ಬೆಂಗಳೂರು : ಕೋವಿಡ್ ಎರಡನೇ ಅಲೆಯಲ್ಲಿ ಕರೋನಾ ಸೋಂಕಿತರು ಬಿಬಿಎಂಪಿ ಕೋಟಾದಲ್ಲಿ ಕೇಂದ್ರೀಕೃತವಾಗಿ ಹಾಸಿಗೆ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಬೆಡ್ ಬ್ಲಾಕಿಂಗ್ ಕೇವಲ ದಕ್ಷಿಣ ವಲಯ ಒಂದೇ ಅಲ್ಲ, ಎಲ್ಲಾ 8 ವಲಯ ಹಾಗೂ ಪಾಲಿಕೆ ಕೇಂದ್ರ ಕಚೇರಿಯ ವಾರ್ ರೂಮ್ ಗಳಲ್ಲೂ ಈ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಬಿಬಿಎಂಪಿ ಕೋಟಾದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವ ಕೇಂದ್ರೀಕೃತ ವ್ಯವಸ್ಥೆಯ (ಸಿಎಚ್ ಬಿಎಂಎಸ್) ತಂತ್ರಾಂಶದಲ್ಲಿ ಒಮ್ಮೆ ಹಾಸಿಗೆ ಕಾಯ್ದಿರಿಸಿದ 12 ಗಂಟೆಯೊಳಗೆ ರೋಗಿಯನ್ನು ದಾಖಲಿಸದಿದ್ದರೆ ಆ ಹಾಸಿಗೆ ರದ್ದಾಗುತ್ತದೆ. ಕೇವಲ ಒಂದು ದಿನದಲ್ಲಿ ಹೀಗೆ ಬ್ಲಾಕ್ ಮಾಡಿದ ಶೇಕಡ 50ರಷ್ಟು ಬೆಡ್ ಗಳು ಆಟೋ ಅನ್ ಲಾಕ್ ಆಗಿ ರದ್ದಾಗಿರೋದು ಕಂಡು ಬಂದಿದೆ. ಆಸ್ಪತ್ರೆಗೆ ದಾಖಲಾಗದಿರುವುದಕ್ಕೆ ನೀಡಿರುವ ಕಾರಣಗಳಲ್ಲಿ ಆಸ್ಪತ್ರೆಗೆ ದಾಖಲಾಗಲು ಇಷ್ಟವಿಲ್ಲ, ಖಾಸಗಿಯಾಗಿ ಆಸ್ಪತ್ರೆಗೆ ದಾಖಲು ಹಾಗೂ ರೋಗಿಗಳು ಪತ್ತೆಯಿಲ್ಲ ಎಂಬ ಕಾರಣ ನೀಡಿರುವುದು ಸಿಎಚ್ ಬಿಎಂಎಸ್ ಡಾಟಾದಲ್ಲಿ ದಾಖಲಿಸಿರುವುದು ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತೆ ತುಳಸಿ ಮದ್ದಿನೇನಿ ಅವರು ನಡೆಸಿದ ವಿಶ್ಲೇಷಣೆಯಿಂದ ಕಂಡು ಬಂದಿದೆ.
ಎಚ್ ಡಿಯು ಆಕ್ಸಿಜನ್, ಐಸಿಯು, ವೆಂಟಿಲೇಟರ್ ಅಗತ್ಯವಿರುವ ರೋಗಿಗಳ ಜೀವ ಉಳಿಸಲು ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು. ಆದರೆ ಬೆಡ್ ಬುಕ್ ಮಾಡಿ ಶೇಕಡ 50ರಷ್ಟು ಬೆಡ್ ಗಳು ಬಳಸದೆ ಆಟೋ ಅನ್ ಲಾಕ್ ಆಗಿರೋದನ್ನು ನೋಡಿದರೆ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಬೆಡ್ ಸಿಗದೆ ತೀವ್ರ ತೊಂದರೆ ಅನುಭವಿಸಿರುವುದಕ್ಕೆ ಈ ಅಂಶ ಪುಷ್ಟಿ ನೀಡುತ್ತಿದೆ.
