ಬೆಂಗಳೂರು : ಬಾಹ್ಯಾಕಾಶದಲ್ಲಿ ಶತ್ರು ರಾಷ್ಟ್ರಗಳ ಗೂಢಾಚಾರಿಕೆ ನಡೆಸುವ ಉಪಗ್ರಹಗಳನ್ನು ಹೊಡೆದುರುಳಿಸುವ ಭಾರತದ ಉಪಗ್ರಹ ನಿರೋಧಕ ಕ್ಷಿಪಣಿ “ಮಿಷನ್ ಶಕ್ತಿ” ಪ್ರಯೋಗ ನಡೆಸಿ ಮಾರ್ಚ್ 27ಕ್ಕೆ ಎರಡು ವರ್ಷ…!
ಗಗನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶತ್ರು ದೇಶಗಳ ಸ್ಯಾಟಲೈಟ್ ಗಳನ್ನು ಮಿಸೈಲ್ ಮೂಲಕ ನಾಶ ಮಾಡುವ ಅತ್ಯಾಧುನಿಕ ತಂತ್ರಙ್ಞನ ಇದೀಗ ಭಾರತದ ಬಳಿ ಲಭ್ಯವಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಇಸ್ರೋ ಜಂಟಿಯಾಗಿ ‘ಮಿಷನ್ ಶಕ್ತಿ’ ಹೆಸರಿನಲ್ಲಿ ಈ ಪ್ರಯೋಗ ನಡೆಸಿತ್ತು.
ಇದರಿಂದಾಗಿ ಈ ತಂತ್ರಜ್ಞಾನ ಹೊಂದಿದ ಅಮೆರಿಕ, ರಷ್ಯಾ, ಚೀನಾ ನಂತರ 4ನೇ ‘ಸೂಪರ್ ಪವರ್’ ರಾಷ್ಟ್ರವಾಗಿ ಎರಡು ವರ್ಷಗಳ ಹಿಂದೆ ಭಾರತ ಈ ಸ್ಥಾನ ಪಡೆದುಕೊಂಡಿದೆ. ಇತರ ರಾಷ್ಟ್ರಗಳ ತಂತ್ರಙ್ಞನಕ್ಕೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಸಂಪೂರ್ಣವಾಗಿ ಸ್ವದೇಶಿ ತಂತ್ರಙ್ಞನದಲ್ಲಿ ಈ ಆಂಟಿ ಸ್ಯಾಟಲೈಟ್ ಮಿಸೈಲ್ ತಯಾರಿಸಲಾಗಿದೆ.
ಎ-ಸ್ಯಾಟ್ (ಉಪಗ್ರಹ ನಿರೋಧಕ) ಕ್ಷಿಪಣಿ ಮೂಲಕ ಭೂಮಿಯಿಂದ 300 ಕಿ.ಮೀ ದೂರದಲ್ಲಿರುವ ಕೆಳ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಈ ಮಿಸೈಲ್ ಯಶಸ್ವಿಯಾಗಿ ನಾಶ ಮಾಡಿತ್ತು. ಕ್ಷಿಪಣಿ ಉಡಾವಣೆಗೊಂಡ 3 ನಿಮಿಷದಲ್ಲಿ ಈ ಕಾರ್ಯ ನೆರವೇರಿತ್ತು. ಆ ಮೂಲಕ ದೇಶದ ಮೇಲೆ ಕಣ್ಗಾವಲು ನಡೆಸುವ ವಿರೋಧಿ ರಾಷ್ಟ್ರಗಳ ಸ್ಯಾಟಲೈಟ್ ಗಳನ್ನು ಕ್ಷಣಮಾತ್ರದಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಭಾರತವು ಹೊಂದಿ ಎರಡು ವರ್ಷ ಸಂದಿದೆ. ಇದರಿಂದಾಗಿ ದೇಶದ ರಕ್ಷಣಾ ಬಲವೂ ಹೆಚ್ಚಾಗಿದೆ.
‘ಮಿಷನ್ ಶಕ್ತಿ’ ಯೋಜನೆ ಕಾರ್ಯಗತವಾಗಿದ್ದು ಹೇಗೆ?
ಬಾಹ್ಯಾಕಾಶದಲ್ಲಿರುವ ಸಜೀವ ಉಪಗ್ರಹವನ್ನು ಹೊಡೆದುರುಳಿಸುವ ಈ ಕ್ಷಿಪಣಿ ಯೋಜನೆಗೆ ಡಿಆರ್ ಡಿಒ ‘ಮಿಷನ್ ಶಕ್ತಿ’ ಎಂದು ಹೆಸರಿಟ್ಟಿತ್ತು.
ಈ ಯೋಜನೆಗಾಗಿ ನಮ್ಮ ದೇಶದ ನಿರುಪಯುಕ್ತ ಸಕ್ರಿಯ ಉಪಗ್ರಹವನ್ನು ‘ಮಿಷನ್ ಶಕ್ತಿ’ ಪ್ರಯೋಗಕ್ಕೆ ಬಳಸಿಕೊಂಡಿತ್ತು. 2019ರ ಜನವರಿ 24ರಂದು ಇಸ್ರೋ ಉಡಾಯಿಸಿದ್ದ ಸಣ್ಣ ಉಪಗ್ರಹವನ್ನು ಅದೇ ವರ್ಷದ ಮಾ.27 ರಂದು ಎ-ಸ್ಯಾಟ್ ಕ್ಷಿಪಣಿ ಮೂಲಕ ಉಡಾವಣೆ ಮಾಡಿ ಬಾಹ್ಯಾಕಾಶದಲ್ಲೇ ಯಶಸ್ವಿಯಾಗಿ ಆ ಉಪಗ್ರಹವನ್ನು ನಾಶ ಮಾಡಿತ್ತು.
