ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ದುಡ್ಡು ಹೊಡೆಯೋಕೆ ಏನೆಲ್ಲಾ ಸ್ಕೀಮ್ ಬೇಕೊ ಅದನ್ನು ಬಹಳ ವ್ಯವಸ್ಥಿತವಾಗಿ ಮಾಡ್ತಾರೆ ಇಲ್ಲಿನ ಅಧಿಕಾರಿಗಳು. ಇದಕ್ಕೆ ಲೇಟೆಸ್ಟ್ ಉದಾಹರಣೆ ಕೆ.ಆರ್.ಸರ್ಕಲ್ ಜಂಕ್ಷನ್….!
ಅಸಲಿಗೆ ಈ ಜಂಕ್ಷನ್ ಅನ್ನು ಅಭಿವೃದ್ಧಿ ಮಾಡುತ್ತಿರುವ ಕ್ರಮವೇ ಅವೈಜ್ಞಾನಿಕ ಅನ್ನುತ್ತಾರೆ ಸಂಚಾರಿ ತಜ್ಞರು. ಇದು ಕಾಂಟ್ರಾಕ್ಟರ್ ಹಾಗೂ ಪಾಲಿಕೆ ಟ್ರಾಫಿಕ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಜೋಬು ತುಂಬಿಸುವ ಯೋಜನೆಯಲ್ಲದೆ ಮತ್ತಿನ್ನೇನಲ್ಲ. ಎರಡು ಕೋಟಿ ರೂಪಾಯಿ ಮೊತ್ತ ವೆಚ್ಚ ಮಾಡುವ ಈ ಕಾಮಗಾರಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಲಿದ್ದು, ತೆರಿಗೆದಾರರ ಹಣ ಮತ್ತು ವಾಹನ ಸವಾರರ ಸಮಯ, ಪರೋಕ್ಷವಾಗಿ ನಗರದ ಅರ್ಥವ್ಯವಸ್ಥೆಗೆ ಹೆಚ್ಚಿನ ದುಷ್ಪರಿಣಾಮ ಬೀರಲಿದೆ ಎನ್ನುತ್ತಿದ್ದಾರೆ ಟ್ರಾಫಿಕ್ ಎಕ್ಸ್ ಪರ್ಟ್ಸ್. ಇದಕ್ಕೆ ಸೂಕ್ತ ಕಾರಣ ಹಾಗೂ ಕಾನೂನಿನ ನಿಯಮಗಳು ಏನೆನ್ನುತ್ತವೆ ಎಂಬುದನ್ನು ತಿಳಿಸಿದ್ದಾರೆ.
2017-18ರ ಸಾಲಿನ ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನದಡಿ ಬಿಬಿಎಂಪಿಯ ಟ್ರಾಫಿಕ್ ಎಂಜಿನಿಯರಿಂಗ್ ವಿಭಾಗಕ್ಕೆ ಕೆ.ಆರ್.ಸರ್ಕಲ್ ಸೇರಿದಂತೆ ನಗರದ 6 ಪ್ರಮುಖ ಜಂಕ್ಷನ್ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿತ್ತು. ಎಸ್.ರಾಮನ್ ಅಂಡ್ ಕೋ ಎಂಬ ಕಂಪನಿಗೆ ಇವೆಲ್ಲದರ ಗುತ್ತಿಗೆ ನೀಡಲಾಗಿತ್ತು. ಆ ಪೈಕಿ ಕೆ.ಆರ್.ವೃತ್ತದ ಜಂಕ್ಷನ್ ಅಭಿವೃದ್ಧಿಗಾಗಿ 2 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿತ್ತು. ಕೆ.ಆರ್.ಸರ್ಕಲ್ ಜಂಕ್ಷನ್ ಇಂಪ್ರೂವ್ ಮೆಂಟ್ ಯೋಜನೆಯ ಆರ್ಕಿಟೆಕ್ಟ್ ರೋಶನ್ ಎನ್.ಮಧು ಚಂದ್ರಿಕಾ ಎಂಬ ಕಂಪನಿಗೆ ಹೊರಗುತ್ತಿಗೆ ನೀಡಲಾಗಿದೆ.
