ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ 6ಕ್ಕಿಂತ ಹೆಚ್ಚು ಕರೋನಾ ಪ್ರಕರಣಗಳಿರುವ ಹಳ್ಳಿಗಳಲ್ಲಿ ವೈದ್ಯರ ತಂಡ, ಮನೆ ಮನೆಗೆ ತೆರಳಿ ಕರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಆ ವೈದ್ಯರ ತಂಡದಲ್ಲಿ ಒಬ್ಬ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರೆಯರು, ಅಗತ್ಯ ಔಷಧಿ, ಉಪಕರಣದೊಂದಿಗೆ ತೆರಳಿ ಕರೋನಾ ಪರೀಕ್ಷೆ, ಸೋಂಕು ಪತ್ತೆ ಕಾರ್ಯ, ಔಷಧಿ ನೀಡಿಕೆ ಹಾಗೂ ಚಿಕಿತ್ಸೆ ನೀಡುತ್ತಿದೆ. ಅಲ್ಲದೆ ಅಗತ್ಯವಿದ್ದವರಿಗೆ ಹತ್ತಿರದ ಕೋವಿಡ್ ಆರೈಕೆ ಕೇಂದ್ರ ಹಾಗೂ ಆಸ್ಪತ್ರೆಗೆ ದಾಖಲಿಸುವ ಕೆಲಸದಲ್ಲಿ ನಿರತವಾಗಿವೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 1,038 ಗ್ರಾಮೀಣ ಜನ ವಸತಿಯಿರುವ ಹಳ್ಳಿಗಳಿವೆ. ಇರುವ 93 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 816 ಕಂದಾಯ ಗ್ರಾಮಗಳಿವೆ. ಆ ಪೈಕಿ (ಮೇ.28 ವರದಿಯಂತೆ) ಕಳೆದ 10 ದಿನಗಳಲ್ಲಿ 152 ಗ್ರಾಮಗಳು ಕರೋನ ಮುಕ್ತವಾಗಿದೆ. 236 ಗ್ರಾಮಗಳಲ್ಲಿ ತಲಾ 5 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ಕಂಡು ಬಂದಿದೆ. 107 ಕಂದಾಯ ಗ್ರಾಮಗಳಲ್ಲಿ 6 ರಿಂದ 10 ಪ್ರಕರಣಗಳು ಹಾಗೂ 321 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಕೋವಿಡ್ ಕೇಸ್ ಗಳು ಕಂಡು ಬಂದಿದೆ.
ಅದೇ ರೀತಿ ಒಂದು ನಗರಸಭೆ, 6 ಪುರಸಭೆಗಳಲ್ಲಿ ಒಟ್ಟು 173 ವಾರ್ಡ್ ಗಳಿದೆ. ಆ ಪೈಕಿ 5 ವಾರ್ಡ್ ಗಳು ಕರೋನಾ ಮುಕ್ತವಾಗಿದೆ. 40 ವಾರ್ಡ್ ಗಳಲ್ಲಿ ತಲಾ 5ಕ್ಕಿಂತ ಕಡಿಮೆ ಕರೋನಾ ಸೋಂಕಿತರಿದ್ದಾರೆ. 28 ವಾರ್ಡ್ ಗಳಲ್ಲಿ ತಲಾ 6 ರಿಂದ 10 ಕೇಸ್ ಗಳು, 100 ವಾರ್ಡ್ ಗಳಲ್ಲಿ ತಲಾ 10 ಕ್ಕಿಂತ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದೆ.
ಇದನ್ನು ಮನಗಂಡ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನೇತೃತ್ವದಲ್ಲಿ, ಜಿಲ್ಲಾ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹಾಗೂ ಅಧಿಕಾರಿಗಳು ಸೇರಿ 6ಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬಂದ ಗ್ರಾಮಗಳ ಮ್ಯಾಪಿಂಗ್ ಮಾಡಿ, ಪ್ರತಿ ಮನೆಗಳಿಗೆ ವೈದ್ಯರ ತಂಡವನ್ನು ಕಳುಹಿಸಿ ಕರೋನಾ ಸೋಂಕು ಪತ್ತೆ, ವೈದ್ಯೋಪಚಾರ, ಚಿಕಿತ್ಸೆ ನೀಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದೆ.
