಿ- ಸುತ್ತಿ, ಸರಪಳಿ, ಪ್ರಾಥಮಿಕ ಔಷಧದ ಪೆಟ್ಟಿಗೆಗಳನ್ನು ಖಡ್ಡಾಯವಾಗಿ ಹೊಂದಿರಬೇಕು. ನಿಯಮಿತವಾಗಿ ಆಯಾ ವಲಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರ, ವಾರ್ಡ್ ನಲ್ಲಿನ ಮರಗಳ ರೆಂಬೆ- ಕೊಂಬೆ ಅಪಾಯದ ಸ್ಥಿತಿಯಲ್ಲಿದ್ದರೆ ತೆರವುಗೊಳಿಸಬೇಕು. ಹಾಗೂ ಸಾರ್ವಜನಿಕರು ಮನವಿ ಮಾಡಿ, ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆದ ಮರಗಳನ್ನು ಕಡಿದು ನಿಗಧಿತ ಯಾರ್ಡ್ ಅಥವಾ ಸಸ್ಯಕ್ಷೇತ್ರದಲ್ಲಿ ಸಂಗ್ರಹಿಸಿಡಬೇಕು. ಪ್ರತಿದಿನ ಕೆಲಸ ಮಾಡಲಿ- ಬಿಡಲಿ ಕಾಂಟ್ರಾಕ್ಟರ್ ಗಳಿಗೆ ಪ್ರತಿ ತಂಡಕ್ಕೆ 10,350 ರೂ. ಹಣವನ್ನು ಬಿಬಿಎಂಪಿ ಪಾವತಿಸುತ್ತದೆ. 2019-20ನೇ ಸಾಲಿನಲ್ಲಿ ಈ 21 ತಂಡಗಳ ಕಾಂಟ್ರಾಕ್ಟರ್ ಗಳಿಗೆ ಬರೋಬ್ಬರಿ 7,87,65,083 (7.87 ಕೋಟಿ ರೂ.) ಹಣವನ್ನು ಪಾಲಿಕೆ ಅರಣ್ಯ ಘಟಕ ನೀಡಿದೆ.
ಅಸಲಿಗೆ 21 ತಂಡಗಳೇ ಇರಲಿಲ್ಲ : ಮಾಜಿ ಮೇಯರ್ ಪದ್ಮಾವತಿ
“ಬಿಬಿಎಂಪಿಯಲ್ಲಿ 2016-17ರಲ್ಲಿ ನಾನು ಮಾಹಾಪೌರರರಾಗಿದ್ದಾಗ, ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ದಾಖಲೆಯಲ್ಲಿರುವಂತೆ 21 ತಂಡಗಳ ವಾಹನ, ಅದರಲ್ಲಿ ಕೆಲಸ ಮಾಡುವ ನೌಕರರು, ವಾಹನ ಚಾಲಕರು, ಸೂಪರ್ ವೈಸರ್ ಹಾಗೂ ಆಯಾ ವಾಹನಗಳಲ್ಲಿರುವ ಸಾಮಗ್ರಿಗಳನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಏಕ ಕಾಲಕ್ಕೆ ಖುದ್ದಾಗಿ ಪ್ರದರ್ಶಿಸುವಂತೆ ಆದೇಶಿಸಿದ್ದೆ. ದಾಖಲೆಗಳಲ್ಲಿ ಮಾತ್ರ 21 ಟೀಮ್ ಗಳಿದ್ದವು. ಆದರೆ ವಾಸ್ತವದಲ್ಲಿ ಕೇವಲ 9-10 ಗಾಡಿಗಳನ್ನು ಮಾತ್ರ ಗುತ್ತಿಗೆದಾರರು ತೋರಿಸಿದರು. ಇದರಿಂದ ಕಾಂಟ್ರಾಕ್ಟರ್ ಗಳು ನಕಲಿ ವಾಹನಗಳ ನಂಬರ್ ನಮೂದಿಸಿ, ಅದದೇ ಕಾರ್ಮಿಕರನ್ನು ಬೇರೆ ಬೇರೆ ವಾಹನಗಳಲ್ಲಿರುವಂತೆ ಬಿಂಬಿಸಲು ಹೋಗಿ ಸಿಕ್ಕಿಹಾಕಿಕೊಂಡಿದ್ದರು. ಆಗ ಸಂಬಂಧಿಸಿದ ಅರಣ್ಯಾಧಿಕಾರಿಗಳನ್ನು ತಕ್ಷಣ ವರ್ಗಾಯಿಸಿ ಆ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು.”
