ಬೆಂಗಳೂರು (www.bengaluruwire.com) : ಕೋಲಾರ ಸಂಸದ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮುನಿಸ್ವಾಮಿ, ಮಾಜಿ ಮೇಯರ್, ಉಪಮೇರ್ ಗಳು ಸೇರಿದಂತೆ ಬಿಬಿಎಂಪಿಯ 81 ಮಾಜಿ ಪಾಲಿಕೆ ಸದಸ್ಯರು ಬಿಬಿಎಂಪಿಗೆ ಸೇರಿದ ಆಪಲ್ ಐಪಾಡ್ ಈ ತನಕ ವಾಪಸ್ ಮಾಡಿಲ್ಲ.
ಇದಲ್ಲದೆ 12 ನಾಮ ನಿರ್ದೇಶಿತ ಕೌನ್ಸಿಲರ್ ಗಳು ಮಾಜಿ ಆದರೂ ಐಪಾಡ್ ಅನ್ನು ಪಾಲಿಕೆಗೆ ಹಸ್ತಾಂತರಿಸಿಲ್ಲ. ಈತನಕ ಬಿಬಿಎಂಪಿ ಕೌನ್ಸಿಲ್ ಕಚೇರಿಯಿಂದ ಮೂರು ಬಾರಿ ನೋಟಿಸ್ ನೀಡಿದರೂ ಈತನಕ ಐಪಾಡ್ ಹಿಂತಿರುಗಿಸಿಲ್ಲ. ಈ 81 ಮಾಜಿ ಕಾರ್ಪೊರೇಟರ್ ಗಳ ಪೈಕಿ ಪ್ರಸ್ತುತ ಕೋಲಾರದ ಸಂಸದರಾಗಿರುವ ಎಸ್.ಮುನಿಸ್ವಾಮಿ, ಮಾಜಿ ಸದಸ್ಯರೂ ಹಾಗೂ ಪ್ರಸ್ತುತ ಶಾಸಕರಾಗಿರುವ ಕೆ.ಆರ್.ಪುರ ವಾರ್ಡಿನ ಕೆ.ಪೂರ್ಣಿಮಾ, ಮಾಜಿ ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಜಿ.ಕೆ.ವೆಂಕಟೇಶ್, ರಾಜಣ್ಣ, ಮಂಜುನಾಥ ರಾಜು, ಇಮ್ರಾನ್ ಪಾಷ ಮತ್ತಿತರರು ಸೇರಿದ್ದಾರೆ.
ಬಿಬಿಎಂಪಿಯ ಕೌನ್ಸಿಲ್ ಕಚೇರಿ, ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಈ ದಾಖಲೆಯಲ್ಲಿರುವಂತೆ ಜೂನ್ 7 ರ ತನಕ ಒಟ್ಟು 81 ಮಾಜಿ ಕೌನ್ಸಿಲರ್ ಗಳು ಹಾಗೂ 12 ಮಂದಿ ನಾಮ ನಿರ್ದೇಶಿತ ಸದಸ್ಯರು ಐಪಾಡ್ ವಾಪಸ್ ಮಾಡಿರಲಿಲ್ಲ. ಪಾಲಿಕೆಯು ಸಂಪತ್ ರಾಜ್ 51ನೆಯ ಮೇಯರ್ ಆಗಿದ್ದಾಗ 2018ರಲ್ಲಿ, ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳುವ ನಿರ್ಣಯ, ಸಭೆ ನಡವಳಿ ಮತ್ತಿತರ ಮಾಹಿತಿಗಳನ್ನು ಸದಸ್ಯರಿಗೆ ಕಾಗದ ಪತ್ರ ರಹಿತ ವ್ಯವಸ್ಥೆಯಡಿ ರವಾನಿಸಲು ನಿರ್ಧರಿಸಿತ್ತು.
