ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ತಪ್ಪು ತಪ್ಪಾಗಿ ವಲಯ ವರ್ಗೀಕರಣ ಘೋಷಿಸಿಕೊಂಡ 78 ಸಾವಿರ ಆಸ್ತಿಗಳಿಗೆ ಪಾಲಿಕೆಯ ಆಸ್ತಿ ತೆರಿಗೆ ತಂತ್ರಾಂಶದಿಂದ ನೋಟಿಸ್ ಜನರೇಟ್ ಆಗಿದೆ. ಮಾರ್ಚ್ ನಲ್ಲೇ ಇಷ್ಟು ನೋಟಿಸ್ ಗಳು ಜನರೇಟ್ ಆದರೂ ಪಾಲಿಕೆ ಕಂದಾಯ ಅಧಿಕಾರಿಗಳು ಈತಕ ವಲಯ ವರ್ಗೀಕರಣದಡಿ ತಪ್ಪಾಗಿ ಆಸ್ತಿ ತೆರಿಗೆ ಘೋಷಿಸಿಕೊಂಡ ಕೇವಲ 1,021 ಜನರಿಗೆ ಮಾತ್ರ ದುಪ್ಪಟ್ಟು ದಂಡ ಹಾಗೂ ಬಡ್ಡಿಯೊಂದಿಗೆ ವ್ಯತ್ಯಾಸದ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.
481 ಆಸ್ತಿ ಮಾಲೀಕರು ಸ್ವಯಂಪ್ರೇರಿತವಾಗಿ ಆನ್ ಲೈನ್ ನಲ್ಲಿ ಪರಿಶೀಲನೆ ನಡೆಸಿ ತಾವೇ ಖುದ್ದಾಗಿ ಬಡ್ಡಿ, ದುಪ್ಪಟ್ಟು ದಂಡದೊಂದಿಗೆ ವ್ಯತ್ಯಾಸದ ಮೊತ್ತದ ಹಣವನ್ನು ಕಟ್ಟಿದ್ದಾರೆ. ಅಲ್ಲಿಗೆ ತಪ್ಪಾಗಿ ವಲಯ ವರ್ಗೀಕರಣ ಘೋಷಿಸಿಕೊಂಡ ಒಟ್ಟು 1,502 ಆಸ್ತಿ ಮಾಲೀಕರು (ಜೂ.2ರ ತನಕ) ಒಟ್ಟು 3.57 ಕೋಟಿ ರೂಪಾಯಿ ಆಸ್ತಿ ತೆರಿಗೆ ಹಣವನ್ನು ಪಾಲಿಕೆಗೆ ಕಟ್ಟಿದ್ದಾರೆ.
ಬಿಬಿಎಂಪಿಯ ಕೇಂದ್ರ ಕಚೇರಿ ಹಾಗೂ 8 ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಕಂದಾಯ ವಿಭಾಗದಲ್ಲಿ 30 ಕಂದಾಯ ಅಧಿಕಾರಿಗಳು, 64 ಸಹಾಯಕ ಕಂದಾಯ ಅಧಿಕಾರಿಗಳು, 400 ಮಂದಿ ರೆವಿನ್ಯೂ ಇನ್ಸ್ ಪೆಕ್ಟರ್ ಹಾಗೂ ಮೌಲ್ಯ ಮಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟು ಜನ ಅಧಿಕಾರಿಗಳಿದ್ದೂ ವ್ಯತ್ಯಾಸ ಮೊತ್ತದ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿಲ್ಲ.
ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 15 ದಿನದ ಕಾಲಾವಧಿಯಲ್ಲಿ ಪಾಲಿಕೆಯ ಆಸ್ತಿ ತೆರಿಗೆ ತಂತ್ರಾಂಶದ ಮೂಲಕ 2016-17ನೇ ಸಾಲಿನಿಂದ 2019-20ನೇ ಸಾಲಿನ ತನಕದ ಅವಧಿಯಲ್ಲಿ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿ (ಎಸ್ ಎಎಸ್ ) ಯಡಿ ಕಡಿಮೆ ಆಸ್ತಿ ತೆರಿಗೆ ಕಟ್ಟುವ ಸಲುವಾಗಿ ತಪ್ಪು ವಲಯ ವರ್ಗೀಕರಣದಡಿ ಆಸ್ತಿ ಘೋಷಣೆ ಮಾಡಿಕೊಂಡ ಪ್ರಕರಣಗಳನ್ನು ಸಾಫ್ಟ್ ವೇರ್ ಸಹಾಯದಿಂದ ಗುರ್ತಿಸಿ ನೋಟಿಸ್ ಸಿದ್ಧಪಡಿಸಲಾಗಿತ್ತು.
