ಬೆಂಗಳೂರು : ಇಡೀ ರಾಜ್ಯದ ವಿವಿಧ ಜೆಲ್ಲೆಗಳಿಗೆ ಹೋಲಿಸಿದರೆ ಕೋವಿಡ್ ಎರಡನೇ ಅಲೆಯಲ್ಲಿ ಅತಿ ಹೆಚ್ಚಿನ ಸಕ್ರಿಯ ಪ್ರಕರಣಗಳಿರುವುದು ಬೆಂಗಳೂರಿನಲ್ಲಿ. ಹೀಗಾಗಿ ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರಿನ ಸರ್ಕಾರಿ, ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಐಸಿಯು ಹಾಸಿಗೆಗಳ ಜೊತೆಗೆ ಬಿಬಿಎಂಪಿಯ 8 ವಲಯಗಳಲ್ಲಿ ತಲಾ 500 ಐಸಿಯು ಹಾಸಿಗೆಗಳ ಸೌಕರ್ಯವನ್ನು ತ್ವರಿತವಾಗಿ ಕಲ್ಪಿಸಲು ನಿರ್ಧರಿಸಿದೆ.
ಇದರ ಜವಾಬ್ದಾರಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಹರ್ಷ ಅವರಿಗೆ ನೀಡಲಾಗಿದೆ. ವಾರ್ತಾ ಇಲಾಖೆಯಲ್ಲಿ ಮಹತ್ವದ ಸುಧಾರಣೆಗಳನ್ನು ತಂದು ಇಲಾಖೆಯ ಅಭಿವೃದ್ಧಿಗೆ ಕಾರಣರಾದ ಡಾ.ಪಿ.ಹರ್ಷ ಅವರನ್ನು ಇದರ ನೋಡಲ್ ಅಧಿಕಾರಿಯನ್ನಾಗಿ ಇತ್ತೀಚೆಗೆ ಸರ್ಕಾರ ನೇಮಿಸಿದೆ.
ಇಂತಹ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ, ಕಾಲಮಿತಿಯಲ್ಲಿ ತ್ವರಿತವಾಗಿ ಐಸಿಯು ಬೆಡ್ ಸೌಕರ್ಯವನ್ನು ಹೇಗೆ ಕಲ್ಪಿಸಲಾಗುತ್ತಿದೆ? ಹೇಗೆ ನಿರ್ವಹಣೆ ಮಾಡಲಾಗುತ್ತೆ? ಇತ್ಯಾದಿಗಳ ವಿಷಯಗಳ ಬಗ್ಗೆ ಬೆಂಗಳೂರು ವೈರ್ ಖುದ್ದಾಗಿ ಡಾ.ಪಿ.ಹರ್ಷ ಅವರನ್ನು ಸಂದರ್ಶನ ಮಾಡಿದೆ. ಅದರ ಪೂರ್ಣಪಾಠ ಈ ಕೆಳಕಂಡಂತಿದೆ.
ಪ್ರಶ್ನೆ : ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯಗಳಲ್ಲಿ ತಲಾ 500 ಬೆಡ್ ಐಸಿಯು ಯಾವ ರೀತಿಯಲ್ಲಿ ಸಿದ್ಧವಾಗುತ್ತಿದೆ?
ಉತ್ತರ : ಈಗಾಗಲೇ ಬಿಬಿಎಂಪಿ, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ)ಗಳ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ.
ಎಲ್ಲಾ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಸಂಘಟನೆಗಳ (ಫನಾ) ಅಧ್ಯಕ್ಷರೊಂದಿಗೆ ಕೂಡ ಸಭೆ ನಡೆಸಲಾಗಿದ್ದು, ತಾಂತ್ರಿಕ ಸಲಹಾ ಸಮಿತಿ ಹಾಗೂ ರಾಜ್ಯ ಸರ್ಕಾರದ ತಜ್ಞರ ಸಮಿತಿಯೊಂದಿಗೆ ಕೂಡ ಮಾತುಕತೆ ನಡೆಸಿ, ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದೆ
ಪ್ರಶ್ನೆ : ಪ್ರತಿ ಪಾಲಿಕೆ ವಲಯಗಳಿಗೆ ತಲಾ 500 ಐಸಿಯು ಬೆಡ್ ಸಿಗೋಕೆ ಎಷ್ಟು ದಿನ ಬೇಕಾಗುತ್ತೆ?