– ಜಿ.ಪದ್ಮಾವತಿ, ಬಿಬಿಎಂಪಿ ಮಾಜಿ ಮೇಯರ್
22-11-2016 ರಂದು ಬಿಬಿಎಂಪಿಯ ಅರಣ್ಯ ಘಟಕದ ಮರ ಕತ್ತರಿಸುವ ತಂಡಗಳ ವಾಹನ, ದಾಖಲೆ ಹಾಗೂ ಸಿಬ್ಬಂದಿ ಕುರಿತು ಪರಿಶೀಲನೆ ನಡೆಸಿದ ಆಗಿನ ಮೇಯರ್ ಜಿ.ಪದ್ಮಾವತಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೆ ರಸ್ತೆ, ಪಾರ್ಕ್ ಮತ್ತಿತರ ಕಡೆಗಳಲ್ಲಿ ತೆರವು ಮಾಡಲಾದ ಮರ, ಮರದ ರೆಂಬೆ- ಕೊಂಬೆಗಳ ಚಿತ್ರವನ್ನು ಜಿಪಿಎಸ್ ಲೋಕೇಶನ್ ಆಧಾರಿತ ಫೋಟೋಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ ಜಾರಿಗೆ ಬಂದಿದೆ. ಅದರ ಮುಂದುವರೆದ ಭಾಗವಾಗಿಯೇ 2021-22ರಲ್ಲಿ ಅರಣ್ಯ ಇಲಾಖೆಯ ಇ- ಟೆಂಡರ್ ಷರತ್ತಿನಲ್ಲಿ ಜಿಪಿಎಸ್ ಆಧಾರಿತ ಫೋಟೋಗಳನ್ನು ಪಾಲಿಕೆಗೆ ರವಾನಿಸುವ ವ್ಯವಸ್ಥೆಯ ಬಗ್ಗೆ ಪ್ರಸ್ತಾಪ ಮಾಡಿದೆ. ಆದರೂ 21 ತಂಡಗಳ ಗುತ್ತಿಗೆದಾರರು ವಲಯ ಮಟ್ಟದ ಪಾಲಿಕೆ ಅಧಿಕಾರಿಗಳಿಗೆ ತುರ್ತು ಸಂದರ್ಭದಲ್ಲಿ ನೇರವಾಗಿ ಕರೆಯಿಸಿಕೊಳ್ಳುವ ವ್ಯವಸ್ಥೆಯಿಲ್ಲ. ಬಿಬಿಎಂಪಿ ಕೇಂದ್ರ ಕಚೇರಿಯ ಅರಣ್ಯ ವಿಭಾಗಕ್ಕೆ ಕರೆ ಮಾಡಿಯೇ ಆಯಾ ವಲಯದಲ್ಲಿನ ಮರ ಅಥವಾ ಮರದ ರೆಂಬೆ-ಕೊಂಬೆಗಳನ್ನು ತೆರವು ಮಾಡಬೇಕಾಗಿದೆ.
