ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ 2016ರಿಂದ ಐದು ವರ್ಷದ ಅವಧಿಯಲ್ಲಿ ರಿಲಯಾನ್ಸ್, ಟಾಟಾ ಸಮೂಹದ ಸಂಸ್ಥೆಗಳು ಸೇರಿದಂತೆ 7 ಕಂಪನಿಗಳು ಬರೋಬ್ಬರಿ 5,629.76 ಕಿಲೋ ಮೀಟರ್ ನಷ್ಟು ಉದ್ದದ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ಬೆಂಗಳೂರಿನ ರಸ್ತೆ ಅಡಿಯಲ್ಲಿ ಹಾಕಿ ಮುಗಿಸಿದೆ.
ಒಎಫ್ ಸಿ ಕೇಬಲ್ ಹಾಕಲು ಹಾಗೂ ಗುಂಡಿ ತೋಡಿ ಡಕ್ಟ್, ಛೇಂಬರ್ ಅಳವಡಿಸಲು ಪಾಲಿಕೆಗೆ ಈ 5 ವರ್ಷದಲ್ಲಿ ಬರೋಬ್ಬರಿ 422 ಕೋಟಿ ರೂಪಾಯಿ ಹಣವನ್ನು ಪಾವತಿಸಿವೆ. ಇದು ಪಾಲಿಕೆ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿ.
ನೆಲದೊಳಗೆ ಆಪ್ಟಿಕಲ್ ಫೈಬರ್ ಕೇಬಲ್ ಹಾಕುವ ಮೂಲಕ ನಿಮಿಷಕ್ಕೆ ಕೋಟಿ ಕೋಟಿ ರೂಪಾಯಿ ಲೆಕ್ಕದಲ್ಲಿ ಇಂಟರ್ ನೆಟ್ ಹಾಗೂ ದೂರವಾಣಿ ಸೇವಾದಾರರು ಸಂಪಾದನೆ ಮಾಡುತ್ತಿದ್ದಾರೆ. ಆದರೆ ಅದೇ ವೇಳೆ ಬಿಬಿಎಂಪಿಗೆ ಸೇರಿದ ರಸ್ತೆಗಳಲ್ಲಿ ಪಡೆದುಕೊಂಡ ಅನುಮತಿಗಿಂತ ಹೆಚ್ಚಾಗಿ ಓಎಫ್ ಸಿ ಕೇಬಲ್ ಗಳನ್ನು ಅಕ್ರಮವಾಗಿ ಅಳವಡಿಸುವ ಕಾರ್ಯ ಎಗ್ಗಿಲ್ಲದೆ ಬೆಳಗ್ಗೆ – ರಾತ್ರಿ ನಡೆಯುತ್ತಲೇ ಇದೆ.
ಯಾವೊಬ್ಬ ಅಧಿಕಾರಿ ಅಂದಾಜಿಗೂ ಸಿಲುಕದು ಕೇಬಲ್ ದಂಧೆ :
ಈತನಕ ಪಾಲಿಕೆಯ ಯಾವೊಬ್ಬ ಅಧಿಕಾರಿಗೆ ರಾಜಧಾನಿ ಬೆಂಗಳೂರಿನ ರಸ್ತೆಯ ಅಡಿಯಲ್ಲಿ ಹಾಕಿರುವ ಒಟ್ಟಾರೆ ಓಎಫ್ ಸಿ ಕೇಬಲ್ ನ ಉದ್ದ ತಿಳಿದಿಲ್ಲ. ಆ ನೆಲದೊಳಗೆ ಹಾಕಿರುವ ಆಪ್ಟಿಕಲ್ ಫೈಬರ್ ಕೇಬಲ್ ಎಂಬ ಚಿನ್ನದ ಮೊಟ್ಟೆಯಿಡುವ ಕೇಬಲ್ ನ ಮೌಲ್ಯ ಅವರ ಅಂದಾಜಿಗೂ ನಿಲುಕಿಲ್ಲ. ಆ ಕೇಬಲ್ ನಿಂದ ಸರ್ವೀಸ್ ಪ್ರೊವೈಡರ್ಸ್ ಗೆ ಆಗುವ ಲಾಭದ ಜೊತೆಗೆ ಸಂಬಂಧಿಸಿದ ವಾರ್ಡ್, ರಸ್ತೆ ಮೂಲಭೂತ ಸೌಕರ್ಯ ಹಾಗೂ ಪಾಲಿಕೆ ಓಎಫ್ ಸಿ ವಿಭಾಗದ ಅಧಿಕಾರಿಗಳ ಜೋಬು ತುಂಬುತ್ತಿರುವುದು ಸುಳ್ಳಲ್ಲ. ಹಾಗಾಗಿ ಅವುಗಳ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವ ಗೋಜಿಗೇ ಹೋಗಿಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಏಪ್ರಿಲ್ 2016ರಿಂದ 2021ರ ಮಾರ್ಚ್ 15ರ ತನಕದ 5 ವರ್ಷದಲ್ಲಿ ಯಾವ್ಯಾವ ಟೆಲಿಕಾಮ್ ಹಾಗೂ ಇಂಟರ್ ನೆಟ್ ಸೇವೆ ಒದಗಿಸುವ ಸಂಸ್ಥೆಗಳು ಎಷ್ಟೆಷ್ಟು ಕಿಲೋ ಮೀಟರ್ ಉದ್ದದ ಒಎಫ್ ಸಿ ಕೇಬಲ್ ಗಳನ್ನು ಅಳವಡಿಸಿ ಪಾಲಿಕೆಗೆ ಎಷ್ಟು ಶುಲ್ಕ ಕಟ್ಟಿವೆ ಎಂಬ ವಿವರಗಳು ಈ ಕೆಳಕಂಡಂತಿದೆ.
ಕಂಪನಿ ಹೆಸರು — ಒಎಫ್ ಸಿ ಕೇಬಲ್ ಉದ್ದ – ಬಿಬಿಎಂಪಿಗೆ ಪಾವತಿಸಿದ ಶುಲ್ಕ
ರಿಲಾಯನ್ಸ್ ಕಂಪನಿ – 1976.98 ಕಿ.ಮೀ – 130.51 ಕೋಟಿ ರೂ.
(ರಿಲಾಯನ್ಸ್ ಜಿಯೋ ಇನ್ ಫೋಕಾಮ್ & ಜಿಯೋ ಡಿಜಿಟಲ್)
ಆಕ್ಟ್ ಸಂಸ್ಥೆ – 1,189.23 ಕಿ.ಮೀ – 45.11 ಕೋಟಿ ರೂ.
ಭಾರತಿ ಏರ್ ಟೆಲ್ – 980.75 ಕಿ.ಮೀ – 82.19 ಕೋಟಿ ರೂ.
ವೋಡಾ ಫೋನ್ ಐಡಿಯಾ ಲಿ. – 323.24 ಕಿ.ಮೀ – 27.35 ಕೋಟಿ ರೂ.
( 2016ರಿಂದ 31-03-2018 ತನಕ ವೋಡಾಫೋನ್ ಹಾಗೂ ಐಡಿಯಾ ಬೇರೆ ಕಂಪನಿಯಾಗಿದ್ದವು)
ಟಾಟಾ ಸಮೂಹ ಸಂಸ್ಥೆಗಳು – 172.27 ಕಿ.ಮೀ – 14.7 ಕೋಟಿ ರೂ.
(ಟಾಟಾ ಕಮ್ಯುನಿಕೇಶನ್ಸ್, ಟಾಟಾ ಟೆಲಿ ಸರ್ವೀಸಸ್ & ಟಾಟಾ ಸ್ಕೈ)
3ಜಿ ಟೆಲಿಕಾಮ್ ಇನ್ ಫ್ರಾ ಇಂಡಿಯಾ ಪ್ರೈ.ಲಿ – 107.16 ಕಿ.ಮೀ – 5.87 ಕೋಟಿ ರೂ.
ಲಾರ್ಸನ್ ಅಂಡ್ ಟೂರ್ಬೊ (ಎಲ್& ಟಿ) – 40.65 ಕಿ.ಮೀ – 3.40 ಕೋಟಿ ರೂ.