ಭೂಸ್ಥಿರ ಕೆಳಹಂತದ ಕಕ್ಷೆಯಲ್ಲಿರುವ ಉಪಗ್ರಹವನ್ನೇ ಈ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಕಾರಣ, ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹ ನಾಶ ಮಾಡಿದಾಗ ಅದರ ಅವಶೇಷಗಳು ನೇರವಾಗಿ ಭೂ ವಾತಾವರಣ ತಲುಪುತ್ತದೆ.
ಆಗ ಅದರ ಬಿಡಿಭಾಗಗಳು ಭೂಮಿಯ ಗುರುತ್ವಾಕರ್ಷಣೆಯ ಬಲ ಹಾಗೂ ಅತಿಯಾದ ವಾತಾವರಣದ ಶಾಖಕ್ಕೆ ಸಿಲುಕಿ ಅಲ್ಲಿಯೇ ಉರಿದು ಭಸ್ಮವಾಗುತ್ತದೆ. ಇದರಿಂದ ಕಕ್ಷೆಯಲ್ಲಿರುವ ಯಾವುದೇ ಇತರೆ ಉಪಗ್ರಹಗಳಿಗೆ ತೊಂದರೆಯಾಗುವುದಿಲ್ಲ. ಈ ಪ್ರಯೋಗ ಯಶಸ್ವಿಯಾಗಿ ನೆರೆವೇರಿತು.
ಸತತ ಏಳು ವರ್ಷಗಳ ಸಂಶೋಧನೆ ಫಲ ನೀಡಿತ್ತು
2007ರಲ್ಲಿ ಚೀನಾದಲ್ಲಿ ಉಪಗ್ರಹ ನಿರೋಧಕ ಉಪಗ್ರಹ ನಾಶ ಮಾಡುವ ಕ್ಷಿಪಣಿ ಪರೀಕ್ಷೆ ಯಶಸ್ವಿಯಾದಾಗ ಆಗಿನ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್, ಭವಿಷ್ಯದಲ್ಲಿ ಬಾಹ್ಯಾಕಾಶವೇ ಸಮರಾಂಗಣವಾಗಲಿದೆ ಎಂದು ಹೇಳಿದ್ದರು. 2012ರಲ್ಲಿ ಡಿಆರ್ ಡಿಒ ಮುಖ್ಯಸ್ಥರಾಗಿದ್ದ ವಿ.ಕೆ. ಸಾರಸ್ವತ್ ಇಂತಹ ಕ್ಷಿಪಣಿ ತಯಾರಿಕೆಗೆ ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದರು.
ಇವರ ಈ ಹೇಳಿಕೆ ಬಗ್ಗೆ ಜಾಗತಿಕ ಮಾಧ್ಯಮಗಳು ಅಪಹಾಸ್ಯ ಮಾಡಿದ್ದವು. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸತತ 7 ವರ್ಷಗಳಿಂದ ಸಂಶೋಧನೆ ನಡೆಸಿ ಇಡೀ ವಿಶ್ವವೇ ಭಾರತವನ್ನು ಬೆರಗು ಗಣ್ಣಿನಿಂದ ನೋಡುವಂತಾಯಿತು.
ಇಸ್ರೋ ಉಪಗ್ರಹಗಳ ರಕ್ಷಣೆಗೆ ಎ-ಸ್ಯಾಟ್ ಕ್ಷಿಪಣಿ
ಇಸ್ರೋ ಈಗಾಗಲೇ ನೂರಾರು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡಿದೆ. ಭಾರತದ ರಕ್ಷಣೆ, ಸಂವಹನ ಸಹಿತ ಮಹತ್ವದ ಉಪಗ್ರಹಗಳು ಇದರಲ್ಲಿ ಸೇರಿವೆ. ಇವುಗಳನ್ನು ಶತ್ರುಗಳಿಂದ ರಕ್ಷಣೆ ಮಾಡಲು ವಿಶೇಷ ವ್ಯವಸ್ಥೆ ಅಗತ್ಯ.
ಯಾವುದೇ ದೇಶ ಭಾರತದ ಮೇಲೆ ಉಪಗ್ರಹ ದಾಳಿ ನಡೆಸಿದರೆ, ಭಾರತ ಕೂಡ ಪ್ರತಿದಾಳಿ ನಡೆಸಲು ಸಮರ್ಥವಾಗಿದೆ ಎಂಬ ಸಂದೇಶ ಮಿಷನ್ ಶಕ್ತಿ ಪ್ರಯೋಗದಿಂದ ಈಗಾಗಲೇ ಇಡೀ ವಿಶ್ವಕ್ಕೆ ರವಾನೆಯಾಗಿದೆ. ಹೀಗಾಗಿ ಭಾರತದ ಉಪಗ್ರಹವನ್ನು ನಾಶಪಡಿಸಲು ಶತ್ರು ರಾಷ್ಟ್ರಗಳು ಮುಂದಾಗುವ ಸಾಧ್ಯತೆ ಕಡಿಮೆ.