ಹಾಗಾಗಿ ಕೌನ್ಸಿಲ್ ಸಂಬಂಧಿತ ಮಾಹಿತಿಗಳನ್ನು ಇ-ಮೇಲ್ ಮತ್ತಿತರ ವಿಧಾನದ ಮೂಲಕ ಪಾಲಿಕೆ ಸದಸ್ಯರಿಗೆ ಕಳುಹಿಸಲು ಅನುಕೂಲವಾಗಲೆಂದು ಆಪಲ್ ಕಂಪನಿಯ ವೈಫೈ ಇರುವ ಆಪಲ್ ಐಪಾಡ್ ಅನ್ನು ತಲಾ 44 ಸಾವಿರ ರೂಪಾಯಿಯಲ್ಲಿ ಕಿಯೋನಿಕ್ಸ್ ಸಂಸ್ಥೆಯಿಂದ ಖರೀದಿಸಿ ಎಲ್ಲ ಸದಸ್ಯರು ಮತ್ತು ನಾಮ ನಿರ್ದೇಶಿತ ಸದಸ್ಯರಿಗೆ ವಿತರಿಸಿತ್ತು. 10 ಸೆಪ್ಟೆಂಬರ್ 2020ಕ್ಕೆ 2015ನೇ ಸಾಲಿನ ಪಾಲಿಕೆ ಅವಧಿ ಪೂರ್ಣಗೊಂಡಿತು. ಆನಂತರ ಪಾಲಿಕೆ ಮಾಜಿ ಸದಸ್ಯರು ಆ ಐಪಾಡ್ ಗಳನ್ನು ವಾಪಸ್ ಮಾಡಬೇಕಿತ್ತು. ಆದರೆ ನಿಯಮದಂತೆ ವಾಪಸ್ ಮಾಡಿಲ್ಲ.
ಬಿಬಿಎಂಪಿ ಐಪಾಡ್ ಹಿಂದಿರುಗಿಸದ ಮಾಜಿ ಕಾರ್ಪೊರೇಟರ್ ಗಳ ಪಟ್ಟಿ
ಜನಪ್ರತಿನಿಧಿಗಳು ಸರ್ಕಾರಿ ಸವಲತ್ತಿಗೆ ಆಸೆ ಪಡುವುದು ತಪ್ಪು:
2018 ರಲ್ಲಿ ಐಪಾಡ್ ಗಳನ್ನು ಪಡೆದುಕೊಂಡರು ಎಷ್ಟೋ ಕಾರ್ಪೊರೇಟರ್ ಗಳು ಅದನ್ನು ಬಳಸಲಿಲ್ಲ. ಕೆಲವರು ಐಪಾಡ್ ಬಾಕ್ಸ್ ತೆಗೆದರೂ ಅದನ್ನು ಬಳಸಲು ತಿಳಿದಿರಲಿಲ್ಲ. ಈ ಪ್ರಕರಣದ ಬಗ್ಗೆ ಬೆಂಗಳೂರು ನಗರ ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಹೇಳೋದು ಹೀಗೆ :
” ಜನಪ್ರತಿನಿಧಿಗಳು ಮೊದಲಿಗೆ ಸಮಾಜದ ಸೇವೆಗೆ ಬಂದ ಮೇಲೆ ಸರ್ಕಾರಿ ಸವಲತ್ತಿಗೆ ಆಸೆ ಪಡುವುದು ತಪ್ಪು. ಪಾಲಿಕೆ ಯೋಜನೆ, ಕಾರ್ಯಕ್ರಮ ತಿಳಿಸಿಲೆಂದು ನೀಡಿದ ಐಪಾಡ್ ಅನ್ನು ಕೌನ್ಸಿಲ್ ಅವಧಿ ಮುಗಿದ ಕೂಡಲೇ ವಾಪಸ್ ಮಾಡಬೇಕಿತ್ತು. ಇನ್ನೂ ಕೂಡ ಪಾಲಿಕೆ ಸ್ವತ್ತನ್ನು ಹಿಂತಿರುಗಿಸದಿರುವುದು ದುರಂತ. ಕಳೆದ ಬಾರಿ ಆರಿಸಿ ಬಂದ 198 ಕಾರ್ಪೊರೇಟರ್ಸ್ ಪೈಕಿ 63 ಮಂದಿ ಬಿಲ್ಡರ್ ಗಳಾಗಿದ್ದರು. ಬಹಳ ಮಂದಿ ಸ್ಥಿತಿವಂತರಿದ್ದರು. ಅವರಿಗೆ 40-50 ಸಾವಿರ ಮೌಲ್ಯದ ಐಪಾಡ್ ಖರೀದಿಸುವುದು ದೊಡ್ಡ ಮಾತಲ್ಲ. ಹಾಗಾಗಿ ಪಾಲಿಕೆಗೆ ಸೇರಿದ ಈ ಸ್ವತ್ತನ್ನು ಕೂಡಲೇ ಹಿಂದಿರುಗಿಸದಿದ್ದಲ್ಲಿ ಮುಂದೆ ಚುನಾವಣೆಗೆ ನಿಂತಲ್ಲಿ ಅದೇ ಅವರಿಗೆ ಉರುಳಾಗಬಹುದು.”