ಸಾವಿರಾರು ಕಿಲೋ ಮೀಟರ್ ಓಎಫ್ ಸಿ ಕೇಬಲ್ ಅಳವಡಿಕೆ :
ಇರೋ 8 ಕಂಪನಿಗಳ ಪೈಕಿ ರಿಲಾಯನ್ಸ್ ಸಮೂಹ ಸಂಸ್ಥೆಯ ಕಂಪನಿಗಳು ಬೆಂಗಳೂರಿನ ಎಂಟು ವಲಯಗಳಲ್ಲಿ ಐದು ವರ್ಷಗಳಲ್ಲಿ ಬರೋಬ್ಬರಿ 1,760 ಕಿಲೋ ಮೀಟರ್ ನಷ್ಟು ಉದ್ದದ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ಅಳವಡಿಸಿರೋದನ್ನು ಗಮನಿಸಿದರೆ, ಈ ಅವಧಿಯಲ್ಲಿ ಸಂಸ್ಥೆಯ 4ಜಿ ಮೊಬೈಲ್ ಸೇವೆ, ಜಿಯೋ ಫೈಬರ್ ಮತ್ತಿತರ ಕಾರಣಗಳಿಗೆ ನಗರದಲ್ಲೇ ಅತಿಹೆಚ್ಚು ಒಎಫ್ ಸಿ ಕೇಬಲ್ ಹಾಕಿರುವುದನ್ನು ಗಮನಿಸಬಹುದು.
ಅದನ್ನು ಹೊರತುಪಡಿಸಿದರೆ ಆಕ್ಟ್ ಇಂಟರ್ ನೆಟ್ ಸೇವೆ ಒದಗಿಸೋ ಸಂಸ್ಥೆಯು ಬಿಬಿಎಂಪಿಯ 8 ವಲಯಗಳಲ್ಲಿ ಒಟ್ಟು 1,189.23 ಕಿ.ಮೀ ಉದ್ದದ್ದ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ಅಳವಡಿಸಿದೆ.
ಇನ್ನು ಒಎಫ್ ಸಿ ಕೇಬಲ್ ಅಳವಡಿಕೆಯಲ್ಲಿ ಭಾರತಿ ಏರ್ ಟೆಲ್ ಮೂರನೇ ಸ್ಥಾನದಲ್ಲಿದೆ. ಈ ಐದು ವರ್ಷದ ಅವಧಿಯಲ್ಲಿ ಏರ್ ಟೆಲ್ ನಗರದ ವಿವಿಧೆಡೆ ರಸ್ತೆಯನ್ನು ಕೊರೆದು ಒಟ್ಟಾರೆ 980.75 ಕಿ.ಮೀ ಉದ್ದದ ಒಎಫ್ ಸಿ ಕೇಬಲ್ ಗಳನ್ನು ಅಳವಡಿಸಿದೆ. ಅದಕ್ಕಾಗಿ ಪಾಲಿಕೆಗೆ 82.19 ಕೋಟಿ ರೂ. ಶುಲ್ಕವನ್ನು ಪಾವತಿಸಿದೆ. ಉಳಿದಂತೆ ವೋಡಾಫೋನ್ ಐಡಿಯಾ ಲಿ., ಟಾಟಾ ಸಮೂಹ ಸಂಸ್ಥೆಯಲ್ಲಿನ ಕಂಪನಿಗಳು, 3ಜಿ ಟೆಲಿಕಾಮ್ ಹಾಗೂ ಎಲ್ ಅಂಡ್ ಟಿ ಕಂಪನಿಗಳು ನಗರದ ರಸ್ತೆಯಡಿ ತಮ್ಮ ಕೇಬಲ್ ಗಳನ್ನು ಅನಾಯಾಸವಾಗಿ ಅಳವಡಿಸಿಕೊಂಡಿವೆ.