ಬೆಂಗಳೂರು ಕೇಂದ್ರ ಭಾಗದಲ್ಲಿರುವ ಕೆ.ಆರ್.ಸರ್ಕಲ್, ನಗರದ ಪೂರ್ವ ಹಾಗೂ ದಕ್ಷಿಣ ಬೆಂಗಳೂರಿಗೆ ಪ್ರಮುಖ ಸಂಪರ್ಕ ಸೇತುವಾಗಿದೆ. ಅಲ್ಲದೆ ಈ ವೃತ್ತ 5 ರಸ್ತೆಗಳನ್ನು ಒಗ್ಗೂಡಿಸುವ ನಗರದ ಪ್ರಮುಖ ಜಂಕ್ಷನ್ ಆಗಿದೆ. ವಾಹನ ದಟ್ಟಣೆ ಅವಧಿ ಅಥವಾ ಪೀಕ್ ಹವರ್ ಟ್ರಾಫಿಕ್ ನಲ್ಲಿ ಪ್ರತಿ ಗಂಟೆಗೆ 25,500 ವಾಹನಗಳು ಓಡಾಡುವ ಸ್ಥಳವಾಗಿದೆ ಎಂದು ಬಿಬಿಎಂಪಿಯ ಟ್ರಾಫಿಕ್ ಎಂಜಿನಿಯರಿಂಗ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
“ಕೆ.ಆರ್.ವೃತ್ತದಲ್ಲಿ ಪೀಕ್ ಹವರ್ ನಲ್ಲಿ ಗಂಟೆಗೆ 25,500 ವಾಹನಗಳು ಓಡಾಡುತ್ತವೆ. ಜಂಕ್ಷನ್ ಅಭಿವೃದ್ಧಿ ಕಾಮಗಾರಿಯಡಿ ಬಣ್ಣ ಬಣ್ಣದ ಕಾಬ್ಲರ್ ಸ್ಟೋನ್ ಬಳಸಿ ವೃತ್ತವನ್ನು ಸೌಂದರ್ಯೀಕರಣಗೊಳಿಸಲಾಗುತ್ತೆ. ಸರ್.ಎಂ.ವಿಶ್ವೇಶ್ವರಯ್ಯನವರ ಪುತ್ಥಳಿ ಸ್ಥಳದ ಅಭಿವೃದ್ಧಿ, ಸರ್ವೆ ಆಫೀಸ್ ಜಂಕ್ಷನ್ ಭಾಗದಲ್ಲಿ ಕಾರಂಜಿ ಜೊತೆಗೆ ದೀಪದಿಂದ ಅಲಂಕರಿಸಲಾಗುತ್ತೆ. ಯುವಿಸಿಇ ಕಾಲೇಜು ಜಂಕ್ಷನ್ ಅಭಿವೃದ್ಧಿಪಡಿಸಲಾಗುತ್ತೆ. ಇಡೀ ಕೆ.ಆರ್.ವೃತ್ತವನ್ನು ಕಾಬ್ಲರ್ ಸ್ಟೋನ್ ಹಾಕಿದ ವೃತ್ತ ಹೊರತುಪಡಿಸಿ ಉಳಿದೆಡೆ ಸಂಪೂರ್ಣವಾಗಿ ಡಾಂಬರ್ ಹಾಕಲಾಗುತ್ತೆ. ಇನ್ನು ಒಂದು ತಿಂಗಳಲ್ಲಿ ಈ ಎಲ್ಲಾ ಕಾಮಗಾರಿಗಳು ಪೂರ್ಣವಾಗಲಿದೆ.“
– ಶ್ರಿನಿವಾಸ್, ಮುಖ್ಯಸ್ಥ, ಬಿಬಿಎಂಪಿ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್
ಈ ಯೋಜನೆ ಹೇಗೆ ಅವೈಜ್ಞಾನಿಕವಾಗಿದೆ?
