ಬೆಂಗಳೂರು : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆಕ್ಸಿಜನ್ ಎಕ್ಸ್ ಪ್ರಸ್ ರೈಲಿನ ಮೂಲಕ ಒಡಿಶಾದಿಂದ ವೈದ್ಯಕೀಯ ಆಮ್ಲಜನಕ ಸರಬರಾಜು ಪ್ರಾರಂಭವಾಗಲಿದೆ.
ಇನ್ನು ಎರಡು ಮೂರು ದಿನದಲ್ಲಿ ಒಡಿಶಾದ ಕಳಿಂಗನಗರದಿಂದ ಲಿಂಡೆ ಆಕ್ಸಿಜನ್ ಸ್ಥಾವರದಿಂದ ತಲಾ16 ಟನ್ ಸಾಮರ್ಥ್ಯದ 8 ಆಕ್ಸಿಜನ್ ಟ್ಯಾಂಕರ್ ಹೊತ್ತ ಸರಕು ಸಾಗಣೆ ಮಾಡುವ ಆಕ್ಸಿಜನ್ ಎಕ್ಸ್ ಪ್ರಸ್ ರೈಲು ಬೆಂಗಳೂರು ತಲುಪಲಿದೆ.
ವಾರಕ್ಕೆ ಎರಡು ಬಾರಿ ಈ ರೈಲು ಒರಿಸ್ಸಾದಿಂದ ಬೆಂಗಳೂರಿಗೆ ಆಕ್ಸಿಜನ್ ಪೂರೈಕೆ ಮಾಡಲಿದೆ. ಅದರಂತೆ ಒರಿಸ್ಸಾದ ಲಿಂಡೆ ಕಂಪನಿ ಹಾಗೂ ಟಾಟಾ ಅಂಗೂಲ್ ಕಂಪನಿಯಿಂದ ವಾರಕ್ಕೆ 320 ಟನ್ ಆಕ್ಸಿಜನ್ ಬೆಂಗಳೂರಿಗೆ ರೈಲಿನಲ್ಲಿ ಬಂದಿಳಿಯಲಿದೆ.
ನಾಲ್ಕು ದಿನಗಳ ಹಿಂದಷ್ಟೆ ರಾಜ್ಯಕ್ಕೆ ವೇಗವಾಗಿ ಆಕ್ಸಿಜನ್ ಪೂರೈಕೆ ಮಾಡುವ ಉದ್ದೇಶದಿಂದ ಭಾರತೀಯ ವಾಯುಪಡೆ ಸರಕು ಸಾಗಣೆ ವಿಮಾನದಲ್ಲಿ ಎರಡು ಟ್ರಿಪ್‌ನಲ್ಲಿ ತಲಾ ಎರಡು ಆಕ್ಸಿಜನ್ ಟ್ಯಾಂಕರ್ ಲಾರಿಯನ್ನು ಒಡಿಶಾಗೆ (ಏರ್ ಲಿಫ್ಟ್) ಕೊಂಡೊಯ್ದಿತ್ತು. ಅಲ್ಲಿಂದ ಮೂರು ದಿನಗಳ ಹಿಂದಷ್ಟೆ ಆಮ್ಲಜನಕವನ್ನು ಹೊತ್ತ ಮೂರು ಟ್ಯಾಂಕರ್ ಲಾರಿ ರಾಜ್ಯದತ್ತ ಹೊರಟಿದ್ದು, ಭಾನುವಾರ ಅಥವಾ ಸೋಮವಾರ ರಾಜ್ಯಕ್ಕೆ ಬರಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ರಸ್ತೆ ಮಾರ್ಗದಲ್ಲಿ ಕರ್ನಾಟಕದಿಂದ 1,400 ಕಿ.ಮೀ ಗೂ ಹೆಚ್ಚು ದೂರದಲ್ಲಿರುವ ಒಡಿಶಾದ ಕಳಿಂಗನಗರಕ್ಕೆ ಹೋಗಿ ಆಕ್ಸಿಜನ್ ಹೊತ್ತ ಟ್ಯಾಂಕರ್ ವಾಪಸ್ಸು ಬರಲು ಕನಿಷ್ಠ ಒಂದು ವಾರದ ಮೇಲಾಗುತ್ತೆ. ಹೀಗಾಗಿ ರಾಜ್ಯ ಸರ್ಕಾರ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಒಡಿಶಾದ ಲಿಂಡೇ ಹಾಗೂ ಟಾಟಾ ಬಿಎಸ್ ಎಲ್ ಅಂಗೂಲ್ ನಿಂದ ವೈದ್ಯಕೀಯ ದ್ರವೀಕೃತ ಆಮ್ಲಜನಕವನ್ನು ತರಿಸಲು ನಿರ್ಧರಿಸಿದೆ.