ವಲಯ ಮಟ್ಟದಲ್ಲೂ ಅಧಿಕಾರಿಗಳ ಕೈಗೂ ಸಿಕ್ಕದ ಟ್ರೀ ಕಟಿಂಗ್ ಟೀಮ್ :
“ಇತರ ದಿನಗಳಿಗಿಂತ ಮಳೆಗಾಲದಲ್ಲಿ ಬಿಬಿಎಂಪಿಯ ಅರಣ್ಯ ಘಟಕ ಮರ ಕತ್ತರಿಸುವಿಕೆ ತಂಡದ ಅಗತ್ಯ ಹೆಚ್ಚಿರುತ್ತದೆ. ತುರ್ತು ಸಂದರ್ಭದಲ್ಲಿ ಈ ತಂಡದವರನ್ನು ಸಂಪರ್ಕಿಸಲು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಮರ ಕತ್ತರಿಸುವ ತಂಡಗಳು ಕೇಂದ್ರ ಕಚೇರಿಯ ಅರಣ್ಯ ಘಟಕಕ್ಕಷ್ಟೆ ಉತ್ತರದಾಯಿತ್ವರಾಗಿರುತ್ತಾರೆ. ಹೀಗಾಗಿ ವಲಯ ಮಟ್ಟದಲ್ಲಿ ಈ ತಂಡಗಳಿಗೆ ಸೂಕ್ತ ಕೆಲಸ- ಕಾರ್ಯಗಳನ್ನು ಮುಖ್ಯ ಎಂಜನಿಯರ್, ಡಿವಿಷನ್ ಮಟ್ಟದಲ್ಲಿ ಕಾರ್ಯನಿರ್ವಹಕ ಎಂಜಿನಿಯರ್, ಎಇಇ ಈ ಯಾವುದೇ ಹಂತದಲ್ಲಿ ಹೇಳಿದರೂ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಹೀಗಾಗಿ ಮನೆಗಳ ಮೇಲೆ ಮರ ಬಿದ್ದಾಗ ಅಥವಾ ಇನ್ಯಾವುದೇ ತುರ್ತು ಸಂದರ್ಭದಲ್ಲಿ ಸಂಯೋಜನಾ ಸಮಸ್ಯೆಯಾಗುತ್ತಿದೆ. ಸಣ್ಣ ಮರ, ರೆಂಬೆ- ಕೊಂಬೆ ತೆಗೆಸಲು ವಾರಗಟ್ಟಲೆ ಆಗುತ್ತಿದೆ. ಈ ತಂಡಗಳ ನಿಯಂತ್ರಣ ಕಾರ್ಯವನ್ನು ವಲಯಗಳಿಗೆ ಪ್ರತ್ಯಾಯೋಜಿಸಿದರೆ ಉತ್ತಮ.”
– ನಾಗರಾಜ್, ರಾಜರಾಜೇಶ್ವರಿ ನಗರ ವಲಯ ಜಂಟಿ ಆಯುಕ್ತರು
ಬಿಬಿಎಂಪಿಯ ಅರಣ್ಯ ಇಲಾಖೆಯ ಪರಿಸ್ಥಿತಿ ಏನಾಗಿದೆಯೆಂದರೆ, ನಾಯಿ ಬಾಲವನ್ನು ಅಲ್ಲಾಡಿಸುವುದಿರಲಿ, ಬಾಲವೇ ನಾಯಿಯನ್ನು ಅಲ್ಲಾಡಿಸುವಂತಿದೆ. ಇತ್ತೀಚೆಗೆ ಅಂದರೆ ಮಾರ್ಚ್ 4 ರಂದು ಬಿಬಿಎಂಪಿ ಕೇಂದ್ರ ಕಚೇರಿಯ ಅರಣ್ಯ ಇಲಾಖೆ ಕಚೇರಿಯಲ್ಲಿ ಹಾಡಹಗಲೇ ಅರಣ್ಯಾಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವೆ ಫೈಟಿಂಗ್ ನಡೆದಿತ್ತು. ಪರಿಸ್ಪರ ವಾಛಾಮ ಗೋಚರವಾಗಿ ಬೈದುಕೊಂಡು, ಪರಸ್ಪರ ಕೈಕೈ ಮಿಲಾಯಿಸಿ ಜೋರು ಗಲಾಟೆಯಾಗಿತ್ತು. ಈ ಪ್ರಕರಣ ಸಂಬಂಧ ಅಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಎಕ್ಸಕ್ಲೂಸಿವ್ ವರದಿ ಬೆಂಗಳೂರು ವೈರ್ ಮಾಡಿತ್ತು. ಇದೊಂದು ಸಣ್ಣ ಉದಾಹರಣೆಯಷ್ಟೆ. ಒಟ್ಟಾರೆ ಅರಣ್ಯ ವಿಭಾಗದಲ್ಲಿ ಸಮಗ್ರ ಶುದ್ಧೀಕರಣ ಕಾರ್ಯ ಶೀಘ್ರದಲ್ಲೇ ನಡೆದು, ವ್ಯಾಪಕ ಭ್ರಷ್ಟಾಚಾರ ಹಾಗೂ ಕಾಂಟ್ರಾಕ್ಟರ್ ಗಳ ಲಾಭಿಗೆ ಪಾಲಿಕೆ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆಯುಕ್ತರು ಇತಿಶ್ರೀ ಹಾಡಬೇಕಿದೆ.