ಮಂಗಳವಾರವಷ್ಟೇ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರ ಶಾಸಕರು, ಪಾಲಿಕೆಯ ದಕ್ಷಿಣ ವಲಯದ ವಾರ್ ರೂಮ್ ಗೆ ಭೇಟಿ ನೀಡಿ ಅಲ್ಲಿನ ಅಕ್ರಮಗಳನ್ನು ಬಯಲಿಗೆಳೆದಿದ್ದರು. ಇದಾದ ಬಳಿಕ ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ವಾರ್ ರೂಮ್ ನಲ್ಲಿರುವ ಸಿಬ್ಬಂದಿಯಿಂದ ಕೃತ್ಯ ನಡೆದಿರುವುದನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದರು. ಇದಾದ ಬಳಿಕ ದಕ್ಷಿಣ ವಲಯದ ಆಯುಕ್ತರಾದ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅಹೋರಾತ್ರಿ ವಾರ್ ರೂಮ್ ನಲ್ಲೇ ಕುಳಿತು ಸಂಸದರು ಮಾಡಿದ ಆರೋಪ ಕುರಿತಂತೆ ಸಿಎಚ್ ಬಿಎಂಎಸ್ ಸಾಫ್ಟ್ ವೇರ್ ದತ್ತಾಂಶವನ್ನು ಪರಿಶೀಲನೆ ನಡೆಸಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ, ಬುಧವಾರ 21 ಪುಟಗಳ ಸುಧೀರ್ಘವಾದ ಆಂತರಿಕ ವರದಿಯನ್ನು ನೀಡಿದ್ದಾರೆ.
ಈ ವರದಿಯಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ವಲಯ ಆಯುಕ್ತರು ದಾಖಲಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರು ಮಾಡಿದ ಪ್ರತಿಯೊಂದು ಆರೋಪಕ್ಕೂ ಸ್ಪಷ್ಟನೆಯನ್ನು, ಸೂಕ್ತ ಶಿಫಾರಸ್ಸನ್ನು ಆ ವರದಿಯಲ್ಲಿ ದತ್ತಾಂಶಗಳ ದಾಖಲೆ ಸಹಿತ ಮಾಹಿತಿ ನೀಡಿದ್ದಾರೆ.
18 ಪ್ರತಿಷ್ಠಿತ ಆಸ್ಪತ್ರೆಗಳಲ್ಲೂ ಬೆಡ್ ಬ್ಲಾಕಿಂಗ್ ಮಾಫಿಯಾ ?
ನಗರದಲ್ಲಿರುವ ಪ್ರತಿಷ್ಠಿತ 18 ಆಸ್ಪತ್ರೆಗಳಲ್ಲಿ ಏಪ್ರಿಲ್ 19 ರಿಂದ ಮೇ 1ನೇ ತಾರೀಖಿನ ಅವಧಿಯಲ್ಲಿ 32 ಪ್ರಕರಣಗಳಲ್ಲಿ ಬಿಬಿಎಂಪಿಯ ಕೋಟಾದ ಬೆಡ್ ಗಳನ್ನು ರೋಗಿಗಳ ಹೆಸರಿನಲ್ಲಿ ಬ್ಲಾಕ್ ಮಾಡಿ ಕೆಲವೇ ಸೆಕೆಂಡ್ ನಿಂದ ಕೆಲವೇ ನಿಮಿಷಗಳ ಅಂತರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅವಧಿಯಲ್ಲಿ ಪಶ್ಚಿಮ ವಲಯ ವಾರ್ ರೂಮ್ ನಿಂದ 8, ಬೊಮ್ಮನಹಳ್ಳಿ ವಲಯದಲ್ಲಿ 6, ದಕ್ಷಿಣ ವಲಯದಲ್ಲಿ 5, ಯಲಹಂಕ ವಲಯ ಮತ್ತು ಪೂರ್ವ ವಲಯದಲ್ಲಿ ತಲಾ 3, ಮಹದೇವಪುರ, ರಾಜರಾಜೇಶ್ವರಿ ನಗರ ಹಾಗೂ ಎಸ್ ಯು ಕಡೆಯಿಂದ ತಲಾ 2 ಹಾಸಿಗೆಗಳನ್ನು ಬ್ಲಾಕ್ ಮಾಡಿದ ಕೆಲವೇ ಸೆಕೆಂಡ್ ನಿಂದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ದಾಖಲಿಸಿರುವುದನ್ನು ವರದಿಯಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಿಬಿಎಂಪಿಯಿಂದ ನೇಮಕವಾಗಿರುವ ಆರೋಗ್ಯ ಮಿತ್ರ, ಆಸ್ಪತ್ರೆ ಹಾಸಿಗೆ ನೀಡುವ ಉಸ್ತುವಾರಿ ಹೊತ್ತವರು, ವಿವಿಧ ವಲಯ ಅಥವಾ 108 ರಲ್ಲಿನ ಹಾಸಿಗೆ ಕಾಯ್ದಿರಿಸುವ ಸಿಬ್ಬಂದಿ ನಡುವಿನ ಅಪವಿತ್ರ ಮೈತ್ರಿಯಾಗಿದೆ. ಈ ಕುರಿತಂತೆ ರೋಗಿಗಳನ್ನು ಕರೆದು ವಿಚಾರಣೆ ನಡೆಸಿ, ಹಾಸಿಗೆ ಬ್ಲಾಕ್ ಮಾಡಿದವರನ್ನು ಪತ್ತೆ ಹಚ್ಚುವ ಅಗತ್ಯವಿದೆ. ಯಾರು ಈ ಹಾಸಿಗೆಗಳನ್ನು ಬುಕಿಂಗ್ ಮಾಡಿರೋದು? ಹೇಗೆ ಈ ರೋಗಿಗಳನ್ನು ಬುಕಿಂಗ್ ಮಾಡಿದ ತಕ್ಷಣವೇ ದಾಖಲಿಸಲಾಯಿತು? ಈ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಶಿಫಾರಸ್ಸು ಮಾಡಿದ್ದಾರೆ.
