ಬೆಂಗಳೂರು : ಜನರ ಆತ್ಮಸಾಕ್ಷಿಯಂತಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶತಾಯುಷಿ (103) ಎಚ್.ಎಸ್.ದೊರೆಸ್ವಾಮಿ ಬುಧವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
ಇತ್ತೀಚೆಗಷ್ಟೆ ಕರೋನಾ ಸೋಂಕಿನಿಂದ ಬಳಲುತ್ತಿದ್ದು, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೇ.14 ರಂದು ಮನೆಗೆ ಮರಳಿದ್ದರು. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ಹೃದಯಾಘಾತವಾಗಿ ಬುಧವಾರ ಜಯದೇವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕವೂ ಸಾಕಷ್ಟು ಸುಸ್ತಿನಿಂದ ಬಳಲುತ್ತಿದ್ದರು.
ಕಳೆದ 15 ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಆರೋಗ್ಯದಲ್ಲಿ ದಿಢೀರ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.
ಸರ್ಕಾರಿ ಭೂ ಒತ್ತುವರಿ, ಸಾರ್ವಜನಿಕರ ಪಾಲಿಗೆ ಮಾರಕವಾಗುವ ಸರ್ಕಾರದ ನೀತಿ- ನಿರೂಪಣೆ ವಿರುದ್ದ ಮುಲಾಜಿಲ್ಲದೆ ಸತ್ಯಾಗ್ರಹ, ಧರಣಿ ಮತ್ತಿತರ ಪ್ರಜಾಪ್ರಭುತ್ವದ ನೆಲೆಯಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಎಚ್ಚರ ನೀಡುತ್ತಿದ್ದರು. ಈ ಮೂಲಕ 100 ವರ್ಷ ದಾಟಿದರೂ ಅದಮ್ಯ ಉತ್ಸಾಹ, ಚಟುವಟಿಕೆಗಳಿಂದ ಲಕ್ಷಾಂತರ ಯುವಕರಿಗೆ ಮಾದರಿಯಾಗಿದ್ದರು.
ಯಾವ ಅಧಿಕಾರಿ, ಸಚಿವ, ಶಾಸಕರಿದ್ದರೂ ತಮ್ಮ ನಿಲುವನ್ನು ಕಠಿಣ ಪದಗಳಲ್ಲಿ ಖಂಡಾತುಂಡವಾಗಿ ತಿಳಿಸುತ್ತಿದ್ದ, ಟೀಕಿಸುತ್ತಿದ್ದ ದೊರೆಸ್ವಾಮಿ, ಪ್ರಖರ ವಾಗ್ಮಿಗಳಾಗಿದ್ದರು. ರಾಜ್ಯದಲ್ಲಿ ಹಿರಿಯ ಗಾಂಧಿವಾದಿಯಾಗಿ ನೂರಾರು ಹೋರಾಟಗಳಿಗೆ ಪ್ರೇರಣಾ ಶಕ್ತಿಯಂತಿದ್ದರು.
ಎಚ್.ಎಸ್.ದೊರೆಸ್ವಾಮಿಯವರು ಇತ್ತೀಚೆಗಷ್ಟೆ ಕೆಲವು ತಿಂಗಳ ಹಿಂದಷ್ಟೆ ತಮ್ಮ ಪತ್ನಿಯನ್ನು ಕಳೆದುಕೊಂಡು ಸಾಕಷ್ಟು ನೋವುಂಡಿದ್ದರು. ಸದಾ ಸಾದಾ ಸೀದ ಪಂಚೆ- ಖಾದಿ ಜುಬ್ಬವನ್ನು ಧರಿಸಿ ಜೀವನ ಅಂತಿಮ ಕ್ಷಣದವರೆಗೂ ನುಡಿದಂತೆ ನಡೆದರು. ಈ ಮಹಾನ್ ಚೇತನದ ಅಗಲಿಕೆಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಹಲವು ಸಚಿವರು, ಶಾಸಕರು, ಹಿರಿಯ ಹೋರಾಟಗಾರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೂಲತಃ ಪತ್ರಕರ್ತರಾಗಿದ್ದ ಎಚ್.ಎಸ್.ದೊರೆಸ್ವಾಮಿ ಅಗಲಿಕೆಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕಂಬಿನಿ ಮಿಡಿದಿದೆ. ಸಕಲ ಸರ್ಕಾರಿ ಗೌರವದೊಂದಿಗೆ ದೊರೆಸ್ವಾಮಿಯವರ ಅಂತ್ಯಕ್ರಿಯೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಚಾಮರಾಜಪೇಟೆಯ ಚಿತಾಗಾರದಲ್ಲಿ ಬುಧವಾರವೇ ಅಂತ್ಯಕ್ರಿಯೆ ನಡೆಯಲಿದೆ ಎಂದು ದೊರೆಸ್ವಾಮಿ ಕುಟುಂಬದ ಮೂಲಗಳು ತಿಳಿಸಿವೆ.