ಏರ್ ಟೆಲ್ ಸಂಸ್ಥೆ ನಗರದಲ್ಲಿ ಒಟ್ಟಾರೆ 1,030 ತಾಂತ್ರಿಕ ಕಂಬಗಳು ಹಾಗೂ ಜಂಕ್ಷನ್ ಬಾಕ್ಸ್ ಗಳನ್ನು ಅಳವಡಿಸಿದೆ. ಹನಿಕಾಂಬ್ ಹಾಗೂ ಡೋವಿಸ್ ಕಮ್ಯುನಿಕೇಶನ್ ಎಂಬ ಸಂಸ್ಥೆಗಳು ನಗರದಾದ್ಯಂತ ಇಂಟರ್ ನೆಟ್ ಅಥವಾ ಮೊಬೈಲ್ ಗ್ರಾಹಕರು ಅಂತರ್ಜಾಲ ಬಳಸಲು ಅನುವಾಗುವಂತೆ ಒಟ್ಟು 781 ವೈಫೈ ಹಾಟ್ ಸ್ಪಾಟ್ಸ್ ಗಳನ್ನು ಅಳವಡಿಸಿದೆ.
ಇವೆಲ್ಲವೂ ಬಿಬಿಎಂಪಿ ನೀಡಿರುವ ಅಧಿಕೃತ ಮಾಹಿತಿಗಳು. ಆದರೆ ನಗರದ ರಸ್ತೆ, ಒಳಚರಂಡಿ, ನೀರಿನ ಪೈಪ್ ಸಾಗುವ ಹಾದಿಯಲ್ಲಿ ಅದೆಷ್ಟು ಒಎಫ್ ಸಿ ಕೇಬಲ್ ಗಳನ್ನು ಅಕ್ರಮವಾಗಿ ಭೂಗತವಾಗಿ ಹಾಕಲಾಗಿದೆ ಎಂಬ ಬಗ್ಗೆ ಯಾವೊಬ್ಬ ಪಾಲಿಕೆ ಅಧಿಕಾರಿಯೂ ಬಾಯಿ ಬಿಡುವುದಿಲ್ಲ. ಹಾಗಾಗಿ ನಗರದಲ್ಲಿ ಆಗಾಗ ಒಳಚರಂಡಿ ಪೈಪ್ ಗಳು ಒಡೆದು ಕೊಳಚೆ ನೀರು ರಸ್ತೆ ತುಂಬಾ ಹರಿಯುತ್ತಿರುತ್ತೆ. ಕುಡಿಯುವ ನೀರಿನ ಪೈಪ್ ನದು ಇದೇ ಸಮಸ್ಯೆ.
“ಬೆಂಗಳೂರಿನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ದಂಧೆ ಕಳೆದ 20 ವರ್ಷದಿಂದಲೂ ನಡೆಯುತ್ತಾ ಬಂದಿದೆ. 2000 ಇಸವಿಯಲ್ಲೇ ಇದಕ್ಕಾಗಿ ರಸ್ತೆ ಅಗೆತ ಕೈಪಿಡಿಯನ್ನು ಜಾರಿಗೆ ತರಲಾಗಿತ್ತು. ಆ ಕೈಪಿಡಿಗೆ ಈಗಿನ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ತಂದು ಓಎಫ್ ಸಿ ಕೇಬಲ್ ಅಳವಡಿಕೆಯಲ್ಲಿನ ಅಕ್ರಮವನ್ನು ಪರಿಣಾಮಕಾರಿಯಾಗಿ ತಡೆಯಬೇಕಾಗಿದೆ. ನಗರದಲ್ಲಿ ಆಪ್ಟಿಕಲ್ ಕೇಬಲ್ ಹಾಕದ ರಸ್ತೆಗಳೇ ಇಲ್ಲ ಎಂಬಂತಾಗಿದೆ. ಅಧಿಕಾರಿಗಳು, ಸರ್ವೀಸ್ ಪ್ರೊವೈಡರ್ಸ್ ಗಳು ಕೊಡುವ ಲೆಕ್ಕವೇ ಒಂದು. ವಾಸ್ತವದಲ್ಲಿರುವುದೇ ಮತ್ತೊಂದು. ಬಿಬಿಎಂಪಿ ನೂತನ ಕಾಯ್ದೆ-2020 ಜಾರಿಗೆ ಬಂದಿದ್ದು, ಕೂಡಲೇ ಓಎಫ್ ಸಿ ಅಕ್ರಮದ ಬಗ್ಗೆ ಪಾರದರ್ಶಕ ರೀತಿಯಲ್ಲಿ ಸಮಗ್ರ ಓಎಫ್ ಸಿ ಕೇಬಲ್ ಆಡಿಟ್ ಮಾಡಿ, ಪಾಲಿಕೆಗೆ ಆಗಿರುವ ನೂರಾರು ಕೋಟಿ ರೂಪಾಯಿ ನಷ್ಠವನ್ನು ದಂಡ ವಿಧಿಸಿ, ವಸೂಲಿ ಮಾಡಬೇಕಿದೆ.”