– ಎನ್.ಆರ್.ರಮೇಶ್, ಬೆಂಗಳೂರು ನಗರ ದಕ್ಷಿಣ ಜಿಲ್ಲಾಧ್ಯಕ್ಷ
ಬಿಬಿಎಂಪಿ ಐಪಾಡ್ ಹಿಂದಿರುಗಿಸದ ಮಾಜಿ ಕಾರ್ಪೊರೇಟರ್ ಗಳ ಪಟ್ಟಿ
ಇದನ್ನು ಗಮನಿಸಿದರೆ, ಎಲೆಕ್ಷನ್ ಗೆ ಲಕ್ಷಾಂತರ ರೂಪಾಯಿ ಕರ್ಚು ಮಾಡುವ ಮಾಜಿ ಪುರಪಿತೃಗಳಿಗೆ ಆಪಲ್ ಐಪಾಡ್ ಮೇಲಿನ ಮೋಹ ಹೋದಂತೆ ಕಾಣ್ತಿಲ್ಲ. ಐಪಾಡ್ ನೀಡದಿರುವ ಪಾಲಿಕೆ ಕಾರ್ಪೊರೇಟರ್ ಗಳಿಗೆ ಮುಂದೆ ಬಿಬಿಎಂಪಿ ಎಲೆಕ್ಷನ್ ನಿಂತರೆ ಸಮಸ್ಯೆ ಆಗುವುದೇ ಹೆಚ್ಚು.
ಏಕಂದರೆ ಪಾಲಿಕೆ ಕೌನ್ಸಿಲ್ ಕಚೇರಿಯಿಂದ ಐಪಾಡ್ ನೀಡದ ಕೌನ್ಸಿಲರ್ ಗಳಿಗೆ ಮಾರ್ಚ್ 2 ನೇ ತಾರೀಖು ಕೊನೆಯ ಹಾಗೂ ಅಂತಿಮ ತಿಳುವಳಿಕೆಯ ನೋಟಿಸ್ ನಲ್ಲಿ, ಒಂದೊಮ್ಮೆ ಐಪಾಡ್ ಹಿಂದಿರುಗಿಸದಿದ್ದರೆ ಆ ಮಾಜಿ ಸದಸ್ಯರ ಹೆಸರಲ್ಲಿ ಸರ್ಕಾರಿ ಸಂಸ್ಥೆಯ ಬೇಬಾಕಿ ಉಳಿಸಿಕೊಂಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಡಿಫಾಲ್ಟರ್ ಆದರೆ ಚುನಾವಣೆಯಲ್ಲಿ ನಿಲ್ಲಲು ಕಷ್ಟ !!