ರಾಜ್ಯದ ಉತ್ಪಾದನಾ ಘಟಕಗಳಿಂದ ದಿನಂಪ್ರತಿ ಕರೋನಾ ಸೋಂಕಿತರಿಗೆ ವೈದ್ಯಕೀಯ ಆಮ್ಲಜನಕ ಬೇಡಿಕೆ ಪ್ರತಿ ದಿನ ಏರಿಕೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ 965 ಟನ್ ಆಮ್ಲಜನಕ ಹಂಚಿಕೆಯಾಗಿದೆ. ಆದರೆ ಸದ್ಯ ಪೂರ್ಣ ಪ್ರಮಾಣದಲ್ಲಿ ರಾಜ್ಯವು ಅದನ್ನು ಬಳಸಿಕೊಳ್ಳಲು ಆಗುತ್ತಿಲ್ಲ.
ರಾಜ್ಯದ ಉತ್ಪಾದನಾ ಘಟಕಗಳಿಂದ 795 ಟನ್ ಆಕ್ಸಿಜನ್ ಲಭ್ಯ
965 ಟನ್ ಒಟ್ಟಾರೆ ಆಮ್ಲಜನಕ ಹಂಚಿಕೆ ಪೈಕಿ ರಾಜ್ಯದ 7 ಉತ್ಪಾದನಾ ಘಟಕಗಳಿಂದ 735 ಟನ್ ಹಾಗೂ ವಿವಿಧ ಎಂಎಸ್ ಎಂಇ ಕೈಗಾರಿಕೆಗಳಿಂದ 60 ಟನ್ ಸೇರಿದಂತೆ 795 ಟನ್ ಆಮ್ಲಜನಕ ಲಭ್ಯವಾಗುತ್ತಿದೆ. ಕರ್ನಾಟಕದಲ್ಲಿರುವ ಸರ್ಕಾರಿ, ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಬೇಡಿಕೆ ಮೇ.5 ರಂದು ಅಂದಾಜಿಸಿದಂತೆ 1,162 ಟನ್ ಆಗಿತ್ತು. ರೋಗಿಗಳ ಸಂಖ್ಯೆ ಏರಿದಂತೆಲ್ಲ ಆಮ್ಲಜನಕದ ಬೇಡಿಕೆಯೂ ಹೆಚ್ಚಳವಾಗುತ್ತಿದೆ.
ಆಂಧ್ರಪ್ರದೇಶದ ವಿಶಾಖಪಟ್ಟದಲ್ಲಿರುವ ಆರ್ ಎನ್ ಐಎಲ್ ಸ್ಟೀಲ್ ಪ್ಲಾಂಟ್ ನಿಂದ 30 ಟನ್ ಪ್ರತಿದಿನ ಪೂರೈಕೆಗೆಂದು ಕೇಂದ್ರ ಹಂಚಿಕೆ ಮಾಡಿದೆ. ಅದೇ ರೀತಿ ಕೇರಳದ ಇನ್ನೋಕ್ಸ್ ಕಂಜಿಕೋಡ್ ಕಂಪನಿಯಿಂದ 20 ಟನ್ ಹಂಚಿಕೆಯಾಗಿದೆ. ಈ ಎರಡೂ ಕಂಪನಿಗಳಿಂದ ಘಟಕಗಳು ದೂರವಿರುವ ಕಾರಣ ಪ್ರತಿದಿನ ರಾಜ್ಯಕ್ಕೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ವಾಸ್ತವ ಬಿಚ್ಚಿಟ್ಟಿದ್ದಾರೆ.
ಕರ್ನಾಟಕ ಕ್ಕೆ ಪ್ರತಿದಿನ 1,200 ಟನ್ ಆಕ್ಸಿಜನ್ ಹಂಚಿಕೆ ಹೆಚ್ಚಳ ಮಾಡುವಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಆದರೆ ಶುಕ್ರವಾರ ಈ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಹೀಗಾಗಿ ಕೇಂದ್ರ ಅನಿವಾರ್ಯವಾಗಿ ರಾಜ್ಯಕ್ಕೆ 1,200 ಟನ್ ಹಂಚಿಕೆ ಮಾಡಬೇಕಿದೆ. ಈ ವಿಚಾರದಲ್ಲಿ ಆದಷ್ಟು ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕಿದೆ.