ಇಂತಹ ಸ್ಥಳದಲ್ಲಿ ಬಣ್ಣ ಬಣ್ಣದ ಕಾಬ್ಲರ್ ಸ್ಟೋನ್ ಬಳಸಿ 452.16 ಚದರ ಮೀಟರ್ ವಿಸ್ತೀರ್ಣದ ಎಂಜಿನಿಯರಿಂಗ್ ಚಕ್ರದ ವಿನ್ಯಾಸವನ್ನು ಅವೈಜ್ಞಾನಿಕವಾಗಿ ಹಾಕಲಾಗಿದೆ. ಈ ವೃತ್ತಾಕಾರದ ಕೇಂದ್ರ ಸ್ಥಾನದಿಂದ ಹೊರವಲಯದ ತನಕ 3 ಮೀಟರ್ ವ್ಯಾಸ,6,9 ಮೀಟರ್ ಹೀಗೆ 36 ಮೀಟರ್ ವ್ಯಾಸದ ತನಕ ಅಲ್ಲಲ್ಲಿ ಮಧ್ಯೆ- ಮಧ್ಯೆ ವೃತ್ತಾಕಾರವಾಗಿ ಆರ್.ಸಿ.ಸಿ. ಕಾಂಕ್ರಿಟ್ ಬೀಮ್ ಹಾಕಿದ್ದಲ್ಲಿ ಕಾಬ್ಲರ್ ಸ್ಟೋರ್ ಅಷ್ಟು ಸುಲಭವಾಗಿ ಕಿತ್ತು ಬರುವುದಿಲ್ಲ. ಗುತ್ತಿಗೆದಾರರ ಹಣ ಉಳಿಸುವ ಪ್ಲಾನ್ ಇರುವ ಕಾರಣಕ್ಕೇನೊ 36 ಮೀಟರ್ ಅಂತ್ಯವಾಗುವ ಕೊನೆಯಲ್ಲಿ ಮಾತ್ರ ಒಂದು ವೃತ್ತಕಾರವಾದ ಆರ್ ಸಿಸಿ ರಿಂಗ್ ಬೀಮ್ ಹಾಕಲಾಗಿದೆ. ಇದರಿಂದ ಆಗಾಗ ಕಾಬ್ಲರ್ ಸ್ಟೋನ್ ಕೆಳಗಿನ ಮಣ್ಣು ಕುಸಿದು ಅವು ಮೇಲೆ, ಕಿತ್ತು ಬರುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು.
ಈ ವಿನ್ಯಾಸ, ರಸ್ತೆ ಮೇಲೆ ಹೋಗುವ ವಾಹನ ಸವಾರರಿಗೆ ಸರಿಯಾಗಿ ಕಾಣುವುದಿಲ್ಲ. ಅಲ್ಲದೆ ಹೆಲಿಕಾಪ್ಟರ್ ಅಥವಾ ವಿಮಾನದಲ್ಲಿ ಸಾಗುವವರಿಗೆ ಈ ಕಾಬ್ಲರ್ ಸ್ಟೋನ್ ಜೋಡಿಸಿದ ಡಿಸೈನ್ ಕಂಡರೆ ಹೆಚ್ಚೆಚ್ಚು. ಈ ಸಿಮೆಂಟ್- ಎಂ.ಸ್ಯಾಂಡ್ ಮರಳಿನಿಂದ ಮಾಡಿದ ಕಾಬ್ಲರ್ ಸ್ಟೋನ್ ಗಳು ನೆಲದಿಂದ ಮೇಲೆದ್ದು ಅಥವಾ ಕಿತ್ತು ಬಂದರೆ, ದ್ವಿಚಕ್ರ ವಾಹನಗಳ ಅಪಘಾತಕ್ಕೆ ಕಾರಣವಾಗಲಿದೆ. ಅಲ್ಲದೆ ಈ ಜಂಕ್ಷನ್ ಹಾದು ಹೋಗಲು ವಾಹನಗಳಿಗೆ ಮುಂದೆ ಹೆಚ್ಚು ಸಮಯ ತೆಗೆದುಕೊಳ್ಳಲಿದೆ ಎಂದು ಸಂಚಾರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ರೋಡ್ಸ್ ಕಾಂಗ್ರೆಸ್ ನಿಯಮ ಏನನ್ನುತ್ತದೆ?
ದೇಶದ ರಸ್ತೆ ನಿರ್ಮಾಣದ ನಿಯಮಾವಳಿಗಳ ಭಗವತ್ ಗೀತೆಯಂತಿರುವ ಭಾರತೀಯ ರೋಡ್ಸ್ ಕಾಂಗ್ರೆಸ್ (ಐಆರ್ ಸಿ) ಪ್ರಕಾರ ಗಂಟೆಗೆ 10 ಸಾವಿರಕ್ಕಿಂತ ಹೆಚ್ಚು ವಾಹನಗಳು ಓಡಾಡುವ ರಸ್ತೆಗಳು ಕೂಡುವ ಜಂಕ್ಷನ್ ಗಳಲ್ಲಿ ಯಾವುದೇ ಕಾರಣಕ್ಕೂ ರೋಟರಿ ಜಂಕ್ಷನ್ ಗಳು ಉಪಯೋಗಕಾರಿಯಲ್ಲ. ಆ ರೀತಿಯ ವಿನ್ಯಾಸವಿರುವ ರಸ್ತೆಗಳಲ್ಲಿ ಸುಗಮವಾಗಿ ವಾಹನ ಸಂಚಾರ ಸಾಧ್ಯವಿಲ್ಲ. ಪ್ರತಿ ಗಂಟೆಗೆ 10 ಸಾವಿರಕ್ಕಿಂತ ಹೆಚ್ಚು ವಾಹನಗಳು ಓಡಾಡುವ ಸ್ಥಳಗಳಲ್ಲಿ ಫ್ಲೈಓವರ್ ಅಥವಾ ಗ್ರೇಡ್ ಸಪರೇಟರ್ ನಿರ್ಮಾಣವೇ ಪರಿಹಾರವೆಂದು ಹೇಳುತ್ತದೆ.