2016-17 ರಿಂದಲೇ ಕಂದಾಯ ಇಲಾಖೆ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಿ, ಆಸ್ತಿ ಪಾವತಿಸುವವರ ಮೇಲೆ ಹದ್ದುಗಣ್ಣು ಇಟ್ಟಿದ್ದರೆ 78,524 ನೋಟಿಸ್ ಜನರೇಟ್ ಆಗುವ ಪ್ರಮೇಯ ಬರುತ್ತಿರಲಿಲ್ಲ. ಅಂದರೆ ಅಷ್ಟರ ಮಟ್ಟಿಗೆ ಆಸ್ತಿ ಮಾಲೀಕರು ತಪ್ಪು ಮಾಡುತ್ತಿದ್ದರೂ, ರೆವೆನ್ಯೂ ಅಧಿಕಾರಿಗಳು ಮತ್ತು ಸಿಬ್ಬಂದಿ ಕಣ್ಣು ಮುಚ್ಚಿ ಕುಳಿತಿದ್ದರಾ ಎಂಬ ಪ್ರಶ್ನೆ ಎದುರಾಗುತ್ತದೆ.
ವಲಯ ವರ್ಗೀಕರಣ ಹೇಗೆ ?
ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯಾ ಪ್ರದೇಶದ ವ್ಯಾಪ್ತಿಯಲ್ಲಿ ನಿಗಧಿಪಡಿಸಿರುವ ಆಸ್ತಿಯ ಮಾರ್ಗಸೂಚಿ ದರದ ಆಧಾರದ ಮೇಲೆ ಎ ವಲಯದಿಂದ ಎಫ್ ವಲಯದ ತನಕ 6 ರೀತಿಯ ವಲಯ ವರ್ಗೀಕರಣವನ್ನು ಪಾಲಿಕೆ ಮಾಡಿದೆ. ಇದನ್ನು ಆಧಾರವಾಗಿಟ್ಟುಕೊಂಡು ಆ ವಲಯ ವರ್ಗೀಕರಣದ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತಮ್ಮ ಆಸ್ತಿಗಳ ತೆರಿಗೆಯನ್ನು ಲೆಕ್ಕ ಹಾಕಿ ಪಾಲಿಕೆಗೆ ತೆರಿಗೆ ಪಾವತಿಸಬೇಕು. ಆದರೆ ಎಷ್ಟೋ ವೇಳೆ ಅತಿಹೆಚ್ಚು ಮಾರ್ಗಸೂಚಿ ದರವಿರುವ ಎ- ವಲಯ ವ್ಯಾಪ್ತಿಯ ಆಸ್ತಿ ಮಾಲೀಕರು ಬಿ ಅಥವಾ ಸಿ ವಲಯದಲ್ಲಿರುವ ಆಸ್ತಿಗಳನ್ನು ಘೋಷಿಸಿಕೊಂಡರೆ ಅಷ್ಟರ ಮಟ್ಟಿಗೆ ಕಡಿಮೆ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಕಟ್ಟುತ್ತಿದ್ದರು.
ತಪ್ಪಾಗಿ ವಲಯ ವರ್ಗೀಕರಣ ಘೋಷಿಸಿಕೊಂಡವರ ಮೇಲೆ ಏನು ಕ್ರಮ?