– ಪಿ.ಆರ್.ರಮೇಶ್, ವಿಧಾನ ಪರಿಷತ್ ಸದಸ್ಯರು ಹಾಗೂ ಬಿಬಿಎಂಪಿ ಮಾಜಿ ಮಹಾಪೌರರು
29-11-2019 ರಲ್ಲಿ ಪಾಲಿಕೆ ಆಯುಕ್ತರು “ಬಿಬಿಎಂಪಿ ವ್ಯಾಪ್ತಿಯಲ್ಲಿ ಓಎಫ್ ಸಿ ಕೇಬಲ್ ಅಳವಡಿಕೆ ಕುರಿತಂತೆ ಸಾಮಾನ್ಯ ನಿಗಧಿತ ಕಾರ್ಯವಿಧಾನ” ಎಂಬ ಕೈಪಿಡಿಯನ್ನು ಜಾರಿಗೆ ತಂದಿದ್ದಾರೆ. ಅದರಂತೆ ದೂರಸಂಪರ್ಕ, ವಿದ್ಯುನ್ಮಾನ ಹಾಗೂ ಅಂತರ್ಜಾಲ ಸೇವೆ ನೀಡುವ ಸಂಸ್ಥೆಗಳು ತಮ್ಮ ಜಾಲಗಳ ಸ್ಥಾಪನೆಗೆ ಭೂಗತ ಓಎಫ್ ಸಿ ಕೇಬಲ್ ಗಳನ್ನು ಅಳವಡಿಸುವ ಮುನ್ನ ಬಿಬಿಎಂಪಿಯಿಂದ ಪೂರ್ವಾನುಮತಿ ಪಡೆಯುವುದು ಖಡ್ಡಾಯವಾಗಿದೆ. ಓಎಫ್ ಸಿ ಜಿಐಎಸ್ ಜಾಲತಾಣದ ಮೂಲಕವೇ ಕೇಬಲ್ ಅಳವಡಿಕೆ ಉದ್ದ, ಡಕ್ಟ್ ಸಂಖ್ಯೆ, ಗುಂಡಿಗಳ ಸಂಖ್ಯೆ ಹಾಗೂ ಛೇಂಬರ್ ಗಳ ಸಂಖ್ಯೆ ಜೊತೆಗೆ ರಸ್ತೆ ಇತಿಹಾಸ ಜಾಲತಾಣದ ಅಂಗವಾಗಿರುವ ಓಎಫ್ ಸಿ ಜಿಐಎಸ್ ಜಾಲತಾಣದಲ್ಲಿನ ರಸ್ತೆ ಮ್ಯಾಪ್ ನಲ್ಲಿ ಮಾರ್ಕ್ ಮಾಡಿ, ಆ ವಿವರದೊಂದಿಗೆ ಮನವಿ ಸಲ್ಲಿಸಬೇಕು.
