ಬೆಂಗಳೂರು : ಮೈಸೂರು ರಸ್ತೆ ಸಮೀಪ ವಾಸಿಸುತ್ತಿರುವ ನಿವಾಸಿಗಳಿಗೆ ನಮ್ಮ ಮೆಟ್ರೊ ಸಿಹಿ ಸುದ್ದಿ ನೀಡಿದೆ. ಮೈಸೂರು ರಸ್ತೆ- ಕೆಂಗೇರಿ ನೇರಳೆ ಮಾರ್ಗದ ನಡುವಿನ ವಾಣಿಜ್ಯ ಮೆಟ್ರೊ ರೈಲು ಓಡಾಟ ಜೂನ್ ತಿಂಗಳಿನಿಂದ ಆರಂಭವಾಗುವುದನ್ನು ಖಚಿತಪಡಿಸಿದೆ.
ಕೆಂಗೇರಿ ಮೆಟ್ರೋ ಸ್ಟೇಷನ್ ಮತ್ತಿತರ ಕಡೆ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಬೆಂಗಳೂರು ಮೆಟ್ರೊ ರೈಲ್ವೆ ನಿಗಮ ನಿಯಮಿತ (ಬಿಎಂಆರ್ ಸಿಎಲ್)ದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ಮೈಸೂರು ರಸ್ತೆ- ಕೆಂಗೇರಿ ನಡುವಿನ 7.53 ಕಿ.ಮೀ ಉದ್ದದ ರೀಚ್-2 ವಿಸ್ತರಿತ ಮಾರ್ಗದ ನಡುವೆ ವಾಣಿಜ್ಯ ಸಂಚಾರ ಜೂನ್ 2021 ರಿಂದ ಆರಂಭವಾಗಲಿದೆ. ಒಂದೊಮ್ಮೆ ಕರೋನಾ ಸಾಂಕ್ರಾಮಿಕದ ಅಡ್ಡಿಯಾದಲ್ಲಿ ಈ ವಾಣಿಜ್ಯ ಸಂಚಾರ ಜೂನ್ ಅಂತ್ಯಕ್ಕೆ ಅಥವಾ ಜುಲೈ ಆರಂಭದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ.
ಈ ಮಾರ್ಗದ ಎಲ್ಲಾ ಕೆಲಸಗಳು ಜೂನ್ 15 ರಿಂದ 20 ನೇ ತಾರೀಖಿನ ಒಳಗೆ ಪೂರ್ಣಗೊಳಿಸಲು ಗುರಿ ನೀಡಲಾಗಿದೆ. ಒಂದೊಮ್ಮೆ ಕರೋನಾ ಸೋಂಕಿನಿಂದ ಸಂಬಂಧಪಟ್ಟ ನೌಕರರು ಬಳಲಿದರೆ ವಾಣಿಜ್ಯ ಸಂಚಾರ ಕೊಂಚ ತಡವಾಗಬಹುದು. ವಾಣಿಜ್ಯ ಸಂಚಾರ ಆರಂಭಕ್ಕೂ ಮುನ್ನ ರೈಲ್ವೇ ಸುರಕ್ಷತಾ ಆಯುಕ್ತ (ಸಿಎಂಆರ್ ಎಸ್ )ರಿಂದ ಒಪ್ಪಿಗೆ ಪಡೆಯುವ ಅವಶ್ಯಕತೆಯಿದೆ. ಹೀಗಾಗಿ ಜೂನ್ 20 ರ ನಂತರ ಆ ಸಂಸ್ಥೆಗೆ ಅರ್ಜಿ ಸಲ್ಲಿಸುವ ಉದ್ದೇಶವಿದೆ ಎಂದು ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಹೊಸ ಮಾರ್ಗದಲ್ಲಿ ಪ್ರತಿದಿನ 75,000 ಪ್ರಯಾಣಿಕರು ಸಂಚರಿಸುವ ನಿರೀಕ್ಷೆ
ಮೈಸೂರು ರಸ್ತೆ- ಕೆಂಗೇರಿ ಸ್ಟೇಷನ್ 7.53 ಕಿ.ಮೀ ನಡುವಿನ ಪ್ರಯಾಣದ ಅವಧಿ 15 ನಿಮಿಷವಾಗಿದೆ. ಈ ವಿಸ್ತರಿತ ನೇರಳೆ ಮಾರ್ಗದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಙ್ಞನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ಹಾಗೂ ಕೆಂಗೇರಿ ಮೆಟ್ರೊ ನಿಲ್ದಾಣಗಳು ಬರಲಿವೆ. ಹೊಸ ಮಾರ್ಗದಲ್ಲಿ ಪ್ರತಿದಿನ 75,000 ಜನರು ಪ್ರಯಾಣಿಸುವ ನಿರೀಕ್ಷೆಯನ್ನು ಮೆಟ್ರೊ ಅಧಿಕಾರಿಗಳು ಹೊಂದಿದ್ದಾರೆ.
ನೂತನ ವಿಸ್ತರಿತ ಮಾರ್ಗದ ಮೆಟ್ರೊ ನಿಲ್ದಾಣ ಹಾಗೂ ವಯಾಡಕ್ಟ್ ನಲ್ಲಿನ ಸಿವಿಲ್ ಹಾಗೂ ತಾಂತ್ರಿಕ ಮತ್ತಿತರ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಂಗೇರಿ ನಿಲ್ದಾಣದಲ್ಲಿ ಶೇ.75ರಷ್ಟು ಕೆಲಸಗಳು ಪೂರ್ಣವಾಗಿದೆ. ಈ ತಿಂಗಳಾಂತ್ಯಕ್ಕೆ ಶೇ.90ರಷ್ಟು ಕೆಲಸಗಳು ಮುಗಿಯುವ ನಿರೀಕ್ಷೆಯಿದೆ. ಉಳಿದ 5 ನಿಲ್ದಾಣಗಳಲ್ಲಿ ಶೇ.90 ರಿಂದ 95ರಷ್ಟು ಕೆಲಸಗಳು ಮುಗಿದಿದೆ ಎಂದು ಮೆಟ್ರೊ ಎಂಡಿ ತಿಳಿಸಿದ್ದಾರೆ.
ಸದ್ಯ ವಯಾಡಕ್ಟ್, ಸ್ಟೇಷನ್ ವರ್ಕ್ಸ್, ಪವರ್ ಸಪ್ಲೇ, ಸಿಸ್ಟಮ್ ವರ್ಕ್ , ಟ್ರ್ಯಾಕ್ ಲೈನಿಂಗ್ ವರ್ಕ್ ಮುಗಿದಿದೆ. ಏಪ್ರಿಲ್ 15 ರಿಂದ ಟ್ರಯಲ್ ರನ್ ಕೂಡಾ ನಡೆಯುತ್ತಿದೆ.
ಹೊಸ ಮಾರ್ಗದಲ್ಲಿ ಸ್ವಯಂ ಚಾಲಿತ ಶುಲ್ಕ ಸಂಗ್ರಹಣೆ ವ್ಯವಸ್ಥೆ
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಈ ಹೊಸ ವಿಸ್ತರಿತ ಮಾರ್ಗದಲ್ಲಿ, ಸ್ವಯಂ ಚಾಲಿತ ಶುಲ್ಕ ಸಂಗ್ರಹಣೆ (ಎಎಫ್ ಸಿ) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇದು ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ (ಎನ್ ಸಿಎಂಸಿ) ಹಾಗೂ ಕ್ಯೂ ಆರ್ ಕೋಡ್ ಆಧಾರಿತವಾಗಿದೆ.
ಹೊಸ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಗೊಂಡ ನಂತರ ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಕೆಂಗೇರಿ ಸ್ಟೇಷನ್ ಗೆ ಸಂಚರಿಸಲು 56 ರೂ. ಶುಲ್ಕ ನಿಗಧಿ ಮಾಡಲಾಗಿದೆ. ಅಲ್ಲದೆ ಕೆಂಗೇರಿ ಹಾಗೂ ಸಿಲ್ಕ್ ಇನ್ಸ್ ಟ್ಯೂಟ್ ನಡುವಿನ ಹೊಸ ವಿಸ್ತರಿತ ಮಾರ್ಗದಲ್ಲಿ ಸಂಚರಿಸಲು 60 ರೂ. ಶುಲ್ಕವನ್ನು ಪ್ರಯಾಣಿಕರು ನೀಡಬೇಕಾಗುತ್ತದೆ. ಈ ಮಾರ್ಗವು ಅತ್ಯಂತ ಉದ್ದ ಮಾರ್ಗವಾಗಿದೆ.
ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಙ್ಣನಭಾರತಿ ನಿಲ್ದಾಣಗಳಲ್ಲಿ ಪ್ರಯಾಣಿಕರ ವಾಹನ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಂಗೇರಿ ಬಸ್ ಟರ್ಮಿನಲ್‌ನಲ್ಲಿ ಎರಡು ಹಂತದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಮೆಟ್ತೊ ಸ್ಟೇಷನ್ ಎರಡೂ ಕಡೆ ಬಸ್ ಬೇ ನಿರ್ಮಿಸಲಾಗುತ್ತಿದೆ. ಕೆಂಗೇರಿ ಬಸ್ ಟರ್ಮಿನಲ್ ಸ್ಟೇಷನ್ ಹೊರತುಪಡಿಸಿ ಬೇರೆ ನಿಲ್ದಾಣಗಳಲ್ಲಿ ಪ್ಯಾಸೆಂಜರ್ ಗಳು ರಸ್ತೆ ದಾಟಲು ಅನುಕೂಲ ಮಾಡಲಾಗಿದೆ.
ಕೆಂಗೇರಿ ಬಸ್ ಟರ್ಮಿನಲ್ ಮೆಟ್ರೊ ಸ್ಟೇಷನ್ ರಸ್ತೆ ಪಕ್ಕದಲ್ಲಿದೆ. ಬಿಎಂಟಿಸಿ ಬಸ್ ಡಿಪೊನಿಂದ ಸ್ಟೇಷನ್ ಗೆ ಸಂಪರ್ಕ ಕಲ್ಪಿಸಲು ಫುಟ್ ಓವರ್ ಬ್ರಿಡ್ಜ್ ನೆರವಾಗಲಿದೆ. ರಸ್ತೆ ದಾಟಲು ಅನುಕೂಲವಾಗುವಂತೆ ನಂತರದಲ್ಲಿ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಮೆಟ್ರೊ ಅಧಿಕಾರಿಗಳು ಹೇಳಿದ್ದಾರೆ.