ಜೋನಲ್ ಕ್ಲಾಸಿಫಿಕೇಶನ್ ಅಥವಾ ವಲಯ ವರ್ಗೀಕರಣದ ನಿಯಮಾವಳಿ ಅನ್ವಯ ತಪ್ಪಾಗಿ ಆಸ್ತಿ ವರ್ಗೀಕರಣ ಮಾಡಿಕೊಂಡು ಪ್ರಾಪರ್ಟಿ ಟ್ಯಾಕ್ಸ್ ಕಟ್ಟಿದ ಆಸ್ತಿಗಳ ವಿವರವನ್ನು ಪಾಲಿಕೆಯ ಆಸ್ತಿ ತಂತ್ರಾಂಶ ಪತ್ತೆ ಹಚ್ಚಿದೆ. ಹೀಗೆ ಪತ್ತೆ ಹಚ್ಚಿದ 78,524 ನೋಟಿಸ್ ಗಳ ಆಸ್ತಿ ಮಾಲೀಕರಿಗೆ ಕಂದಾಯ ವಿಭಾಗದವರು ವ್ಯತ್ಯಾಸ ಆಸ್ತಿ ತೆರಿಗೆ ಮೊತ್ತದೊಂದಿಗೆ ದುಪ್ಪಟ್ಟು ದಂಡ ಹಾಗೂ ವ್ಯತ್ಯಾಸದ ಮೊತ್ತಕ್ಕೆ ಬಡ್ಡಿಯನ್ನು ಸೇರಿಸಿ ಡಿಮ್ಯಾಂಡ್ ನೋಟಿಸ್ ನೀಡಲಿದ್ದಾರೆ. ಉದಾಹರಣೆಗೆ ; ವಲಯ ವರ್ಗೀಕರಣದಲ್ಲಿ 100 ರೂಪಾಯಿ ವ್ಯತ್ಯಾಸದ ಆಸ್ತಿ ತೆರಿಗೆ ಕಂಡು ಬಂದರೆ, ವ್ಯತ್ಯಾಸ ಮೊತ್ತ ಹಾಗೂ ಅದಕ್ಕೆ ಎರಡು ಪಟ್ಟು ದಂಡವಾದ 200 ರೂಪಾಯಿ ಹಾಗೂ ಬಡ್ಡಿಯೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ.
ಕೋವಿಡ್ ಡ್ಯೂಟಿ ನೆಪದಲ್ಲಿ ನೇಪಥ್ಯಕ್ಕೆ ಸೇರಿತಾ ನೋಟಿಸ್ ಜಾರಿ ಕಾರ್ಯ?
ಏಪ್ರಿಲ್ 10 ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದು, ಕಂದಾಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೋವಿಡ್ ನಿಯಂತ್ರಣ ಕೆಲಸಗಳಿಗೆ ನೇಮಿಸಿದ್ದಾರೆ. ಆದರೆ ಅದೇ ವೇಳೆಯಲ್ಲೂ ಆಸ್ತಿ ತೆರಿಗೆ ಸಂಗ್ರಹದ ಬಗ್ಗೆಯೂ ಗಮನ ಹರಿಸಿಲ್ಲ. ಪಾಲಿಕೆ ಆಡಳಿತಾಧಿಕಾರಿಗಳು ತಮ್ಮ ಮೊದಲ ಸಭೆಯಲ್ಲಿ ಪಾಲಿಕೆಯ ಪ್ರಮುಖ ಆದಾಯದ ಮೂಲವಾದ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಆದರೆ ಕೆಲವು ಸಿಬ್ಬಂದಿ ಕೋವಿಡ್ ಸಂದರ್ಭದ ನೆಪವೊಡ್ಡಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ.
ಇನ್ನು ವಲಯಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿಗಳ ಹಂತದಲ್ಲಿ, 2016-17 ರಿಂದ 2019-20ರ ತನಕದ 4 ವರ್ಷದ ಅವಧಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿ ಕೇವಲ 1,867 ಆಸ್ತಿಗಳ ಮಾಲೀಕರುಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಿದ್ದಾರೆ. ಅದರಲ್ಲಿ 82 ಆಸ್ತಿ ಮಾಲೀಕರು ಪಾಲಿಕೆಯ ಡಿಮ್ಯಾಂಡ್ ನೋಟಿಸ್ ಗೆ ತಮ್ಮ ಆಕ್ಷೇಪಣೆ ಸಲ್ಲಿಸಿದ್ದಾರೆ. ಕೇವಲ 895 ಜನರು ಮಾತ್ರ ದಂಡವೂ ಸೇರಿ 2.85 ಕೋಟಿ ರೂಪಾಯಿ ಹಣವನ್ನು ಆಸ್ತಿ ತೆರಿಗೆ ರೂಪದಲ್ಲಿ ಪಾಲಿಕೆಗೆ ಕಟ್ಟಿದ್ದಾರೆ.