ಈ ಆನ್ ಲೈನ್ ವ್ಯವಸ್ಥೆಯ ಮೂಲಕವೇ ರೋಡ್ ಕಟಿಂಗ್ ಮತ್ತಿತರ ಅನುಮತಿ ಕೊಡಬೇಕು. ಆದರೂ ಬಿಬಿಎಂಪಿಯ ಈ ಕೈಪಿಡಿಯಲ್ಲಿನ ನಿಮಯಗಳನ್ನು ಪಾಲಿಕೆಯ ವಾರ್ಡ್ ಮಟ್ಟದಿಂದ ಹಿಡಿದು, ಓಎಫ್ ಸಿ ಕೋಶದ ಮುಖ್ಯ ಎಂಜಿನಿಯರ್ ತನಕ ಬಹುತೇಕ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.
ಡಾಂಬರ್ ಹಾಕಿ 3 ವರ್ಷದ ತನಕ ರಸ್ತೆ ಅಗೆಯುವಂತಿಲ್ಲ!! :
ಪಾಲಿಕೆಯ ವ್ಯಾಪ್ತಿಯಲ್ಲಿ ಡಾಂಬರೀಕರಣ ಮಾಡಿ ಮೂರು ವರ್ಷದ ತನಕ ಯಾವುದೇ ರಸ್ತೆಗಳನ್ನು ಅಗೆಯುವುದಕ್ಕೆ ಅವಕಾಶವಿಲ್ಲ. ಒಂದೊಮ್ಮೆ ಓಎಫ್ ಸಿ ಕೇಬಲ್ ಅಳವಡಿಸುವ ಸಂಸ್ಥೆ ಡಾಂಬರ್ ಹಾಕುವ ಮುನ್ನ ಪೂರ್ವಾನುಮತಿ ಪಡೆದಿದ್ದರೂ ಡಾಂಬರೀಕರಣ ನಂತರ ರಸ್ತೆ ಕತ್ತರಿಸಲು ನೀಡಿರುವ ಅನುಮತಿ ಅಸಿಂಧುವಾಗಿರುತ್ತೆ. ಆದರೂ ಈಗಲೂ ನಗರದ ಎಷ್ಟೋ ರಸ್ತೆಗಳಲ್ಲಿ ಹೊಸದಾಗಿ ಡಾಂಬರ್ ಹಾಕಿದ ನಂತರ ರಸ್ತೆ ಅಗೆದು ಕೇಬಲ್ ಹಾಕಲಾಗುತ್ತಿರುತ್ತೆ.
ಆಪ್ಟಿಕಲ್ ಫೈಬರ್ ಕೇಬಲ್ ಹಾಕಲು ಎಚ್ ಡಿಡಿ ಯಂತ್ರವನ್ನು ಬಳಸಿ ರಸ್ತೆ ಕೊರೆಯುವ ಪ್ರಕ್ರಿಯೆಗಾಗಿ ತೋಡುವ ಎಚ್ ಡಿಡಿ ಗುಂಡಿಗಳನ್ನು ಅದೇ ದಿನ ಮುಚ್ಚಿ ಸರಿಪಡಿಸಬೇಕು ಎಂದು ಬಿಬಿಎಂಪಿ ನಿಯಮಾವಳಿಯಲ್ಲಿತಿಳಿಸಿದೆ. ಆದರೆ ಈತನಕ ಈ ನಿಯಮಾವಳಿಗಳನ್ನು ಸೂಕ್ತ ರೀತಿ ಪಾಲಿಸುತ್ತಿಲ್ಲ. ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರು ಗಾಡಿಯಿಂದ ಬಿದ್ದು ಆಗುವ ಅಪಘಾತಗಳಿಗೂ ಈ ಗುಂಡಿಗಳು ಕಾರಣವಾಗುತ್ತಿದೆ ಎಂದು ನಾಗರೀಕರು ಸಾಕಷ್ಟು ಬಾರಿ ಪಾಲಿಕೆಗೆ ದೂರು ನೀಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.