ರೋಗಿಗಳ ಸಂಖ್ಯೆ ಹೆಚ್ಚಿದಂತೆ ಆಕ್ಸಿಜನ್ ಬೇಡಿಕೆ ಹೆಚ್ಚಳ
ಮೇ.5 ರಂದು ಭಾರತೀಯ ನೌಕಾಪಡೆಯ ಐಎನ್ ಎಸ್ ತಲ್ವಾರ್ ಸಮರ ನೌಕೆಯು ಆಪರೇಷನ್ ಸಮುದ್ರ ಸೇತು ಕಾರ್ಯಾಚರಣೆ ಮೂಲಕ ಬೆಹ್ರೇನ್ ದೇಶದಿಂದ 54 ಟನ್ ಆಮ್ಲಜನಕ ಹೊತ್ತ ಟ್ಯಾಂಕರ್ ಅನ್ನು ಮಂಗಳೂರು ಬಂದರಿಗೆ ಹೊತ್ತು ತಂದಿತ್ತು. ಆ ಪೈಕಿ ರಾಜ್ಯಕ್ಕೆ ಹಂಚಿಕೆಯಾದ 40 ಟನ್ ಆಕ್ಸಿಜನ್ ಅನ್ನು ಸರ್ಕಾರ ಈಗಾಗಲೇ ಪಡೆದುಕೊಂಡಿದೆ.
ಸದ್ಯಕ್ಕೆ ಬೇಡಿಕೆಗೆ ತಕ್ಕಂತೆ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ. ಆಸ್ಪತ್ರೆಗಳಿಗೆ ಪ್ರತಿದಿನ ಸೇರುವವರ ಸಂಖ್ಯೆ ಏರಿಕೆಯಾದಂತೆ ಬೇಡಿಕೆಯಲ್ಲಿಯೂ ಹೆಚ್ಚಳವಾಗಲಿದೆ. ಅದನ್ನು ಪೂರೈಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವ ಪರಿಸ್ಥಿತಿಯೇ ಬೇರೆಯಿದೆ.
ರಾಜ್ಯದಲ್ಲಿವೆ 170 ಆಕ್ಸಿಜನ್ ಟ್ಯಾಂಕರ್
ರಾಜ್ಯದಲ್ಲಿ ಒಟ್ಟು 170 ಆಕ್ಸಿಜನ್ ಪೂರೈಕೆ ಮಾಡುವ ಟ್ಯಾಂಕರ್ ಗಳಿವೆ. ಆ ಪೈಕಿ ರಾಜ್ಯದಲ್ಲಿನ ಬಳಕೆಗೆ 102 ಟ್ಯಾಂಕರ್ ಲಾರಿಗಳಿವೆ. 68 ಟ್ಯಾಂಕರ್ ಲಾರಿಗಳು ಮಹಾರಾಷ್ಟ್ರ, ಗೋವಾ ಮತ್ತಿತರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆಗೆ ಬಳಕೆಯಾಗುತ್ತಿದೆ.
ಇನ್ನೊಂದೆಡೆ ಆಕ್ಸಿಜನ್ ದಾಸ್ತಾನು ಹಾಗೂ ಸಾಗಾಣಿಕೆಗಾಗಿ ಸಾರಜನಕದ ಟ್ಯಾಂಕರ್ ಗಳನ್ನು ಆಕ್ಸಿಜನ್ ಟ್ಯಾಂಕರ್ ಗಳಾಗಿ ಬದಲಾಯಿಸುವ ಕೆಲಸವೂ ನಡೆಯುತ್ತಿದೆ. ಹೀಗಾಗಿ ಹೆಚ್ಚುವರಿಯಾಗಿ ಆಕ್ಸಿಜನ್ ಟ್ಯಾಂಕರ್ ಗಳು ಲಭ್ಯವಾಗುತ್ತಿದೆ ಎಂದು ಸರ್ಕಾದ ಉನ್ನತ ಮೂಲಗಳು ತಿಳಿಸಿವೆ.
ರಕ್ಷಣಾ ಇಲಾಖೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಸಂಶೋಧಿಸಿರುವ ಆಕ್ಸಿಜನ್ ಕಾನ್ಸಟ್ರೇಟರ್ ಯಂತ್ರಗಳನ್ನು ಖಾಸಗಿಯಾಗಿ ಕೈಗಾರಿಕೆಗಳು ಉತ್ಪಾದಿಸಲು ಮುಂದೆ ಬಂದಲ್ಲಿ ರಾಜ್ಯ ಸರ್ಕಾರವೂ ಅದಿಕ್ಕೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಅದೇ ರೀತಿ ಆಮ್ಲಜನಕ ಉತ್ಪಾದಿಸುತ್ತಿದ್ದ ಮುಚ್ಚಿರುವ ಕೈಗಾರಿಕಾ ಉದ್ದಿಮೆಗಳನ್ನು ಪುನಃ ಪ್ರಾರಂಭಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.