ಏ.20 ರಿಂದ ಮೇ.2ರ ತನಕ 3,922 ಹಾಸಿಗೆಗಳ ಕಾಯ್ದಿರಿಸುವಿಕೆ ಸ್ವಯಂ ರದ್ದು
ಏಪ್ರಿಲ್ 20 ರಿಂದ ಮೇ.2ನೇ ತಾರೀಖಿನ ವರೆಗೆ ಬೆಂಗಳೂರಿನ 8 ವಲಯದ ವಾರ್ ರೂಮ್ ಹಾಗೂ ಒಂದು ಕೇಂದ್ರ ಕಚೇರಿಯ ವಾರ್ ರೂಮ್ ನಲ್ಲಿ ಒಟ್ಟು 22,285 ಹಾಸಿಗೆಗಳನ್ನು ಬ್ಲಾಕ್ ಮಾಡಲಾಗಿದೆ. ಆ ಪೈಕಿ 11,010 ರೋಗಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. 3,922 ಆಸ್ಪತ್ರೆ ಬೆಡ್ ಗಳು ಸ್ವಯಂ ರದ್ದಾಗಿದೆ. ಮುಖ್ಯ ಆಯುಕ್ತರು ನೇಮಿಸಿದ ತಾಂತ್ರಿಕ ಸಮಿತಿಯು, ಆಯಾ ದಿನದಂದು ಬೆಡ್ ಬ್ಲಾಕ್ ಮಾಡಿರುವ ಡಾಟಾವನ್ನು ಗಮನಿಸಬೇಕು. ಹಾಗೂ ಕಂಪ್ಯೂಟರ್ ತಂತ್ರಾಂಶದಲ್ಲಿ ವಲಯವಾರು ಮ್ಯಾನುವಲ್ ಆಗಿ ಬೆಡ್ ಅನ್ನು ಅನ್ ಬ್ಲಾಕ್ ಮಾಡಿದ ಬಗ್ಗೆ ವಿಶ್ಲೇಷಣೆ ನಡೆಸಿದರೆ ಏನಾಗಿದೆ ಎಂಬುದು ತಿಳಿಯುತ್ತದೆ ಎಂದು ಪಾಲಿಕೆ ದಕ್ಷಿಣ ವಲಯದ ಆಯುಕ್ತೆ ತುಳಸಿ ಮದ್ದಿನೇನಿ ತಮ್ಮ ಆಂತರಿಕ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ.