ರಾಮನ ಲೆಕ್ಕ ಕೃಷ್ಣನ ಲೆಕ್ಕದ ಕೇಬಲ್ ಗಳಿವೆ :
2013ರ ಬಿಬಿಎಂಪಿ ನೇಮಿಸಿದ 10 ಮಂದಿಯ ಸಮಿತಿ ನೀಡಿದ ಮಧ್ಯಂತರ ವರದಿಯಂತೆ ನಗರದಲ್ಲಿ ಆ ಕಾಲಕ್ಕೆ ಅಧಿಕೃತವಾಗಿ 6,140 ಕಿ.ಮೀ ಉದ್ದದ ಓಎಫ್ ಸಿ ಕೇಬಲ್ ಅಳವಡಿಸಲಾಗಿತ್ತು ಎಂದು ಹೇಳಲಾಗುತ್ತಿದ್ದರೂ, ಅದಕ್ಕಿಂತ 10 ಪಟ್ಟು ಅಂದರೆ ಬರೋಬ್ಬರಿ 65 ಸಾವಿರ ಕಿಲೋ ಮೀಟರ್ ನಷ್ಟು ಆಪ್ಟಿಕಲ್ ಕೇಬಲ್ ಗಳನ್ನು ಅಳವಡಿಸಲಾಗಿತ್ತು. ಹೀಗಾಗಿ ಪಾಲಿಕೆಗೆ ಕೇಬಲ್ ಅಳವಡಿಕೆಗೆ ಸರ್ವೀಸ್ ಪ್ರೊವೈಡರ್ಸ್ ಗೆ ಅನುಮತಿ ನೀಡುವುದರಿಂದ ಬರೋ ಶುಲ್ಕಕ್ಕಿಂತ ರಸ್ತೆ ಅಗೆತದಿಂದ ಹಾಳಾದ ರೋಡ್ ಗಳನ್ನು ನಿರ್ವಹಣೆ ಮಾಡಲೇ ನೂರಾರು ಕೋಟಿ ರೂಪಾಯಿ ಕರ್ಚು ಮಾಡುವಂತಾಗಿದೆ ಎಂದು ಆ ವರದಿಯಲ್ಲಿ ತಿಳಿಸಲಾಗಿತ್ತು.
ಆಗ ನಗರದಲ್ಲಿ 12 ಲಕ್ಷ ಇಂಟರ್ ನೆಟ್ ಬಳಕೆದಾರರು, 3,750 ಸಾಫ್ಟ್ ವೇರ್ ಕಂಪನಿಗಳು, ಕನಿಷ್ಠ ಒಂದು ಸಾವಿರ ಹೊರಗುತ್ತಿಗೆ ಸಂಸ್ಥೆಗಳು (ಬಿಪಿಒ) ಗಳು ಕಾರ್ಯನಿರ್ವಹಿಸುತ್ತಿದ್ದವು. ಈಗಂತೂ 4ಜಿ ತಂತ್ರಜ್ಞಾನದ ಜಮಾನದಲ್ಲಿದ್ದೇವೆ. ಒಂದೂವರೆ ಕೋಟಿ ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ಬಹುತೇಕರ ಕೈಯಲ್ಲೂ ಇಂಟರ್ ನೆಟ್ ಸಂಪರ್ಕವಿರುವ ಸ್ಮಾರ್ಟ್ ಮೊಬೈಲ್ ಫೋನ್ ಇದೆ. ಇದನ್ನೆಲ್ಲ ಗಮನಿಸಿದರೆ ನಗರದಲ್ಲಿ ಅಕ್ರಮ ಇಂಟರ್ ನೆಟ್ ಜಾಲ ಎಷ್ಟು ದೊಡ್ಡದಾಗಿ ವ್ಯಾಪಿಸಿರಬಹುದು ಎಂದು ನೀವೇ ಊಹಿಸಿ….! ಓಎಫ್ ಸಿ ಕೇಬಲ್ ಎಂಬ ಬಹುದೊಡ್ಡ ಮಾಫಿಯಾ ಹಿಡಿತದಲ್ಲಿ ಬೆಂಗಳೂರು ಸಿಕ್ಕಿ ಹಾಕಿಕೊಂಡಿದೆ. ಇಲ್ಲಿ ನಡೆದಿರುವ ಅಕ್ರಮಕ್ಕೆ ಸರ್ಕಾರ ಶಾಶ್ವತವಾದ ಕಡಿವಾಣ ಹಾಕಬೇಕಿದೆ.