ಹಳೆಯ ಬಾಕಿ ಬಡ್ಡಿದರ ವಾರ್ಷಿಕ ಶೇ.9ಕ್ಕೆ ಇಳಿಕೆ ಮಾಡಿದ ಬಿಬಿಎಂಪಿ :
ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಪಾಲಿಕೆ ಕೊಂಚ ರಿಲೀಫ್ ನೀಡಿದೆ. ಇಲ್ಲಿಯ ತನಕ ಆಸ್ತಿ ತೆರಿಗೆಯ ಹಳೆಯ ಬಾಕಿಗೆ ಪ್ರತಿ ತಿಂಗಳಿಗೆ ಶೇ.2ರಷ್ಟಂತೆ ವರ್ಷಕ್ಕೆ ಶೇ.24ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಆದರೆ ಯಾವಾಗ 2020ರ ಬಿಬಿಎಂಪಿ ಕಾಯ್ದೆ ಜಾರಿಯಾದ ಬಳಿಕ ದಂಡದ ಬಡ್ಡಿಯ ಪ್ರಮಾಣವನ್ನು ವಾರ್ಷಿಕ 9ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲಿಗೆ ಶೇ.15ರಷ್ಟು ಬಡ್ಡಿ ದರವನ್ನು ಇಳಿಕೆ ಮಾಡಿದಂತಾಗಿದೆ. ಈ ಕುರಿತಂತೆ ಬಿಬಿಎಂಪಿಯ ತೆರಿಗೆ ಪಾವತಿ ಸಾಫ್ಟ್ ವೇರ್ ನಲ್ಲೂ ಪೂರಕವಾದ ಮಾರ್ಪಾಡನ್ನು ಮಾಡಲಾಗಿದೆ. ಇದರಿಂದ ಅನೇಕ ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಅನುಕೂಲವಾಗಲಿದೆ ಎಂದು ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈತನಕ 8.60 ಲಕ್ಷ ಆಸ್ತಿ ಮಾಲೀಕರಿಂದ ತೆರಿಗೆ ಪಾವತಿ :
ಬಿಬಿಎಂಪಿ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಒಟ್ಟು 17.3 ಲಕ್ಷ ಆಸ್ತಿಗಳು ಸೇರಿಕೊಂಡಿದ್ದು, ಜೂನ್ 1ರ ತನಕ 8,60,463 ಮಂದಿ 2021-22 ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಿದ್ದಾರೆ. ಪ್ರತಿ ಆರ್ಥಿಕ ವರ್ಷದ ಆರಂಭವಾಗುವ ಏಪ್ರಿಲ್ ತಿಂಗಳ ಕೊನೆಯ ದಿನದ ತನಕ ಒಂದೇ ಬಾರಿಗೆ ಆಸ್ತಿ ತೆರಿಗೆ ಸಲ್ಲಿಸುವವರಿಗೆ ಶೇ.5ರಷ್ಟು ಆಸ್ತಿ ತೆರಿಗೆ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕರೋನಾ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಲಾಕ್ ಡೌನ್ ಕಾರಣಕ್ಕೆ ಮೇ.31ರ ವರೆಗೆ ಹಾಗೂ ಆನಂತರ ಜೂನ್ 30ರ ತನಕ ಎರಡನೇ ಬಾರಿಗೆ ಆಸ್ತಿ ತೆರಿಗೆ ಪಾವತಿಗೆ ನಗರಾಭಿವೃದ್ಧಿ ಇಲಾಖೆ ಅವಧಿಯನ್ನು ವಿಸ್ತರಣೆ ಮಾಡಿದೆ.
ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಒಲವು :
ಏಪ್ರಿಲ್ 1 ರಿಂದ ಜೂನ್ 2 ತನಕ ಪಾಲಿಕೆ ವ್ಯಾಪ್ತಿಯಲ್ಲಿ 1,287 ಕೋಟಿ ರೂಪಾಯಿ ಆಸ್ತಿ ತೆರಿಗೆ ಹಣ ಸಂಗ್ರಹವಾಗಿದೆ. ಆ ಪೈಕಿ 6.79 ಲಕ್ಷ ಜನರು ಆನ್ ಲೈನ್ ಮೂಲಕ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟಿದ್ದಾರೆ. ಇನ್ನು 1.70 ಲಕ್ಷ ಆಸ್ತಿ ಮಾಲೀಕರು ಬ್ಯಾಂಕಿನಿಂದ ಚಲನ್ ಪಡೆದು ಪ್ರಾಪರ್ಟಿ ಟ್ಯಾಕ್ಸ್ ಪಾವತಿಸಿದ್ದಾರೆ.