“ಸಂಸದರಾದ ತೇಜಸ್ವಿ ಸೂರ್ಯ 10 ಪ್ರಕರಣ ಉದಾಹರಣೆ ಕೊಟ್ಟಿದ್ದರು. ಆ ವಿಚಾರವಾಗಿ ಸಿಎಚ್ ಬಿಎಂಎಸ್ ಸಾಫ್ಟ್ ವೇರ್ ನಲ್ಲಿ ದತ್ತಾಂಶವನ್ನು ಪರಿಶೀಲನೆ ನಡೆಸಿದ್ದೇನೆ. ಎಲ್ಲಿ ಏನಾಯ್ತು? ಯಾವ ಹಂತದಲ್ಲಿ ಲೋಪವಾಗಿದೆ? ಯಾವುದನ್ನು ತನಿಖೆ ಮಾಡಬೇಕು ಎಂಬ ಬಗ್ಗೆ ಮುಖ್ಯ ಆಯುಕ್ತರಿಗೆ ವರದಿ ನೀಡಿದ್ದೇನೆ. ಸಿಎಚ್ ಬಿಎಂಎಸ್ ಸಾಫ್ಟ್ ವೇರ್ ಹಾಗೂ ವ್ಯವಸ್ಥೆ ಶೇ.80ರಷ್ಟು ಸರಿಯಿದೆ. ಆಸ್ಪತ್ರೆ ಬೆಡ್ ಅವಶ್ಯ ಇರುವವರಿಗೆ ಕ್ಯೂ ಸಿಸ್ಟಮ್ ನಲ್ಲಿ ಬೆಡ್ ಅಲಾಮ್ ಮೆಂಟ್ ಮಾಡಿದ್ರೆ ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಬೆಡ್ ಸಿಗಲ್ಲ. ಹಾಗಾಗಿ ತಂತ್ರಾಂಶದಲ್ಲಿ ಸ್ವಲ್ಪ ಸಡಿಲಿಕೆ ಮಾಡಿ ಬೆಡ್ ಬುಕಿಂಗ್ ಅವಕಾಶ ಕಲ್ಪಿಸಲಾಗಿತ್ತು. ಅದನ್ನೇ ಕೆಲವರು ದುರ್ಬಳಕೆ ಮಾಡಿದ್ದಾರೆ. ಈ ತಂತ್ರಾಂಶ ವ್ಯವಸ್ಥೆಯನ್ನು ಈ ವಾರದ ಒಳಗಾಗಿ ಮೇಲ್ದರ್ಜೆಗೆ ಏರಿಸುವ ಕೆಲಸ ಪೊನ್ನುರಾಜ್ ತಾಂತ್ರಿಕ ಸಮಿತಿ ಮಾಡಲಿದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೂ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದೇವೆ.”
– ತುಳಸಿ ಮದ್ದಿನೇನಿ, ಬೆಂಗಳೂರು ದಕ್ಷಿಣ ವಲಯ ಆಯುಕ್ತರು
ಸಂಸದ ತೇಜಸ್ವಿಸೂರ್ಯ ಅವರು, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದನಂತೆ ಏಪ್ರಿಲ್ 20 ರಿಂದ 12 ದಿನದಲ್ಲಿ 4,065 ಬೆಡ್ ಗಳು ಸ್ವಯಂ ರದ್ದಾಗಿರುವ ಪ್ರಕರಣವು ಕೇವಲ ಬೆಂಗಳೂರು ದಕ್ಷಿಣ ವಲಯ ಒಂದೇ ಅಲ್ಲ, ಎಲ್ಲ ವಲಯಗಳ ವಾರ್ ರೂಮ್ ನಿಂದ ಬುಕ್ ಆಗಿದ್ದಂತಹ ಬೆಡ್ ಗಳು ಎಂದು ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಮಧ್ಯರಾತ್ರಿ ಅಡ್ಮಿಷನ್ ಮರ್ಮವೇನು?
ಹಲವು ಆಸ್ಪತ್ರೆಗಳಲ್ಲಿ ರೋಗಿಗಳು ಮಧ್ಯರಾತ್ರಿ ನಂತರ ದಾಖಲಾಗುತ್ತಿದ್ದಾರೆ. ಬಿಬಿಎಂಪಿ ಕೋಟಾದಲ್ಲಿ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಮೂಲಕ, ಆಸ್ಪತ್ರೆಗಳಲ್ಲಿ ಬೆಡ್ ಅಲಾಟ್ ಮೆಂಟ್ ಆದ ಕೆಲವೇ ಸೆಕೆಂಡ್ ಗಳಲ್ಲಿ ರೋಗಿಗಳು ಅಡ್ಮಿಷನ್ ಆಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು. ಈ ಬಗ್ಗೆ ಸಿಎಚ್ ಬಿಎಮ್ ಎಸ್ ಸಿಸ್ಟಮ್ ನಲ್ಲಿನ ದತ್ತಾಂಶ ಪರಿಶೀಲಿಸಿರುವ ತುಳಸಿ ಅವರು, ತಮ್ಮ ವರದಿಯಲ್ಲಿ ಈ ರೀತಿ ತಿಳಿಸಿದ್ದಾರೆ.