ಉತ್ತರ : ಒಮ್ಮೆ ನಮ್ಮ ಕ್ರಿಯಾಯೋಜನೆಗೆ ಅಂತಿಮ ಸ್ವರೂಪ ದೊರೆತ ಕೂಡಲೇ ಇದೂ ಕೂಡ ನಿಶ್ಚಯವಾಗಿ ತಿಳಿಯುತ್ತದೆ. ಆದಷ್ಟು ಶೀಘ್ರದಲ್ಲಿ ಅಗತ್ಯ ಸೇವೆ ದೊರಕುವಂತೆ ಮಾಡಬೇಕು ಎನ್ನುವುದೇ ಮುಖ್ಯಮಂತ್ರಿಗಳ ಆದೇಶ. ಹಾಗಾಗಿ ನಾವು ಕೂಡ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ.
ಪರಿಸ್ಥಿತಿಗಳಿಗೆ ಅನುಗುಣವಾಗಿ, ತಾಂತ್ರಿಕ ತಜ್ಞರ ಸಮಿತಿಯ ಸಲಹೆ ಪಡೆದು ಅಗತ್ಯಕ್ಕೆ ತಕ್ಕಂತೆ ಸೌಕರ್ಯಗಳನ್ನು ಕಲ್ಪಿಸಲಾಗುವುದು.
ಪ್ರಶ್ನೆ : ಖಾಸಗಿ ಆಸ್ಪತ್ರೆಗಳ ನೆರವು ಪಡೆಯುತ್ತೀರಾ?
ಉತ್ತರ : ಖಂಡಿತವಾಗಿ, ಲಭ್ಯ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಆದಷ್ಟು ಶೀಘ್ರದಲ್ಲಿ ನಮ್ಮ ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಅವಿರತವಾಗಿ ಕೆಲಸ ಮಾಡುತ್ತಿದ್ದೇವೆ.
ಪ್ರಶ್ನೆ : 8×500 = 4,000 ಐಸಿಯು ಹಾಸಿಗೆಗಳ ಸೌಕರ್ಯ ನಿರ್ಮಾಣಕ್ಕೆ ಎಷ್ಟು ಹಣ ಬೇಕಾಗುತ್ತೆ? ಯಾವ ರೀತಿ ತಂತ್ರಙ್ಞನ ಬಳಸುತ್ತಿದ್ದೀರಾ?
ಉತ್ತರ : ಸರ್ಕಾರದ ಉಪಲಬ್ಧ ಅವಕಾಶಗಳನ್ನೇ ಬಳಸಿಕೊಂಡು, ಸಹಾಯ ಮಾಡಲು ಮುಂದೆ ಬಂದಿರುವ ಕಾರ್ಪೊರೇಟ್ ವಲಯಗಳ ಸಹಕಾರದೊಂದಿಗೆ, ಸಮರೋಪಾದಿಯಲ್ಲಿ ಹೆಚ್ಚಿನ ಐಸಿಯು ಹಾಸಿಗೆಗಳನ್ನು ಸಿದ್ದಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ.