“ಬಿಬಿಎಂಪಿಯ ಚುನಾವಣೆ ನಡೆದಲ್ಲಿ ಐಪಾಡ್ ನೀಡದ ಸದಸ್ಯರು ಒಂದೊಮ್ಮೆ ಚುನಾವಣೆಗೆ ಸ್ಪರ್ಧಿಸಿದಲ್ಲಿ, ಚುನಾವಣಾ ಆಯೋಗಕ್ಕೆ ಅಫಿಡೆವಿಟ್ ಸಲ್ಲಿಸುವಾಗ, ಸರ್ಕಾರದಿಂದ ತಾವು ಯಾವುದೇ ಬೇಬಾಕಿ (ಡಿಫಾಲ್ಟರ್) ಉಳಿಸಿಕೊಂಡಿಲ್ಲವೆಂದು ತಿಳಿಸಬೇಕಾಗುತ್ತೆ. ಒಂದೊಮ್ಮೆ ಸುಳ್ಳು ಮಾಹಿತಿ ನೀಡಿ, ಅದು ರುಜುವಾತಾದಲ್ಲಿ ಆ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗುತ್ತೆ. ಒಂದೊಮ್ಮೆ ಚುನಾವಣೆಯಲ್ಲಿ ಗೆದ್ದು ಬಂದ ನಂತರ ಯಾರಾದರೂ ಅವರ ಆಯ್ಕೆ ಪ್ರಶ್ನಿಸಿದಲ್ಲಿ, ಬೇಬಾಕಿ ಮಾಹಿತಿ ಮುಚ್ಚಿಟ್ಟು ಸದಸ್ಯರಾಗಿ ಆಯ್ಕೆಯಾದರೂ ಚುನಾವಣಾ ಆಯೋಗ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸುವ ಸಾಧ್ಯತೆಯಿದೆ.”
– ರಾಮೇಗೌಡ, ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿ
ಬಿಜೆಪಿ ಅಂದಿನ ಸದಸ್ಯರಾದ ಪದ್ಮನಾಭರೆಡ್ಡಿ ಹಾಗೂ ಪೂರ್ಣಿಮಾ ರಮೇಶ್ ಅವರನ್ನು ಹೊರತುಪಡಿಸಿ ಉಳಿದ 196 ಕಾರ್ಪೊರೇಟರ್ಸ್ ಹಾಗೂ ನಾಮನಿರ್ದೇಶಿತ ಸದಸ್ಯರು ಪಾಲಿಕೆಯಿಂದ ಐಪಾಡ್ ಪಡೆದುಕೊಂಡರು. ಆ ಪೈಕಿ ಕಾವೇರಿಪುರ ವಾರ್ಡ್ ನ ರಮಿಳಾ ಉಮಾಶಂಕರ್, ಏಳುಮಲೈ ನಿಧನರಾದರು. ರಮಿಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಪಲ್ಲವಿ ಚೆನ್ನಪ್ಪ ಗೆದ್ದು ಬಂದ ಮೇಲೆ ಅವರಿಗೂ ಐಪಾಡ್ ನೀಡಲಾಯ್ತು. ಅದನ್ನು ಅವರು ವಾಪಸ್ ಮಾಡಿದ್ದಾರೆ ಕೂಡ.
ಐಪಾಡ್ ಬದಲು ಇಂತಿಷ್ಟು ದರ ನಿಗಧಿಪಡಿಸಿ ವಸೂಲಿಗೆ ಸಲಹೆ :
ಈ ಬಗ್ಗೆ ಬಿಬಿಎಂಪಿ ಕಾಯ್ದೆ – 2020 ಕರಡು ರಚನಾ ಸಮಿತಿ ಸದಸ್ಯರಾಗಿದ್ದ, ವಿಧನಾಪರಿಷತ್ ಸದಸ್ಯರಾದ ಪಿ.ಆರ್.ರಮೇಶ್ ಬೆಂಗಳೂರು ವೈರ್ ಗೆ ಪ್ರತಿಕ್ರಿಯೆ ನೀಡಿದ್ದು, 2018ರಲ್ಲಿ ಕಾಗದ ರಹಿತ ಸಂಪರ್ಕ ವ್ಯವಸ್ಥೆ ಅಳವಡಿಸಿಕೊಳ್ಳುವಾಗ, ಕಾಗದ ದಾಖಲೆ ಪ್ರಿಂಟ್ ಮಾಡಿ ವಿತರಿಸುವ ಅವಧಿ, ಪಾಲಿಕೆ ವೆಚ್ಚ ಉಳಿತಾಯವಾಗುತ್ತಿದ್ದ ಹಿನ್ನಲೆಯಲ್ಲಿ, ಪಾಲಿಕೆ ಮತ್ತು ಸದಸ್ಯರು ಶೇ.50 ರಷ್ಟು ಹಣ ನೀಡಿ ಕೌನ್ಸಿಲರ್ ಗಳಿಗೇ ಐಪಾಡ್ ಹಂಚಿಕೆ ಮಾಡುವ ನಿರ್ಣಯ ಮಾಡಬೇಕಿತ್ತು. ಬಿಬಿಎಂಪಿ ಕೆಲಸಗಳಿಗೆ ಮಾತ್ರ ಅದನ್ನು ಬಳಸುವಂತೆ ನಿಯಮ ಮಾಡಬೇಕಿತ್ತು ಎಂದು ತಿಳಿಸಿದ್ದಾರೆ.