ಒಬ್ಬನೇ ವ್ಯಕ್ತಿ ಒಂದೇ ಬಿಯು ನಂಬರ್ ಒಂದೇ ಆಸ್ಪತ್ರೆಯಲ್ಲಿ 3 ಬೆಡ್ ಬುಕಿಂಗ್
ಮಣಿಪಾಲ್ ಆಸ್ಪತ್ರೆಯಲ್ಲಿ ಏಪ್ರಿಲ್ 22, 26, 29 ಹಾಗೂ ಮೇ 1 ಹಾಗೂ 2ನೇ ತಾರೀಖಿನಂದು 20 ಪ್ರಕರಣಗಳ ಪೈಕಿ ಮೇ 2 ರಂದು ಒಂದೇ ದಿನ ಸುಮಾರು 16 ಬೆಡ್ ಗಳು ಬುಕಿಂಗ್ ಆಗಿದೆ. ಬೊಮ್ಮನಹಳ್ಳಿ ವಾರ್ ರೂಮ್ ನಿಂದ 6 ಬೆಡ್ ಗಳು ಬುಕಿಂಗ್ ಆಗಿದೆ. ಪೂರ್ವ ವಲಯದಿಂದ 5, ದಾಸರಹಳ್ಳಿ ವಲಯ ವಾರ್ ರೂಮ್ ನಿಂದ 3, ಮಹದೇವಪುರ. ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ವಲಯದಿಂದ ತಲಾ ಒಂದೊಂದು ಬೆಡ್ ಗಳನ್ನು ಬ್ಲಾಕ್ ಮಾಡಲಾಗಿದೆ. ಬೊಮ್ಮನಹಳ್ಳಿಯಲ್ಲಿ ರಾಕೇಶ್ ಜಿ (ಹೆಸರು ಬದಲಿಸಲಾಗಿದೆ) ಎಂಬುವರ ಹೆಸರಿನಲ್ಲಿ, ಒಂದೇ ಬಿಯು ನಂಬರ್ ನಲ್ಲಿ 3 ಬೆಡ್ ಗಳನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಲಾಗಿದೆ. ಹೀಗೆ ಬ್ಲಾಕ್ ಮಾಡಲಾದ ಕೆಲವು ಹೊತ್ತಿನಲ್ಲೇ ಅದೇ ಹೆಸರಿನ ವ್ಯಕ್ತಿಯನ್ನು ಅಡ್ಮಿಷನ್ ಮಾಡಲಾಗಿದೆ. ಇನ್ನು ಅದೇ ಬೊಮ್ಮನಹಳ್ಳಿ ವಲಯದ ಜಾನಕಿ (ಹೆಸರು ಬದಲಿಸಲಾಗಿದೆ) ಎಂಬುವರ ಹೆಸರಿನಲ್ಲಿ ಒಂದೇ ದಿನ ಅದೇ ಮಣಿಪಾಲ್ ಆಸ್ಪತ್ರೆಯಲ್ಲಿ ಒಂದೇ ಬಿಯು ನಂಬರ್ ಬಳಸಿ 2 ಬೆಡ್ ಗಳನ್ನು ಬ್ಲಾಕ್ ಮಾಡಿ ಕೆಲವೇ ನಿಮಿಷಗಳಲ್ಲಿ ಅಡ್ಮಿಷನ್ ಮಾಡಲಾಗಿರುವುದು ಕಂಡು ಬಂದಿದೆ. ಒಟ್ಟಾರೆ ಈ ವಿಚಾರದ ಬಗ್ಗೆ ಸುಧೀರ್ಘವಾಗಿ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಸೆಕೆಂಡ್ ಗಳಲ್ಲಿ ಬೆಡ್ ಬ್ಲಾಕ್ ಮತ್ತು ಬೆಡ್ ಅಡ್ಮಿಷನ್ ಹೇಗೆ ಸಾಧ್ಯ ?
ಇನ್ನು ನವಚೇತನ ಆಸ್ಪತ್ರೆಯಲ್ಲಿ ಏಪ್ರಿಲ್ 20ರಿಂದ ಮೇ.2ರ ಮಧ್ಯೆ ಯಲಹಂಕ ವಲಯ ವಾರ್ ರೂಮ್ ವೊಂದರಿಂದಲೇ 14 ಬೆಡ್ ಗಳನ್ನು ಬುಕ್ ಮಾಡಲಾಗಿದೆ. ಹೀಗೆ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ಮಾಡಿದ ಕೆಲವೇ ಸೆಕೆಂಡ್ ಗಳಿಂದ ಕೆಲವೇ ನಿಮಿಷಗಳಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಉದಾಹರಣೆಗೆ ಚಂದ್ರಶೇಖರ್ (ಹೆಸರು ಬದಲಿಸಲಾಗಿದೆ) ಎಂಬ ವ್ಯಕ್ತಿಯ ಹೆಸರಿನಲ್ಲಿ ಮೇ 2 ರಂದು ಬೆಳಗ್ಗೆ 9 ಗಂಟೆ 36 ನಿಮಿಷ 08 ಸೆಕೆಂಡ್ ಗೆ ಬೆಡ್ ಬ್ಲಾಕ್ ಆಗುತ್ತೆ. ಅದಾಗಿ 56 ಸೆಕೆಂಡ್ ನಲ್ಲಿ ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಹೇಗಿದೆ ನೋಡಿ ಕಮಾಲ್…?ಈ ಬಗ್ಗೆ ತನಿಖೆ ನಡೆಸಲು ತುಳಸಿ ಮದ್ದಿನೇನಿ ಶಿಫಾರಸ್ಸು ಮಾಡಿದ್ದಾರೆ.
