ಬೆಂಗಳೂರು : ಹದಿನಾಲ್ಕು ದಿನಗಳ ಕರ್ಪ್ಯೂ ಹಾಗೂ ಬಿಬಿಎಂಪಿ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ಸಹಕಾರದಿಂದ ಇನ್ನು 7 ದಿನಗಳ ಒಳಗಾಗಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಶೇಕಡ 10 ರಷ್ಟು ಕಡಿಮೆಯಾಗುವ ವಿಶ್ವಾಸವನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಅಧಿಕಾರಿಗಳು, ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್ ಗಳು ಹಗಲು ರಾತ್ರಿ ಎನ್ನದೆ ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರದ ಕರ್ಪ್ಯೂ ಹೇರಿರುವುದು, ಲಸಿಕೆ ನೀಡಿಕೆ ಮೊದಲಾದ ಕಾರಣಗಳಿಂದ ಕೋವಿಡ್ ಏರಿಕೆ ಪ್ರಮಾಣ ಶೇಕಡ 10ರಷ್ಟು ಇಳಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಪ್ರಸ್ತುತ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ 24,000 ಹಾಸಿಗೆಗಳು ಲಭ್ಯವಿದೆ. ಆದರೆ ಕೋವಿಡ್ ಚಿಕಿತ್ಸೆಗಾಗಿ ಬಿಬಿಎಂಪಿಯ ಸರ್ಕಾರಿ ಕೋಟಾದಲ್ಲಿ 11,268 ಹಾಸಿಗೆಗಳು ಲಭ್ಯವಿದೆ. ಪ್ರತಿದಿನ 400 ರಿಂದ 500 ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಿಂದ ಕೋವಿಡ್ ಚಿಕಿತ್ಸೆಗಾಗಿ ಪಾಲಿಕೆ ಸುಪರ್ದಿಗಾಗಿ ತೆಗೆದುಕೊಳ್ಳಲಾಗುತ್ತಿದೆ. ಹಂತ ಹಂತವಾಗಿ ಕೋವಿಡ್ ಚಿಕಿತ್ಸೆಗಾಗಿ ಬೆಡ್ ಗಳನ್ನು ಪಡೆಯುತ್ತಿದ್ದೇವೆ ಎಂದು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಕೋವಿಡ್ ಸೋಂಕಿನ ಪ್ರಮಾಣದ ತೀವ್ರ ಏರಿಕೆಯಿಂದ ನಗರದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಈ ಮೊದಲು ಸಾಮಾನ್ಯ ದಿನಗಳಲ್ಲಿ 15 ರಿಂದ 20 ಮೆಟ್ರಿಕ್ ಟನ್ ಅಗತ್ಯವಿತ್ತು. ಆದರೀಗ ಪ್ರತಿದಿನ, ನಗರಕ್ಕೆ 150 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಅವಶ್ಯಕತೆಯಿದೆ. ಬೇಡಿಕೆಯಲ್ಲಿ 10 ಪಟ್ಟು ಏರಿಕೆಯಾಗಿದೆ. ರೋಗಲಕ್ಷಣಗಳಿಲ್ಲದ ಸೋಂಕಿತರು ಮನೆಯಲ್ಲೇ ಪ್ರತ್ಯೇಕ ವಾಸವಿದ್ದು, ಅಗತ್ಯ ಔಷಧಿಗಳನ್ನು ತೆಗೆದುಕೊಂಡು, ಸುರಕ್ಷಿತವಾಗಿರಬೇಕು. ಹೊರಗೆ ಬಂದು ಉಳಿದವರಿಗೂ ಸೋಂಕು ಹರಡದಂತೆ ಮುಖ್ಯ ಆಯುಕ್ತ ಗೌರವಗುಪ್ತ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಪಿಡ್ ಆಂಟಿಜನ್ ಟೆಸ್ಟ್ (ರಾಟ್) ಹಾಗೂ ಆರ್ ಟಿ- ಪಿಸಿಆರ್ ಟೆಸ್ಟ್ ಗಳಲ್ಲಿ ನೆಗೆಟಿವ್ ಬಂದು ಕರೋನಾ ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಸಿಟಿಸ್ಕ್ಯಾನ್ ನಡೆಸುವ ಬಗ್ಗೆ ಸರ್ಕಾರ ನಿಗಧಿತ ದರ ನಿಗಧಿಪಡಿಸುವಂತೆ ಉನ್ನತಾಧಿಕಾರಿಗಳ ಸಭೆಯಲ್ಲಿ ಕೋರಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಸರ್ಕಾರದಿಂದ ಆದೇಶ ಹೊರಬೀಳುವ ನಿರೀಕ್ಷೆಯಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ದರ ತೆತ್ತು, ರೋಗಿಗಳು ಪರದಾಡುವುದು ಇದರಿಂದ ತಪ್ಪಲಿದೆ ಎಂದು ಗೌರವಗುಪ್ತ ಹೇಳಿದ್ದಾರೆ.