ತಜ್ಞರು ಈ ಬಗ್ಗೆ ಹೇಳುವುದೇನು?
“ಬಿಬಿಎಂಪಿಯಲ್ಲಿ ಸಾಕಷ್ಟು ಅವೈಜ್ಞಾನಿಕ ಯೋಜನೆಗಳ ನಡುವೆ ಮತ್ತೊಂದು ಪ್ರಾಜೆಕ್ಟ್ ಕೈಗೊಂಡಿದೆ. ಭಾರತೀಯ ರೋಡ್ಸ್ ಕಾಂಗ್ರೆಸ್ ನಿಯಮಾವಳಿ ಪ್ರಕಾರ ಪ್ರತಿ ಗಂಟೆಗೆ 10 ಸಾವಿರಕ್ಕಿಂತ ಹೆಚ್ಚು ವಾಹನಗಳು ಓಡಾಡುವ ಸ್ಥಳದಲ್ಲಿ ರೋಟರಿ ಜಂಕ್ಷನ್ ಗಳು ಫಲ ನೀಡದು. ಇದಕ್ಕೆ ಉತ್ತಮ ಉದಾಹರಣೆ ಕಾರ್ಪೊರೇಷನ್ ಸರ್ಕಲ್. ಇಲ್ಲಿ ಈ ಹಿಂದೆ ಇದ್ದ ರೋಟರಿ ಜಂಕ್ಷನ್ ಅನ್ನು ಕಿತ್ತು ಹಾಕಿದ ನಂತರ ಅಲ್ಲಿನ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬಂತು. ಆದರೆ ಅದೇ ತಪ್ಪನ್ನು ಮತ್ತೆ ಕೆ.ಆರ್.ವೃತ್ತದಲ್ಲಿ ಪುನ: ಮಾಡಲಾಗುತ್ತಿದೆ. ಪೀಕ್ ಹವರ್ ನಲ್ಲಿ ಪ್ರತಿ 2 ರಿಂದ 3 ಸೆಕೆಂಡ್ ಗೆ ಒಂದರಂತೆ 6 ರಿಂದ 8 ಟನ್ ಭಾರದ ಬಸ್ ಓಡಾಡುವ ವೃತ್ತದಲ್ಲಿ ಕಾಬ್ಲರ್ ಸ್ಟೋನ್ ಹಾಕಿರೋದ್ರಿಂದ ಅವು ಕಿತ್ತು ಬರುವುದಲ್ಲದೆ ಪದೇ ಪದೇ ದುರಸ್ತಿ ಕಾಮಗಾರಿಗೆ ನಾಂದಿಯಾಗಿ, ಅನವಶ್ಯಕ ವೆಚ್ಚಗಳಿಗೆ ದಾರಿಯಾಗುತ್ತೆ. ಅದರ ಬದಲು ಕೆ.ಆರ್.ವೃತ್ತದ ಮಧ್ಯದಲ್ಲಿ 1.5 ಅಡಿ ಎತ್ತರದ ಹಸಿರು ಗಿಡಗಳನ್ನಾದರೂ ಬೆಳೆಸಿದರೆ ಉತ್ತಮ.”
– ಪ್ರೊ|ಶ್ರೀಹರಿ, ಖ್ಯಾತ ಸಾರಿಗೆ ಮತ್ತು ಸಂಚಾರಿ ತಜ್ಞರು, ಸ್ಮಾರ್ಟ್ ಸಿಟಿ ಸಲಹೆಗಾರರು
6 ಜಂಕ್ಷನ್ ಅಭಿವೃದ್ಧಿ ಕಾಮಗಾರಿ 19 ತಿಂಗಳಾದರೂ ಮುಗಿದಿಲ್ಲ….?!