“ಕೋವಿಡ್ ಸಾಂಕ್ರಾಮಿಕ ರೋಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ತಮ್ಮ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವ ಸಂದರ್ಭದಲ್ಲಿ, ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಬೆಡ್ ಬ್ಲಾಕಿಂಗ್ ಭ್ರಷ್ಟಾಚಾರ ನಡೆಸಿರುವುದು ಮಾನವ ಮೇಲೆ ಎಸಗಿದ ಹೇಯಕೃತ್ಯವಾಗಿದೆ. ಈ ಬಗ್ಗೆ ಸರ್ಕಾರದಲ್ಲಿನ ಪ್ರಮಾಣಿಕ ಅಧಿಕಾರಿಗಳಿಂದ ನ್ಯಾಯಬದ್ಧ ತನಿಖೆಯಾಗಬೇಕು. ಪಾರದರ್ಶಕವಾಗಿ ಆಡಳಿತ ನಿರ್ವಹಿಸುವಲ್ಲಿ ವಿಫಲರಾದ ಸಂಬಂಧಿಸಿದ ಐಎಎಸ್- ಕೆಎಎಸ್ ಅಧಿಕಾರಿಗಳನ್ನು ಸರ್ಕಾರ ತಕ್ಷಣವೇ ಅಮಾನತು ಮಾಡಿ, ವ್ಯವಸ್ಥೆಯಲ್ಲಿ ಲೋಪ ಸರಿಪಡಿಸಲು ಚುರುಕು ಮುಟ್ಟಿಸಬೇಕು. ಸೇವೆಯಲ್ಲಿರುವ ಪ್ರಾಮಾಣಿಕ ಅಧಿಕಾರಿಗಳಿಲ್ಲದಿದ್ದರೆ, ನಿವೃತ್ತರಾದ ಅಧಿಕಾರಿಗಳಿಗೆ ತನಿಖೆ ಜವಾಬ್ದಾರಿ ನೀಡಿದರೆ, ನಿಸ್ಸಂಶಯವಾಗಿ ಸತ್ಯ ಬಯಲಾಗಲಿದೆ.”
– ಕೆ.ಮಥಾಯ್, ಸಾಮಾಜಿಕ ಕಾರ್ಯಕರ್ತರು, ನಿವೃತ್ತ ಕೆಎಎಸ್ ಅಧಿಕಾರಿ ಮತ್ತು ಹೈಕೋರ್ಟ್ ವಕೀಲ
ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತರಾದ ತುಳಸಿ ಮದ್ದಿನೇನಿ ರಾತ್ರಿ- ಬೆಳಗ್ಗೆ ತನಕ ಬೆಡ್ ಬ್ಲಾಕಿಂಗ್ ವಿಚಾರದ ಬಗ್ಗೆ ಪರಿಶೀಲನೆ ನಡೆಸಿದಾಗ, ಬಿಬಿಎಂಪಿ ಕೋಟಾದ ಬೆಡ್ ಗಳನ್ನು ಹಣಕ್ಕಾಗಿ ಮಾರುತ್ತಿದ್ದರು ಎಂಬ ಕುರಿತಂತೆ ವಾರ್ ರೂಮ್ ಸಿಬ್ಬಂದಿ ಅಮಿತ್ ಆಸ್ಪತ್ರೆ ಬೆಡ್ ಬುಕಿಂಗ್ ಗೆ 40 ಸಾವಿರ ಹಣಕ್ಕಾಗಿ ರೋಗಿಗಳ ಬಳಿ ಡಿಮ್ಯಾಂಡ್ ಮಾಡಿರುವ, ಬುಕಿಂಗ್ ಗಾಗಿ ರೋಹಿತ್ ಅವರನ್ನು ಸಂಪರ್ಕಿಸುವಂತೆ ನಡೆಸಿರುವ ವಾಟ್ಸಪ್ ಸಂದೇಶಗಳ ಪ್ರತಿಯನ್ನು ವರದಿಯಲ್ಲಿ ತಿಳಿಸಿದ್ದಾರೆ.