ನಾವು (ನೋಡಲ್ ಅಧಿಕಾರಿಯಾಗಿ ನಾನು ಮತ್ತು ನನ್ನ ತಂಡ) ಯಾವುದೇ ಪ್ರೊಕ್ಯೂರ್ಮೆಂಟ್ ಅಥವಾ ಖರೀದಿ ಮಾಡುವುದಿಲ್ಲ. ಮುಖ್ಯವಾಗಿ ಸಂಪನ್ಮೂಲವನ್ನು ಕಾರ್ಪೊರೇಟ್ ವಲಯಗಳ ಸಾಮಾಜಿಕ ಜವಾಬ್ದಾರಿ ನಿಧಿ (CSR) ಯಿಂದ ಮತ್ತು ಖಾಸಗಿಯವರ ನೆರವಿನಿಂದಲೇ ಉದ್ದೇಶಿತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಸಿಎಸ್ಆರ್ ನಿಧಿಯಡಿ ಹಾಸಿಗೆ ವ್ಯವಸ್ಥೆ ಮಾಡಲು ಮುಂದೆ ಕಾರ್ಪೊರೇಟ್ ಸಂಸ್ಥೆಗಳಿಗೆ ಸೂಕ್ತ ಸ್ಥಳ ಗುರುತಿಸಿ ನೀಡಲಾಗುವುದು. ಅಗತ್ಯಬಿದ್ದಲ್ಲಿ ಆರೋಗ್ಯ ಅಥವಾ ವೈದ್ಯಕೀಯ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಇಲಾಖೆಗಳಿಂದಲೇ ಖರೀದಿಸಲಾಗುವುದು
ಪ್ರಶ್ನೆ : 4,000 ಐಸಿಯು ಹಾಸಿಗೆಗಳ ನಿರ್ವಹಣೆ ಯಾರು ಮಾಡುತ್ತಾರೆ?
ಉತ್ತರ : ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ನುರಿತ ವೈದ್ಯರು, ಸಿಬ್ಬಂದಿಗಳೇ ಇದನ್ನು ನಿರ್ವಹಿಸಲಿದ್ದಾರೆ. ಖಾಸಗಿ ಸೌಕರ್ಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿಯಾಗಿ ಮಾನವ ಸಂಪನ್ಮೂಲಗಳ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಬಹುದು.
ಪ್ರಶ್ನೆ : ಈ ಐಸಿಯು ಹಾಸಿಗೆಗಳ ವ್ಯವಸ್ಥೆ ಶಾಶ್ವತವಾದುದ್ದಾ? ಅಥವಾ ತಾತ್ಕಾಲಿಕ ವ್ಯವಸ್ಥೆಯಾ?
ಉತ್ತರ : ಬಹುತೇಕ ಈ ಸೌಕರ್ಯ ಶಾಶ್ವತ ವ್ಯವಸ್ಥೆಯಾಗಿದೆ. ಸಣ್ಣ ಭಾಗ ಮಾತ್ರ ಮೇಕ್ ಶಿಫ್ಟ್ ವ್ಯವಸ್ಥೆಯಲ್ಲಿ ತಾತ್ಕಾಲಿಕ ಐಸಿಯು ಬೆಡ್ ನಿರ್ಮಾಣ ಮಾಡಲಾಗುತ್ತೆ. ಒಟ್ಟಾರೆ ನಾವು ರಾಜ್ಯ ಸರ್ಕಾರದ ತಾಂತ್ರಿಕ ತಙ್ಞರ ಸಲಹಾ ಸಮಿತಿ ಹಾಗೂ ಕ್ಲಿನಿಕಲ್ ತಙ್ಞರ ಸಲಹೆ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ.
ಪ್ರಶ್ನೆ : ಯಾವಾಗ ಐಸಿಯು ನಿರ್ಮಾಣ ಪ್ರಾರಂಭ ಆಗಬಹುದು? ಯಾವಾಗ ಈ ಸೌಕರ್ಯ ಕಲ್ಪಿಸುವ ಕೆಲಸ ಪೂರ್ಣವಾಗಲಿದೆ? ಒಂದು ಟೈಂ ಫ್ರೇಮ್ ಹೇಳ್ತಿರಾ?
ಉತ್ತರ : ಈ ಪ್ರಶ್ನೆಗೆ ಉತ್ತರಿಸಲಾರೆನು. ಇಂತದೇ ಸಮಯ ಎಂದು ಹೇಳಲಾಗದು. ಆದಷ್ಟು ಶೀಘ್ರವಾಗಿ ಎಂದಷ್ಟೆ ಹೇಳುತ್ತೇನೆ.