ಬೆಂಗಳೂರು (www.bengaluruwire.com) : ಕರೋನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಜನರಿಗೆ ವಿದ್ಯುತ್ ನಿಯಂತ್ರಣ ಆಯೋಗ ಮತ್ತೆ ಶಾಕ್ ನೀಡಿದೆ….!
2021-22 ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಕಟವಾಗಿದ್ದು, ಅದರಂತೆ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ ಸರಾಸರಿ 30 ಪೈಸೆ ಏರಿಕೆ ಮಾಡಲಾಗಿದೆ. ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಅಥವಾ ಅದರ ನಂತರ ಮೊದಲ ಮೀಟರ್ ಓದುವ ದಿನಾಂಕದಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ)ದ ಅಧ್ಯಕ್ಷ ಶಂಭುದಯಾಳ್ ಮೀನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರೋನಾ ಸೋಂಕು ಏರಿಕೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಕಾರಣಕ್ಕೆ ಏಪ್ರಿಲ್, ಮೇ ತಿಂಗಳ ದರ ಪರಿಷ್ಕರಣೆ ವ್ಯತ್ಯಾಸದ ಹಣವನ್ನು ಯಾವುದೇ ಬಡ್ಡಿಯಿಲ್ಲದೆ ಅಕ್ಟೋಬರ್, ನವೆಂಬರ್ ತಿಂಗಳ ಬಿಲ್‌ನಲ್ಲಿ ವಸೂಲಿ ಮಾಡುವಂತೆ ಆಯೋಗ ಎಸ್ಕಾಂಗಳಿಗೆ ಸೂಚಿಸಿದೆ.
ಗೃಹಬಳಕೆ ಪ್ರವರ್ಗದಲ್ಲಿ ಕಡಿಮೆ ಮತ್ತು ಮಧ್ಯಮ ವರ್ಗದ ಗೃಹ ಬಳಕೆದಾರರ ವಿದ್ಯತ್ ಚ್ಛಕ್ತಿ ಬಳಕೆಯನ್ನು ಉತ್ತೇಜಿಸಲು ಮೊದಲ ಹಂತವನ್ನು 30 ಯೂನಿಟ್ ಗಳಿಂದ 50 ಯೂನಿಟ್ ಗಳಿಗೆ ಹೆಚ್ಚಿಸಿ ಅನುಕೂಲ ಮಾಡಿಕೊಟ್ಟಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರತಿ ಯೂನಿಟ್ಗೆ 1.39 ರೂ. ಏರಿಕೆ ಮಾಡುವಂತೆ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದೇ ರೀತಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ 83 ಪೈಸೆ, ಚಾಮುಂಡೇಶ್ವರಿ 1.45 ರೂ., ಮಂಗಳೂರು 1.67 ರೂ ಹಾಗೂ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ 1.68 ರೂ. ಪ್ರತಿ ಯೂನಿಟ್ ವಿದ್ಯುತ್ ನ ದರ ಪರಿಷ್ಕರಣೆ ಮಾಡಲು ಕೆಇ ಆರ್ ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ನಿಗಧಿತ ಶುಲ್ಕದ ದರ 10 ರೂ.ನಿಂದ 20 ರೂ.ಗೆ ಏರಿಕೆ
ಆದರೆ ಎಲ್ಲ ಐದು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಪ್ರತಿ ತಿಂಗಳು ವಿಧಿಸಲಾಗುವ ನಿಗಧಿತ ಶುಲ್ಕ (ಫಿಕ್ಸೆಡ್ ಚಾರ್ಜಸ್) ವನ್ನು 10 ರೂ. ನಿಂದ 20 ರೂ. ಸೇರಿ ಶೇ.3.84 ದರ ಹೆಚ್ಚಳದೊಂದಿಗೆ ಪ್ರತಿ ಯೂನಿಟ್ ನ ಸರಾಸರಿ ವಿದ್ಯುತ್ ದರವನ್ನು 30 ಪೈಸೆಗೆ ಏರಿಕೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ಕೆಇಆರ್ ಸಿ ಅಧ್ಯಕ್ಷರು ತಿಳಿಸಿದ್ದಾರೆ.