ವೈದ್ಯರ ತಂಡದ ಜೊತೆಗೆ ಪಂಚಾಯ್ತಿ ಕೋವಿಡ್ ಟಾಸ್ಕ್ ಫೋರ್ಸ್ ನಲ್ಲಿರುವ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪ್ರಾಥಮಿಕ ಶಾಲಾ ಶಿಕ್ಷಕರು, ಕಂದಾಯ, ಪಂಚಾಯ್ತಿ ಅಧಿಕಾರಿಗಳು ಕೋವಿಡ್ ಪ್ರಕರಣಗಳು ಹೆಚ್ಚಿರುವ ಗ್ರಾಮದ ಮನೆ ಮನೆಗೆ ಹೋಗಿ ಸರ್ವೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.
ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಿರಿದಾದ ಮನೆಗಳಲ್ಲಿ 3 ರಿಂದ 4 ಮಂದಿ ಒಂದು ಮನೆಯಲ್ಲಿ ವಾಸಿಸುತ್ತಾರೆ. ಆಕಸ್ಮಾತ್ ಒಬ್ಬ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದರೆ ಅಂತಹ ವ್ಯಕ್ತಿಯನ್ನು ವೈದ್ಯರ ತಂಡ ಪ್ರತ್ಯೇಕಿಸಿ ಕೋವಿಡ್ ಆರೈಕೆ ಕೇಂದ್ರ (ಸಿಸಿಸಿ)ಕ್ಕೆ ಕಳುಹಿಸಿ ಕೊಡುತ್ತಿದ್ದಾರೆ. ಅಲ್ಲದೆ ಸೋಂಕಿತನ ಪ್ರಾಥಮಿಕ ಸಂಪರ್ಕ ಹೋಂದಿದವರ ಮೇಲೆ ನಿಗಾ ಇರಿಸುತ್ತಿದೆ. ಸಿಸಿಸಿ ಕೇಂದ್ರದಲ್ಲಿ ಅಗತ್ಯ ಆಮ್ಲಜನಕ ವ್ಯವಸ್ಥೆ ಇದ್ದು, ತರಬೇತಿ ಹೊಂದಿದ ವೈದ್ಯಕೀಯ ತಂಡವಿರುತ್ತದೆ. ಇದರಿಂದ ಪರಿಣಾಮಕಾರಿಯಾಗಿ ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಾಗಿ ಗುಣವಾಗುತ್ತಿದ್ದಾರೆ.
– ಜೆ.ಮಂಜುನಾಥ್, ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ
ತಲಾ 10ಕ್ಕಿಂತ ಹೆಚ್ಚು ಪ್ರಕರಣ ವರದಿಯಾದ ವಾರ್ಡ್ ಗಳಲ್ಲಿ ಕೋವಿಡ್ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಕರೋನಾ ಮುಕ್ತ ಹಳ್ಳಿಗಳು ಹಾಗೂ ವಾರ್ಡ್ ಗಳಲ್ಲಿ ಜಿಲ್ಲಾಡಳಿತ ಕರೋನಾ ಕುರಿತಂತೆ ಜಾಗೃತಿ ಮೂಡಿಸುತ್ತಿದೆ.
ಬೆಂಗಳೂರು ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ತಲಾ 6 ರಿಂದ 10 ಹಾಸಿಗೆಗಳ ಸಾಮರ್ಥ್ಯದ 36 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಲಾ 30 ರಿಂದ 60 ಹಾಸಿಗೆಗಳ ಸಾಮರ್ಥ್ಯದ ಮೂರು ಸಮುದಾಯ ಆರೋಗ್ಯ ಕೇಂದ್ರಗಳು, ತಲಾ 100 ಹಾಸಿಗೆಗಳ ಮೂರು ತಾಲೂಕು ಆಸ್ಪತ್ರೆಗಳಿವೆ. ಕರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಟೊಂಕ ಕಟ್ಟಿ ನಿಂತು ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ 77 ಸರ್ಕಾರಿ, 60 ಗುತ್ತಿಗೆ, 80 ಸರ್ಕಾರೇತರ ಸಂಸ್ಥೆಯ ವೈದ್ಯರು ಸೇರಿದಂತೆ ಒಟ್ಟು 217 ಡಾಕ್ಟರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ನಗರ ಜಿಲ್ಲೆಯ ಮೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೇ.5 ರಿಂದ ಎರಡು ವಾರಗಳ ಅವಧಿಯಲ್ಲಿ 28 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳನ್ನು ಸಿದ್ಧಪಡಿಸಿರುವುದು ಜಿಲ್ಲಾಧಿಕಾರಿಗಳ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ. ಪ್ರಧಾನಮಂತ್ರಿಗಳ ಪಿಎಂ ಕೇರ್ಸ್ ನಿಧಿ ಬಳಸಿ ಈ ವ್ಯವಸ್ಥೆ ಕಲ್ಪಿಸಿರುವುದು ಹಳ್ಳಿ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.