ಪಾಲಿಕೆ ಸದಸ್ಯರಿಗೆ ನೀಡುವ ಮಾಸಿಕ ಗೌರವ ಧನದಲ್ಲೇ ಐಪಾಡ್ ಹಣವನ್ನು ಕಡಿತ ಮಾಡಿಕೊಂಡರೆ ಉತ್ತಮವಾಗುತ್ತಿತ್ತು. ಈಗಾಗಲೇ ವಿತರಿಸುವ ಐಪಾಡ್ ಬದಲಿಗೆ ಮಾಜಿ ಸದಸ್ಯರಿಂದ ಕೌನ್ಸಿಲ್ ಕಚೇರಿ ಹಣ ಪಡೆದುಕೊಂಡರೆ ಉತ್ತಮ ಎಂದು ಅವರು ಹೇಳುತ್ತಾರೆ.
ಈಗ ಆ ಹಳೆಯ ಐಪಾಡ್ ಗಳನ್ನು ವಾಪಸ್ ಪಡೆದುಕೊಂಡರು, ಹೊಸ ಪಾಲಿಕೆ ಸದಸ್ಯರು ಆರಿಸಿಬಂದರೆ, ಈ ಹಳೆಯ ಸಾಮಗ್ರಿಗಳನ್ನು ಅವರು ಬಳಸಲ್ಲ. ಆಗ ತೆರಿಗೆದಾರರ ಹಣ ಅನವಶ್ಯಕವಾಗಿ ಪೋಲಾದಂತಾಗುತ್ತೆ. ಮುಂದೆ ಆ ರೀತಿ ತಪ್ಪು ಮರು ಕಳಿಸಬಾರದು ಎಂದು ಪಿ.ಆರ್.ರಮೇಶ್, ಪಾಲಿಕೆಗೆ ಸಲಹೆ ನೀಡಿದ್ದಾರೆ.
ಇನ್ನೊಂದೆಡೆ ಮಾರ್ಚ್ 9 ರಂದು ಬಿಬಿಎಂಪಿ ಐಟಿ ಸಲಹೆಗಾರರಿಂದ ಕೌನ್ಸಿಲ್ ಕಾರ್ಯದರ್ಶಿಗಳು ಸಲಹೆ ಪಡೆದಿದ್ದು 3 ವರ್ಷದ ಸವಕಳಿ ಕಳೆದು, ಇನ್ನೂ ಐಪಾಡ್ ವಾಪಸ್ ಮಾಡದ ಪ್ರತಿ ಸದಸ್ಯರಿಂದ ಐಪಾಡ್ ಬದಲಿಗೆ 27,021 ರೂ. ವಸೂಲಿ ಮಾಡಲು ಚಿಂತನೆ ನಡೆಸಿದ್ದಾರೆ. ಕೌನ್ಸಿಲ್ ಇನ್ನೂ ಸ್ಪಷ್ಟ ನಿರ್ಧಾರ ತಳೆದಿಲ್ಲ.