ಬೆಂಗಳೂರಿನ ಐಸಿಯು- ವೆಂಟಿಲೇಟರ್ ಐಸಿಯು ಲಭ್ಯತೆ ಪರಿಸ್ಥಿತಿ ಹೇಗಿದೆ ?
ನಗರದಲ್ಲಿ ಪ್ರಸ್ತುತ ಸರ್ಕಾರಿ ಕೋಟಾ ಅಡಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಕಾಲೇಜುಗಳಿಂದ 567 ಐಸಿಯು ಹಾಗೂ 492 ವೆಂಟಿಲೇಟರ್ ಬೆಂಬಲಿತ ಐಸಿಯು ಹಾಸಿಗೆಗಳಿದ್ದು, ಆ ಪೈಕಿ ಬಿಬಿಎಂಪಿಯ ಕೇಂದ್ರೀಕೃತ ಬೆಡ್ ಮ್ಯಾನೇಜ್ ಮೆಂಟ್ ಆನ್ ಲೈನ್ ಮಾಹಿತಿ ಪ್ರಕಾರ ಮೇ 3ರ ಮಧ್ಯಾಹ್ನ 1.30ರ ಮಾಹಿತಿಯಂತೆ 533 ಐಸಿಯು ಹಾಸಿಗೆಗಳು ಭರ್ತಿಯಾಗಿತ್ತು. ಇನ್ನು 473 ವೆಂಟಿಲೇಟರ್ ಸಹಿತದ ಐಸಿಯು ಹಾಸಿಗೆಗಳು ಭರ್ತಿಯಾಗಿತ್ತು. ಅಂದರೆ ಒಟ್ಟಾರೆ ಐಸಿಯು, ಐಸಿಯು ವೆಂಟಿಲೇಟರ್ 1,0059 ಬೆಡ್ ಗಳ ಪೈಕಿ 53 ಬೆಡ್ ಗಳು ಮಾತ್ರ ಖಾಲಿಯಾಗಿದೆ. ಅಂದರೆ ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ಕೋಟಾದ ಶೇ.95ರಷ್ಟು ಭರ್ತಿಯಾಗಿದ್ದು, ಕೇವಲ ಶೇ.5ರಷ್ಟು ಬೆಡ್ ಗಳು ಮಾತ್ರ ಲಭ್ಯವಿತ್ತು.