ಎಲ್ಲಾ 5 ಎಸ್ಕಾಂಗಳಿಂದ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಎಸ್ಕಾಂಗಳ ಒಟ್ಟಾರೆ ಕಂದಾಯ ಕೊರತೆ 1,819 ಕೋಟಿ ರೂ. ಆಗುತ್ತದೆ ಎಂದು ಕೆಇ ಆರ್ ಸಿ ತಿಳಿಸಿದೆ. ಹಾಗಾಗಿ ಇದನ್ನು ದರ ಹೆಚ್ಚಳದಿಂದ ವಸೂಲಿ ಮಾಡಬಹುದೆಂದು ಹೇಳಿದೆ. ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್ ದರವನ್ನು 83 ಪೈಸೆಯಿಂದ ರೂ. ನಿಂದ 1.68 ರೂ. ಏರಿಕೆ ಮಾಡುವಂತೆ ಕೋರಿದ್ದವು. ಕೆಇ ಆರ್ ಸಿ ಈ ಬಗ್ಗೆ ವಿಚಾರಣೆ ನಡೆಸಿ ಸರಾಸರಿ ಯೂನಿಟ್ ಗೆ 30 ಪೈಸೆ ಏರಿಕೆಗೆ ಒಪ್ಪಿಗೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನ ಬಳಕೆ ಪ್ರೋತ್ಸಾಹಿಸಲು ಬ್ಯಾಟರಿ ಚಾರ್ಜಿಂಗ್ ಸ್ಟೇಷನ್ ವಿದ್ಯುತ್ ಬಳಕೆಗೆ ಯೂನಿಟ್ಗೆ 5 ರೂ. ಹಿಂದೆ ನಿಗಧಿಪಡಿಸಿದ್ದನ್ನು ಮುಂದುವರೆಸಲಾಗಿದೆ. ರಾಜ್ಯದಲ್ಲಿ 10 ಎಚ್ಪಿಗಿಂತ ಕಡಿಮೆ ಸಾಮರ್ಥ್ಯದ 30.65 ಲಕ್ಷ ಪಂಪ್ ಸೆಟ್ ಗಳಿವೆ. 26.88 ಲಕ್ಷ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಸಂಪರ್ಕಕ್ಕೆ ಉಚಿತ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ 2020-21 ನೇ ಸಾಲಿನಲ್ಲಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ 12,911 ಕೋಟಿ ರೂ. ಸಹಾಯಧನ (ಸಬ್ಸೀಡಿ) ನೀಡಬೇಕಿದೆ.
ಆದರೆ 2021-2022 ನೇ ಸಾಲಿನಲ್ಲಿ ಎಸ್ಕಾಂಗಳಿಗೆ, ಸರ್ಕಾರವು 10 ಎಚ್ ಪಿ ವರೆಗಿನ ಪಂಪ್ ಸೆಟ್, ಭಾಗ್ಯಜ್ಯೋತಿ – ಕುಟೀರ ಜ್ಯೋತಿ ಯೋಜನೆಯಡಿ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಿದೆ. ಈ ಯೋಜನೆಯ ಅಡಿಯಲ್ಲಿ ಒಟ್ಟಾರೆ 22,297.41 ದಶಲಕ್ಷ ಯೂನಿಟ್ ಬಳಕೆಯ ಅಂದಾಜಿನಂತೆ ವಾರ್ಷಿಕ 13,071.73 ಕೋಟಿ ರೂ. ಸಬ್ಸೀಡಿ ಹಣವನ್ನು ಸರ್ಕಾರ ನೀಡಬೇಕಾಗುತ್ತೆ ಎಂದು ಕೆಇಆರ್ ಸಿ ಹೇಳಿದೆ.
ನಮ್ಮ ಮೆಟ್ರೋಗೆ ಹಿಂದೆ ಪ್ರತಿ ಯೂನಿಟ್ ಗೆ ರಿಯಾಯಿತಿ ವಿದ್ಯುತ್ ದರ 5.20 ರೂ. ನಿಗಧಿಪಡಿಸಿತ್ತು. 2021-22 ವರ್ಷಕ್ಕೂ ಅದನ್ನೆ ಮುಂದುವರೆಸಲಾಗಿದೆ. ಉಷ್ಣವಿದ್ಯುತ್ ಸ್ಥಾವರದಿಂದ ವಿದ್ಯುತ್ ಖರೀದಿ ದರ ಏರಿಕೆ, ಉತ್ಪಾದನಾ ವೆಚ್ಚ ಏರಿಕೆ, ಸಿಬ್ಬಂದಿ ವೇತನ ಏರಿಕೆ ಮತ್ತಿತರ ಕಾರಣಗಳಿಂದ ವಿದ್ಯುತ್ ದರ ಏರಿಕೆ ಮಾಡಲು ಕಾರಣ ಎಂದು ಕೆಇಆರ್ ಸಿ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ.