ರಣಧೀರ ಕಂಠೀರವ, ಕನ್ನಡಿಗರ ಕಣ್ಮಣಿ, ರಸಿಕರ ರಾಜ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರನ್ನು ಒಂದು ದೊಡ್ಡ ಆಲದ ಮರಕ್ಕೆ ಹೋಲಿಸುವ ಚಿತ್ರಕಲಾಕೃತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಪದ್ಮಭೂಷಣ ಡಾ.ರಾಜ್ ಅವರ ನಟನೆಯ ಬೇಡರ ಕಣ್ಣಪ್ಪ ಮೊದಲ ಸಿನಿಮಾ ದಿಂದ ಹಿಡಿದು, 205ನೇ ಚಿತ್ರ ಶಬ್ದವೇಧಿವರೆಗಿನ ಚಲನಚಿತ್ರದ ಹೆಸರುಗಳನ್ನು ಮರದ ಎಲೆಗಳ ಮಧ್ಯೆ ಹೆಸರಿಸುತ್ತಾ ಆ ಮಹಾನ್ ನಾಯಕನ ನಟನನ್ನು ಮಂಡ್ಯದ ನರಸಿಂಹ ಆಚಾರ್ ಎಂಬ ವ್ಯಕ್ತಿ ಹೇಗೆ ಚಿತ್ರಿಸಿದ್ದಾರೆ ನೋಡಿ.
https://m.facebook.com/story.php?story_fbid=1156574044770624&id=100012541183570
ಡಾ.ರಾಜ್ ಒಟ್ಟು 206 ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರೆ, ಆ ಪೈಕಿ ತೆಲಗು ಚಿತ್ರದ ಕಾಳಹಸ್ತಿ ಮಹಾತ್ಮೆ ಮಾತ್ರ ಅನ್ಯ ಭಾಷೆಯದ್ದಾಗಿತ್ತು. ಉಳಿದಂತೆ 3 ಚಿತ್ರಗಳಲ್ಲಿ ಗೌರವ ನಟನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು.
ಕಲೆ ಎಂಬ ಸಾಗರದಲ್ಲಿ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರನಾಗಿ ಮೆರೆದ ಸೌಮ್ಯ ಸ್ವಭಾವದ, ನಿಗರ್ವಿ ಹಾಗೂ ಅಭಿಮಾನಿಗಳನ್ನು ದೇವರೆಂದು ಕರೆದ ನಟನನ್ನು ಕ್ಯಾಮರಾ ಕಣ್ಣನ್ನು ಹೊರತುಪಡಿಸಿ ಬಹಳ ವಿಭಿನ್ನವಾಗಿ ನರಸಿಂಹ ಆಚಾರ್ ಚಿತ್ರಿಸಿದ್ದಾರೆ.
“ಡಾ.ರಾಜ್ ಕುಮಾರ್ ಅಭಿಯಾನಿಯಾಗಿ ನಾನು, ಅವರು ನಾಯಕ ನಟನಾಗಿ ಅಭಿನಯಿಸಿದ 204 ಚಿತ್ರಗಳನ್ನು ನೋಡಿದ್ದೇನೆ. ಸಮಾಜದ ಮೇಲೆ ಅವರ ನಟನೆಯ ಚಿತ್ರಗಳು ಬೀರಿದ ಸಕಾರಾತ್ಮಕ ಪರಿಣಾಮಗಳೇ ನನ್ನನ್ನು ಅವರ ಅಭಿಮಾನಿಯಾಗಿಸಿತು. ಡಾ.ರಾಜ್ ಭೌತಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಅವರೊಂದು ದೊಡ್ಡ ಆಲದ ಮರ. ಅವರ ನೆರಳಲ್ಲಿ ಕನ್ನಡ ಚಿತ್ರರಂಗ ನಿರಾತಂಕವಾಗಿ ಮುನ್ನಡೆಯಲಿ ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರ ಬರೆದಿದ್ದೇನೆ.”
– ನರಸಿಂಹ ಆಚಾರ್, ಸಂತೆ ಕಸಲಗೆರೆ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ, ಮಂಡ್ಯ
ಕನ್ನಡ ನಾಡಿನ ಸಿನಿ ಜಗತ್ತಿನಲ್ಲಿ ಡಾ.ರಾಜ್ ಕುಮಾರ್ ನಟಿಸಿದ ಅಷ್ಟೂ ಸಿನಿಮಾಗಳು ಒಂದಲ್ಲ ಒಂದು ವಿಷಯದಲ್ಲಿ ಸಾಮಾಜಿಕ ಸಂದೇಶವನ್ನು ಸಾರುವಂತಹ ಚಿತ್ರಗಳಾಗಿದ್ದವು.
ಈ ಕಾರಣಕ್ಕೆ ನರಸಿಂಹ ಆಚಾರ್, ಅವರು ಡಾ.ರಾಜ್ ಕುಮಾರ್ ಹೆಸರು, ಕನ್ನಡ ಎಂಬ ಅಡಿಬರಹ ಬರೆದು, ಅದರ ಮೇಲ್ಭಾಗದಲ್ಲಿ ಆಲದ ಮರದ ಕಾಂಡದಲ್ಲಿ ಸೂಕ್ಷ್ಮವಾಗಿ ಕರ್ನಾಟಕದ ನಕ್ಷೆ, ಅದರ ಮುಂಭಾಗ ತಾಯಿ ಭುವನೇಶ್ವರಿಯನ್ನು ಚಿತ್ರಿಸಿದ್ದಾರೆ. ಆ ದೇವಿಯ ಎದುರು, ಕ್ಯಾಮರಾ ಮುಂದೆ ನಟ- ನಟಿಯರಿಬ್ಬರು ಅಭಿನಯಿಸುವ ದೃಶ್ಯವನ್ನು ತಮ್ಮ ರೇಖೆಯಲ್ಲಿ ಹಿಡಿದಿಟ್ಟಿದ್ದಾರೆ.
ಕಪ್ಪು ಪೆನ್ ಬಳಸಿ ಅದರ ಗೆರೆಗಳಲ್ಲೇ ತಮ್ಮ ಕೌಶಲ್ಯವನ್ನು ತೋರಿಸುತ್ತಾ ಮೂರು ದಿನಗಳ ಕಾಲ ಈ ಅದ್ಭುತ ಎನ್ನಬಹುದಾದ ಚಿತ್ರವನ್ನು ರಚಿಸಿದ್ದಾರೆ.
ಕಲಾ ಸಾಮ್ರಾಟನ 205 ಚಿತ್ರಗಳನ್ನು ಬಿಡಿಸಿರುವ ಆಚಾರ್
ಮೊದಲ ಕರೋನಾ ಅಲೆಯಲ್ಲಿ ಶಾಲಾ- ಕಾಲೇಜುಗಳು ಮುಚ್ಚಿದ್ದಾಗ ಸರ್ಕಾರಿ ಶಾಲೆಯ ಕಲಾ ಶಿಕ್ಷಕರಾದ ನರಸಿಂಹ ಆಚಾರ್ ಮತ್ತೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದರು.
1986ರಲ್ಲಿ ಕಲಾ ಸಾಮ್ರಾಟನ 205 ಚಿತ್ರಗಳ ಪೈಕಿ 100ಕ್ಕೂ ಹೆಚ್ಚು ಚಿತ್ರಗಳನ್ನು ಬರೆಯಲು ಪ್ರಾರಂಭಿಸಿದ್ದರು.
ಅನಿವಾರ್ಯ ಕಾರಣಗಳಿಂದ ನಿಂತಿದ್ದ ಈ ಕೆಲಸವನ್ನು ಕರೋನಾ ಕಾಲದ 5 ತಿಂಗಳಲ್ಲಿ ಪ್ರತಿ ಚಿತ್ರಕ್ಕೆ 5 ಗಂಟೆಯಂತೆ ಸಮಯ ವಿನಿಯೋಗಿಸಿ ಅಣ್ಣಾವ್ರ ಭಾವ ಬಂಗಿ, ಚಿತ್ರ ಶೀರ್ಷಿಕೆಯನ್ನು ಮೂಲ ವಿನ್ಯಾಸ ಆಧರಿಸಿ ಚಿತ್ರ ಬಿಡಿಸಿದ್ದಾರೆ. ಆ ಚಿತ್ರಗಳಲ್ಲಿ , ಪ್ರತಿ ಪಿಕ್ಚರ್ ತೆರೆಕಂಡ ವರ್ಷ, ಆ ಚಿತ್ರದಲ್ಲಿನ ನಟಿಸಿದ ಪ್ರಮುಖ ನಟಿಯ ಚಿತ್ರವನ್ನು ರಚಿಸಿದ್ದಾರೆ.
ಕಪ್ಪು- ಬಿಳುಪಿನಲ್ಲಿ ತೆರೆ ಕಂಡ 150 ಚಿತ್ರಗಳನ್ನು ಪೆನ್ಸಿಲ್ ನಲ್ಲಿ ಹಾಗೂ ಉಳಿದ ಕಲರ್ ಚಲನಚಿತ್ರಗಳಲ್ಲಿ ಡಾ.ರಾಜ್ ಅವರನ್ನು ಪೆನ್ ಹಾಗೂ ಜಲವರ್ಣ ಬಳಸಿ ಚಿತ್ರ ರಚನೆ ಮಾಡಿದ್ದಾರೆ. ಒಂದೊಂದು ಚಿತ್ರಗಳು ಒಂದಕ್ಕಿಂತ ಒಂದು ಸುಂದರವಾಗಿದೆ.