ಕೋವಿಡ್ ವಾರ್ ರೂಮ್ ಸಿಬ್ಬಂದಿ ಅಮಿತ್ ರೋಗಿಯೊಬ್ಬರ ಜೊತೆ ನಡೆಸಿದ ವಾಟ್ಸಪ್ ಚಾಟಿಂಗ್ ಸ್ಕ್ರೀನ್ ಶಾಟ್
ಐಸಿಯು ಬೇಕು ಅಂದರು, ಎಚ್ ಡಿಯು ಬೆಡ್ ಬುಕ್ ಮಾಡಿ ರೋಗಿಗೆ ತಿಳಿಸಿಲ್ಲ
ನಿಜಕ್ಕೂ ಇದೊಂದು ಮನಕಲುಕುವ ಘಟನೆ. 34 ವರ್ಷದ ಸುರೇಶ್ ಕುಮಾರ್ ಎಂಬುವರಿಗೆ ಕೋವಿಡ್ ಸೋಂಕು ಉಲ್ಬಣಿಸಿ ತುರ್ತು ನಿಗಾ ಘಟಕ (ಐಸಿಯು) ಬೆಡ್ ಅವಶ್ಯಕತೆಯಿತ್ತು. ಆದರೆ ಇವರ ಹೆಸರಿನಲ್ಲಿ ಪೂರ್ವ ವಲಯದ ವಾರ್ ರೂಮ್ ನಲ್ಲಿ ಏಪ್ರಿಲ್ 24ರಂದು ಮಧ್ಯಾಹ್ನ 3.10ಕ್ಕೆ ಜನರಲ್ ಬೆಡ್ ಬುಕಿಂಗ್ ಮಾಡಲಾಗಿತ್ತು. ತದನಂತರ ಏಪ್ರಿಲ್ 26ರಂದು ಮಧ್ಯಾಹ್ನ 12.12ಕ್ಕೆ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಎಚ್ ಡಿಯು ಸೌಲಭ್ಯದ ಹಾಸಿಗೆ ಬುಕಿಂಗ್ ಮಾಡಲಾಗಿತ್ತು. ಆದರೆ ಬೊಮ್ಮನಹಳ್ಳಿ ವಲಯದ ವಾರ್ ರೂಮ್ ನವರು ಈ ವಿಷಯವನ್ನು ರೋಗಿ ಅಥವಾ ಅವರ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿರಲಿಲ್ಲ. ಆ ವ್ಯಕ್ತಿಯೀಗ ಮೃತಪಟ್ಟಿದ್ದಾನೆ. ಈ ಪ್ರಕರಣವನ್ನು ತನಿಖೆ ನಡೆಸುವಂತೆ ಹೇಳಲಾಗಿದೆ.
ಅವಶ್ಯಕತೆ ಇರದಿದ್ದರೂ ರೋಗಿಗೆ ತಿಳಿಯದಂತೆ ಬೆಡ್ ಬುಕಿಂಗ್
ಮತ್ತೊಂದು ಪ್ರಕರಣದಲ್ಲಿ 18 ವರ್ಷದ ಅರ್ಪಣ ತ್ರಿಪಾಠಿ ಏಪ್ರಿಲ್ 14ರಂದು ಬೆಳಗ್ಗೆ 10 ಗಂಟೆ 14 ನಿಮಿಷ 10 ಸೆಕೆಂಡ್ ಗೆ ಎಕ್ಸೆಲ್ ಕೇರ್ ಆಸ್ಪತ್ರೆಯಲ್ಲಿ ಎಚ್ ಡಿಯು ಬೆಡ್ ಬುಕಿಂಗ್ ಮಾಡಲಾಗಿತ್ತು. ಆದರೆ ಹೀಗೆ ಬೆಡ್ ಬ್ಲಾಕಿಂಗ್ ಆದ 30 ನಿಮಿಷ 16 ಸೆಕೆಂಡ್ ನಂತರ ಆ ಬೆಡ್ ಅನ್ನು ಅನ್ ಬ್ಲಾಕ್ ಮಾಡಲಾಗಿದೆ. ಈ ರೀತಿ ಅನ್ ಬ್ಲಾಕ್ ಮಾಡಿದ ಎಚ್ ಡಿಯು ಆಕ್ಸಿಜನ್ ಸೌಲಭ್ಯವಿರುವ ಹಾಸಿಗೆಯನ್ನು ಕೇವಲ 29 ಸೆಕೆಂಡ್ ನಲ್ಲಿ ಟಿ.ಕೆಂಪಮ್ಮ ಎಂಬುವರಿಗೆ ಅಲಾಟ್ ಮೆಂಟ್ ಮಾಡಲಾಗುತ್ತೆ. ಆಕೆಗೆ ಬೆಡ್ ಅಲಾಟ್ ಮೆಂಟ್ ಆದ ಕೇವಲ 3 ನಿಮಿಷ 34 ಸೆಕೆಂಡುಗಳಲ್ಲಿ ಆಕೆ ಎಕ್ಸೆಲ್ ಕೇರ್ ಆಸ್ಪತ್ರೆಗೆ ದಾಖಲಾಗುತ್ತಾರೆ.