ರಾಜಧಾನಿ ಬೆಂಗಳೂರಿನ 8 ವಲಯಗಳ ಪೈಕಿ ಎರಡನೇ ಅತಿಹೆಚ್ಚು ಪ್ರಕರಣಗಳು ಕಂಡು ಬಂದಿರುವ ದಕ್ಷಿಣ ವಲಯದಲ್ಲಿ ದಿನವೊಂದಕ್ಕೆ 150 ರಿಂದ 200 ಐಸಿಯು ಬೆಡ್ ಗಳಿಗಾಗಿ ಬೇಡಿಕೆ ಬರುತ್ತಿದೆ. ಕಳೆದ 10 ದಿನಗಳಲ್ಲಿ 900 ಹೆಚ್ಚು ಕೋವಿಡ್ ಸೋಂಕಿತರ ಸಂಬಂಧಿಗಳು ಐಸಿಯು ಬೆಡ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಎಲ್ಲರಿಗೂ ಐಸಿಯು ಬೆಡ್ ನೀಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಪಾಸಿಟಿವ್ ರೇಟ್ ಹೆಚ್ಚಳ
ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯು ಒಂದೇ ಸಮನೆ ಏರಿಕೆಯಾಗುತ್ತಿದೆ. 2020ರ ಮಾರ್ಚ್ ತಿಂಗಳಲ್ಲಿ ಕೇವಲ 1,169 ಮಂದಿ ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಇದಾದ ಬಳಿಕ ಕಳೆದ 14 ತಿಂಗಳಲ್ಲಿಯೇ ಏಪ್ರಿಲ್ 2021ರಲ್ಲಿ ಬರೋಬ್ಬರಿ 23.57 ಲಕ್ಷ ಮಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಆ ಪೈಕಿ 3,38,360 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಏಪ್ರಿಲ್ 16ರ ವಾರದ ಕ್ರೋಢೀಕೃತ ಮಾಹಿತಿಯಂತೆ ಪಾಸಿಟಿವ್ ರೇಟ್ ಶೇಕಡ 12.45ರಷ್ಟಿತ್ತು. ಆದ್ರೆ ಏಪ್ರಿಲ್ 30ರಿಂದ ಮೇ 2ರ ತನಕದ 3 ದಿನದಲ್ಲಿ ಒಟ್ಟು 1,82,001 ಜನರು ಕೋವಿಡ್ ಟೆಸ್ಟ್ ಮಾಡಿಸಿದ್ದು, ಆ ಪೈಕಿ ಶೇಕಡ 36.96ರಷ್ಟು ಮಂದಿಗೆ ಪಾಸಿಟಿವ್ ಬಂದಿದೆ. ಇದರಿಂದ ಪಾಸಿಟಿವ್ ರೇಟ್ ಕೂಡ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.
ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಎಷ್ಟಿದೆ?
ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯಗಳಲ್ಲಿ ಕಳೆದ 7 ದಿನಗಳ ಅವಧಿಯಲ್ಲಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಾಗುತ್ತಿರುವ ಕೋವಿಡ್ ಸೋಂಕಿತರ ಪ್ರಮಾಣ ಒಟ್ಟಾರೆ 2,81,787 ಸಕ್ರಿಯ ಪ್ರಕರಣ ಪೈಕಿ (ಮೇ 2ರ ಮಾಹಿತಿಯಂತೆ) ಪೂರ್ವ ವಲಯದಲ್ಲಿ ಅತಿ ಕಡಿಮೆ ಅಂದರೆ ಶೇಕಡ 2.16ರಷ್ಟು ಸೋಂಕಿತರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇನ್ನು 8 ವಲಯಗಳ ಪೈಕಿ ಅತಿಹೆಚ್ಚು ಜನರು ಆಸ್ಪತ್ರೆ ಸೇರಿರುವ ಶೇಕಡಾವಾರು ಪ್ರಮಾಣ ಪಶ್ಚಿಮ ವಲಯದಲ್ಲಿ ಹೆಚ್ಚಾಗಿದೆ. ಶೇಕಡ 