ಬೆಂಗಳೂರು : ವಾರದ ಮೊದಲ ದಿನವಾದ ಸೋಮವಾರ, ಕತ್ತೆತ್ತಿ ಆಕಾಶದತ್ತ ಮುಖ ಮಾಡಿದವರಿಗೆ ಆಶ್ಚರ್ಯವೋ ಆಶ್ಚರ್ಯ….! ಸೂರ್ಯ ತನ್ನ ಸುತ್ತ ಬಣ್ಣ ಉಂಗುರ ತೊಟ್ಟಂತೆ ಕಾಣುತ್ತಿದ್ದ.
ಬೆಳಗ್ಗೆ 9:30ರ ಹೊತ್ತಿಗೆ ವಾಟ್ಸಪ್, ಫೇಸ್ ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ರವಿಯ ಸುತ್ತ ಹರಡಿದ್ದ ಕಾಮನಬಿಲ್ಲಿನ ಉಂಗುರದ ವಿಧ ವಿಧವಾದ ಫೊಟೋಗಳು, ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಬೆಂಗಳೂರಿನ ತಿಳಿ ಆಗಸದಲ್ಲಿ ಸೂರ್ಯನ ಸುತ್ತ ಕಾಣಿಸಿಕೊಂಡ ಈ ವಿದ್ಯಮಾನವನ್ನು ಖಗೋಳ ಶಾಸ್ತ್ರಙ್ಞರು ಸೌರ ಪ್ರಭೆ (Sun Halo) ಎಂದು ಕರೆಯುತ್ತಾರೆ.
ಈ ಬಗ್ಗೆ ಬೆಂಗಳೂರು ವೈರ್ ಜೊತೆ ಖ್ಯಾತ ವೈಙ್ಞನಿಕ ಅಂಕಣಕಾರ ಹಾಲ್ದೊಡ್ಡೇರಿ ಸುಧೀಂದ್ರ ಮಾತನಾಡುತ್ತಾ, “ಈ ಸೌರಪ್ರಭೆಯು ನಮ್ಮ ವಾತಾವರಣದಲ್ಲಿ 20,000 ಅಡಿಗಳ ಮೇಲಿರುವ ಉಂಗುರಾಕಾರದ ಸಿರ್ರಸ್ ಮೋಡಗಳೊಳಗೆ (cirrus clouds) ಇರುವ ಮಂಜುಗಡ್ಡೆಯ ಹರಳುಗಳು ಸೂರ್ಯನ ಬೆಳಕಿನ ಕಿರಣಗಳನ್ನು ವಕ್ರೀಭವಿಸುವುದರಿಂದ ಆಗುವ ವಿದ್ಯಮಾನ” ಎಂದು ಹೇಳಿದ್ದಾರೆ.
“ಬೇರೆ ಊರುಗಳಲ್ಲೂ ಇದು ಬೇರೆ ಬೇರೆ ಸಮಯಗಳಲ್ಲಿ ಕಂಡು ಬಂದಿರಬಹುದು. ಯಾವುದೇ ಋತುವಿನಲ್ಲಿˌ ಕೆಳಸ್ತರದ ಮೋಡಗಳು ಅಡ್ಡವಿರದಿದ್ದ ಸಮಯದಲ್ಲಿˌ ನಿಚ್ಚಳ ಆಗಸವಿದ್ದಾಗˌ ಸಿರ್ರಸ್ ಮೋಡಗಳು ಸೂರ್ಯನ ಕೆಳಗಿದ್ದಾಗ ಸೂರ್ಯ ಪ್ರಭೆ ಕಾಣಿಸುತ್ತದೆ” ಎನ್ನುತ್ತಾರೆ ಅವರು.
ಇಂದಿನ ಬ್ಯುಸಿ ಲೈಫ್ ನಲ್ಲಿ ಆಕಾಶವನ್ನು ನೋಡುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಆದರೆ ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಕಾರಣ ಮನೆಯಲ್ಲಿ ಕೂತು ಬೇಜಾರಾದವರಿಗೆ ಈ ಖಗೋಳ ಕೌತುಕವು ಸಾಕಷ್ಟು ಖುಷಿಕೊಟ್ಟಿದ್ದಂತೂ ಹೌದು.
“ಮಳೆ ಬರುವ ಮುನ್ನ ನೀಲಿ ತಿಳಿ ಆಕಾಶದಲ್ಲಿ ತಿಳಿ ಮೋಡದೊಳಗಿನ ಮಂಜುಗಡ್ಡೆ ಹಿಂಭಾಗದಲ್ಲಿರುವ ಸೂರ್ಯನ ಕಿರಣದಿಂದ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಕ್ರಿಯೆಯಿಂದ ಸೂರ್ಯನ ಸುತ್ತ ಪ್ರಭಾವಳಿ ಮೂಡಿಬರುತ್ತೆ. ಈ ವಿದ್ಯಮಾನ ಇಂತ ದಿನವೇ ಕಂಡು ಬರುತ್ತೆ ಅಂತ ಹೇಳಲಾಗದು” ಎಂದು ಹೇಳುತ್ತಾರೆ ಜವಹರ್ ಲಾಲ್ ಪ್ಲಾನಿಟೋರಿಯಂ ನಿರ್ದೇಶಕ ಪ್ರಮೋದ್ ಗಲಗಲಿ.
ಸೂರ್ಯನ ಬೆಳಕು ತೀಕ್ಷ್ಣವಾಗಿ ಇರುತ್ತದೆ. ಹಾಗಾಗಿ ಅದರ ಸುತ್ತಲಿನ ಕಾಮನಬಿಲ್ಲು ಕಾಣುತ್ತೆ. ಇದೇ ವಿದ್ಯಮಾನ ಚಂದ್ರನ ಸುತ್ತ ಕಂಡು ಬಂದರೆ, ಬಿಳಿ ಉಂಗುರದಂತೆ ಕಂಡು ಬರುತ್ತೆ ಎನ್ನುತ್ತಾರೆ ಅವರು.