ಸಿಎಚ್ ಬಿಎಂಎಸ್ ತಂತ್ರಾಂಶದಲ್ಲಿ ಕೋವಿಡ್ ಸೋಂಕಿತರ ಬೆಡ್ ಬುಕಿಂಗ್ ಮಾಡುವ ಚಿತ್ರ
ಆದರೆ ಕೋವಿಡ್ ಸೋಂಕಿನ ಲಕ್ಷಣವೇ ಇಲ್ಲದ ಅರ್ಪಣ ತ್ರಿಪಾಠಿಯ ರೋಗಿಯ ಹೆಸರಲ್ಲಿ ದಕ್ಷಿಣ ವಲಯದ ವಾರ್ ರೂಮ್ ನಿಂದ ಬುಕಿಂಗ್ ಮಾಡಲಾಗಿತ್ತು. ಆಶ್ಚರ್ಯ ಅಂದರೆ ಈ ವಿಚಾರ ಆ ವ್ಯಕ್ತಿಗೆ ಗೊತ್ತಿಲ್ಲ. ಅರ್ಪಣ ತ್ರಿಪಾಠಿ ಆಸ್ಪತ್ರೆಗೆ ಬರಲು ಬುಕ್ ಮಾಡಲು ನೀಡಿದ ಮೊಬೈಲ್ ಗೆ ಕರೆ ಮಾಡಿದಾಗ ಆ ನಂಬರ್ ಪಿಜಿ ಸೆಂಟರ್ ಮಾಲೀಕನದ್ದಾಗಿತ್ತು. ತ್ರಿಪಾಠಿ ಎಂಬಾತ ಈಗ ಬಿಹಾರದಲ್ಲಿದ್ದಾನೆಂದು ಕರೆ ಸ್ವೀಕರಿಸಿದವರು ಹೇಳಿದ್ದರು. ಈ ಪ್ರಕರಣದಲ್ಲಿ ಕೆಂಪಮ್ಮ ಬೆಡ್ ಬುಕಿಂಗ್ ಗಾಗಿ ಯಾರಿಗಾದ್ರೂ ಹಣ ಕೊಟ್ಟಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸುವಂತೆ ಮುಖ್ಯ ಆಯುಕ್ತರಿಗೆ ನೀಡಿರುವ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ.
ಹೀಗೆ ಸಂಸದರು ನೀಡಿದ 10 ಪ್ರಕರಣಗಳಲ್ಲಿ ಹಲವು ಅಂಶಗಳನ್ನು ಪತ್ತೆ ಹಚ್ಚಿರುವ ತುಳಸಿ ಮದ್ದೀಮನಿ ಮತ್ತವರ ತಂಡ ಈ ವರದಿಯಲ್ಲಿ ಯಾವೆಲ್ಲ ಪ್ರಕರಣಗಳನ್ನು ವಿಚಾರಣೆಗೂಳಪಡಿಸಬೇಕು? ಯಾವ ವಿಚಾರವನ್ನು ತನಿಖೆ ನಡೆಸಬೇಕು ಎಂಬ ಬಗ್ಗೆ ತಮ್ಮ ಶಿಫಾರಸ್ಸು ಮತ್ತು ಸಲಹೆಗಳನ್ನು ನೀಡಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಈಗಾಗಲೇ ಸಿಸಿಬಿ ಪೊಲೀಸರು ತನಿಖೆ ಚುರುಕು ಗೊಳಿಸಿ, ಬೆಡ್ ಬ್ಲಾಕಿಂಗ್ ಭ್ರಷ್ಟಾಚಾರಿಗಳನ್ನು ಹಿಡಿದು ಬಂಧಿಸುತ್ತಿದ್ದರೆ, ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಮುಂದಾದರೂ ಬಿಬಿಎಂಪಿ ಕೋಟಾದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸುಧಾರಣೆಯಾಗಿ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಹಾಸಿಗೆ ದೊರೆಯುವಂತಾಗಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದು ಬೆಂಗಳೂರು ವೈರ್ ಕಾಳಜಿಯಾಗಿದೆ.