6.2ರಷ್ಟು ಜನರು ಆಸ್ಪತ್ರೆ ಸೇರಿದ್ದಾರೆ. ಸಾಮಾನ್ಯ ರೋಗಲಕ್ಷಣವಿರುವ ಅಥವಾ ರೋಗಲಕ್ಷಣ ವಿರದ ಕರೋನಾ ಪಾಸಿಟಿವ್ ಬಂದ ಶೇ.93ಕ್ಕೂ ಹೆಚ್ಚು ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಲಿಕೆಯು 2,012 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ತರೆದಿದ್ದರೂ ಕೇವಲ 618 ಮಂದಿ ಮಾತ್ರ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರೋನಾ ಸೋಂಕು ಹೆಚ್ಚಳವಿರುವ ಟಾಪ್ -10 ವಾರ್ಡ್ ಗಳು
ಶಾಂತಲಾನಗರ, ಬೆಳ್ಳಂದೂರು, ಹೊರಮಾವು, ನ್ಯೂ ತಿಪ್ಪಸಂದ್ರ, ರಾಜರಾಜೇಶ್ವರಿ ನಗರ, ಎಚ್ಎಸ್ ಆರ್ ಲೇಔಟ್, ಹಗದೂರು, ಬೇಗೂರು, ಅರಕೆರೆ ಹಾಗೂ ಕೆಂಪೇಗೌಡ ವಾರ್ಡ್ ಗಳಲ್ಲಿ ಅತಿಹೆಚ್ಚು ಕೋವಿಡ್ ಸೋಂಕಿತರಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ನಗರದ 195 ವಾರ್ಡ್ ಗಳಲ್ಲೂ ತಲಾ 100ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಇರೋದನ್ನು ಬಿಬಿಎಂಪಿ ಖಚಿತಪಡಿಸಿದೆ.
ವೈದ್ಯಕೀಯ ಆಮ್ಲಜನಕ ಲಭ್ಯತೆ ಪ್ರತಿದಿನದ ಮಾಹಿತಿ ಇನ್ನು ವೆಬ್ ಸೈಟ್ ನಲ್ಲಿ ಲಭ್ಯ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಪ್ರತಿ ಜಿಲ್ಲೆಯ ಆಕ್ಸಿಜನ್ ಪೂರೈಕೆದಾರರು ಪ್ರತಿದಿನ ತಮ್ಮಿಂದ ಆಸ್ಪತ್ರೆ ಹಾಗೂ ಇನ್ನಿತರರಿಗೆ ಪೂರೈಸುವ ಆಕ್ಸಿಜನ್ ಪ್ರಮಾಣ, ತಮ್ಮ ಸಂಗ್ರಹದಲ್ಲಿರುವ ಆಮ್ಲಜನಕ ಪ್ರಮಾಣವನ್ನು ಕ್ರೋಢೀಕರಿಸಿ ಜಿಲ್ಲಾಧಿಕಾರಿಗಳಿಗೆ ಅಥವಾ ಬಿಬಿಎಂಪಿಗೆ ಸಲ್ಲಿಸುವುದನ್ನು ಖಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ವಿಪತ್ತು ನಿರ್ವಹಣಾ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಎಂ.ಮಂಜುನಾಥ್ ಪ್ರಸಾದ್, ಸೋಮವಾರ ಈ ಕುರಿತು ಆದೇಶ ಮಾಡಿದ್ದು, ಆಕ್ಸಿಜನ್ ರಿಫಿಲಿಂಗ್ ಮಾಡಿ ಪೂರೈಕೆ ಮಾಡುವ ಸಂಸ್ಥೆಯು ಪ್ರತಿದಿನದ ಮಾಹಿತಿಯನ್ನು ಬಿಬಿಎಂಪಿ ಅಥವಾ ಆಯಾ ಜಿಲ್ಲೆಗಳಲ್ಲಿನ ಆಕ್ಸಿಜನ್ ನೋಡಲ್ ಆಫೀಸರನ್ನು ನೇಮಕ ಮಾಡಿ ಅವರಿಗೆ ಮಾಹಿತಿ ನೀಡಬೇಕು. ಆ ಮಾಹಿತಿಯನ್ನು ಪ್ರತಿದಿನ ಬಿಬಿಎಂಪಿ ಅಥವಾ ಆಯಾ ಜಿಲ್ಲೆಗಳ ವೆಬ್ ಸೈಟ್ ಹಾಗೂ ಮಾಧ್ಯಮಗಳ ಮೂಲಕ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸುವಂತೆ ಆದೇಶಿಸಿದ್ದಾರೆ.