2017-18ನೇ ನಗರೋತ್ಥಾನ ಅನುದಾನದಡಿಯಲ್ಲಿ ನಗರದ ವಿವಿಧ ರಸ್ತೆ, ಪಾದಚಾರಿ, ವಾಹನ ಸಂಚಾರ ನಿಯಮಗಳಿಗೆ ಅನುಕೂಲವಾಗುವಂತೆ ಒಟ್ಟಾರೆ 233 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಆ ಪೈಕಿ ಗಂಗಾನಗರ, ದೊಮ್ಮಲೂರು, ಮತ್ತಿಕೆರೆ, ಸದಾಶಿವನಗರ, ವಿಜಯನಗರ ಹಾಗೂ ಕೆ.ಆರ್.ವೃತ್ತದ ಜಂಕ್ಷನ್ ಗಳ ಸುಧಾರಣೆಯೂ ಒಂದಾಗಿದೆ. ಜಂಕ್ಷನ್ ಇಂಪ್ರೂವ್ ಮೆಂಟ್ ಯೋಜನೆಯಡಿ ರಾಮನ್ ಅಂಡ್ ಕೋ ಎಂಬ ಗುತ್ತಿಗೆ ಸಂಸ್ಥೆಗೆ 27.5.2019ರಲ್ಲೇ ಪಾಲಿಕೆಯಿಂದ ವರ್ಕ್ ಆರ್ಡರ್ ದೊರೆತಿದ್ದು, ಅದೇ ವರ್ಷದ ನವೆಂಬರ್ 26ರಂದು ಈ ಎಲ್ಲಾ 6 ಜಂಕ್ಷನ್ ಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಮುಗಿಸಬೇಕಿತ್ತು. ಆದರೆ ಒಂದು ವರ್ಷ ಏಳು ತಿಂಗಳು (19 ತಿಂಗಳು) ಕಳೆದರೂ ಇನ್ನೂ ಒಟ್ಟಾರೆ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಒಂದೂವರೆ ವರ್ಷದಲ್ಲಿ ಬಹುತೇಕ ದಿನಗಳು ಲಾಕ್ ಡೌನ್ ಆಗಿದ್ದರೂ, ಕಾಮಗಾರಿ ಕೆಲಸವನ್ನು ಕಂಪ್ಲೀಟ್ ಮಾಡಿಲ್ಲ ಎಂಬುದು ಪಾಲಿಕೆಯ ದಾಖಲೆಗಳಿಂದ ತಿಳಿದು ಬಂದಿದೆ.
ಮುಖ್ಯ ಆಯುಕ್ತರಿಗೇ ದಿಕ್ಕು ತಪ್ಪಿಸುವ ಚಾಲಾಕಿ ಅಧಿಕಾರಿಗಳಿದ್ದಾರೆ?
ಕಳೆದ ತಿಂಗಳ 15ನೇ ತಾರೀಖಿನಂದು ಕೆ.ಆರ್.ವೃತ್ತದ ಜಂಕ್ಷನ್ ಇಂಪ್ರೂವ್ ಮೆಂಟ್ ಯೋಜನೆಯ ಕಾಮಗಾರಿಯನ್ನು ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ, ಪರಿಶೀಲಿಸಿದ ಸಂದರ್ಭದಲ್ಲಿಯೂ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ನ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀನಿವಾಸ್ ಬಾಯಿಬಿಟ್ಟು ಏನನ್ನು ಹೇಳದೆ ಮೌನಕ್ಕೆ ಶರಣಾಗಿದ್ದರು. ಇದು ಏನನ್ನು ಸೂಚಿಸುತ್ತದೆ ಎಂಬುದು ನಿಮ್ಮ ವಿಶ್ಲೇಷಣೆಗೆ ಬಿಟ್ಟಿದ್ದು….!!!
ಪಾಲಿಕೆಯಲ್ಲಿರುವ ಟ್ರಾಫಿಕ್ ಎಂಜಿನಿಯರಿಂಗ್ ಕೋಶ ಎಂಬ ವಿಭಾಗದಲ್ಲಿ ವರ್ಷಂಪ್ರತಿ ನಗರದಲ್ಲಿನ ವಾಹನ ದಟ್ಟಣೆ ಹಾಗೂ ಸರಾಗ ವಾಹನ ಸಂಚಾರಕ್ಕೆ ಅನುಕೂಲವಾಗಲೆಂದು ನೂರಾರು ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗುತ್ತೆ. ಇದರಲ್ಲಿ ಬೇಕಾಗಿರುವ ಯೋಜನೆಗಳಿಗಿಂತ ಬೇಡದಿರೋ ಯೋಜನೆಗಳೇ ಜಾಸ್ತಿಯಾಗಿದೆ. ಈ ಬಗ್ಗೆ ಆಡಳಿತಗಾರರಾದ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತಾ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.